ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಕ್ಕುಗಳ ಚರ್ಚೆಗೆ ಇನ್ನಷ್ಟು ಬಲ

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಒಂದೇ ಉಸಿರಿಗೆ ಮೂರು ಬಾರಿ ತಲಾಖ್ ಎಂದು ಹೇಳಿ ವಿವಾಹ  ವಿಚ್ಛೇದನ ನೀಡುವ ಸಂಪ್ರದಾಯ ಕ್ರೂರವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಅಲ್ಲದೆ ಇಂತಹ ಪದ್ಧತಿ ಅಸಾಂವಿಧಾನಿಕ ಹಾಗೂ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವುದು ಮಹಿಳಾ ಹಕ್ಕುಗಳ ಹೋರಾಟಗಾರರಿಗೆ ಬಲ ತುಂಬಿದಂತಾಗಿದೆ. ಕೇಂದ್ರ ಸರ್ಕಾರ ಕೂಡ ಇಂತಹದೇ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವ್ಯಕ್ತಪಡಿಸಿದೆ.

ಹೀಗಾಗಿ, ಈಗಾಗಲೇ  ತಲಾಖ್ ಕುರಿತಂತೆ ರಾಷ್ಟ್ರದಲ್ಲಿ  ನಡೆಯುತ್ತಿರುವ ಚರ್ಚೆ, ವಾಗ್ವಾದಗಳಿಗೆ ಈ ಅಭಿಪ್ರಾಯವು ಇನ್ನಷ್ಟು ತೀವ್ರತೆ ತುಂಬಲಿದೆ. ವ್ಯಕ್ತಿಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳ ಮೇಲೆ ಯಾವುದೇ ಧರ್ಮದ ವೈಯಕ್ತಿಕ ಕಾನೂನು ಪಾರಮ್ಯ ಸಾಧಿಸಬಾರದು ಎಂಬುದನ್ನು ಅಲಹಾಬಾದ್ ಹೈಕೋರ್ಟ್ ನೆನಪಿಸಿರುವುದು ಸರಿಯಾಗಿಯೇ ಇದೆ. ಈ ವಿಚಾರ ಸುಪ್ರೀಂ ಕೋರ್ಟ್ ಪರಿಗಣನೆಯಲ್ಲೂ ಇದ್ದು ಇತ್ಯರ್ಥಗೊಳ್ಳಬೇಕಿರುವುದರಿಂದ ಈ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಎಂದೂ ಅಲಹಾಬಾದ್ ಹೈಕೋರ್ಟ್ ಹೇಳಿದೆ. 

ಮುಸ್ಲಿಂ ವಿವಾಹಕ್ಕೆ ಸಂಬಂಧಿಸಿದಂತೆ ತ್ರಿವಳಿ ತಲಾಖ್, ಹಲಾಲಾ  ಹಾಗೂ ಬಹುಪತ್ನಿತ್ವ – ಈ  ವಿಚಾರಗಳ ಸಾಂವಿಧಾನಿಕ ಬದ್ಧತೆಯನ್ನು ಪ್ರಶ್ನಿಸಿ ಶಾಯರಾ ಬಾನು ಎನ್ನುವವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇತ್ಯರ್ಥಕ್ಕೆ ಕಾದುಕುಳಿತಿದೆ. ಸಮಾನತೆಯನ್ನು ಬೋಧಿಸುವ ಸಂವಿಧಾನದ 14ನೇ ವಿಧಿ, ತಾರತಮ್ಯ ನಿಷೇಧಿಸುವ 15ನೇ ವಿಧಿ ಹಾಗೂ ಬದುಕುವ ಹಕ್ಕನ್ನು ನೀಡುವ 21ನೇ ವಿಧಿಗಳನ್ನು ಉಲ್ಲಂಘಿಸುವ ಈ ಪದ್ಧತಿಗಳನ್ನು ಅಕ್ರಮ ಎಂದು ಘೋಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್ ಹಾಗೂ ಸೌದಿ ಅರೇಬಿಯಾಗಳಲ್ಲಿ ಒಂದೇ ಉಸಿರಿಗೆ ಮೂರು ಬಾರಿ ತಲಾಖ್‌ ಹೇಳುವುದಕ್ಕೆ ನಿಷೇಧವಿದೆ. ತಲಾಖ್ ಜಾರಿಗೊಳಿಸಲು ತಿಂಗಳುಗಳ ಅಂತರ ಇರಬೇಕು ಎಂಬುದು ಇದಕ್ಕೆ ಕಾರಣ. ಆದರೆ ಇಸ್ಲಾಂನ ಕಾನೂನಿನ ಈ ಅಂಶಗಳನ್ನು ಬದಿಗೊತ್ತಿ ತ್ರಿವಳಿ ತಲಾಖ್ ಪದ್ಧತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿದೆ ಎಂಬುದನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹೇಳಿದೆ. ಅಲಹಾಬಾದ್ ಹೈಕೋರ್ಟ್ ಎತ್ತಿ ಹೇಳಿರುವ  ಈ ಅಂಶಗಳು ರಾಷ್ಟ್ರದಲ್ಲಿ ಲಿಂಗತ್ವ ಹಕ್ಕುಗಳ ಹೋರಾಟದಲ್ಲಿ ಮುಖ್ಯವಾಗಲಿವೆ.  ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ ನಡೆಸಿದ ಸಮೀಕ್ಷೆಯ ಪ್ರಕಾರ, ತ್ರಿವಳಿ ತಲಾಖ್ ನಿಷೇಧಕ್ಕೆ ಶೇ 92ರಷ್ಟು ಮುಸ್ಲಿಂ ಮಹಿಳೆಯರು ಒತ್ತಾಯಿಸಿದ್ದಾರೆ. ತಲಾಖ್ ವಿರುದ್ಧ  ಮುಸ್ಲಿಂ ಮಹಿಳೆಯರೇ ದನಿ ಎತ್ತುತ್ತಿರುವುದು ಭರವಸೆ ಮೂಡಿಸುವಂತಹದ್ದು. ಸಾಮಾಜಿಕ ಸೂಚ್ಯಂಕಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರಗತಿ ಹೆಚ್ಚಿಲ್ಲ. ಇದಕ್ಕೆ ಕಾರಣ 18 ವರ್ಷ ತುಂಬುವ ಮೊದಲೇ  ಶೇ 55ರಷ್ಟು ಮಂದಿ ಮುಸ್ಲಿಂ ಯುವತಿಯರು ವಿವಾಹಬಂಧನಕ್ಕೊಳಗಾಗಿರುತ್ತಾರೆ ಎಂಬುದನ್ನು ಮರೆಯುವಂತಿಲ್ಲ.

ನಿಜ. ಭಾರತೀಯ ಕುಟುಂಬದಲ್ಲಿ ಹೆಣ್ಣಿಗೆ ಸಮಾನತೆ ಎಂಬುದು ಕನಸಿನ ಮಾತು. ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಮಕ್ಕಳ ಪೋಷಣೆ, ದತ್ತು ಸ್ವೀಕಾರ ಇತ್ಯಾದಿ ಕಾನೂನುಗಳು ನಿರ್ದಿಷ್ಟ ಧರ್ಮಗಳ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತವೆ. ವಿವಾಹ, ವಿಚ್ಛೇದನ, ಮಕ್ಕಳ ಪಾಲನೆಯಂತಹ ವಿಚಾರಗಳಿಗೆ ಸಂಬಂಧಿಸಿದಂತೆ  ಹಿಂದೂ ವೈಯಕ್ತಿಕ ಕಾನೂನುಗಳು ಒಂದಷ್ಟು ಸುಧಾರಣೆಯಾಗಿ, ಕಾನೂನು ಪುಸ್ತಕದಲ್ಲಾದರೂ ಮಹಿಳೆಗೆ ಸಮಾನ ಅಧಿಕಾರಗಳನ್ನು ನೀಡಲಾಗಿದೆ. ಆದರೆ ಈ ಪ್ರಮಾಣದ ಬದಲಾವಣೆಯೂ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಆಗಿಲ್ಲ. ಈ ಹಿಂದೆ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಿಂಧುಗೊಳಿಸುವಂತಹ ತೀರ್ಪುಗಳನ್ನು ಕೆಲವು ಕೋರ್ಟ್‌ಗಳು ನೀಡಿರುವುದೂ ಇದೆ.

ಏಕರೂಪ ನಾಗರಿಕ ಸಂಹಿತೆ ಹಾಗೂ ವೈಯಕ್ತಿಕ ಕಾನೂನುಗಳನ್ನು ಪ್ರತಿಪಾದಿಸುವವರ ಮಧ್ಯದ ತಿಕ್ಕಾಟ  ಅಲಹಾಬಾದ್ ಹೈಕೋರ್ಟ್ ತೀರ್ಪಿನಿಂದ ಹೆಚ್ಚಾಗಬಹುದು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಈ ವಿಚಾರ ರಾಜಕೀಯವಾಗಿ ಬಳಕೆಯಾಗುವಂತಾಗಬಾರದು. ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆಯರು ಎರಡನೇ ದರ್ಜೆ ಪ್ರಜೆಗಳಾಗಿ ಮುಂದುವರಿಯುವುದು ಬೇಡ. ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ  ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಯಾವುದೇ ಶಾಸನಬದ್ಧತೆ ಇಲ್ಲ. ಜಾತ್ಯತೀತ ಆಧುನಿಕ ರಾಷ್ಟ್ರದಲ್ಲಿ ಮಹಿಳೆ ಕುರಿತಂತಹ ಓಬಿರಾಯನ ಕಾಲದ ಕಾನೂನುಗಳು ಬದಲಾವಣೆ ಕಾಣುವುದು ಅಗತ್ಯ. ಜಾತ್ಯತೀತ ಗಣರಾಜ್ಯದಲ್ಲಿ ಸಾಂವಿಧಾನಿಕ ಕಾನೂನು ಮುಖ್ಯವಾದುದು. ಧಾರ್ಮಿಕ ಕಾನೂನು ಮುಖ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT