ಮೊದಲ ಓದು

6
ಪುಸ್ತಕ ವಿಮರ್ಶೆ

ಮೊದಲ ಓದು

Published:
Updated:
ಮೊದಲ ಓದು

ಇರುವೆ ಎಲ್ಲೆಲ್ಲೂ ಇರುವೆ

ಲೇ:
ಡಾ. ಬಿ. ರೇವತಿ ನಂದನ

ಪ್ರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ, 24/1, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು–560070

 

ನಮ್ಮ ಕಣ್ಣಿಗೆ ಆಗಾಗ ಬೀಳುವ, ಕಚ್ಚಿ ತನ್ನ ಇರುವನ್ನು ತೋರುವ ಇರುವೆಗಳ ಬಗ್ಗೆ ರೇವತಿ ನಂದನ ಅವರು ಬರೆದಿದ್ದಾರೆ. ಎಲ್ಲ ಕಡೆಯೂ ಕಾಣಸಿಗುವ ಇರುವೆಗಳ ವಿಸ್ಮಯಕರ ವರ್ತನೆ, ಅವುಗಳ ಸಾಮಾಜಿಕ ಜೀವನ, ಅವುಗಳ ಭಕ್ಷಣೆಯ ಕುರಿತು ವಿವರವಾಗಿ ಲೇಖಕಿ ಬರೆದಿದ್ದಾರೆ. ಇಲ್ಲಿ ಕೊಡಲಾಗಿರುವ ವಿವರಗಳು ಅತ್ಯಂತ ಸೋಜಿಗ ಹುಟ್ಟಿಸುತ್ತವೆ. ಇರುವೆಗಳಿಗೆ ಮಳೆ ಬರುವುದು ಗೊತ್ತಾಗುತ್ತದೆ. ನೀರಿನ ಅಡಿಯಲ್ಲಿ ಅವು ಕೆಲವು ದಿನಗಳ ಕಾಲ ಬದುಕಿರಬಲ್ಲವು. ಈ ಕೀಟಗಳಲ್ಲಿ ಗುಲಾಮಿ ಪದ್ಧತಿ ಇದೆ. ರಾಣಿ ಇರುವೆ ೨೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕಿರಬಲ್ಲದು. ಅವು ಆಟ ಆಡುತ್ತವೆ. ಗಾಯಗೊಂಡ ಇರುವೆಗೆ ಬೇರೆ ಇರುವೆಗಳಿಂದ ಚಿಕಿತ್ಸೆ, ಸಹಾನುಭೂತಿ ಸಿಗುವುದಿಲ್ಲ. ಅವುಗಳಲ್ಲಿ ಯುದ್ಧ ನಡೆಯುತ್ತದೆ. ಇಂತಹ ಹತ್ತು ಹಲವು ಆಸಕ್ತಿಕರ ವಿವರಗಳು ಪುಸ್ತಕದಲ್ಲಿವೆ.

 

ಇಲ್ಲಿನ ಕುತೂಹಲ ಹುಟ್ಟಿಸುವ ಅಧ್ಯಾಯ ‘ನಮ್ಮೂರಿನ ಇರುವೆಗಳು’. ಈ ಅಧ್ಯಾಯ ಸುಳ್ಯ ತಾಲ್ಲೂಕಿನ ಇರುವೆಗಳ ಕುರಿತಾಗಿದೆ. ಪಶ್ಚಿಮ ಘಟ್ಟಗಳ ಇರುವೆಗಳ ಅಧ್ಯಯನ ಇದಾಗಿರುವುದರಿಂದ ಈ ತಾಲ್ಲೂಕಿನ ಇರುವೆಗಳ ಬಗ್ಗೆ ಕೊಡಲಾಗಿದೆ. ಸುಳ್ಯ ತಾಲ್ಲೂಕಿನಲ್ಲಿ ಎಂಟು ಉಪಕುಟುಂಬಗಳ, ೪೨ ಜಾತಿಗಳ, ೧೦೪ ಇರುವೆಗಳ ಪ್ರಬೇಧಗಳು ಸಿಕ್ಕಿವೆ. ಮತ್ತು ಅಲ್ಲಿ ಸಿಕ್ಕ ೪೨ ಜಾತಿ ಇರುವೆಗಳ ಬಗೆಗಿನ ಮಾಹಿತಿಯನ್ನು ಚಿತ್ರಸಹಿತ ಕೊಡಲಾಗಿದೆ. ಇರುವೆಗಳ ವೈಜ್ಞಾನಿಕ ವಿವರಗಳೊಂದಿಗೆ ಅವುಗಳ ವರ್ತನೆಯ ಕುರಿತಂತೆ ಕೌತುಕ ಹುಟ್ಟಿಸುವ ಸಂಗತಿಗಳನ್ನು ಈ ವಿಶಿಷ್ಟ ಪುಸ್ತಕ ಹೊಂದಿದೆ. ಉತ್ತಮ ಚಿತ್ರಗಳೊಂದಿಗಿನ ಇಲ್ಲಿನ ಬರವಣಿಗೆ ಎಲ್ಲ ವಯಸ್ಸಿನ ಓದುಗರನ್ನು ಸೆಳೆಯಬಹುದು.

 

**

ಕನ್ನಡಪರ ಆಜ್ಞೆಗಳು–ಆದೇಶಗಳು

ಸಂ:
ರಾ.ನಂ. ಚಂದ್ರಶೇಖರ, ಡಾ. ಕೆ. ಮುರಳಿಧರ

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು –560001

 

ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸರ್ಕಾರದ ಆಜ್ಞೆ–ಆದೇಶಗಳನ್ನು ಈ ಪುಸ್ತಕ ಒಳಗೊಂಡಿದೆ. ಆಡಳಿತ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕವಾಗಿ ಕನ್ನಡದ ಬಳಕೆಯ ಬಗ್ಗೆ ಇಲ್ಲಿನ 70ಕ್ಕೂ ಹೆಚ್ಚು ಅಧ್ಯಾಯಗಳಲ್ಲಿ ಕೊಡಲಾಗಿದೆ. ರಾ.ನಂ. ಚಂದ್ರಶೇಖರ, ಡಾ. ಕೆ. ಮುರಳಿಧರ ಅವರು ಸಂಪಾದಿಸಿರುವ ಈ ಪುಸ್ತಕದಲ್ಲಿ 1963ರ ‘ಕರ್ನಾಟಕ ರಾಜಭಾಷಾ ಅಧಿನಿಯಮ’ದಿಂದ ಶುರುವಾಗಿ ಸರ್ಕಾರಿ ಕಚೇರಿಗಳಲ್ಲಿ ಇಂಗ್ಲಿಷ್‌ ಬಳಕೆ ನಿಲ್ಲಿಸುವುದು, ಆಡಳಿತದಲ್ಲಿ ಕನ್ನಡದ ಬಳಕೆ, ಸಚಿವಾಲಯದಲ್ಲಿ ಕನ್ನಡ ಅನುಷ್ಠಾನ, ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದ ಸರ್ಕಾರದ ಆದೇಶಗಳು ಇಲ್ಲಿವೆ. ಇದರೊಂದಿಗೆ ಶಿಕ್ಷಣದಲ್ಲಿ ಕನ್ನಡದ ಅನುಷ್ಠಾನ, ಸರ್ಕಾರಿ ಉದ್ಯೋಗದಲ್ಲಿ, ಕನ್ನಡ ಭಾಷೆಯ ಪರೀಕ್ಷೆ ಮತ್ತು ಕನ್ನಡಿಗರಿಗೆ ಅವಕಾಶ, ಸರೋಜಿನ ಮಹಿಷಿ ವರದಿಯ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಕೊಡಲಾಗಿದೆ.


 


ಕನ್ನಡಭಾಷೆಗೆ ಸಂಬಂಧಿಸಿದಂತೆ ಇದುವರೆಗೆ ಬಂದಿರುವ ಎಲ್ಲ ಆಜ್ಞೆ–ಆದೇಶಗಳು ಇಲ್ಲಿರುವುದರಿಂದ ಸಾರ್ವಜನಿಕರಿಗೆ ಇದು ಉಪಯುಕ್ತವಾಗುವಂತಿದೆ. ಕುವೆಂಪು ಅವರ ‘ಜಯ ಹೇ ಕರ್ನಾಟಕ ಮಾತೆ’ ಕವಿತೆಯ ಪೂರ್ಣಪಾಠವನ್ನು ನಾಡಗೀತೆಯನ್ನಾಗಿ ಘೋಷಿಸಿದ ಆದೇಶ(ಪು. 113)ವೂ ಇಲ್ಲಿದೆ. ಕಾಲಕಾಲಕ್ಕೆ ಬಂದಿರುವ ಈ ಆದೇಶಗಳು ಎಷ್ಟರಮಟ್ಟಿಗೆ ಜಾರಿಯಾಗಿವೆ ಎನ್ನುವುದಕ್ಕಿಂತ ಇವೆಲ್ಲವೂ ಕನ್ನಡಿಗರ ಕೈಗೆ ಸಿಗುವಂತಾಗಿರುವುದು ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಇದರ ವ್ಯಾಪ್ತಿ ದೊಡ್ಡದೂ ಆಗಿದೆ. ಸರ್ಕಾರಗಳ ಕನ್ನಡಪರ ಕೆಲಸ–ನಿರ್ಣಯಗಳು ಯಾವ ರೀತಿಯವು ಮತ್ತು ಅದಕ್ಕಾಗಿ ಯಾರೆಲ್ಲ ದುಡಿದಿದ್ದಾರೆ ಎಂಬುದರ ಸ್ಥೂಲನೋಟ ಇದರಲ್ಲಿ ಸಿಗುವಂತಿದೆ. ಆ ದಿಸೆಯಲ್ಲಿ ಇದು ಕರ್ನಾಟಕದ, ಕನ್ನಡದ ಚಾರಿತ್ರಿಕ ಕೃತಿಯೂ ಆಗಬಹುದು.


 

**

ಓದಿನ ಜಾಡು - ಸಾಹಿತ್ಯ ಸಂಸ್ಕೃತಿಯ ಬರಹಗಳು

ಲೇ:
ರಂಗನಾಥ ಕಂಟನಕುಂಟೆ

ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್‌ ಹಾಸ್ಟೆಲ್, ಗದಗ–582 101

 

ಈ ಪುಸ್ತಕದ ಲೇಖಕರಾದ ರಂಗನಾಥ ಕಂಟನಕುಂಟೆ ತಮ್ಮ ಲೇಖನಗಳನ್ನು ‘ಸಾಹಿತ್ಯ ಸಂಸ್ಕೃತಿಯ ಬರಹಗಳು’ ಎಂದು ಕರೆದುಕೊಂಡಿದ್ದಾರೆ. ಸಾಹಿತ್ಯವೂ ಸಂಸ್ಕೃತಿಯ ಒಂದು ಅಂಶವಲ್ಲವೆ? ಎಂಬ ಪ್ರಶ್ನೆಯನ್ನು ಬದಿಗಿಟ್ಟು ನೋಡಿದರೆ, ಸಾಹಿತ್ಯ ಕೇಂದ್ರಿತವಾದ ಈ ಬರಹಗಳಿಗೆ ವರ್ತಮಾನದ ತುರ್ತು, ಅದಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಇಲ್ಲಿವೆ. ಸಂಸ್ಕೃತಿ ವಿಮರ್ಶೆಯ ಬಗ್ಗೆಯೇ ಅವರ ಮೂರು ಪ್ರಮುಖ ಬರಹಗಳು ಇಲ್ಲಿವೆ. ‘ಇಂದಿನ ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ನೆಲೆಗಳು’, ‘ಸಂಸ್ಕೃತಿ ವಿಮರ್ಶೆಯಾಗಿ ಸಾಹಿತ್ಯದ ಓದು’, ‘ಸಾಂಸ್ಕೃತಿಕ ಓದು: ಪರಿಕಲ್ಪನೆಗಳ ತಾತ್ವಿಕ ತೊಡಕು’ ಈ ಬರಹಗಳಾಗಿವೆ. ಸಾಂಸ್ಕೃತಿಕ ದೃಷ್ಟಿಕೋನವೊಂದು ರಂಗನಾಥ ಅವರ ಒಟ್ಟೂ ಬರಹಗಳ ಚೌಕಟ್ಟನ್ನು, ಓದನ್ನು ನಿರ್ಧರಿಸಿದೆ. ಮತ್ತು ಅದು ಸಕಾಲಿಕವಾದುದೂ ಆಗಿದೆ. 


 


ಸಾಹಿತ್ಯದ ಓದು ಎಂದೊಡನೆ ಲೇಖಕರು ಮುದ್ರಿತ ಸಾಹಿತ್ಯಕ್ಕಷ್ಟೆ ಕಟ್ಟುಬೀಳುವುದಿಲ್ಲ. ಮಂಟೇಸ್ವಾಮಿ, ಜನಪದ ಸಾಹಿತ್ಯ, ಕನಕದಾಸರು, ಸಂತಪರಂಪರೆ, ಭಾಷೆಯ ಕಡೆಗೂ ಅವರ ಬರಹಗಳ ಚಾಚು ಇದೆ. ಓದಿನ ಹಲವು ದಾರಿಗಳನ್ನು ತೆರೆಯುವ ಈ ಪುಸ್ತಕ ಸಾಹಿತ್ಯದ ದೃಷ್ಟಿಯಿಂದ ತೀರ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. ಅದು ವರ್ತಮಾನದ ಮಹತ್ವದ ಹಲವಾರು ಲೇಖಕರು ಮತ್ತು ಸಾಹಿತ್ಯದ ಈಗಿನ ಪಲ್ಲಟಗಳ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಓದಿನ ದಾರಿ ಎಂಬುದು ನೂರಾರು ಕವಲು, ಧಾರೆಗಳನ್ನು ಒಳಗೊಂಡಿರುವಂಥದ್ದು. ಅಂತಹ ಬರಹಗಳನ್ನೂ ಇದು ಒಳಗೊಂಡಿದ್ದರೆ ಇದರ ಜಾಡು ಬೇರೆಯೇ ಆಗುತ್ತಿತ್ತು. ಇದರ ಹೊರತಾಗಿ ಲೇಖಕರು ಒಳಗೊಳ್ಳಲು ಹವಣಿಸಿರುವ, ಚರ್ಚಿಸಿರುವ ಇಲ್ಲಿ ಉಲ್ಲೇಖಗೊಂಡ ಸಂಗತಿಗಳು ಚಿಂತನೆಗೆ ಎಳೆಸುವಷ್ಟು ಮಹತ್ವದ್ದಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry