ಬುಧವಾರ, ಮೇ 19, 2021
22 °C
ಹಣ ಅಂದಿನಿಂದ ಇಂದಿನವರೆಗೆ...

ಟಂಕಿಸಿದ ನಾಣ್ಯ!

ಸೂರ್ಯ Updated:

ಅಕ್ಷರ ಗಾತ್ರ : | |

ಟಂಕಿಸಿದ ನಾಣ್ಯ!

ವಸ್ತುಗಳ ವಿನಿಯಮ ವ್ಯವಸ್ಥೆಯಿಂದ ‘ಸರಕು ಕರೆನ್ಸಿ’ವರೆಗೆ ಹಣ ನಡೆದು ಬಂದ ಹಾದಿಯನ್ನು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ನಂತರದ ಘಟ್ಟ ದುಡ್ಡಿನ ಚರಿತ್ರೆಯಲ್ಲಿ ಅತ್ಯಂತ ಮಹತ್ವದ್ದು. ಅದೆಂದರೆ ನಾಣ್ಯಗಳ ಬಳಕೆ ಚಾಲ್ತಿಗೆ ಬಂದಿದ್ದು.

 

ಕ್ರಿ.ಪೂ 700ರಿಂದ ಕ್ರಿ.ಪೂ 500ರ ನಡುವೆ ಜಗತ್ತಿನ ವಿವಿಧ ಕಡೆಗಳಲ್ಲಿ ನಾಣ್ಯಗಳ ಪರಿಚಯವಾಯಿತು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ, ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿದ್ದವು. ವಿವಿಧ ಬಗೆಯ ಲೋಹಗಳಿಂದ ಮಾಡಿದ ನಾಣ್ಯಗಳು ಜನರ ಜೇಬು ತುಂಬಲು ಆರಂಭಿಸಿದವು. ಆ ಕಾಲದ ವ್ಯಾಪಾರದ ಜಗತ್ತಿಗೆ ನಾಣ್ಯಗಳು ಹೊಸ ದಿಶೆಯನ್ನೇ ತೋರಿದವು.

 

ಮಿಶ್ರಲೋಹ ಕಂಚು ಸೇರಿದಂತೆ ಇತರೆ ಲೋಹಗಳು ಪ್ರವರ್ಧಮಾನಕ್ಕೆ ಬಂದ ಸಮಯ ಅದು. ಏಷ್ಯಾದಲ್ಲಿ ಭಾರತ, ಚೀನಾ, ಅತ್ತ ಗ್ರೀಸ್‌, ಪುರಾತನ ಟರ್ಕಿಗಳಲ್ಲಿ ಸರಿ ಸುಮಾರು ಒಂದೇ ಸಮಯದಲ್ಲಿ ನಾಣ್ಯಗಳು ಚಲಾವಣೆಗೆ ಬಂದವು ಎಂದು ನಂಬಲಾಗಿದೆ. ಗ್ರೀಸ್‌ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಲೋಹಗಳನ್ನು ಬಿಸಿ ಮಾಡಿ ಚಪ್ಪಟೆಗೊಳಿಸಿ, ಅದರಲ್ಲಿ ಕೆಲವು ವಿಶಿಷ್ಟ ಚಿಹ್ನೆಗಳನ್ನು ಅಚ್ಚೊತ್ತಿದ ನಾಣ್ಯಗಳನ್ನು ಬಳಸಲಾಗುತ್ತಿತ್ತು.

 

ಭಾರತದಲ್ಲಿ ನಾಣ್ಯಗಳು ಚಲಾವಣೆಯಲ್ಲಿ ಇದ್ದುದು ಗಂಗಾ ನದಿ ಕಣಿವೆಯಲ್ಲಿ. ಲೋಹವನ್ನು ಚಪ್ಪಟೆಗೊಳಿಸಿ ಮಾಡಿದ ಬಿಲ್ಲೆಗಳೇ ಅಂದಿನ ಕಾಲಕ್ಕೆ ನಾಣ್ಯಗಳು. ಚೀನಾದಲ್ಲಿ ಬೀಡು ಕಂಚಿನಿಂದ ನಾಣ್ಯಗಳನ್ನು ತಯಾರಿಸಲಾಗುತ್ತಿತ್ತು. ನಾಣ್ಯದ ಮಧ್ಯಭಾಗದಲ್ಲಿ ರಂಧ್ರವೂ ಇತ್ತಂತೆ. ಈ ತೂತಿನ ಮುಖೇನ ನಾಣ್ಯಗಳನ್ನು ಪೋಣಿಸುತ್ತಿದ್ದರಂತೆ. ಆ ಕಾಲದ ನಾಣ್ಯಗಳು ಈಗಿನಂತೆ ವರ್ತುಲಾಕಾರದಲ್ಲಿ ಇರಲಿಲ್ಲ. ಭಿನ್ನ ಆಕಾರಗಳನ್ನು ಹೊಂದಿದ್ದವು. ಆದರೆ ಪ್ರತಿ ನಾಣ್ಯವೂ ನಿರ್ದಿಷ್ಟ ತೂಕವನ್ನು ಹೊಂದಿದ್ದವು. ಮೊತ್ತ ಮೊದಲ ಬಾರಿಗೆ ಅಧಿಕೃತವಾಗಿ ನಾಣ್ಯಗಳಿಗೆ ತೂಕದ ಮಾನದಂಡವನ್ನು ನಿಗದಿಪಡಿಸಿದವ ಗ್ರೀಸ್‌ನ ಆರ್ಗೊಸ್‌ ನಗರವನ್ನು ಆಳುತ್ತಿದ್ದ ಫಿಡೋನ್‌ ಎಂಬ ರಾಜ.  ಕ್ರಿ.ಪೂ ಏಳನೇ ಶತಮಾನದಲ್ಲಿ ಗ್ರೀಸ್‌ನ ಸುತ್ತಮುತ್ತ ಆರಂಭವಾದ ನಾಣ್ಯಗಳ ಚಲಾವಣೆ ಎರಡು ಶತಮಾನ ಕಳೆಯುವಷ್ಟರಲ್ಲಿ (ಕ್ರಿ.ಪೂ 500) ಇಟಲಿವರೆಗೆ ಹಬ್ಬಿತ್ತು.

 

ಇನ್ನೊಂದು ವಾದದ ಪ್ರಕಾರ, ಮೊತ್ತ ಮೊದಲ ಬಾರಿಗೆ ನಾಣ್ಯಗಳು ಚಲಾವಣೆಗೆ ಬಂದಿದ್ದು ಲಿಡಿಯಾ ಎಂಬಲ್ಲಿ. ಇದು ಈಗಿನ ಟರ್ಕಿ ಕರಾವಳಿಯ ಒಂದು ಪ್ರದೇಶ. ಅಲ್ಲಿ ಬೆಳ್ಳಿ ಮತ್ತು ಚಿನ್ನದ ಮಿಶ್ರಲೋಹದಿಂದ ನಾಣ್ಯಗಳನ್ನು ತಯಾರಿಸಲಾಗುತ್ತಿತ್ತು. ಕ್ರಿ.ಪೂ 650ರ ಸುಮಾರಿಗೆ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಇದನ್ನೇ ಮಾದರಿಯಾಗಿಟ್ಟುಕೊಂಡು ಲಿಡಿಯಾದ ಸುತ್ತಮುತ್ತಲಿನ ನಗರಗಳು ಕೂಡ ತಮ್ಮದೇ ಆದ ನಾಣ್ಯ ಚಲಾವಣೆ ವ್ಯವಸ್ಥೆಯನ್ನು ಅಳವಡಿಸಿಕೊಂಡವು. ಆಡಳಿತ ಅಥವಾ ಪ್ರಾಧಿಕಾರವು ರೂಪಿಸಿದ್ದ ನಿರ್ದಿಷ್ಟ ಚಿಹ್ನೆಯನ್ನು ಅಚ್ಚೊತ್ತಿದ ನಾಣ್ಯವನ್ನು ಪ್ಯಾರಿಸ್‌ನಲ್ಲಿರುವ ಮ್ಯೂಸಿಯಂನಲ್ಲಿ ಈಗಲೂ ಕಾಣಬಹುದು. ಇಜಿನಾ ಎಂಬ ದ್ವೀಪದಲ್ಲಿ ಬಳಕೆಯಲ್ಲಿದ್ದ ಈ ನಾಣ್ಯ ಕ್ರಿ.ಪೂ 700ರ ಅವಧಿಗೆ ಸೇರಿದ್ದು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.

 

ಆರಂಭದಲ್ಲಿ ವಿವಿಧ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ನಾಣ್ಯ ವ್ಯವಸ್ಥೆಯನ್ನು ಅಂತಿಮವಾಗಿ ಗ್ರೀಸ್‌ ಆಡಳಿತವೇ ಅಳವಡಿಸಿಕೊಂಡಿತು. ಕ್ರಿ.ಪೂ 547ರಲ್ಲಿ ಲಿಡಿಯಾವನ್ನು ವಶಕ್ಕೆ ಪಡೆದ ನಂತರ ಪರ್ಷಿಯಾದ ರಾಜಾಡಳಿತ ಕೂಡ ನಾಣ್ಯ ಪದ್ಧತಿಯನ್ನು ಅನುಸರಿಸಿತು. ಅರ್ಧ ಶತಮಾನ ಕಳೆಯುವ ಹೊತ್ತಿಗೆ ಬೆಳ್ಳಿಯ ನಾಣ್ಯ ಹೆಚ್ಚು ಪ್ರಸಿದ್ಧಿಗೆ ಬಂತು. ಸೈನಿಕರಿಗೆಲ್ಲ ನಾಣ್ಯಗಳ ಮೂಲಕ ವೇತನ ಕೊಡುವ ಪದ್ಧತಿಯನ್ನು ಆಡಳಿತಗಾರರು ಜಾರಿಗೆ ತಂದರು.

 

ಆ ಹೊತ್ತಿಗೆ, ಲೋಹಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾದ ಒರೆಗಲ್ಲಿನ ಪರಿಚಯವಾಯಿತು. ಇದರಿಂದಾಗಿ ಲೋಹ ಆಧಾರಿತ ಹಣದ ವ್ಯವಸ್ಥೆಗೆ ಹೊಸ ರೂಪ ಬಂತು. ಅದರ ಜೊತೆಗೆ ಚಿನ್ನದ ನಾಣ್ಯದ ಬಳಕೆಯೂ ಚಾಲ್ತಿಗೆ ಬಂತು. ನಾಣ್ಯಗಳನ್ನು ತಯಾರಿಸುವುದಕ್ಕೂ ಮುನ್ನ ಅದರಲ್ಲಿರುವ ವಿವಿಧ ಲೋಹಗಳ ಪ್ರಮಾಣ ಮತ್ತು ಅದರ ತೂಕವನ್ನು ಲೆಕ್ಕ ಹಾಕುವ ವಿಧಾನವನ್ನು ಆಡಳಿತಗಾರರು ಆರಂಭಿಸಿದರು. ನಕಲಿ ನಾಣ್ಯಗಳ ಹಾವಳಿಯನ್ನು ತಪ್ಪಿಸುವ ಮತ್ತು ಸುವ್ಯಸ್ಥಿತ ನಾಣ್ಯ ಚಲಾವಣೆ ವ್ಯವಸ್ಥೆಯನ್ನು ರೂಪಿಸುವುದು ಇದರ ಹಿಂದಿನ ಉದ್ದೇಶ ಆಗಿತ್ತು.

 

ನಾಣ್ಯಗಳ ಇತಿಹಾಸದ ಉದ್ದಕ್ಕೂ ಹೆಚ್ಚು ಚಲಾವಣೆಯಲ್ಲಿ ಇದ್ದುದು ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳೇ. ಕ್ರಿ.ಶ 16-17ನೇ ಶತಮಾನದವರೆಗೂ ಇವುಗಳು ಬಳಕೆಯಲ್ಲಿದ್ದುದನ್ನು ಕಾಣಬಹುದು. ಬೆಲೆಬಾಳುವ ಈ ಎರಡು ಲೋಹಗಳ ಕೊರತೆಯ ಕಾರಣಕ್ಕೆ ಕಬ್ಬಿಣದಂತಹ ಅಗ್ಗದ ಲೋಹಗಳಿಂದ ನಾಣ್ಯಗಳನ್ನು ತಯಾರಿಸಿದ ಉದಾಹರಣೆಗಳೂ ಇತಿಹಾಸದಲ್ಲಿವೆ. ಚಿನ್ನ ಮತ್ತು ಬೆಳ್ಳಿ ನಾಣ್ಯಗಳಿಂದಾಗಿ ಸಮಸ್ಯೆಯಾಗಿದ್ದು ಇದೆ. ಜನರು ಈ ನಾಣ್ಯಗಳನ್ನು ಕರಗಿಸಿ ಅವುಗಳನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದರು. ಇದನ್ನು ತಡೆಯುವುದು ಅಂದಿನ ಆಡಳಿತಗಾರರಿಗೆ ದೊಡ್ಡ ಸವಾಲಾಗಿತ್ತು.

 

ಕಾಲ ಕ್ರಮೇಣ ಬೆಲೆಬಾಳುವ ಲೋಹಗಳಿಂದ ತಯಾರಿಸಿದ ನಾಣ್ಯಗಳ ಚಲಾವಣೆ ಪದ್ಧತಿ ದೂರವಾಯಿತು. ಕಬ್ಬಿಣ, ಉಕ್ಕಿನಿಂದ ಮಾಡಿದ ನಾಣ್ಯಗಳು ಚಲಾವಣೆಗೆ ಬಂದವು.

ನಾಣ್ಯಗಳು ಬಳಕೆಗೆ ಬಂದು ಒಂದು ಹಂತಕ್ಕೆ ತಲುಪಿದಾಗ ನಿಧಾನವಾಗಿ ಕಾಗದ ರೂಪದ ಹಣದ ಚಲಾವಣೆ ಆರಂಭವಾಯಿತು. ಕಾಗದ ರೂಪದ ಹಣ, ಆಧುನಿಕ ಪರಿಭಾಷೆಯ ನೋಟು ಇದೆಯಲ್ಲಾ, ಅದರದ್ದೇ ಒಂದು ದೊಡ್ಡ ಕಥೆ...

(ಮುಂದುವರಿಯುವುದು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.