ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರ ಸಂಹಿತೆ: ಸಂಪ್ರದಾಯ ಗೌರವಿಸಿದರೆ ತಪ್ಪೇನು?

ಆಚರಣೆಗಳನ್ನು ಪಾಲಿಸಲು ಆತ್ಮಸಾಕ್ಷಿ ಒಪ್ಪದಿದ್ದರೆ ಪವಿತ್ರ ಸ್ಥಳಗಳಿಂದ ದೂರ ಉಳಿಯಬಹುದು
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ದೇವಸ್ಥಾನಗಳು ಧಾರ್ಮಿಕ ಚಟುವಟಿಕೆಗಳ ಕೇಂದ್ರವಷ್ಟೇ ಅಲ್ಲ. ಅವು ಇಲ್ಲಿನ ಜನರ ಸ್ವಭಾವಕ್ಕೆ ಸಹಜವಾಗಿ ಅಧ್ಯಾತ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಕೇಂದ್ರಗಳೂ ಹೌದು. ಅಸಾಂವಿಧಾನಿಕ ಎನ್ನುವಂತಹ ಕೆಲವು ಆಚರಣೆಗಳನ್ನು ವಿರೋಧಿಸುವುದು, ಅವುಗಳ ಜೊತೆ ಸಂಘರ್ಷಕ್ಕೆ ಇಳಿಯುವುದು ಈಚಿನ ದಿನಗಳಲ್ಲಿ ಕಂಡುಬರುತ್ತಿದೆ.

ಸಂಪ್ರದಾಯವನ್ನು ಉಲ್ಲಂಘಿಸಿದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಸತೀಶ್ ಅವರು ಚೂಡಿದಾರ್‌ ಧರಿಸಿ ದೇವಸ್ಥಾನ ಒಳಗೆ ಪ್ರವೇಶಿಸಲು ನವೆಂಬರ್ 29ರಂದು ಅವಕಾಶ ಕಲ್ಪಿಸಿದರು. ಕೇರಳದ ಹಲವು ದೇವಸ್ಥಾನಗಳಂತೆ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಕೂಡ ಸಾಂಪ್ರದಾಯಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ಪ್ರಸಿದ್ಧಿ ಪಡೆದಿದೆ. ದೇವಸ್ಥಾನವು 2011ರಲ್ಲಿ ಕಾನೂನು ಸಮರಕ್ಕೆ ಸಿಲುಕಿ, ದೇವಳದ ನೆಲಮಾಳಿಗೆಯ ಕೋಣೆಗಳಲ್ಲಿ ಭಾರಿ ಪ್ರಮಾಣದ ಸಂಪತ್ತು ಪತ್ತೆಯಾಯಿತು.

ಪತ್ತೆಯಾದ ಸಂಪತ್ತಿನ ಮೌಲ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದವು. ತಿರುವಾಂಕೂರು ರಾಜಮನೆತನದವರು ಈ ಸಂಪತ್ತಿನ ರಕ್ಷಕರು ಮಾತ್ರವಲ್ಲ, ದೇವಸ್ಥಾನದಲ್ಲಿ ಪತ್ತೆಯಾದ ಸಂಪತ್ತಿನ ಪ್ರತಿ ಕಣದಲ್ಲೂ ಅವರ ಕೊಡುಗೆ ಇದೆ. ದೇವಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ಶತಮಾನಗಳಿಂದ ಕಾಪಿಟ್ಟುಕೊಂಡು ಬಂದಿದ್ದಾರೆ. ಇವನ್ನು ಮದಿಲಗಂ ದಾಖಲೆಗಳು ಎನ್ನಲಾಗುತ್ತದೆ. ಇವುಗಳಲ್ಲಿ ದೇವಸ್ಥಾನಕ್ಕೆ ರಾಜಮನೆತನ ಮಾಡಿದ ದಾನದ ವಿವರಗಳು ಇವೆ. ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯೂ ಇದೆ.

ವಿವಾದ ತನ್ನ ಅಂಗಳಕ್ಕೆ ಬಂದ ನಂತರ ಸುಪ್ರೀಂ ಕೋರ್ಟ್‌ ದೇವಸ್ಥಾನದ ನಿರ್ವಹಣೆ ನೋಡಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಆಡಳಿತ ಸಮಿತಿ ನೇಮಿಸಿತು. ಈ ಸಮಿತಿಯು ಪ್ರಕರಣ ಇತ್ಯರ್ಥ ಆಗುವವರೆಗೆ ಅಸ್ತಿತ್ವದಲ್ಲಿ ಇರುತ್ತದೆ. ಆದರೆ, ದೇವಸ್ಥಾನದ ಧಾರ್ಮಿಕ ಆಚರಣೆಗಳು ಹಾಗೂ ಕ್ರಿಯೆಗಳಲ್ಲಿ ಅಲ್ಲಿನ ತಂತ್ರಿಗಳ (ಪ್ರಧಾನ ಅರ್ಚಕ) ಮಾತೇ ಅಂತಿಮ ಎಂದು ಸ್ಪಷ್ಟಪಡಿಸಿತ್ತು.

ಸುಪ್ರೀಂ ಕೋರ್ಟ್‌ ನೇಮಿಸಿದ್ದ ದೇವಸ್ಥಾನದ ಅಧ್ಯಕ್ಷ ಕೆ. ಹರಿಪಾಲ್, ತಿರುವಾಂಕೂರಿನ ರಾಜಮನೆತನ ಮತ್ತು ತಂತ್ರಿ ವಸ್ತ್ರ ಸಂಹಿತೆಯನ್ನು ತೆರವು ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಅಭಿಪ್ರಾಯಗಳಿಗೆ ವಿರುದ್ಧವಾಗಿ ಅಡಿ ಇಟ್ಟ ಕಾರ್ಯನಿರ್ವಾಹಕ ಅಧಿಕಾರಿ, ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಸ್ಥಾನದ ಒಳಕ್ಕೆ ಪ್ರವೇಶ ಕಲ್ಪಿಸುವ ಆದೇಶ ಹೊರಡಿಸಿದರು. ಆದರೆ ಕಾರ್ಯನಿರ್ವಾಹಕ ಅಧಿಕಾರಿಯ ಆದೇಶವನ್ನು ಡಿಸೆಂಬರ್ 8ರಂದು ರದ್ದು ಮಾಡಿದ ಕೇರಳ ಹೈಕೋರ್ಟ್‌, ‘ತಂತ್ರಿಯ ಮಾತೇ ಅಂತಿಮ’ ಎಂದು ಹೇಳಿ ವಸ್ತ್ರ ಸಂಹಿತೆಯನ್ನು ಪುನಃ ಅಸ್ತಿತ್ವಕ್ಕೆ ತಂದಿತು.

‘ಸೀರೆ, ಸೆಟ್ ಮುಂಡು (ಕೇರಳದ ಸಾಂಪ್ರದಾಯಿಕ ಉಡುಗೆ), ಲಂಗ–ದಾವಣಿ ಹೊರತು ಇತರ ಯಾವುದೇ ವಸ್ತ್ರ ಧರಿಸಿದ ಮಹಿಳೆ ದೇವಸ್ಥಾನ ಪ್ರವೇಶಿಸುವ ಮೊದಲು ಸೊಂಟಕ್ಕೆ ಮುಂಡು ಸುತ್ತಿಕೊಳ್ಳಬೇಕು. ಇದೇ ರೀತಿ, ಪುರುಷರು ದೇವಸ್ಥಾನ ಪ್ರವೇಶಿಸುವ ಮೊದಲು ಸೊಂಟಕ್ಕೆ ಮುಂಡು ಸುತ್ತಿಕೊಳ್ಳಬೇಕು ಹಾಗೂ ತಮ್ಮ ಅಂಗಿ ತೆಗೆಯಬೇಕು.

ಇಂಥ ಸಂಸ್ಥೆಗಳು ಪಾಲಿಸುತ್ತಿರುವ ಧಾರ್ಮಿಕ ಆಚರಣೆಗಳನ್ನು ನಾವು ಏಕೆ ಪ್ರಶ್ನಿಸುತ್ತೇವೆ ಎಂಬುದನ್ನು ಈ ವಿದ್ಯಮಾನ ಮುನ್ನೆಲೆಗೆ ತರುತ್ತದೆ. ವಸ್ತ್ರ ಸಂಹಿತೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಕೀಲರಾದ ರಿಯಾ ರಾಜಿ, ‘ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಂಬಂಧಪಟ್ಟ ಅಧಿಕಾರಿಗಳೂ ಬದಲಾಗಬೇಕು’ ಎಂದು ವಾದಿಸಿದ್ದರು. ಬ್ರಿಟಿಷರು ನಮ್ಮ ದೇಶ ಬಿಟ್ಟು 70 ವರ್ಷಗಳೇ ಕಳೆದಿವೆ. ಕೋರ್ಟ್‌ ಕಲಾಪಗಳ ವೇಳೆ ವಸ್ತ್ರಸಂಹಿತೆ ಪಾಲಿಸುವ ಐರೋಪ್ಯ ಸಂಪ್ರದಾಯ ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ರಿಯಾ ರಾಜಿ ಅವರೂ ಕೋರ್ಟ್‌ಗಳಲ್ಲಿ ವಸ್ತ್ರ ಸಂಹಿತೆ ಪಾಲಿಸುತ್ತಾರೆ ಎಂಬುದನ್ನು ಇಲ್ಲಿ ಪ್ರಾಸಂಗಿಕವಾಗಿ ಉಲ್ಲೇಖಿಸಬಹುದು!

ಸೆಕೆ, ಧಗೆ ಹೆಚ್ಚಿರುವ ಕೇರಳದಲ್ಲಿ ಕರಿ ಕೋಟು ಹಾಕಿಕೊಂಡು, ಅದರ ಮೇಲೆ ಗೌನು ತೊಟ್ಟು, ಕಾಲರ್‌ ಸುತ್ತ ಪಟ್ಟಿ ಕಟ್ಟಿಕೊಳ್ಳುವುದು ತೀರಾ ಕಿರಿಕಿರಿ ಉಂಟುಮಾಡುತ್ತದೆ. ಆದರೆ ಇಂಥ ವಸ್ತ್ರಸಂಹಿತೆಯ ಹಿಂದಿನ ತರ್ಕ, ಕಾರಣಗಳನ್ನು ಪ್ರಶ್ನಿಸದೆಯೇ ನಾವು ಈ ವಸ್ತ್ರಸಂಹಿತೆ ಪಾಲಿಸುತ್ತಿಲ್ಲವೇ?!
ವಿಶ್ವದ ಎಲ್ಲೆಡೆ ಪವಿತ್ರ ಸ್ಥಳಗಳಲ್ಲಿ, ಸ್ಮಾರಕ ಇರುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಹಾಗೂ ವಸ್ತ್ರಸಂಹಿತೆಯನ್ನು ಪಾಲಿಸಲಾಗುತ್ತದೆ.

ನಾನು ಈಚೆಗೆ ಕಾಂಬೊಡಿಯಾಕ್ಕೆ ಭೇಟಿ ನೀಡಿದ್ದೆ. ಅಲ್ಲಿ ದೇವಸ್ಥಾನದ ಅವಶೇಷಗಳು ಮಾತ್ರ ಇರುವ ಪಾರಂಪರಿಕ ತಾಣವೊಂದರ ಆವರಣ ಪ್ರವೇಶಿಸಲು ತೋಳು ಇಲ್ಲದ ಉಡುಪು  ಧರಿಸಿದವರಿಗೆ ಅವಕಾಶ ಇಲ್ಲ. ತೋಳುಗಳಿಗೆ ವಸ್ತ್ರ ಸುತ್ತಿಕೊಂಡರೆ ಸಾಕಾಗದು. ಹಾಗಾಗಿ ನಾನು ತೋಳುಗಳಿರುವ ಅಂಗಿಯನ್ನು ಎರವಲು ಪಡೆಯಬೇಕಾಯಿತು. ತಕ್ಕಮಟ್ಟಿಗೆ ಪ್ರಗತಿಪರ ನಗರ ಎನ್ನಬಹುದಾದ ಬ್ಯಾಂಕಾಕ್‌ನಲ್ಲಿ ಕೂಡ ಚೆಡ್ಡಿ, ಸ್ಕರ್ಟ್‌, ಲೆಗಿಂಗ್‌ ಧರಿಸಿದವರಿಗೆ ಸ್ಮಾರಕಗಳಿಗೆ ಪ್ರವೇಶ ಇಲ್ಲ. ಸರೊಂಗ್‌ (ಮುಂಡಿನಂತಹ ವಸ್ತ್ರ) ಎರವಲು ಪಡೆದು ಅದನ್ನು ಸುತ್ತಿಕೊಂಡರೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತದೆ.

ಮುಸ್ಲಿಮರು ಧರಿಸುವ ಟೋಪಿ ಹಾಕಿಕೊಳ್ಳದಿದ್ದರೆ ಪುರುಷರಿಗೆ ಮಸೀದಿಗೆ ಪ್ರವೇಶ ಇಲ್ಲ, ತಲೆಯನ್ನು ಹಿಜಾಬ್‌ನಿಂದ ಪೂರ್ತಿಯಾಗಿ ಸುತ್ತಿಕೊಳ್ಳದಿದ್ದರೆ ಮಹಿಳೆಯರಿಗೆ ಪ್ರವೇಶ ಇಲ್ಲ. ಈ ಆಚರಣೆಯನ್ನು ಗೌರವಿಸಲಾಗುತ್ತದೆ. ಪ್ರವಾಸಿ ತಾಣಗಳಲ್ಲಿ ಇರುವ ಮಸೀದಿಗಳು ತಲೆಯನ್ನು ಸುತ್ತಿಕೊಳ್ಳಲು ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಧರಿಸಲು ಬೇಕಿರುವ ದಿರಿಸುಗಳನ್ನು ಪ್ರವಾಸಿಗರಿಗೆ ಕ್ರಯಕ್ಕೆ ನೀಡುತ್ತವೆ. ಅಂಥ ಬಟ್ಟೆ ಧರಿಸಿದರೆ ಮಾತ್ರ ಒಳಗೆ ಪ್ರವೇಶ ಕಲ್ಪಿಸಲಾಗುತ್ತದೆ.

ಮುಸ್ಲಿಮರ ಪಾಲಿನ ಅತ್ಯಂತ ಪವಿತ್ರ ಸ್ಥಳವಾದ ಮೆಕ್ಕಾಗೆ ಹೋದಾಗ ಅಲ್ಲಿ ಇಹ್ರಾಂ ಧರಿಸುವುದು ಕಡ್ಡಾಯ. ಇದು ನಮ್ಮಲ್ಲಿನ ಪಂಚೆ–ಶಲ್ಯದಂತಹ ಎರಡು ತುಂಡುಗಳ ಬಿಳಿ ಬಣ್ಣದ ವಸ್ತ್ರ. ಪವಿತ್ರ ಸ್ಥಳ ಪ್ರವೇಶಿಸುವಾಗ ರಾಜ ಮನೆತನದವರು ಕೂಡ ಇಹ್ರಾಂ ಹಾಗೂ ಹಿಜಾಬ್‌ ಧರಿಸುತ್ತಾರೆ ಎಂಬ ಮಾತಿದೆ.

ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿರುವ ಚರ್ಚುಗಳು ಹಲವು. ಅಂತಹ ಬಹುಪಾಲು ಚರ್ಚುಗಳು ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಪಾಲಿಸುತ್ತವೆ. ತೋಳು ಇಲ್ಲದ ಮೇಲುಡುಗೆ, ಮಂಡಿ ಕಾಣಿಸುವಂತಹ ಪ್ಯಾಂಟ್‌ ಅಥವಾ ಸ್ಕರ್ಟ್‌ಗಳಿಗೆ ವ್ಯಾಟಿಕನ್‌ನಲ್ಲಿ ಅವಕಾಶ ಇಲ್ಲ. ಸೇಂಟ್‌ ಪೀಟರ್ಸ್‌ ಬ್ಯಾಸಿಲಿಕಾ, ಸಿಸ್ಟೀನ್ ಚಾಪೆಲ್ ಅಥವಾ ವ್ಯಾಟಿಕನ್ ವಸ್ತುಸಂಗ್ರಹಾಲಯಗಳಿಗೂ ಈ ಮಾತು ಅನ್ವಯವಾಗುತ್ತದೆ. ವಸ್ತ್ರಸಂಹಿತೆ ವಿಚಾರದಲ್ಲಿ ಈ ಸ್ಥಳಗಳು ಬದಲಾವಣೆಗೆ ಸುತರಾಂ ಒಪ್ಪವು.

ಪವಿತ್ರ ಸ್ಥಳಗಳು ಹಾಗೂ ಸ್ಮಾರಕಗಳ ಪಾವಿತ್ರ್ಯ ಕಾಯುವ ಉದ್ದೇಶದಿಂದ ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ವಿಶ್ವದ ಎಲ್ಲೆಡೆ ಪಾಲಿಸಲಾಗುತ್ತದೆ. ಇಂಥ ನಿಬಂಧನೆಗಳಿಗೆ ಜನ ಪ್ರಜ್ಞಾಪೂರ್ವಕವಾಗಿ ಸಮ್ಮತಿ ಸೂಚಿಸುತ್ತಾರೆ. ನಿಬಂಧನೆಗಳನ್ನು ಒಪ್ಪದವರು ಸಣ್ಣ ಪ್ರಮಾಣದ ಜನ. ಅವರು ಇಂಥ ಸ್ಥಳಗಳಿಂದ ದೂರವೇ ಇರುತ್ತಾರೆ. ಆಚರಣೆಗಳನ್ನು ಪಾಲಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದಾದರೆ, ಇಂಥ ಸ್ಥಳಗಳಿಗೆ ಹೋಗಲೇಬೇಕು ಎಂಬ ಒತ್ತಾಯವೇನೂ ಇರುವುದಿಲ್ಲ.

ಗುರುದ್ವಾರ ಪ್ರವೇಶಿಸುವ ಮೊದಲು ತಲೆಯನ್ನು ದುಪಟ್ಟಾದಿಂದ ಅಥವಾ ಸೀರೆಯ ಸೆರಗಿನಿಂದ ಸುತ್ತಿಕೊಳ್ಳುವುದು ಕಡ್ಡಾಯ. ಪುರುಷರು ಚಿಕ್ಕ ಕರವಸ್ತ್ರವನ್ನಾದರೂ ಬಳಸಿ ತಮ್ಮ ಶಿರದ ಸುತ್ತ ಸುತ್ತಿಕೊಳ್ಳುತ್ತಾರೆ. ಅಮೃತಸರದ ಸ್ವರ್ಣ ಮಂದಿರಕ್ಕೆ ನಾವು ಭೇಟಿ ನೀಡಿದ್ದಾಗ, ವಯಸ್ಸಾದ ನನ್ನ ತಾಯಿ ಯಾವುದೇ ಅಳುಕಿಲ್ಲದೆ ತನ್ನ ತಲೆಯನ್ನು ಸೀರೆಯ ಸೆರಗಿನಿಂದ ಸುತ್ತಿಕೊಂಡಿದ್ದರು. ನಮ್ಮ ಮೈಸೂರು ಸಂಸ್ಕೃತಿಯ ಅನ್ವಯ, ವಿಧವೆಯರು ಮಾತ್ರ ತಲೆಯನ್ನು ಸೆರಗಿನಿಂದ ಸುತ್ತಿಕೊಳ್ಳುತ್ತಾರೆ. ನಾವು ಚಿಕ್ಕವರಿದ್ದಾಗ ಹುಡುಗಾಟಿಕೆಗೆ ತಲೆಯನ್ನು ಸುತ್ತಿಕೊಂಡರೆ ಹಿರಿಯರು ಬೈಯುತ್ತಿದ್ದರು. ಆದರೆ ಇಲ್ಲಿ, ಅಂದರೆ ಸ್ವರ್ಣ ಮಂದಿರದಲ್ಲಿ, ನಾವು ಯಾವುದೇ ತಕರಾರು ಇಲ್ಲದೆ ಸಂಪ್ರದಾಯಕ್ಕೆ ಬದ್ಧರಾಗಿ ತಲೆಗೆ ಸೆರಗು ಸುತ್ತಿಕೊಂಡೆವು. ಇದು ಸಾಧ್ಯವಾಗಿದ್ದು ಗುರುದ್ವಾರದ ಮೇಲಿನ ಭಕ್ತಿ ಹಾಗೂ ಅಲ್ಲಿನ ಆಚರಣೆಗಳ ಮೇಲಿನ ಗೌರವದಿಂದ ಮಾತ್ರ.

‘ನೀವು ರೋಮ್‌ನಲ್ಲಿ ಇರುವುದಾದರೆ, ರೋಮನ್ನರ ಆಚರಣೆಗಳ ಅನುಸಾರ ಬಾಳಿ. ಬೇರೆಡೆ ಇರುವುದಾದರೆ, ಅಲ್ಲಿನವರ ಆಚರಣೆಗಳ ಅನ್ವಯ ಬದುಕಿ’ ಎನ್ನುವ ಮಾತನ್ನು ಸೇಂಟ್‌ ಆ್ಯಂಬ್ರೋಸ್‌ ಹೇಳಿದ್ದರು ಎಂಬ ನಂಬಿಕೆ ಇದೆ. ತನ್ನ ಪರಂಪರೆ ಹಾಗೂ ಸಂಸ್ಕೃತಿಯನ್ನು ಜಗತ್ತು ಕಾಯ್ದುಕೊಳ್ಳಬೇಕು ಎಂದಾದರೆ, ಹಿಂದಿನಿಂದ ಬಂದ ಸಂಸ್ಕೃತಿಯ ಜೊತೆ ನಮ್ಮ ಮಕ್ಕಳು ಅವಿನಾಭಾವ ಸಂಬಂಧ ಹೊಂದಿರಬೇಕು ಎಂದಾದರೆ, ಉಪದ್ರವಕಾರಿ ಅಲ್ಲದ ಕೆಲವು ಸಂಪ್ರದಾಯಗಳನ್ನು ಪ್ರಶ್ನಿಸದಿರುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT