ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಹಣವೇಕೆ ಸಿಗುತ್ತಿಲ್ಲ

ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಖಾತೆದಾರರಿಗೆ ವಾರವೊಂದಕ್ಕೆ ₹ 24 ಸಾವಿರ ಹಣವನ್ನು ನಗದು ರೂಪದಲ್ಲಿ ನೀಡಲು ಬ್ಯಾಂಕ್‌ಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಅಲ್ಲದೆ, ಬಿಗಿ ನಿಯಮಗಳನ್ನು ಜಾರಿಗೆ ತಂದು, ಚಲಾವಣೆ ರದ್ದಾಗಿರುವ ಹಳೆ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ (ಡಿಸಿಸಿ) ಅವಕಾಶ ಕಲ್ಪಿಸಬಹುದೇ ಎಂಬ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ಕೇಂದ್ರಕ್ಕೆ ಸೂಚಿಸಿದೆ.

ನೋಟು ರದ್ದತಿ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು.

ಡಿಸಿಸಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ವಿಚಾರ ಹಾಗೂ ಬ್ಯಾಂಕ್‌ಗಳಿಂದ ವಾರಕ್ಕೆ ಗರಿಷ್ಠ ₹ 24 ಸಾವಿರ ನಗದು ಹಿಂಪಡೆಯಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳ ಬಗ್ಗೆ ಡಿಸೆಂಬರ್‌ 14ರಂದು ವಿವರ ನೀಡುವಂತೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ಸೂಚಿಸಿತು.

ನೋಟುಗಳ ಚಲಾವಣೆ ರದ್ದು ಮಾಡುವಂತಹ ಅತಿಯಾದ ಅಧಿಕಾರವೂ ಆರ್‌ಬಿಐ ಕಾಯ್ದೆಯಲ್ಲಿ  ಇದೆಯೇ ಎಂಬ ಪ್ರಶ್ನೆಯನ್ನೂ ತಾವು ಮುಂದಿಟ್ಟಿರುವುದಾಗಿ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದರು. ‘ಆರ್ಥಿಕ ಹಾಗೂ ಹಣಕಾಸು ವಿಚಾರಗಳಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು’ ಎಂದು ರೋಹಟಗಿ ಪ್ರತಿವಾದ ಮಂಡಿಸಿದರು.

‘ಅವಕಾಶ ಕೊಡಲಾಗದು’: ಡಿಸಿಸಿ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡಲು ಅವಕಾಶ ನೀಡಲಾಗದು ಎಂದು ರೋಹಟಗಿ ಸ್ಪಷ್ಟಪಡಿಸಿದರು.

ಡಿಸಿಸಿ ಬ್ಯಾಂಕ್‌ಗಳಲ್ಲಿ ಹಲವು ಸಂದರ್ಭಗಳಲ್ಲಿ ಖಾತೆದಾರರ ಗುರುತಿನ ಪತ್ರಗಳನ್ನು (ಕೆವೈಸಿ) ಸರಿಯಾಗಿ ಪಡೆದಿರುವುದಿಲ್ಲ. ಹಾಗಾಗಿ ಯಾರು, ಎಷ್ಟು ಹಣ ಜಮಾ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುವುದು ಕಷ್ಟ ಎಂದರು.

ಡಿಸಿಸಿ ಬ್ಯಾಂಕ್‌ಗಳ ಪರ ಹಾಜರಾದ ಕೇಂದ್ರದ ಮಾಜಿ ಹಣಕಾಸು ಸಚಿವ, ಹಿರಿಯ ವಕೀಲ ಪಿ. ಚಿದಂಬರಂ, ‘ಡಿಸಿಸಿ ಬ್ಯಾಂಕ್‌ಗಳು ಹಳೆ ನೋಟುಗಳನ್ನು ಠೇವಣಿ ರೂಪದಲ್ಲಿ ಸ್ವೀಕರಿಸಬಾರದು ಎಂಬ ನಿರ್ಬಂಧದ ಕಾರಣ ರೈತರಿಗೆ ತೊಂದರೆ ಆಗುತ್ತಿದೆ’ ಎಂದರು.

ಹಳೆ ನೋಟಿಗೆ ಟಿಕೆಟ್‌ ಸಿಗುವುದಿಲ್ಲ:  ಸಾರಿಗೆ ಸಂಸ್ಥೆ ಬಸ್‌, ಮೆಟ್ರೊ ರೈಲು ಮತ್ತು ರೈಲು ಪ್ರಯಾಣದ ಟಿಕೆಟ್‌ಗಳ ಖರೀದಿಗೆ ₹ 500 ಮುಖಬೆಲೆಯ ಹಳೆಯ ನೋಟುಗಳ ಬಳಕೆಗೆ ಶನಿವಾರದಿಂದ ಅವಕಾಶ ಇಲ್ಲ.
*

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಕೇಳಿದ ಕೆಲವು ಪ್ರಶ್ನೆಗಳು:
* ನೋಟು ರದ್ದತಿ ಆದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಯ ಸೆಕ್ಷನ್‌ 26(2)ನ ಉಲ್ಲಂಘನೆ ಆಗಿದೆಯೇ?
* ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಳ್ಳಬಾರದು ಎನ್ನುವ ಸಂವಿಧಾನದ 300(ಎ) ವಿಧಿಗೆ ನೋಟು ರದ್ದತಿ ಆದೇಶವು ವಿರುದ್ಧವಾಗಿದೆಯೇ?
* ಸಮಾನತೆ ಹಾಗೂ ವೃತ್ತಿ ಆಯ್ಕೆಯ ಸ್ವಾತಂತ್ರ್ಯಕ್ಕೆ ಈ ಆದೇಶ ವಿರುದ್ಧವೇ?
* ಸಕ್ರಮ ಆಗಿರುವ, ತೆರಿಗೆ ಪಾವತಿಸಿರುವ ಹಣವನ್ನು ನಗದು ರೂಪದಲ್ಲಿ ಹಿಂಪಡೆಯಲು ಮಿತಿ ಹೇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ?
* ಹಳೆಯ ನೋಟುಗಳನ್ನು ಠೇವಣಿ ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂಬ ನಿರ್ಬಂಧ ಹೇರಿ, ಡಿಸಿಸಿ ಬ್ಯಾಂಕ್‌ಗಳಿಗೆ ತಾರತಮ್ಯ ಎಸಗಲಾಗಿದೆಯೇ?
* ನೋಟು ರದ್ದತಿ ವಿಚಾರವನ್ನು ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಕ್ಕೆ ವರ್ಗಾಯಿಸಬಹುದೇ?
*
ಪ್ಲಾಸ್ಟಿಕ್‌ ನೋಟು ಮುದ್ರಣಕ್ಕೆ ಕ್ರಮ
ನವದೆಹಲಿ:
ಗರಿಷ್ಠ ಮುಖಬೆಲೆಯ (₹500, ₹1,000) ನೋಟುಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ ಇದೀಗ ಪ್ಲಾಸ್ಟಿಕ್‌ ನೋಟುಗಳನ್ನು ಮುದ್ರಿಸಲು  ನಿರ್ಧರಿಸಿದೆ. ಪ್ಲಾಸ್ಟಿಕ್‌ ಅಥವಾ ಪಾಲಿಮರ್‌ ಬಳಸಿ ಈ ನೋಟು ಮುದ್ರಿಸಲಾಗುತ್ತದೆ. ಮುದ್ರಣಕ್ಕೆ ಬೇಕಾಗಿರುವ ಸಾಮಗ್ರಿ ಸಂಗ್ರಹ ಈಗಾಗಲೇ ಆರಂಭ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT