ವಿರೋಧಕ್ಕೆ ವಿವಿಧ ಆಯಾಮ

7
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ

ವಿರೋಧಕ್ಕೆ ವಿವಿಧ ಆಯಾಮ

Published:
Updated:
ವಿರೋಧಕ್ಕೆ ವಿವಿಧ ಆಯಾಮ

ಮಾದಿಗ ಮೀಸಲಾತಿ ಚಳವಳಿ ನೆರೆಯ ಆಂಧ್ರ ಪ್ರದೇಶದಲ್ಲಿ ಪ್ರಬಲವಾಗಿದ್ದಾಗ ಕನ್ನಡ ನೆಲದಲ್ಲಿಯೂ ಈ ಹೋರಾಟ  ಪ್ರತಿಧ್ವನಿಸಿತ್ತು. ಅಸ್ಪೃಶ್ಯರಲ್ಲೇ ಅತಿ ನಿಕೃಷ್ಟರಾಗಿರುವ, ಕಟುನೀಚವಾಗಿ ಬದುಕುತ್ತಿರುವ ಎಡಗೈ, ಅದರಲ್ಲಿಯೂ ಜಾಡಮಾಲಿ,  ಸುಡುಗಾಡ ಸಿದ್ಧ ಮತ್ತಿತರ ಸಮುದಾಯಕ್ಕೆ ಸೇರಿದವರಿಗೆ ಇಲ್ಲಿಯವರೆಗೂ ಮೀಸಲಾತಿಯ ಕೆಂಬೆಳಕು ಸ್ಪರ್ಶಿಸಿಲ್ಲ. ಮೀಸಲಾತಿಯ ಸಮೂಹದೊಳಗೆ ಚಾಚಿಕೊಂಡ ಕೆಲವೇ ಪ್ರಭಾವಿ ಉಪಜಾತಿಗಳು ಉದ್ಯೋಗ, ಶಿಕ್ಷಣ, ಭೂಮಿ ಸೌಲಭ್ಯವನ್ನು ದಕ್ಕಿಸಿಕೊಂಡಿವೆ ಎಂಬ ಆಪಾದನೆಯೂ ಇದೆ.ಪರಿಶಿಷ್ಟ ಜಾತಿ ಮಾತ್ರವಲ್ಲ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿಯೂ ಒಳ ಮೀಸಲಾತಿ ನೀಡಬೇಕು ಎಂಬ ಹಕ್ಕೊತ್ತಾಯವೂ ಕ್ಷೀಣವಾಗಿ ಕೇಳಿಸುತ್ತಿದೆ. ಆದರೆ, ಈ ಬೇಡಿಕೆಗೆ ರಾಜಕೀಯ ನೆಲೆ ಸಿಗದೇ ಇರುವುದರಿಂದಾಗಿ ಈ ಧ್ವನಿ ಗಟ್ಟಿಯಾಗಿ ಕೇಳುತ್ತಿಲ್ಲ. ನಾಳೆ (ಡಿ. 11) ಹುಬ್ಬಳ್ಳಿಯಲ್ಲಿ ನಡೆಯಲಿರುವ ಮಾದಿಗ ಸಮಾವೇಶದ ಮುನ್ನೆಲೆಯಲ್ಲಿ, ಒಳಮೀಸಲಾತಿ ಆಗ್ರಹಕ್ಕೆ ಬಲವಾದ ಧ್ವನಿ ಬಂದಂತಿದೆ.ಒಳ ಮೀಸಲಾತಿ ನೀಡುವ ಬಗ್ಗೆ ಹುಬ್ಬಳ್ಳಿ ಸಮಾವೇಶದಲ್ಲಿ  ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಡಗೈ ಸಮುದಾಯದ ಪ್ರಮುಖರಾದ ಸಚಿವ ಎಚ್.ಆಂಜನೇಯ, ಸಂಸದ ಕೆ.ಎಚ್‌.ಮುನಿಯಪ್ಪ ಮತ್ತಿತರರು ಒತ್ತಡ ಹೇರಿದ್ದರು. ರಾಜ್ಯ ರಾಜಕಾರಣ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಬಲಗೈ ಸಮುದಾಯಕ್ಕೆ ಸೇರಿದವರು ಇದರ ವಿರುದ್ಧ ನಿಂತರು. ಕಾಂಗ್ರೆಸ್ ಮಟ್ಟಿಗೆ ಹೇಳುವುದಾದರೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರು ಬಲಗೈ ಸಮುದಾಯಕ್ಕೆ ಸೇರಿದವರು. ಬಿಜೆಪಿ, ಜೆಡಿಎಸ್‌ನಲ್ಲಿಯೂ ಬಲಗೈ ಬಣದ ಶಾಸಕರು ಪ್ರಭಾವಿಗಳಾಗಿದ್ದಾರೆ. ಇವರೆಲ್ಲರೂ ಒಗ್ಗಟ್ಟಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವುದು ಬೇಡ ಎಂದು ಒಕ್ಕೊರಲ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಈ ವಿಷಯ ಸದ್ಯಕ್ಕೆ ರಾಜಕೀಯ ಕಾರಣಕ್ಕೆ ಕೇಂದ್ರಬಿಂದುವಾಗಿದೆ.ವಿರೋಧ ಯಾಕೆ?: ‘ವರದಿ ಜಾರಿಗೆ ಆತುರ ಬೇಡ, ಇದರಿಂದ ದಲಿತ ಸಮುದಾಯದಲ್ಲಿ ಒಡಕು ಉಂಟಾಗಲಿದೆ’ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದ ಬಲಗೈ ಸಮುದಾಯದ ಸಚಿವ, ಶಾಸಕರ ಗುಂಪು ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲು ತಯಾರಿಲ್ಲ. ಸಂಸದೀಯ ರಾಜಕಾರಣದಲ್ಲಿ ಮತಬ್ಯಾಂಕ್ ನಿರ್ಣಾಯಕವಾಗಿದ್ದರಿಂದ ತಮ್ಮ ಪರ ನಿಲ್ಲಬಹುದಾದ ಎಡಗೈ ಮತಗಳನ್ನು ಕಳೆದುಕೊಳ್ಳಲು ಚುನಾಯಿತ ಪ್ರತಿನಿಧಿಗಳು ಸಿದ್ಧರಿಲ್ಲ.

‘ಮುಖ್ಯಮಂತ್ರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ, ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ’ ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ವ್ಯಕ್ತಪಡಿಸಿದ್ದಾರೆ. ಹೆಸರು ಪ್ರಕಟಿಸದೇ ಇದ್ದರೆ, ಅಭಿಪ್ರಾಯ ಹೇಳಲಡ್ಡಿಯಿಲ್ಲ ಎಂದು ತಮ್ಮ ಒಳತೋಟಿಯನ್ನು ಬಿಚ್ಚಿಟ್ಟವರು ಹಲವರು.ನ್ಯಾ. ಸದಾಶಿವ ಅವರ ವರದಿ ಸರ್ಕಾರದ ಬಳಿ ಗೋಪ್ಯವಾಗಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಾಗ ಸಿದ್ಧಪಡಿಸಿದ ಪತ್ರಿಕಾ ಪ್ರಕಟಣೆಯ ಟಿಪ್ಪಣಿಯಲ್ಲಿದ್ದ ಮಾಹಿತಿಯಷ್ಟೇ ಈಗ ಬಹಿರಂಗವಾಗಿರುವುದು. ವರದಿ ಸಲ್ಲಿಸುವ ಮುನ್ನ ನಡೆದ ಅಧ್ಯಯನ, ಅದರ ವಿಧಾನ, ಎಷ್ಟು ಜನ/ ಕುಟುಂಬವನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಯ ಲಾಭ ಪಡೆದಿರುವುದನ್ನು ನಿಷ್ಕರ್ಷೆ ಮಾಡಲು ಯಾವ ಮೂಲದಿಂದ ಅಂಕಿಅಂಶ ಸಂಗ್ರಹಿಸಲಾಗಿದೆ? ಎಡಗೈ–ಬಲಗೈ ಜನಸಂಖ್ಯೆಯ ಪ್ರಮಾಣ ನಿಗದಿಗೆ ಅನುಸರಿಸಿದ ಮಾನದಂಡವೇನು? ಯಾವ ಅಂಕಿ ಅಂಶ ಆಧರಿಸಿ ವರದಿ ತಯಾರಿಸಲಾಗಿದೆ, ಸಂಗ್ರಹಿಸಿದ ಮಾಹಿತಿಗಳ ವಿಶ್ಲೇಷಣೆಯ ವಿವರ, ಆ ಲೆಕ್ಕಾಚಾರದಲ್ಲಿ ಮೀಸಲಾತಿ ಮರು ವರ್ಗೀಕರಣ ಮಾಡಲಾಗಿದೆ ಎಂಬ ಕುರಿತು ಯಾವುದೇ ಮಾಹಿತಿಯೂ ಹೊರಜಗತ್ತಿಗೆ ಗೊತ್ತಿಲ್ಲ. ಕೇವಲ ಪತ್ರಿಕಾ ಪ್ರಕಟಣೆಯ ಮಾಹಿತಿ ಇಟ್ಟುಕೊಂಡು ಒಳ ಮೀಸಲಾತಿ ಜಾರಿಯಾಗಬೇಕು ಎಂಬ ವಾದ ಮಂಡಿಸುವುದು ಸಮಂಜಸವಲ್ಲ ಎಂದು ಬಲಗೈ ಗುಂಪಿನ ಶಾಸಕರು ತಮ್ಮ ವಾದ ಮಂಡಿಸುತ್ತಾರೆ.ಸದಾಶಿವ ವರದಿಯನ್ನು ವಿಧಾನಮಂಡಲದ ಮುಂದೆ ಮಂಡಿಸಿದರೆ ಅದರ ಹುರುಳು–ತಿರುಳು ಗೊತ್ತಾಗುತ್ತದೆ.  ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರೆ, ಆಸಕ್ತರು ಓದಿ ಅಭಿಪ್ರಾಯ, ಆಕ್ಷೇಪ ತಿಳಿಸಲು ಸಾಧ್ಯ. ಒಳಮೀಸಲಾತಿ ಜಾರಿ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸುವ ಮುನ್ನ ವರದಿ ಸಾರ್ವಜನಿಕರಿಗೆ ದೊರೆಯುವಂತೆ ಸರ್ಕಾರ ಮಾಡಬೇಕು ಎಂದು ಶಾಸಕರು, ಮೀಸಲಾತಿ ತಜ್ಞರು ಅಭಿಪ್ರಾಯಪಡುತ್ತಾರೆ.ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಲ್ಲಿ ಬಲಗೈಗೆ ಶೇ 5, ಎಡಗೈಗೆ ಶೇ 6ರಷ್ಟು ಮೀಸಲಾತಿ ನೀಡಬೇಕು ಎಂಬುದು ಸಮರ್ಥನೀಯವಲ್ಲ. ಮಾದರಿ ಸಮೀಕ್ಷೆ (ಸ್ಯಾಂಪಲ್ ಸರ್ವೆ) ಮೂಲಕ ವರದಿ ಸಿದ್ಧಪಡಿಸಲಾಗಿದೆ ಎಂದು ನ್ಯಾ. ಸದಾಶಿವ ಅವರೇ ಹೇಳಿದ್ದಾರೆ. ವರದಿ ಸಿದ್ಧಪಡಿಸುವ ಮುನ್ನ ರಾಜ್ಯದ ಯಾವ ಜಿಲ್ಲೆ, ತಾಲ್ಲೂಕುಗಳಲ್ಲಿ ಎಷ್ಟು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದು ಮೊದಲು ಬಹಿರಂಗವಾಗಲಿ. ಮಾದರಿ ಸಮೀಕ್ಷೆಯ ಮಾಹಿತಿ ಇಟ್ಟುಕೊಂಡು ಸಂವಿಧಾನ ನೀಡಿದ ಮೀಸಲಾತಿ ಹಕ್ಕುಗಳನ್ನು ಛಿದ್ರ ಮಾಡಿದರೆ ಹೇಗೆ? ಇದನ್ನು ಒಪ್ಪಲಿಕ್ಕೆ ಆಗದು ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಒಳಮೀಸಲಾತಿಗೆ ನಮ್ಮ ವಿರೋಧವಿಲ್ಲ. ಹೊಲೆಯ, ಲಂಬಾಣಿ, ಬೋವಿ ಉಪಜಾತಿಗಳು ಉದ್ಯೋಗ, ಶಿಕ್ಷಣದ ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಪಡೆದಿವೆ ಎಂದು ಎಡಗೈ ಸಮುದಾಯದವರು ವಾದಿಸುತ್ತಾರೆ. ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ  ಬಲಗೈ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಂಬಿಸುತ್ತಾರೆ. ಹೆಚ್ಚಿನ ಪಾಲು ಪಡೆದಿರುವುದನ್ನು ದೃಢೀಕರಿಸುವ ಅಂಕಿ ಅಂಶ ಇಲ್ಲ. ಊಹೆಯ ಮೇಲೆ ಮಾಡುವ ತರ್ಕ ಹಾಗೂ ನಿಖರ ಆಧಾರವಿಲ್ಲದೇ ಮಾಡುತ್ತಿರುವ ಆಪಾದನೆ ಇದು. ಒಂದು ವೇಳೆ ಪಾಲು ಪಡೆದಿದ್ದರೆ, ಅದನ್ನು ಕಿತ್ತುಕೊಳ್ಳುವುದು ಎಷ್ಟು ಸರಿ? ಇಲ್ಲಿಯವರೆಗೆ ಹೆಚ್ಚಿನ ಪಾಲು ಪಡೆದಿದ್ದಾರೆ; ಇನ್ನು ಮುಂದೆ ನೀಡುವುದು ಬೇಡ ಎಂಬ ವಾದವೂ ಸಮರ್ಥನೀಯವಲ್ಲ.ಒಳಮೀಸಲಾತಿ ನೀಡುವುದೇ ಆದಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ಮನೆಮನೆಗೆ ಭೇಟಿ ನೀಡಿ ಬಲಗೈ ಉಪಜಾತಿಗಳು, ಎಡಗೈ ಉಪಜಾತಿಗಳು ಪಡೆದ ಮೀಸಲಾತಿ ಸೌಲಭ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಜನಸಂಖ್ಯೆಗೆ ಅನುಗುಣವಾಗಿ, ಮೀಸಲಾತಿ ಸೌಲಭ್ಯ ಸಿಗದೇ ಇದ್ದಲ್ಲಿ ಮರು ವರ್ಗೀಕರಣ ಮಾಡಲು ಅಭ್ಯಂತರವಿಲ್ಲ. ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಮಾಹಿತಿ ಹೊರಬಂದ ಬಳಿಕ ಈ ಬಗ್ಗೆ ಆಲೋಚಿಸಲಿ  ಎಂದೂ ಅವರು ಹೇಳಿದರು.ಮೀಸಲಾತಿ ಮರುವರ್ಗೀಕರಣದ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಕ್ಕೆ ಶಿಫಾರಸು ಮಾಡುವ ಅಧಿಕಾರವಷ್ಟೇ ಇದೆ. ಒಳಮೀಸಲಾತಿ ನೀಡಬೇಕು ಎಂಬ ಬಗ್ಗೆ ಶಿಫಾರಸು ಮಾಡುವ ಮುನ್ನ ವೈಜ್ಞಾನಿಕ ವರದಿ ಸಿದ್ಧಪಡಿಸಲಿ. ಆಂಧ್ರದಲ್ಲಿ ಜಾರಿಗೊಳಿಸಿದ ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಒಪ್ಪಿಕೊಂಡಿಲ್ಲ. ಇದು ಅಸಾಂವಿಧಾನಿಕ ಎಂದು ಆಕ್ಷೇಪಿಸಿವೆ, ಹಾಗಿರುವಾಗ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕರೊಬ್ಬರು ಪ್ರತಿಪಾದಿಸಿದರು.ಆದಿ ಕರ್ನಾಟಕ, ಆದಿ ದ್ರಾವಿಡ  ಎಂದು ಗುರುತಿಸಿಕೊಳ್ಳುವವರು ಎಡಗೈ, ಬಲಗೈ ಎರಡೂ ಸಮುದಾಯದಲ್ಲಿದ್ದಾರೆ. ಜಾತಿ ಹೆಸರಿನಲ್ಲಿ ಗುರುತಿಸಿಕೊಳ್ಳುವವರಲ್ಲಿಯೇ ಗೊಂದಲವಿದೆ. ರಾಜ್ಯ ಸರ್ಕಾರ ನಡೆಸಿದ ಜಾತಿವಾರು ಜನಗಣತಿಯಲ್ಲಿ ಉಪಜಾತಿಗಳ ವಿವರವನ್ನು ಪಡೆದುಕೊಂಡಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಒಳಮೀಸಲಾತಿ ನೀಡುವ ಮುನ್ನ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಿ. ಇಲ್ಲದಿದ್ದರೆ, ಯಾರಾದರೂ ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋದರೆ ಸರ್ಕಾರದ ಅಪೇಕ್ಷೆಯೂ ಈಡೇರುವುದಿಲ್ಲ ಎಂದು ಜೆಡಿಎಸ್ ಶಾಸಕರೊಬ್ಬರು ಅಭಿಪ್ರಾಯಪಟ್ಟರು.ಮುಖ್ಯಮಂತ್ರಿಗೆ ನಿಜವಾಗಿ ಒಳಮೀಸಲಾತಿ ಜಾರಿ ಮಾಡಬೇಕೆಂಬ ಸದಿಚ್ಛೆ ಇದ್ದರೆ ಹಿಂದುಳಿದ ವರ್ಗದಲ್ಲಿ ಮೊದಲು ಒಳಮೀಸಲಾತಿ ತರಲಿ. ಪ್ರವರ್ಗ ಎ ಯಲ್ಲಿ 95 ಜಾತಿಗಳಿದ್ದು ಕೇವಲ 23 ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ. ಶೇ 15ರಷ್ಟು ಮೀಸಲಾತಿ ಇರುವ ಪ್ರವರ್ಗ 2ಎ ನಲ್ಲಿ 102 ಜಾತಿಗಳಿದ್ದು, ಕುರುಬ, ಈಡಿಗ ಸಮುದಾಯಗಳಷ್ಟೇ ಹೆಚ್ಚಿನ ಸೌಲಭ್ಯ ಪಡೆದಿವೆ. ಉಪ್ಪಾರ, ಗೊಲ್ಲ, ಬೆಸ್ತ, ಕ್ಷೌರಿಕ, ಮಡಿವಾಳ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಪ್ರವರ್ಗ 2 ಬಿ ಯಲ್ಲಿ ಮುಸ್ಲಿಮರು ಹೆಚ್ಚಿನ ಸೌಲಭ್ಯ ಪಡೆದಿದ್ದಾರೆ. ಪ್ರವರ್ಗ 3 ಎ ಯಲ್ಲಿ ಒಕ್ಕಲಿಗರು, ಪ್ರವರ್ಗ 3 ಬಿ ಯಲ್ಲಿ ಲಿಂಗಾಯತರು ಮೀಸಲಾತಿಯ ಬಹುಪಾಲನ್ನು ದಕ್ಕಿಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಮುನ್ನ ಹಿಂದುಳಿದವರಲ್ಲಿ ಮೀಸಲಾತಿ ತಂದರೆ 200ಕ್ಕೂ ಹೆಚ್ಚು ಮೀಸಲಾತಿ ವಂಚಿತ ಜಾತಿಗಳಿಗೆ ಸೌಲಭ್ಯ ಸಿಗಲಿದೆ. ಸರ್ಕಾರ ಈ ಬಗ್ಗೆ ಮರು ಚಿಂತನೆ ಮಾಡಲಿ ಎಂದು ಬಿಜೆಪಿ ಶಾಸಕರೊಬ್ಬರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry