ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್:ಕಲ್ಲಿದ್ದಲು ಸಂಗ್ರಹ ಕುಸಿತ

ಗಣಿ ಕಂಪೆನಿಗಳಿಗೆ ಪಾವತಿಯಾಗದ ಬಾಕಿ ಹಣ
Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಕ್ತಿನಗರ (ರಾಯಚೂರು ಜಿಲ್ಲೆ):  ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಗಣಿ ಕಂಪೆನಿಗಳಿಗೆ ಪಾವತಿಸಬೇಕಾದ ಹಣ ಬಾಕಿ ಉಳಿಸಿಕೊಂಡಿರುವುದರಿಂದ ಗಣಿಗಳಿಂದ ಸರ್ಮಪಕವಾಗಿ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಇದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್) ಕಲ್ಲಿದ್ದಲಿನ ಸಂಗ್ರಹ ಕುಸಿತವಾಗಿದೆ.

ಸದ್ಯ 60 ಸಾವಿರ  ಟನ್ ನಷ್ಟು ಕಲ್ಲಿದ್ದಲು ಸಂಗ್ರಹ ಇದ್ದು, ಆರ್‌ಟಿಪಿಎಸ್ ಎಂಟು ಘಟಕಗಳಲ್ಲಿ ಉತ್ಪಾದನೆಗೆ ದಿನನಿತ್ಯ 30 ಸಾವಿರ ಟನ್ ಕಲ್ಲಿದ್ದಲು ಅಗತ್ಯವಿದೆ. ‘ಸಿಂಗರೇಣಿ, ಮಹಾನದಿ ಕೋಲ್‌ಫೀಲ್ಡ್, ವೆಸ್ಟರ್ನ್‌ಕೋಲ್‌ಫೀಲ್ಡ್ ಕಂಪೆನಿಗಳ ಕಲ್ಲಿದ್ದಲು ಗಣಿಗಳಿಂದ ಆರ್‌ಟಿಪಿಎಸ್‌ಗೆ ದಿನನಿತ್ಯ ಕನಿಷ್ಠ 8 ರೇಕ್‌ಗಳು (ಒಂದು ರೇಕು– 59 ಬೋಗಿಗಳಿರುವ ಸರಕು ಸಾಗಣೆ ರೈಲು) ಬರಬೇಕು. ಆದರೆ ಹಣ ಪಾವತಿಯಾಗದ ಕಾರಣ ವಿವಿಧ ಗಣಿಗಳಿಂದ ಕಡಿಮೆ ರೇಕ್‌ಗಳು ಬರುತ್ತಿವೆ’ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ಹೇಳುತ್ತಾರೆ. 

‘ಕಲ್ಲಿದ್ದಲು ಸಂಗ್ರಹ ಕಡಿಮೆ ಇರುವ ಕಾರಣ ವಿವಿಧ ಗಣಿಗಳಿಂದ ಬರುವ ಕಲ್ಲಿದ್ದಲನ್ನು ಸಂಗ್ರಹಾಗಾರಕ್ಕೆ ಸುರಿಯುವ ಬದಲಾಗಿ ನೇರವಾಗಿ ವಿದ್ಯುತ್ ಘಟಕಗಳಿಗೆ ಪೂರೈಕೆ ಮಾಡುವ ಬಂಕ್‌ಗಳಿಗೆ ಸುರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಕಲ್ಲಿದ್ದಲಿನ ಕೊರತೆಯ ಮಧ್ಯೆಯೂ ವಿದ್ಯುತ್ ಉತ್ಪಾದನೆಗೆ ತೊಂದರೆ ಆಗದಂತೆ ಶೇ 96 ರಷ್ಟು ಪ್ಲಾಂಟ್ ಲೋಡ್ ಫ್ಯಾಕ್ಟರ್ (ಪಿಎಲ್‌ಎಫ್) ಕಾಯ್ದುಕೊಳ್ಳಲಾಗಿದೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ವೇಣುಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆ ಮಾಡುವಂತೆ ಗಣಿ ಕಂಪೆನಿಗಳೊಂದಿಗೆ ಚರ್ಚಿಸಲಾಗಿದ್ದು, ಬುಧವಾರದಿಂದ ಕನಿಷ್ಠ 15 ರೇಕ್‌ಗಳಲ್ಲಿ ಕಲ್ಲಿದ್ದಲು ಪೂರೈಕೆ ಆಗಲಿದೆ.ಡಿಸೆಂಬರ್ ತಿಂಗಳಲ್ಲಿ  ಗಣಿಯಿಂದ 39 ರೇಕ್‌ಗಳನ್ನು ಲಿಂಕೇಜ್ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಶೀಘ್ರ ಬಾಕಿ ಪಾವತಿ’
‘ಒಟ್ಟು ₹1,500 ಕೋಟಿ ಬಾಕಿ ಮೊತ್ತವನ್ನು ಗಣಿ ಕಂಪೆನಿಗಳಿಗೆ ಕೆಪಿಸಿ ಪಾವತಿಸಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುತುವರ್ಜಿಯಿಂದ ₹500 ಕೋಟಿ ಪಾವತಿಸಿದ್ದಾರೆ’ ಎಂದು ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ ತಿಳಿಸಿದರು.

‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ (ಕೆಪಿಟಿಸಿಎಲ್) ಕೆಪಿಸಿಗೆ ₹ 1,800 ಕೋಟಿ ಹಣ ಬರಬೇಕಾಗಿದೆ. ಹೀಗಾಗಿ ಗಣಿ ಕಂಪೆನಿಗಳಿಗೆ ಹಣ ಪಾವತಿಸಲು ವಿಳಂಬವಾಗಿದೆ. ಗಣಿ ಕಂಪೆನಿಗಳಿಗೆ ಹಂತ ಹಂತವಾಗಿ ಬಾಕಿ ಹಣವನ್ನು ಪಾವತಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT