ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್! ಮಣ್ಣೆಲ್ಲ ಹೊನ್ನು ಹೊನ್ನು...

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್‌ ನದಿಯ ಪೂರ್ವದಂಡೆಯಲ್ಲಿ ಲಕ್ಸರ್‌ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ.

ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ. 

ಅಲಂಕಾರಿಕ ಸಮಾಧಿಗಳು
ಈಜಿಪ್ಟಿಯನ್ನರು ‘ಕಾ’ (ಆತ್ಮ) ಎನ್ನುವುದು ಶರೀರದ ಬಲುಸಣ್ಣ ಪ್ರತಿಬಿಂಬವೆಂದು ಭಾವಿಸಿದ್ದುದರಿಂದ, ಅದಕ್ಕೆ ಶರೀರ ಸತ್ತನಂತರವೂ ಆಹಾರ ಒದಗಿಸಬೇಕಿತ್ತು. ಉಡುಪು ತೊಡಿಸಿ ಕಾಪಾಡಬೇಕಿತ್ತು. ಕೆಲವು ರಾಜರ ಸಮಾಧಿಗಳಲ್ಲಿ ಮೃತರ ಆತ್ಮದ ಅನುಕೂಲಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಮೃತರ ಶರೀರದೊಡನೆ ಅವರಿಗೆ ಅಗತ್ಯ ವಸ್ತುಗಳನ್ನು ಉಬ್ಬುಚಿತ್ರಗಳಾಗಿ ಕೊರೆದಿಡಲು ಚಿತ್ರಕಲಾವಿದರನ್ನೂ ಶಿಲ್ಪಿಗಳನ್ನೂ ನೇಮಿಸಿಕೊಳ್ಳುತ್ತಿದ್ದರು. ಕಲಾವಿದರ ಪವಾಡಗಳನ್ನು ನಾವು ಈ ಗೋರಿಗಳಲ್ಲಿ ಕಾಣಬಹುದು. ಉಳುಮೆಯಾಗುತ್ತಿರುವ ಜಮೀನನ್ನು, ಕಟಾವಾಗುತ್ತಿರುವ ಧಾನ್ಯ ಅಥವಾ ತೆನೆ ಬಡಿಯುತ್ತಿರುವುದನ್ನೂ, ಬೇಯುತ್ತಿರುವ ಬ್ರೆಡ್ಡನ್ನೂ ತೋರಿಸುತ್ತಿರುವ ಚಿತ್ರಗಳಿವೆ. ರಾಜಕುಮಾರ ರಾಹೊಟೆಪ್‌ನ ಗೋರಿಯಲ್ಲಿರುವ ಚಿತ್ರದಲ್ಲಿ ಮೃತನು ಮೇಜಿನ ಮೇಲಿಟ್ಟ ವಿವಿಧ ಭಕ್ಷ್ಯ ಭೋಜನಗಳನ್ನು ಸವಿಯುತ್ತಿರುವುದನ್ನು ಚಿತ್ರಿಸಿದೆ.
 
ಕಳೇಬರವನ್ನು ಅತ್ಯಂತ ಗಟ್ಟಿಯಾದ ಶಿಲೆಯಿಂದ ಮಾಡಿದ ಶವ ಸಂಪುಟದಲ್ಲಿ ಹುಗಿಯುವುದರ ಜೊತೆಗೆ ಅತ್ಯಂತ ಶ್ರಮದಾಯಕವಾದ ಕ್ರಮಗಳ ಮೂಲಕ ‘ಕಾ’ಗೆ ಸುದೀರ್ಘ ಜೀವನವನ್ನು ಖಾತರಿಪಡಿಸುತ್ತಿದ್ದರು.  
 
ಹಟ್‌ಷೆಪ್‌ಸುಟ್ ರಾಣಿ ನೈಲ್ ನದಿಯ ಪಶ್ಚಿಮಕ್ಕೆ ಮರಳು ಮುಚ್ಚುತ್ತಿದ್ದ ಪರ್ವತಗಳ ಬಳಿ ಅಲಂಕಾರಮಯವಾದ ಗೋರಿಯನ್ನು ಕಟ್ಟಿಸಿದಳು. ಆಕೆಯ ನಂತರದವರೂ ಆಕೆಯನ್ನು ಅನುಸರಿಸಿದರು. ಸುಮಾರು ಅರವತ್ತು ರಾಜಸಮಾಧಿಗಳು ಬೆಟ್ಟವನ್ನು ಕತ್ತರಿಸಿ ಮಾಡಲಾಗಿದೆ. ಇದನ್ನು ‘ವೆಸ್ಟ್ ಎಂಡ್’ (ದೊರೆಗಳ ಗೋರಿಗಳ ಕಣಿವೆ) ಎನ್ನುತ್ತಾರೆ. 
 
ವ್ಯಾಲಿ ಆಫ್ ದಿ ಕಿಂಗ್ಸ್ 
ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಬೆಟ್ಟಗುಡ್ಡಗಳಿಂದ ಆವೃತವಾದ ಶುಷ್ಕ ಕಣಿವೆಯಿದ್ದು, ಇದನ್ನು ಪುರಾತತ್ವ ಸ್ಮಾರಕವೆಂದು ಪರಿಗಣಿಸಲಾಗಿದೆ. ಪುರಾತನ ಈಜಿಪ್ಟಿಯನ್ ಇತಿಹಾಸದಲ್ಲಿ ಬರುವ ಪ್ರಸಿದ್ಧ ಫೆರೋಗಳನ್ನೆಲ್ಲಾ ಇಲ್ಲೇ ಅತ್ಯಂತ ಸುಂದರ, ಅಲಂಕೃತ ಗೋರಿಗಳಲ್ಲಿ ಸಮಾಧಿ ಮಾಡಲಾಗಿದೆ. ಈ ಗೋರಿಗಳಲ್ಲಿ ಬೆಲೆ ಕಟ್ಟಲಾಗದಷ್ಟು ಐಶ್ವರ್ಯವಿತ್ತು. ಹೆಚ್ಚೂ ಕಡಿಮೆ ಎಲ್ಲವೂ ಲೂಟಿಯಾಗಿದ್ದರೂ, ಇನ್ನೂ ಉತ್ಖನನ ನಡೆದೇ ಇದೆ. 
 
ದೊರೆಗಳು ತಮ್ಮ ಜೀವಿತ ಅವಧಿಯಲ್ಲಿಯೇ ಮರಣಾನಂತರದ ವಿಶ್ರಾಂತಿ ಸ್ಥಳಗಳನ್ನು ನಿಗದಿ ಮಾಡಿಕೊಳ್ಳುತ್ತಿದ್ದರು. ಅವರವರ ಶಕ್ತಿಗನುಗುಣವಾಗಿ ಸಿಂಗಾರ, ಕೆತ್ತನೆ, ಚಿತ್ರಕಲೆ ಮಾಡಿಸುತ್ತಿದ್ದರು. ಸಾವಿನ ನಂತರದ ಹೊಸ ಬದುಕನ್ನು ಪ್ರವೇಶಿಸುವ ಹಾದಿ ಸುಗಮವಾಗಿರಲಿ, ತಮ್ಮ ನೆಮ್ಮದಿಗೆ ಯಾರೂ ಭಂಗ ತರದಿರಲಿ ಎಂಬ ಕಾರಣದಿಂದ ಫೆರೋಗಳು ತಮ್ಮ ಸಮಾಧಿಗೆ ಈ ಸ್ಥಳವನ್ನು ಆಯ್ದುಕೊಂಡರು. ಈ ರಹಸ್ಯ ಗೋರಿಗಳ ಉದ್ದೇಶ ಮೃತ ಫೆರೋಗಳ ಮಮ್ಮಿಗಳನ್ನು ಸಾವಿನ ನಂತರದ ಬದುಕಿಗೆ ಸಾಗುವವರೆಗೆ ಕಾಪಾಡುವುದಾಗಿತ್ತು. ಆದರೆ ನಿಧಿಯ ಆಸೆಯಿಂದ ಗೋರಿ ಕಳ್ಳರು ಫೆರೋಗಳ ಮಮ್ಮಿಗಳನ್ನು ಹೊರಗೆಳೆದರು. ಸತ್ತ ನಂತರವೂ ಸರ್ವಶಕ್ತ ಫೆರೋಗಳಿಗೆ ಶಾಂತಿ ಸಿಗದಾಯಿತು!
 
ಮೊದಲನೇ ಅಮೆನ್ಹೋಟೆಪ್ (ಕ್ರಿ.ಪೂ.1514–1493) ಎಂಬ ಫೆರೋ ತನ್ನ ಸಮಾಧಿಯನ್ನು ಈ ಬೆಟ್ಟಗಳ ಅಜ್ಞಾತ ಸ್ಥಳದಲ್ಲಿ ನಿರ್ಮಿಸಲು ತೀರ್ಮಾನಿಸಿದ. ಬೆಟ್ಟಗುಡ್ಡಗಳಿಂದ ಆವೃತವಾದ ಈ ಒಣಪ್ರದೇಶದಲ್ಲಿ ಗೋರಿ ನಿರ್ಮಿಸಿದಲ್ಲಿ ಯಾರಿಗೂ ತಿಳಿಯುವುದಿಲ್ಲ ಎಂದು ಆತ ಭಾವಿಸಿದ್ದ. ಅದೇ ಸಂಗತಿ ಮುಂದಿನವರಿಗೂ ಪ್ರೇರಣೆಯಾಯಿತು. ಆತನ ನಂತರ ಸುಮಾರು 1700 ವರ್ಷಗಳು ಈ ಪರಂಪರೆ ಮುಂದುವರೆಯಿತು.
 
ಬಹುಪಾಲು ಎಲ್ಲಾ ಸಮಾಧಿಗಳ ವಿನ್ಯಾಸವೂ ಒಂದೇ ತೆರನಾಗಿದ್ದರೂ ಒಂದರ ರೀತಿ ಮತ್ತೊಂದು ಇರದಂತೆ ರೂಪಿಸಿದ್ದಾರೆ. ಪ್ರವೇಶಿಸಿದ ತಕ್ಷಣ ದೊಡ್ಡ ಕಾರಿಡಾರ್, ನಂತರ ಶವಸಂಸ್ಕಾರದ ಕೋಣೆ ಅಥವಾ ಕಂಬಗಳಿರುವ ದೊಡ್ಡ ಹಾಲ್, ಕಡೆಯದಾಗಿ ಶವಪೆಟ್ಟಿಗೆ ಇಡಲು ಕೋಣೆ. ಇವೆಲ್ಲವನ್ನೂ ಗುಡ್ಡ ಕೊರೆದು ವ್ಯವಸ್ಥಿತವಾಗಿ ರೂಪಿಸಿದ್ದಾರೆ. ಈ ಸಮಾಧಿಯ ರಚನೆಗಿಂತ ನಮ್ಮನ್ನು ಆಕರ್ಷಿಸುವುದು ಗೋಡೆಗಳ ಮೇಲೆ ಮತ್ತು ಮಾಳಿಗೆಗಳ ಮೇಲೆ ಚಿತ್ರಿಸಿರುವ ವರ್ಣಚಿತ್ರಗಳು. ಕೆಲವು ಸಮಾಧಿಗಳಲ್ಲಂತೂ ಸಾವಿರಾರು ವರ್ಷಗಳಾದರೂ ಬಣ್ಣಗಳು ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. 
 
ಬಹುಪಾಲು ಚಿತ್ರಗಳಲ್ಲಿ ಫೆರೋ ದೇವರುಗಳಿಗೆ ಕಾಣಿಕೆಗಳನ್ನು ಅರ್ಪಿಸಿ ಆಶೀರ್ವಾದ ಪಡೆಯುತ್ತಿರುವುದು ಚಿತ್ರಿಸಲಾಗಿದೆ. ಅಂದಿನ ಸಾಮಾಜಿಕ ಜೀವನವನ್ನೂ ಚಿತ್ರಿಸಿದ್ದಾರೆ. ಪ್ರಾಣಿ ಪಕ್ಷಿಗಳ ರೂಪದಲ್ಲಿರುವ ದೇವತೆಗಳು, ಫೆರೋನನ್ನು ದೋಣಿಯಲ್ಲಿ ದೇವರು ಕರೆದೊಯ್ಯುವುದು, ಈಜಿಪ್ಟಿಯನ್ನರ ‘ಬುಕ್ ಆಫ್ ದಿ ಡೆಡ್’ ಕೃತಿಯ ವಿವರಗಳು, ಜೀವಿತಾ ನಂತರದ ಜೀವನ ಪಯಣದ ದಾರಿಯಲ್ಲಿ ಫೆರೋ ಎದುರಿಸಬೇಕಾದ ಪರೀಕ್ಷೆಗಳ ಸನ್ನಿವೇಶಗಳು, ಚಿತ್ರಲಿಪಿಗಳಿಂದ ಗೋರಿಗಳನ್ನು ಅಲಂಕರಿಸಲಾಗಿದೆ. 
 
ಅಮೂಲ್ಯವಾದ ಆಭರಣಗಳನ್ನು ಅಪಹರಿಸಲು ಬಂದ ಗೋರಿಕಳ್ಳರು ಗೋರಿಗಳನ್ನೆಲ್ಲಾ ಹಾಳುಮಾಡಿದರು. ಫೆರೋಗಳ ಕಾಲಾವಧಿ ಮುಗಿಯುವಷ್ಟರಲ್ಲಿ ಬಹುತೇಕ ಗೋರಿಗಳು ಲೂಟಿಯಾಗಿದ್ದವು. ನಂತರದ ಎರಡೂವರೆ ಸಾವಿರ ವರ್ಷಗಳು ಅವುಗಳ ಲೂಟಿ ಮುಂದುವರೆಯಿತು. 19ನೇ ಶತಮಾನದಲ್ಲಿ ಪುರಾತತ್ವ ಶಾಸ್ತ್ರಜ್ಞರು ಆಗಮಿಸುವಷ್ಟರಲ್ಲಿ ಗೋರಿಗಳು ಖಾಲಿಯಾಗಿದ್ದವು. 
 
ಹೋವಾರ್ಡ್ ಕಾರ್ಟರ್ 1922ರಲ್ಲಿ ಟೂಟಾಂಕುಮಾನ್ ಸಮಾಧಿಯನ್ನು ಪತ್ತೆ ಹಚ್ಚಿದ್ದರಿಂದ ಗೋರಿ ಕಳ್ಳರು ಎಲ್ಲವನ್ನೂ ಕೊಳ್ಳೆ ಹೊಡೆದಿಲ್ಲ ಎಂಬುದು ಸ್ಪಷ್ಟವಾಯಿತು. 2007ರಲ್ಲಿ ಮತ್ತೊಂದು ಗೋರಿಯನ್ನು ಪತ್ತೆ ಹಚ್ಚಿದರು. ಆದರೆ ಅದು ಶೇಖರಣಾ ಘಟಕವಾಗಿತ್ತು. ಇಲ್ಲಿ ಇನ್ನೂ ಹಲವು ರಾಜ ಮನೆತನದವರ ಗೋರಿಗಳಿವೆಯೆಂದು ಪುರಾತತ್ವ ಶಾಸ್ತ್ರಜ್ಞರು ನಂಬುತ್ತಾರೆ.
 
ಈ ಸಮಾಧಿಗಳಲ್ಲಿ ಸಿಕ್ಕ ಹಲವಾರು ಕಲಾಕೃತಿಗಳು 19–20ನೇ ಶತಮಾನದಲ್ಲಿ ಯೂರೋಪಿನ ಮ್ಯೂಸಿಯಂಗಳನ್ನು ಸೇರಿದವು. ಹೀಗಾಗಿ ನಮಗಿಂದು ಅಲ್ಲಿ ಕಾಣುತ್ತಿರುವುದು ಕಲ್ಲುಗಳ ಮೇಲೆ ಕೆತ್ತಲಾದ, ಗೋಡೆಗಳ ಮೇಲೆ ಚಿತ್ರಿಸಲಾದ ಅಪೂರ್ವ ಕಲೆ ಮಾತ್ರ. 
 
ಮ್ಯೂಸಿಯಂ ಸೇರಿದ ಮಮ್ಮಿಗಳು
ಫೆರೋಗಳ ಕಾಲದಲ್ಲೇ ಗೋರಿ ಕಳ್ಳರ ಹಾವಳಿ ಹೆಚ್ಚಾದಾಗ, ಅಧಿಕಾರದ ಚುಕ್ಕಾಣಿಯನ್ನು ಹೊಂದಿದ್ದ ಅರ್ಚಕ ವೃಂದ ಹಲವಾರು ಫೆರೋಗಳ ಮಮ್ಮಿಗಳನ್ನು ಒಂದೆಡೆ 12 ಮೀಟರ್ ಆಳದಲ್ಲಿ ಗೋರಿ ಮಾಡಿ ಬಚ್ಚಿಟ್ಟರು. 18ನೇ ರಾಜವಂಶದ ಸ್ಥಾಪಕ ಅಹ್ಮೋಸ್, ಪರಾಕ್ರಮಿ ಮೂರನೇ ತಟ್ಮೋಸ್, ಪ್ರಖ್ಯಾತ ಎರಡನೇ ರಾಮ್ಸೆಸ್, ಆತನ ತಂದೆ ಮೊದಲ ಸೇಟಿ ಸೇರಿದಂತೆ, ವಿವಿಧ ಫೆರೋಗಳ ಒಟ್ಟು 40 ಮಮ್ಮಿಗಳನ್ನು ಅಡಗಿಸಿಟ್ಟಿದ್ದರು. 3000 ವರ್ಷಗಳು ಅಜ್ಞಾತವಾಗಿದ್ದ ಆ ಮಮ್ಮಿಗಳನ್ನು 1875ರಲ್ಲಿ ಒಬ್ಬ ಗೋರಿ ಕಳ್ಳ ಪತ್ತೆಹಚ್ಚಿದ. ಆರು ವರ್ಷಗಳ ಕಾಲ ಆತ ಅದರಲ್ಲಿನ ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡಿಕೊಂಡು ಆ ಸ್ಥಳದ ರಹಸ್ಯ ಕಾಪಾಡಿಕೊಂಡಿದ್ದ. 1881ರಲ್ಲಿ ಈಜಿಪ್ಟ್ ಪುರಾತತ್ವ ಶಾಸ್ತ್ರಜ್ಞರು ಇದನ್ನು ಕಂಡುಹಿಡಿದು ಮಮ್ಮಿಗಳನ್ನು ಕೈರೋಗೆ ತಂದರು. 
 
 ಪರ್ವತಗಳನ್ನು ಕೊರೆದು ಫೆರೋಗಳು ಸತ್ತ ನಂತರ ಸ್ವರ್ಗಾರೋಹಣ ಮಾಡಲೆಂದು ಮಮ್ಮಿಗಳಾಗಿ ಹೋಗಿ ಮಲಗಿದರೂ, ಕಳ್ಳರು ಹೊರಗೆಳೆದು ಹಾಕಿದರು. ಇತ್ತ ಗೋರಿಯಲ್ಲೂ ಇರದೆ, ಅತ್ತ ಸ್ವರ್ಗವನ್ನೂ ಕಾಣದೆ ತ್ರಿಶಂಕು ಸ್ಥಿತಿಯಲ್ಲಿ ಹಲವಾರು ಮಮ್ಮಿಗಳಿಂದು ಕೈರೋ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿವೆ. ತಲಾ ನೂರು ಪೌಂಡ್ ನೀಡಿ ನೋಡುವ ಪ್ರವಾಸಿಗರ ಹಣ ಅಲ್ಲಿನ ಸರ್ಕಾರದ ತಿಜೋರಿ ಸೇರುತ್ತಿದೆ!
 
ಅಮೂಲ್ಯ ವಸ್ತುಗಳು
ಬ್ರಿಟನ್ ಮೂಲದ ಹೋವಾರ್ಡ್ ಕಾರ್ಟರ್ 1874ರಲ್ಲಿ ಈಜಿಪ್ಟ್‌ಗೆ ಬಂದದ್ದು ಗೋಡೆಗಳ ಮೇಲಿನ ಚಿತ್ರಗಳ ಪ್ರತಿ ತಯಾರಿಸಲು. ನಂತರ ಪುರಾತತ್ವ ಇಲಾಖೆಯಲ್ಲಿ ಅಧಿಕಾರಿಯಾದ ಈತ ‘ವ್ಯಾಲಿ ಆಫ್ ದಿ ಕಿಂಗ್ಸ್‌’ನಲ್ಲಿ ಇನ್ನೂ ಹಲವು ಗೋರಿಗಳಿವೆಯೆಂದು ನಂಬಿದ್ದ. ಬ್ರಿಟಿಷ್ ಶ್ರೀಮಂತ ಉದ್ಯಮಿ ಲಾರ್ಡ್ ಕಾರ್ನಾರ್ವಾನ್ ಜೊತೆಗೂಡಿ ಉತ್ಖನನ ಪ್ರಾರಂಭಿಸಿದ. ಆತನ ತಾಳ್ಮೆ ಮೆಚ್ಚಲೇಬೇಕು. ಏನೊಂದೂ ದೊರಕದೆಯೂ ಹತ್ತು ವರ್ಷಗಳ ಕಾಲ ಅನ್ವೇಷಣೆ ನಡೆಸಿದ. ಇನ್ನು ಹಣ ಖರ್ಚು ಮಾಡುವುದು ವ್ಯರ್ಥವೆಂದು ಲಾರ್ಡ್ ಕಾರ್ನಾರ್ವಾನ್ ತಿಳಿಸಿದ. ಆದರೆ, ಹೋವಾರ್ಡ್ ಕಾರ್ಟರ್ ಸುದೈವ – 1922ರ ನವೆಂಬರ್ 4ರಂದು ಆತನ ಆಳುಗಳು ಮೆಟ್ಟಿಲುಗಳನ್ನು ಕಂಡಿದ್ದಾಗಿ ತಿಳಿಸಿದರು. ಮೆಟ್ಟಿಲುಗಳಿಳಿದು ಮಣ್ಣನ್ನು ತೆಗೆಸಿದಾಗ ಫೆರೋ ಟೂಟಾಂಖ್ ಅಮುನ್ ಮೊಹರು ಕಂಡಿತು. ತಕ್ಷಣವೇ ಲಾರ್ಡ್ ಕಾರ್ನಾರ್ವಾನ್‌ಗೆ ತಂತಿ ಹಚ್ಚಿದ. ಆತ ಬಂದ ನಂತರ ದ್ವಾರವನ್ನು ತೆರೆದು ಕಾರಿಡಾರ್ ಪ್ರವೇಶಿಸಿ, ಮತ್ತೊಂದು ಮುಚ್ಚಿದ ದ್ವಾರ ತೆರೆದರು. ಕಾರ್ಟರ್ ಮೊದಲು ಪ್ರವೇಶಿಸಿ ಇಣುಕಿದ. ಮೇಲೆ ನಿಂತಿದ್ದ ಕಾರ್ನಾರ್ವಾನ್, ‘ಏನಾದರೂ ಇದೆಯಾ?’ ಎಂದು ಕೇಳಿದ. ‘ಅದ್ಭುತವಾದ, ಊಹೆಗೂ ನಿಲುಕದ ನಿಧಿ ಸಿಕ್ಕಿದೆ’ ಎಂದ ಕಾರ್ಟರ್.
 
ಕೇವಲ ಮೂರು ಕೋಣೆಗಳಲ್ಲಿ ಜೋಡಿಸಿಟ್ಟಿದ್ದ ಈ ಅಮೂಲ್ಯ ವಸ್ತುಗಳ ಪಟ್ಟಿ ಮಾಡಲು ಕಾರ್ಟರ್ ನಾಲ್ಕು ವರ್ಷಗಳನ್ನು ತೆಗೆದುಕೊಂಡ ಎಂದರೆ ಅದರ ಅಗಾಧತೆ, ಬೆಲೆ ಹಾಗೂ ಪ್ರಾಮುಖ್ಯತೆಯನ್ನು ಅರಿಯಬಹುದಾಗಿದೆ. ಇಡೀ ವಿಶ್ವವೇ ಇದನ್ನು ಕಂಡು ಬೆರಗಾಗಿತ್ತು. ಕಾರ್ಟರ್ ಕಂಡುಹಿಡಿದದ್ದು ಒಬ್ಬ ಪುಟ್ಟ ದೊರೆಯ ಗೋರಿಯನ್ನು. ಇನ್ನು ಪ್ರಖ್ಯಾತ ಫೆರೋಗಳಾದ ಎರಡನೇ ರ್‍ಯಾಮ್ಸೆಸ್ ಮತ್ತು ಮೂರನೇ ಅಮೆನ್ಹೊಟೆಪ್ ಅವರ ದೊಡ್ಡ ದೊಡ್ಡ ಗೋರಿಗಳಲ್ಲಿ ಇದ್ದಿರಬಹುದಾದ ಅಮೂಲ್ಯ ವಸ್ತುಗಳು ಊಹೆಗೂ ನಿಲುಕದ್ದು.  
 
ಗತವೈಭವದ ಗೋರಿಗಳು
ಈಜಿಪ್ಟಾಲಜಿ ತಜ್ಞ ಜಾನ್ ಗಾರ್ಡನರ್ 1927ರಲ್ಲಿ ‘ವ್ಯಾಲಿ ಆಫ್ ದಿ ಕಿಂಗ್ಸ್‌’ನಲ್ಲಿ ಮೊಟ್ಟಮೊದಲು ಗೋರಿಗಳ ಸಂಖ್ಯೆಯನ್ನು ನಮೂದಿಸಿದ. ಅದೇ ಅನುಕ್ರಮದಲ್ಲಿ ಈಗಲೂ ಗೋರಿಗಳನ್ನು ಗುರುತಿಸಿದ್ದು, ಈಗ ವ್ಯವಸ್ಥಿತವಾಗಿ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ಈಗ ಕಿಂಗ್ಸ್ ವ್ಯಾಲಿಯಲ್ಲಿ 63 ಗೋರಿಗಳನ್ನು ಗುರುತಿಸಲಾಗಿದೆ. 
 
ಈಜಿಪ್ಟ್ ಶಾಸ್ತ್ರಜ್ಞರ ಪ್ರಕಾರ ಈಗ ಸಿಕ್ಕಿರುವುದು ಶೇ. 30 ರಷ್ಟು ಮಾತ್ರ. ಇನ್ನೂ ಶೇ. 70 ರಷ್ಟು ಇತಿಹಾಸ ಈಜಿಪ್ಟ್ ನೆಲದಲ್ಲಿ ಅಡಗಿದೆ. ಮಣ್ಣಿನಲ್ಲಿ ಅಡಗಿ ಕುಳಿತ ಕಥೆಗಳೆಷ್ಟೋ, ಕಾಲವೇ ಉತ್ತರಿಸಬೇಕು.
 
**
ದಿ ವ್ಯಾಲಿ ಆಫ್ ದಿ ಕ್ವೀನ್ಸ್
ಕಿಂಗ್ಸ್ ವ್ಯಾಲಿಯ ನೈಋತ್ಯ ದಿಕ್ಕಿನಲ್ಲಿ ಒಂದೂವರೆ ಕಿ.ಮೀ ದೂರದಲ್ಲಿದೆ ‘ದಿ ವ್ಯಾಲಿ ಆಫ್ ದಿ ಕ್ವೀನ್ಸ್’. ರಾಣಿಯರು, ರಾಜಕುಮಾರರು, ಅರಮನೆಯಲ್ಲಿನ ಮುಖ್ಯ ಅಧಿಕಾರಿಗಳನ್ನು ಇಲ್ಲಿ ಮಮ್ಮೀಕರಿಸಿ ಸಮಾಧಿ ಮಾಡಲಾಗಿದೆ. ಸುಮಾರು 75 ಗೋರಿಗಳು ಸಿಕ್ಕಿದ್ದರೂ ಕೆಲವನ್ನು ಮಾತ್ರ ವೀಕ್ಷಣೆಗೆ ಮೀಸಲಿಡಲಾಗಿದೆ.
 
**
ಚೆಲುವಿನ ಖನಿ ನೆಫರ್ಟರಿ
ಈಜಿಪ್ಟ್‌ನ ಗೋರಿಗಳಲ್ಲೇ ಶಿಖರಪ್ರಾಯವಾದುದು ಮತ್ತು ಆ ಸುಂದರ ರಾಣಿಯಷ್ಟೇ ತನ್ನ ಸೌಂದರ್ಯದಿಂದ ವಿಶ್ವಖ್ಯಾತಿಯನ್ನು ಪಡೆದಿದೆ ರಾಣಿ ನೆಫರ್ಟರಿಯ ಗೋರಿ. ಪ್ರಖ್ಯಾತ ಫೆರೋ ಎರಡನೇ ರಾಮ್ಸೆಸ್‌ನ ಪ್ರೀತಿಯ ರಾಣಿ ನೆಫರ್ಟರಿ. ನೆಫರ್ಟರಿ ಅಂದರೇನೇ ‘ಅತ್ಯಂತ ಸುಂದರ’ ಎಂದರ್ಥ. ರಾಣಿಗಾಗಿ ಅಬುಸಿಂಬಲ್‌ನಲ್ಲಿ ದೇವಾಲಯ ನಿರ್ಮಿಸಿ ತನ್ನಷ್ಟೇ ಎತ್ತರದ ಮೂರ್ತಿಯನ್ನು ನಿರ್ಮಿಸಿದ್ದ ಎರಡನೇ ರಾಮ್ಸೆಸ್, ಆಕೆಯ ಗೋರಿಯನ್ನು ವೈಭವಯುತವಾಗಿ ನಿರ್ಮಿಸಿದ್ದ. ಈ ಗೋರಿಯ ಪ್ರವೇಶಕ್ಕೆ ಸಾಕಷ್ಟು ನಿರ್ಬಂಧಗಳಿವೆ, ಕೇವಲ ಹತ್ತು ನಿಮಿಷ ಮಾತ್ರ ಒಳಗಡೆ ಇರಬೇಕೆಂಬ ನಿಬಂಧನೆ ಕೂಡ ಇದೆ. 
 
1904ರಲ್ಲಿ ನೆಫರ್ಟರಿ ಗೋರಿಯನ್ನು ಕಂಡುಹಿಡಿಯಲಾಯಿತು. ಅಷ್ಟರಲ್ಲಾಗಲೇ ಗೋರಿ ಕಳ್ಳರು ಅಲ್ಲೇನೂ ಉಳಿಸಿರಲಿಲ್ಲ. ಎಂಟು ಮೀಟರ್ ಆಳದಲ್ಲಿರುವ ಈ ಗೋರಿ ಸುಮಾರು 28 ಮೀಟರ್ ಉದ್ದವಿದೆ.
 
ಶುಭ್ರಬಿಳಿ ವಸ್ತ್ರವನ್ನು ಧರಿಸಿ ಗಿಡುಗನ ಕಿರೀಟಧಾರಿಣಿಯಾದ ರಾಣಿ ದೇವತೆಗಳೊಂದಿಗಿರುವ ವಿವಿಧ ರೀತಿಯ ಚಿತ್ರಣಗಳನ್ನು ಗೋಡೆಯ ಮೇಲೆ ಜೀವಂತಿಕೆಯಿಂದ ಕಾಣುವಂತೆ ಚಿತ್ರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT