7

ಏಕೀಕೃತ ಪಾವತಿ ವ್ಯವಸ್ಥೆ

ಯು.ಬಿ. ಪವನಜ
Published:
Updated:
ಏಕೀಕೃತ ಪಾವತಿ ವ್ಯವಸ್ಥೆ

ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ ಘೋಷಣೆ ಮಾಡಿದರು. ₹500 ಮತ್ತು ₹1000 ನೋಟುಗಳ ರದ್ದತಿಯ ಘೋಷಣೆ ಅದಾಗಿತ್ತು. ಅದರ ಬಗ್ಗೆ ಹಲವು ಟೀಕೆ ಟಿಪ್ಪಣಿ, ವಿಶ್ಲೇಷಣೆಗಳು ಬಂದವು. ನಾನು ಆ ಬಗ್ಗೆ ಬರೆಯುತ್ತಿಲ್ಲ. ಆ ಘೋಷಣೆಯ ನಂತರ ಹಲವು ಕಡೆ ನರೇಂದ್ರ ಮೋದಿಯವರು ಹೇಳಿದ್ದೇನೆಂದರೆ ಎಲ್ಲರೂ ಕಾಗದರಹಿತ ವ್ಯವಹಾರದ ಕಡೆಗೆ ಹೋಗಬೇಕು ಎಂದು. ಈಗಾಗಲೇ ನಮ್ಮಂತಹ ಹಲವು ಮಂದಿ ಡಿಜಿಟಲ್ ಕ್ಷೇತ್ರದಲ್ಲಿ ಪರಿಣತರು ಈ ಕಾಗದರಹಿತ ವಹಿವಾಟು ಮಾಡುತ್ತಲೇ ಇದ್ದೇವೆ.

ಅಂತರಜಾಲದ ಮೂಲಕ ಅಥವಾ ಮೊಬೈಲ್ ಕಿರುತಂತ್ರಾಂಶ (ಆ್ಯಪ್) ಬಳಸಿ ಬ್ಯಾಂಕಿನಿಂದ ಬ್ಯಾಂಕಿಗೆ, ವ್ಯಕ್ತಿಗೆ, ಜಾಲಮಳಿಗೆಗಳಿಗೆ ಹಣ ವರ್ಗಾವಣೆ, ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ, ಇತ್ಯಾದಿ ಇವುಗಳಲ್ಲಿ ಸೇರಿದೆ. ಆದರೆ ಇವೆಲ್ಲಕ್ಕಿಂತ ಸುಲಭ ಹಾಗೂ ಸರಳವಾದುದು Unified Payments Interface (UPI). ನಾವದನ್ನು ಕನ್ನಡೀಕರಿಸಿ ಏಕೀಕೃತ ಪಾವತಿ ವ್ಯವಸ್ಥೆ ಎನ್ನೋಣ. ಏನಿದು ಯುಪಿಐ ಅಂದರೆ? ಅದರ ಬಗ್ಗೆ ಸ್ವಲ್ಪ ತಿಳಿಯೋಣ.


ಹಲವು ಬ್ಯಾಂಕ್‌ಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಒಂದು ಪಾವತಿ ವ್ಯವಸ್ಥೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಕಂಪೆನಿಗೆ, ಜಾಲಮಳಿಗೆಗೆ, ಟ್ಯಾಕ್ಸಿ, ಹೋಟೆಲ್‌, ಅಂಗಡಿ, ಇತ್ಯಾದಿ ಯಾವುದೇ ವ್ಯಾಪಾರಕ್ಕೆ ಹಣ ಪಾವತಿ ಮಾಡುವ ಒಂದು ಸರಳ ವ್ಯವಸ್ಥೆ. ಬಹುತೇಕ ಬ್ಯಾಂಕುಗಳು ಈ ವ್ಯವಸ್ಥೆಗೆ ಸೇರಿಕೊಂಡಿವೆ. ಇದನ್ನು ಬಳಸಲು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸೂಕ್ತ ಕಿರುತಂತ್ರಾಂಶ ಹಾಕಿಕೊಳ್ಳಬೇಕು. ಈ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ಎಲ್ಲ ಬ್ಯಾಂಕುಗಳು ತಮ್ಮದೇ ಕಿರುತಂತ್ರಾಂಶವನ್ನು ಇದಕ್ಕಾಗಿ ನೀಡಿವೆ. ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ UPI ಎಂದು ಹುಡುಕಿದರೆ ಬೇಕಾದಷ್ಟು ಆ್ಯಪ್‌ಗಳು ದೊರೆಯುತ್ತವೆ. 


ನೀವು ಈಗಾಗಲೇ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿರುವವರಾದರೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನಿಮ್ಮ ಬ್ಯಾಂಕಿನ ಕಿರುತಂತ್ರಾಂಶ ಇರುತ್ತದೆ. ಹೆಚ್ಚಿನ ಬ್ಯಾಂಕ್‌ಗಳು ತಮ್ಮ ಕಿರುತಂತ್ರಾಂಶದಲ್ಲಿ UPI ಎಂಬ ಆಯ್ಕೆಯನ್ನೂ ನೀಡಿರುತ್ತಾರೆ. ಯಾವುದೇ ಕಿರುತಂತ್ರಾಂಶದಲ್ಲಿ ನೀವು ನಿಮ್ಮ ಯಾವುದೇ ಬ್ಯಾಂಕಿನ ಖಾತೆಯನ್ನು ಸೇರಿಸಬಹುದು. ಒಂದಕ್ಕಿಂತ ಹೆಚ್ಚು ಖಾತೆಗಳನ್ನೂ ಸೇರಿಸಿಕೊಳ್ಳಬಹುದು. ಉದಾಹರಣೆಗೆ ನಾನು ಎಚ್‌ಡಿಎಫ್‌ಸಿ ಬ್ಯಾಂಕಿನ ಕಿರುತಂತ್ರಾಂಶ ಬಳಸುತ್ತಿದ್ದೇನೆ. ಅದರಲ್ಲಿ ನಾನು ನನ್ನ ಎಚ್‌ಡಿಎಫ್‌ಸಿ ಬ್ಯಾಂಕಿನ ಖಾತೆಯಲ್ಲದೆ ಸ್ಟೇಟ್‌ಬ್ಯಾಂಕ್ ಮತ್ತು ಕೆನರಾ ಬ್ಯಾಂಕಿನ ಖಾತೆಗಳನ್ನೂ ಸೇರಿಸಿಕೊಂಡಿದ್ದೇನೆ.

 

ಈ ವ್ಯವಸ್ಥೆಯಲ್ಲಿ ನೀವು ನಿಮಗೆ ಒಂದು ವರ್ಚುವಲ್ ಅಡ್ರೆಸ್ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಒಂದು ಎಂಪಿನ್ (MPIN) ಮಾಡಿಕೊಂಡು ನಂತರ ನಿಮ್ಮ ವಾಸ್ತವ ವಿಳಾಸ (Virtual Address) ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಈ ವಿಳಾಸ ಇಮೇಲ್ ವಿಳಾಸದ ಮಾದರಿಯಲ್ಲಿರುತ್ತವೆ. ಉದಾಹರಣೆಗೆ ನನ್ನ ವಿಳಾಸ pavanaja@hdfcbank. ಹಾಗೆಂದರೆ ನನ್ನ ಎಚ್‌ಡಿಎಫ್‌ಸಿ ಖಾತೆಯಿಂದ ಮಾತ್ರ ಹಣ ಪಾವತಿಗೆ ಮತ್ತು ಎಚ್‌ಡಿಎಫ್‌ಸಿ ಖಾತೆಗೆ ಮಾತ್ರ ಹಣ ಸ್ವೀಕಾರಕ್ಕೆ ಈ ವಿಳಾಸ ಎಂದು ತೀರ್ಮಾನಿಸಬೇಕಾಗಿಲ್ಲ. ನಾನು ಈಗಾಗಲೇ ತಿಳಿಸಿದಂತೆ ಈ ವಿಳಾಸಕ್ಕೆ ನಾನು ನನ್ನ ಸ್ಟೇಟ್‌ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ಗಳ ಖಾತೆಗಳನ್ನೂ ಜೋಡಿಸಿದ್ದೇನೆ. ಈ ವಿಳಾಸವನ್ನು ಒಮ್ಮೆ ಮಾಡಿಕೊಂಡರೆ ಆಯಿತು. ನಂತರ ಎಲ್ಲ ಕಡೆ ಬಳಸಬಹುದು.


ನೀವು ಒಂದು ಅಂಗಡಿಗೆ ಹೋಗಿ ಒಂದು ಪ್ಯಾಕೆಟ್ ಪಾರ್ಲೆ-ಜಿ ಬಿಸ್ಕೆಟ್ ಕೊಳ್ಳುತ್ತಿದ್ದೀರಿ ಎದುಕೊಳ್ಳೋಣ. ಅದರ ಬೆಲೆ ಹತ್ತು ರೂಪಾಯಿ. ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಯುಪಿಐ ಆ್ಯಪ್ ಚಾಲನೆ ಮಾಡಿ ಆತನ ವಾಸ್ತವ ವಿಳಾಸವನ್ನು (ವರ್ಚುವಲ್ ಅಡ್ರೆಸ್) ನಮೂದಿಸಿ ಹತ್ತು ರೂಪಾಯಿ ವರ್ಗಾವಣೆ ಮಾಡುತ್ತೀರಿ. ಅದು ತಕ್ಷಣ ಆತನ ಖಾತೆಗೆ ತಲುಪಿರುತ್ತದೆ. ಪ್ರತಿ ಸಲ ಹಣ ಕಳುಹಿಸಲೂ ನೀವು ನಿಮ್ಮ ಎಂಪಿನ್ ನಮೂದಿಸಬೇಕು. ಇದು ನಿಮ್ಮ ಖಾತೆಯ ಸುರಕ್ಷತೆಗಾಗಿ. ಅಂದರೆ ನಿಮ್ಮ ಫೋನ್ ಕಳೆದುಹೋದರೆ, ಬೇರೆಯವರ ಕೈಗೆ ಅದು ಸಿಕ್ಕಿದರೆ, ಅವರಿಗೆ ನಿಮ್ಮ ಎಂಪಿನ್ ತಿಳಿದಿರುವ ಸಾಧ್ಯತೆಯಿಲ್ಲದಿರುವ ಕಾರಣ ದುರುಪಯೋಗದ ಸಾಧ್ಯತೆ ಇಲ್ಲ. ಪ್ರತಿ ಸಲ ಹಣ ಕಳುಹಿಸುವಾಗಲೂ ಯಾವ ಬ್ಯಾಂಕಿನ ಖಾತೆಯಿಂದ ಎಂದು ಆಯ್ಕೆ ಮಾಡಿಕೊಳ್ಳಬಹುದು. ಚಿಕ್ಕ ಪುಟ್ಟ ವ್ಯವಹಾರಕ್ಕೆ ಈ ವ್ಯವಸ್ಥೆ ತುಂಬ ಸೂಕ್ತವಾದುದು ಮತ್ತು ಇದರ ಮೂಲಕ ಹಣ ವರ್ಗಾವಣೆ ತಕ್ಷಣವೇ ಆಗುತ್ತದೆ.

 

ಈ ವ್ಯವಸ್ಥೆಯಲ್ಲಿ ಹಣ ಸ್ವೀಕರಿಸುವವನ ಖಾತೆಯನ್ನು ಸೇರಿಸುವುದು ಬಹಳ ಸುಲಭ. ಆತನ ಬ್ಯಾಂಕಿನ ಹೆಸರು, ವಿಳಾಸ, ಖಾತೆ ಸಂಖ್ಯೆ, ಐಎಫ್‌ಎಸ್ ಕೋಡ್ ಇತ್ಯಾದಿ ಯಾವ ಮಾಹಿತಿಗಳ ಅಗತ್ಯವೂ ಇಲ್ಲ. ಆತನ ವಾಸ್ತವ ವಿಳಾಸ ಗೊತ್ತಿದ್ದರೆ ಸಾಕು. ನೀವು ಅಂಗಡಿಯಿಂದ ಸಾಮಾನು ಕೊಳ್ಳುವಾಗ ಹಣ ಪಾವತಿಯ ಪ್ರಕ್ರಿಯೆಯನ್ನು (push) ನೀವೇ ಪ್ರಾರಂಭಿಸಬಹುದು ಅಥವಾ ಸ್ವೀಕೃತಿಯ ಪ್ರಕ್ರಿಯೆಯನ್ನು (pull) ಆತನೂ ಪ್ರಾರಂಭಿಸಬಹುದು. ಮೊದಲನೆಯದನ್ನು ಈಗಾಗಲೇ ವಿವರಿಸಿದ್ದೇನೆ.


ಎರಡನೆಯ ವಿಧಾನದಲ್ಲಿ ಅಂಗಡಿಯಾತ ನಿಮ್ಮ ವಾಸ್ತವ ವಿಳಾಸವನ್ನು ನಮೂದಿಸಿ ಹಣ ಸ್ವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾನೆ. ಈ ಕೋರಿಕೆ ನಿಮ್ಮ ಫೋನಿನ ಕಿರುತಂತ್ರಾಂಶದಲ್ಲಿ ಗೋಚರಿಸುತ್ತದೆ. ನೀವು ಕೋರಿಕೆಯನ್ನು ಸ್ವೀಕರಿಸಿ ಒಪ್ಪಿಗೆ ಸೂಚಿಸಿದರೆ ಆತನಿಗೆ ಹಣ ವರ್ಗಾವಣೆಯಾಗುತ್ತದೆ. ಪ್ರತಿ ವ್ಯವಹಾರಕ್ಕೂ ಎಂಪಿನ್ ನಮೂದಿಸುವುದು ಕಡ್ಡಾಯ.   

 

ಒಟ್ಟಿನಲ್ಲಿ ಹೇಳುವುದಾದರೆ ಇದು ನಗದುರಹಿತ ವ್ಯವಹಾರಕ್ಕೆ ಒಂದು ಸುಲಭ ಮತ್ತು ಸರಳ ವಿಧಾನ. ಅಂತರಜಾಲ ಸಂಪರ್ಕವಿರುವ ಸ್ಮಾರ್ಟ್‌ಫೋನ್ ಬಳಸುವ ಯಾರು ಬೇಕಾದರೂ ಇದನ್ನು ಬಳಸಬಹುದು. ಕೆಲವು ಬ್ಯಾಂಕ್‌ಗಳು (ಉದಾ –ಸ್ಟೇಟ್‌ಬ್ಯಾಂಕ್) ತಮ್ಮ ಕಿರುತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನೂ ನೀಡಿದ್ದಾರೆ. ಈ ವಿಧಾನದಲ್ಲಿ ಒಂದು ಲಕ್ಷ ರೂಪಾಯಿ ತನಕ ಮಾತ್ರ ಹಣ ವರ್ಗಾವಣೆ ಮಾಡಬಹುದು.

 

**

ವಾರದ ಆ್ಯಪ್:

ವಿಮಾನ ಚಲಾಯಿಸಿ

ಸ್ಮಾರ್ಟ್‌ಫೋನ್‌ಗಳು ಜನಪ್ರಿಯವಾಗುವ ಮೊದಲು ಗಣಕಗಳಲ್ಲಿ ಆಟ ಆಡುತ್ತಿದ್ದ ಕಾಲದಲ್ಲಿ ಫ್ಲೈಟ್ ಸಿಮ್ಯುಲೇಟರ್ ಎಂಬ ಆಟ ತುಂಬ ಜನಪ್ರಿಯವಾಗಿತ್ತು. ಪ್ರತ್ಯನುಕರಣೆ (simulation) ಮೂಲಕ ವಿಮಾನವನ್ನು ಚಲಾಯಿಸುವ ಆಟವಾಗಿತ್ತದು. ಇದು ಈಗಲೂ ಜನಪ್ರಿಯವಾಗಿದೆ. ಆಂಡ್ರಾಯ್ಡ್‌ ಫೋನ್‌ಗಳಿಗೂ ಇಂತಹ ಆಟಗಳು ಲಭ್ಯವಿವೆ.


ಅಂತಹ ಒಂದು ಆಟ ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Flight Pilot Simulator 3D ಎಂದು ಹುಡುಕಬೇಕು ಅಥವಾ bit.ly/gadgetloka256 ಜಾಲತಾಣಕ್ಕೆ ಭೇಟಿ ನೀಡಬೇಕು. ಹಲವು ನಮೂನೆಯ ವಿಮಾನಗಳು, ಹಲವು ಹಂತಗಳು, ಕಷ್ಟದಲ್ಲಿರುವವನನ್ನು ರಕ್ಷಿಸುವುದು, ವಿಮಾನಗಳ ಹಾರಾಟದ ಸ್ಪರ್ಧೆ ಎಲ್ಲ ಇದರಲ್ಲಿವೆ. ಇದನ್ನು ಆಡಬೇಕಾದರೆ ನಿಮ್ಮಲ್ಲಿ ಉತ್ತಮ  ಶಕ್ತಿಶಾಲಿಯಾದ ಸ್ಮಾರ್ಟ್‌ಫೋನ್ ಇರುವುದು ಅಗತ್ಯ. ಯಾಕೆಂದರೆ ಇದು ಮೂರು ಆಯಾಮದ ಆಟ.

 

**

ಗ್ಯಾಜೆಟ್‌ ಸಲಹೆ:

ಆರ್.ಎಸ್. ನಾಯಕರ


ಪ್ರಶ್ನೆ: ನನಗೆ ಕನ್ನಡದಲ್ಲಿ ಸಂದೇಶಗಳು ಬರುತ್ತಿವೆ. ಅವುಗಳಿಗೆ ಕನ್ನಡದಲ್ಲೇ ಉತ್ತರಿಸುವುದು ಹೇಗೆ? ಅಂದರೆ ನನ್ನ ಫೋನಿನಲ್ಲಿ ಕನ್ನಡವನ್ನು ಊಡಿಸುವುದು ಹೇಗೆ?  


ಉ: ನಿಮ್ಮದು ಆಂಡ್ರಾಯ್ಡ್‌ ಫೋನ್ ಎಂದುಕೊಂಡಿದ್ದೇನೆ. ಗೂಗಲ್‌ ಪ್ಲೇ ಸ್ಟೋರಿನಲ್ಲಿ ಕನ್ನಡದ ಹಲವು ಕೀಲಿಮಣೆ ಕಿರುತಂತ್ರಾಂಶಗಳು ಲಭ್ಯವಿವೆ. ಅವುಗಳಲ್ಲಿ ನಿಮಗೆ ಇಷ್ಟವಾದುದನ್ನು ಹಾಕಿಕೊಳ್ಳಬಹುದು. ಒಂದು ಉತ್ತಮ ಉದಾಹರಣೆ JustKannada.


 

**

ಗ್ಯಾಜೆಟ್‌ ತರ್ಲೆ

ಕಣ್ಣಿಗೆ ಔಷಧ ಹಾಕಬೇಕಾದಾಗ ಏನು ಮಾಡುತ್ತೀರಿ? ಔಷಧವು ಕಣ್ಣಿನ ಮಧ್ಯಭಾಗಕ್ಕೆ ಬಿಟ್ಟು ಬೇರೆಲ್ಲೂ ಬೀಳದಂತೆ ಎಚ್ಚರ ವಹಿಸುವುದು ಹೇಗೆ? ಇದಕ್ಕೊಂದು ಸರಳ ಪರಿಹಾರವನ್ನು ಜಪಾನೀಯರು ಕಂಡುಹಿಡಿದಿದ್ದಾರೆ. ಅವರು ವಿಶೇಷ ಕನ್ನಡಕ ತಯಾರಿಸಿದ್ದಾರೆ. ಅದರ ಮಧ್ಯಭಾಗದಲ್ಲಿ ಲಾಳಿಕೆ (funnel) ಇದೆ. ಅದರಲ್ಲಿ ಕಣ್ಣಿಗೆ ಹಾಕಬೇಕಾದ ಔಷಧ ಹಾಕಿದರೆ ಅದು ನೇರವಾಗಿ ಕಣ್ಣಿನ ಮಧ್ಯಭಾಗಕ್ಕೇ ಬೀಳುತ್ತದೆ!  

 

**

ಗ್ಯಾಜೆಟ್‌ ಸುದ್ದಿ:

ಬರೆದು ಅಳಿಸಿ ಬರೆದು ಅಳಿಸಿ

ಚಿಕ್ಕವರಾಗಿದ್ದಾಗ ಬರೆದು ಅಳಿಸುವ ಸ್ಲೇಟ್ ಬಳಸಿದ್ದು ನೆನಪಿದೆ ತಾನೆ? ಅದರದ್ದೇ ಇನ್ನೊಂದು ಆವೃತ್ತಿ ಎಂದರೆ ಬಿಳಿಹಲಗೆ ಅರ್ಥಾತ್ whiteboard. ಇದರಲ್ಲಿ ಕೂಡ ಬರೆದು ಅಳಿಸಬಹುದು. ಈಗ ಇನ್ನೊಂದು ವಿಷಯಕ್ಕೆ ಬರೋಣ. ಟಿಪ್ಪಣಿ ಬರೆದುಕೊಳ್ಳುವ ನೋಟ್‌ಬುಕ್ ಬಳಸುತ್ತಿದ್ದೀರಿ ತಾನೆ? ಈ ನೋಟ್‌ಬುಕ್ ವೈಟ್‌ಬೋರ್ಡ್ ಮಾದರಿಯಲ್ಲಿ ಬರೆದು ಅಳಿಸುವಂತಿದ್ದರೆ ಚೆನ್ನು ಎಂದು ಯಾವತ್ತಾದರೂ ನಿಮಗೆ ಅನಿಸಿತ್ತಾ? ಹೌದಾದರೆ ನಿಮಗಾಗಿ ಅಂತಹ ನೋಟ್‌ಬುಕ್ ಬಂದಿದೆ.ಈ ನೋಟ್‌ಬುಕ್‌ನಲ್ಲಿ ಪ್ಲಾಸ್ಟಿಕ್ ಮಾದರಿಯ ಹಾಳೆಗಳಿವೆ. ಈ ಹಾಳೆಗಳ ಮೇಲೆ ವೈಟ್‌ಬೋರ್ಡ್‌ಮಾರ್ಕರ್ ಮಾದರಿಯ ಪೆನ್ನು ಬಳಸಿ ಬರೆಯಬಹುದು. ನಂತರ ಅದನ್ನು ಅಳಿಸಬಹುದು. ಇದರಲ್ಲಿ ಗೆರೆ ಇಲ್ಲದ ಮತ್ತು ಇರುವ ಎಂಬ ಎರಡು ನಮೂನೆಗಳಿವೆ. ಇದು ನಮ್ಮ ಬೆಂಗಳೂರಿನ ಉತ್ಪನ್ನ. ಇಂತಹ ನೋಟ್‌ಬುಕ್‌ಗಳು ಬೇಕಿದ್ದರೆ www.inkinite.com ಜಾಲತಾಣಕ್ಕೆ ಭೇಟಿ ನೀಡಿ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry