ಬುಧವಾರ, ಫೆಬ್ರವರಿ 19, 2020
21 °C

ನೋಟು ರದ್ದತಿ ಹಿಂದೆ 6 ಜನರ ತಂಡದ ಕೆಲಸ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನೋಟು ರದ್ದತಿ ಹಿಂದೆ 6 ಜನರ ತಂಡದ ಕೆಲಸ

ನವದೆಹಲಿ: ನೋಟು ರದ್ದು ಮಾಡುವ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಂಬಿಕಸ್ಥ ಅಧಿಕಾರಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಅಧಿಕಾರಿ ಬಗ್ಗೆ ಆರ್ಥಿಕ ವಲಯದವರನ್ನು ಹೊರತುಪಡಿಸಿದರೆ, ಇತರರಿಗೆ ಹೆಚ್ಚಾಗಿ ತಿಳಿದಿಲ್ಲ.

ಈ ಅಧಿಕಾರಿಯ ಹೆಸರು ಹಸ್ಮುಖ್ ಅಧಿಯಾ. ಅಧಿಯಾ ಹಾಗೂ ಇತರ ಐದು ಜನರಿಗೆ ನೋಟು ರದ್ದತಿ ಬಗ್ಗೆ ಮಾಹಿತಿ ಇತ್ತು. ಆದರೆ, ಅವರು ಈ ಗುಟ್ಟು ಬಿಟ್ಟುಕೊಡದಿರುವ ಶಪಥ ಮಾಡಿದ್ದರು ಎನ್ನುತ್ತವೆ ಮೂಲಗಳು.

ಈ ಆರು ಜನರಿಗೆ ಯುವಕರ ಇನ್ನೊಂದು ತಂಡ ಸಹಾಯ ಮಾಡುತ್ತಿತ್ತು. ಯುವ ತಂಡವು ಪ್ರಧಾನಿಯವರ ನವದೆಹಲಿ ನಿವಾಸದ ಎರಡು ಕೊಠಡಿಗಳಲ್ಲಿ ಕೆಲಸ ಮಾಡುತ್ತಿತ್ತು.

ನೋಟು ರದ್ದತಿ ವಿಚಾರದಲ್ಲಿ ಈಗ ಗೊತ್ತಾಗಿರುವ ಸಂಗತಿಗಳು, ಮೋದಿ ಅವರು ಎಲ್ಲದರ ಮೇಲ್ವಿಚಾರಣೆಯನ್ನು ತಾವೇ ನಡೆಸುತ್ತಿದ್ದರು ಎಂದು ಹೇಳುತ್ತವೆ. ಅಲ್ಲದೆ, ಕ್ಲಿಷ್ಟಕರ ನಿರ್ಧಾರಗಳನ್ನೂ ಅವರು ತ್ವರಿತವಾಗಿ ಕೈಗೊಳ್ಳುತ್ತಿದ್ದರು ಎಂಬದು ಗೊತ್ತಾಗುತ್ತದೆ.

ಈ ನಿರ್ಧಾರ ಕೈಗೊಳ್ಳುವಾಗ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆ ಹಾಗೂ ಜನಪ್ರಿಯತೆಯನ್ನು ಪಣಕ್ಕಿಟ್ಟಿದ್ದರು ಎಂದು ಮೂಲಗಳು ಹೇಳಿವೆ.

‘ನಾನು ಎಲ್ಲ ರೀತಿಯಿಂದ ಪರಿಶೀಲನೆ ನಡೆಸಿದ್ದೇನೆ. ಈ ಕೆಲಸದಲ್ಲಿ ಸೋಲು ಎದುರಾದರೆ, ದೂಷಣೆಯನ್ನು ನಾನೇ ಎದುರಿಸುವೆ’ ಎಂದು ಮೋದಿ ಅವರು ನೋಟು ರದ್ದತಿಗೆ ಕೆಲವೇ ಗಂಟೆಗಳ ಮೊದಲು ನಡೆದ ಸಂಪುಟ ಸಭೆಯಲ್ಲಿ ಹೇಳಿದ್ದರು ಎಂಬುದನ್ನು ಮೂರು ಜನ ಕೇಂದ್ರ ಸಚಿವರು ತಿಳಿಸಿದ್ದಾರೆ.

ನೋಟು ರದ್ದತಿ ಕಾರ್ಯಕ್ರಮದ ಉಸ್ತುವಾರಿಯನ್ನು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಅಧಿಯಾ ನೋಡಿಕೊಳ್ಳುತ್ತಿದ್ದರು.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಧಿಯಾ ಅವರು 2003ರಿಂದ 2006ರವರೆಗೆ ಅಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆ ಅವಧಿಯಲ್ಲಿ ಅಧಿಯಾ, ಮೋದಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಅಧಿಯಾ ಅವರನ್ನು 2015ರಲ್ಲಿ ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧೀನದಲ್ಲಿದ್ದರು. ಆದರೆ ಆಗಲೂ ಅಧಿಯಾ ಅವರು ಪ್ರಧಾನಿ ಮೋದಿ ಜೊತೆ ನೇರ ಸಂಪರ್ಕ ಹೊಂದಿದ್ದರು. ಇವರಿಬ್ಬರು ಭೇಟಿಯಾದಾಗ, ಗುಜರಾತಿ ಭಾಷೆಯಲ್ಲಿ ಚರ್ಚಿಸುತ್ತಿದ್ದರು.

ಕಪ್ಪುಹಣದ ತಡೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮೋದಿ ಅವರು ಹಣಕಾಸು ಇಲಾಖೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳು ಹಾಗೂ ಆರ್ಥಿಕ ತಜ್ಞರ ಮೂಲಕ ಅಧ್ಯಯನ ನಡೆಸಿದ್ದರು ಎಂದು ಮೂಲಗಳು ವಿವರಿಸಿವೆ.

‘ಎಷ್ಟು ತ್ವರಿತವಾಗಿ ಹೊಸ ನೋಟುಗಳನ್ನು ಮುದ್ರಿಸುವ ಸಾಮರ್ಥ್ಯ ದೇಶಕ್ಕಿದೆ? ಹೊಸದಾಗಿ ಮುದ್ರಿಸುವ ನೋಟುಗಳನ್ನು ದೇಶದೆಲ್ಲೆಡೆ ತಲುಪಿಸುವುದು ಹೇಗೆ? ಠೇವಣಿ ಹರಿದುಬಂದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಒಳ್ಳೆಯದಾಗುತ್ತದೆಯೇ? ನೋಟು ರದ್ದತಿ ತೀರ್ಮಾನದಿಂದ ಲಾಭ ಆಗುವುದು ಯಾರಿಗೆ’ ಎಂಬ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ಬಯಸಿದ್ದರು.

ಆದರೆ ಇಷ್ಟೂ ಪ್ರಶ್ನೆಗಳನ್ನು ಒಬ್ಬನೇ ವ್ಯಕ್ತಿಯ ಮುಂದೆ ಇಟ್ಟಿರಲಿಲ್ಲ. ಪ್ರಶ್ನೆಗಳನ್ನು ಗಮನಿಸಿ, ನೋಟು ರದ್ದತಿ ಆಲೋಚನೆ ಸರ್ಕಾರಕ್ಕೆ ಇದೆ ಎಂಬುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಗ್ಗೆ ಜನರಿಗೆ ತುಸು ಮಾಹಿತಿ ಸಿಕ್ಕಿದ್ದರೂ, ಇಡೀ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮದಂತೆ ಆಗುತ್ತಿತ್ತು ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.

ಅಧಿಯಾ ಉಸ್ತುವಾರಿಯಲ್ಲಿ ಸಂಶೋಧಕರ ತಂಡ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳನ್ನು ಒಂದೆಡೆ ಕಲೆಹಾಕಿತು. ಇದು ಒಂದರ್ಥದಲ್ಲಿ ಪ್ರಾಯೋಗಿಕವಾಗಿತ್ತು.

ಯುವ ಸಂಶೋಧಕರ ತಂಡದಲ್ಲಿ ದತ್ತಾಂಶ ಹಾಗೂ ಹಣಕಾಸು ವಿಶ್ಲೇಷಕರು ಇದ್ದರು. ಇವರಲ್ಲಿ ಕೆಲವರು ಮೋದಿ ಅವರ ಸಾಮಾಜಿಕ ಜಾಲತಾಣಗಳ ಖಾತೆ ಹಾಗೂ ಅವರ ಮೊಬೈಲ್‌ ಆ್ಯಪ್‌ ನಿರ್ವಹಿಸುವವರಾಗಿದ್ದರು.

ಇಷ್ಟೆಲ್ಲ ಯೋಜನೆ ರೂಪಿಸಿದರೂ, ಎದುರಾಗುವ ಎಲ್ಲ ಪರಿಸ್ಥಿತಿಗಳನ್ನು ಊಹಿಸಲು ಆಗದು ಎಂಬುದು ಮೋದಿ ಮತ್ತು ಅಧಿಯಾ ಅವರಿಗೆ ಗೊತ್ತಿತ್ತು. ಆದರೂ ಅವರು ವೇಗವಾಗಿ ಹೆಜ್ಜೆ ಹಾಕಲು ಸಿದ್ಧವಾಗಿದ್ದರು.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಸಾಧ್ಯ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಿಶ್ಲೇಷಕರು ಏಪ್ರಿಲ್‌ ತಿಂಗಳಲ್ಲೇ ಹೇಳಿದ್ದರು.
ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಿದ್ಧತೆ ನಡೆದಿದೆ ಎಂದು ಆರ್‌ಬಿಐ ಮೇ ತಿಂಗಳಲ್ಲಿ ಹೇಳಿತ್ತು. ₹2,000 ಮುಖಬೆಲೆಯ ನೋಟುಗಳ ವಿನ್ಯಾಸಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅದು ಆಗಸ್ಟ್‌ನಲ್ಲಿ ಹೇಳಿತು.

ಈ ಕುರಿತು ಮಾಧ್ಯಮಗಳು ಅಕ್ಟೋಬರ್‌ನಲ್ಲಿ ವರದಿ ಪ್ರಕಟಿಸುವ ವೇಳೆಗೆ ನೋಟು ಮುದ್ರಣಾಲಯಗಳಲ್ಲಿ ಮುದ್ರಣ ಪ್ರಕ್ರಿಯೆ ಆರಂಭವಾಗಿತ್ತಷ್ಟೇ.
‘ನೋಟು ರದ್ದತಿಯನ್ನು ನವೆಂಬರ್‌ 18ರ ವೇಳೆಗೆ ಘೋಷಿಸುವ ಆಲೋಚನೆ ಇತ್ತು. ಆದರೆ ವಿಚಾರ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆ ಇತ್ತು’ ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಒಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)