7

ದಣಿದ ಹಕ್ಕಿಯ ಬಣ್ಣದ ಗರಿ

Published:
Updated:
ದಣಿದ ಹಕ್ಕಿಯ ಬಣ್ಣದ ಗರಿ

ಅಲೆ ತಾಕಿದರೆ ದಡ

ಲೇ:
ವಾಸುದೇವ ನಾಡಿಗ್

ಪ್ರ: ಗೋಮಿನಿ ಪ್ರಕಾಶನ, ಶ್ರೀ ವೀರಭದ್ರಸ್ವಾಮಿ ನಿಲಯ, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್‌, ಶಾಂತಿನಗರ, ತುಮಕೂರು– 572 105

 

**

‘ಒಳಗಿನ ಜನ್ಮವ್ಯಾಪಿ ನದಿಗೆ / ನಿಲುಕದ ನೆಲೆಯದ್ದೇ ಕನವರಿಕೆ’ – ಕವಿ ವಾಸುದೇವ ನಾಡಿಗ್‌ರ ‘ಜನ್ಮವ್ಯಾಪಿ ನದಿ’ ಕವಿತೆಯ ಸಾಲುಗಳಿವು. ಕಡಲನ್ನು ಸೇರುವ ಮೂಲಕ ನದಿ ತನ್ನ ಪಯಣದ ವರ್ತುಲವೊಂದನ್ನು ಪೂರೈಸುತ್ತದೆ. ಮನುಷ್ಯನ ಪಾಲಿಗೆ ಈ ಪೂರ್ಣತೆ ದಕ್ಕುವುದು ಹೇಗೆ? ಸೃಜನಶೀಲ ಹಂಬಲದ ವ್ಯಕ್ತಿಯ ಪಾಲಿಗಂತೂ ಪೂರ್ಣತೆಯೆನ್ನುವುದು ಎಂದಿಗೂ ದಕ್ಕದ ಬಿಸಿಲಹಣ್ಣು. ಈ ಚಡಪಡಿಕೆ ‘ಅಲೆ ತಾಕಿದರೆ ದಡ’ ಸಂಕಲನದ ಬಹುತೇಕ ಕವಿತೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅನುರಣನಗೊಳ್ಳುತ್ತದೆ. 

 

ನದಿ, ಕಡಲು ಹಾಗೂ ಅಲೆ ಸಂಕಲನದ ಕವಿತೆಗಳಲ್ಲಿ ಮರುಕಳಿಸುತ್ತವೆ. ಈ ಅಲೆ ನೀರಿನ ಹರಿವಿನಿಂದ ರೂಪುಗೊಂಡದ್ದೂ ಹಾಗೂ ನೀರಿನ ಹೊಯ್ದಾಡಕ್ಕೆ ಸಿಕ್ಕವನನ್ನು ದಡಕ್ಕೆ ಸೇರಿಸುವಂತಹದ್ದು. ಅಲೆದಾಟವನ್ನೂ ಚಲನಶೀಲತೆಯನ್ನೂ ಧ್ವನಿಸುವ ‘ಅಲೆ’ ನಾಡಿಗರ ಪದ್ಯಗಳಲ್ಲಿ ಸಹೃದಯರನ್ನು ತಾಕುವ ಪ್ರಯತ್ನ ನಡೆಸುತ್ತದೆ. ಸಂಗೀತ ಹಾಗೂ ಮೌನ, ಕ್ಷಣಿಕತೆ ಹಾಗೂ ನಿರಂತರತೆ – ಈ ಗುಣಗಳು ಇಲ್ಲಿಯ ರಚನೆಗಳವೂ ಹೌದು. 

 

ಕವಿಯ ಪಾಲಿಗೆ ತನ್ನ ಅಂತರಂಗವನ್ನು ಬಗೆದು ನೋಡಿಕೊಳ್ಳಲು ಹಾಗೂ ಲೌಕಿಕವನ್ನು ಅರಿಯುವ ಹಂಬಲಕ್ಕೆ ಕವಿತೆಗೂ ಮಿಗಿಲಾದ ಸಾಧನವುಂಟೆ? ‘ಏಕಾಂತಗಳಲಿ ಹುಟ್ಟುವ ನನ್ನ / ಕವಿತೆಗಳು ಸಂತೆಗಳಲಿ ಜೀವಪಡೆಯುತ್ತಿವೆ / ಜನದಟ್ಟಣೆಯ ಬೀದಿಗಳಲಿ ಚಲಿಸುತ್ತಿವೆ’ (ಜೀವ ಪ್ರಣಾಳಿಕೆ) ಎನ್ನುವ ಕವಿಗೆ ಏಕಾಂತ ಲೋಕಾಂತಗಳ ಸಹಪಯಣದ ಅರಿವಿದೆ. 

 

ನಾದಲೀಲೆಗೆ ಕವಿ ಮನಸೋತಲ್ಲಿ ಕಾವ್ಯ ಹಿತವೆನ್ನಿಸುತ್ತದೆ. ಆದರೆ, ಧ್ವನಿಶಕ್ತಿಗೆ ಮನಸೋತಲ್ಲಿ ತನ್ನ ಕಾವ್ಯದ ಕುರಿತು ಅನುಮಾನ ಶುರುವಾಗುತ್ತದೆ. ಇಂಥ ಸ್ವ–ಎಚ್ಚರ ನಾಡಿಗರಲ್ಲಿ ತೀವ್ರವಾಗಿದೆ. ‘ಪದ್ಯ ಬರೆಯುವಾಗೆಲ್ಲ / ಕಿಸಕ್ಕನೆ ನಕ್ಕಂತಾಗುತ್ತದೆ ಯಾರೋ / ಏನು ಬರೆದರೂ ನನ್ನದಾಗದ / ಯಾವುದೋ ಋಣ ತಿವಿದಂತಾಗುತ್ತದೆ’ ಎಂದವರು ವಿಷಾದದಿಂದ ಹೇಳುತ್ತಾರೆ. ‘ಅಹಂಕಾರದಲಿ ಕೊಳೆವ ನನ್ನ ಕವಿತೆಗಳೆಲ್ಲಾ / ದಣಿದ ಹಕ್ಕಿಯೊಂದು ಉದುರಿಸಿದ ಬಣ್ಣದ ಗರಿಗೆ / ಅಂಟಿಕೊಂಡ ಧೂಳು’ (ಪ್ರತಿ ಕವನವೂ ಮತ್ತೊಂದು ಸೋಲು) ಎಂದು ಅವರಿಗನ್ನಿಸುತ್ತದೆ. ‘ಜಗಕೆ ಅನಾಕರ್ಷಕನಾಗುವ ಸುಖ’ ಕವಿಯೊಬ್ಬನ ನಿಜದ ನಡಿಗೆಯ ದಾರಿಯೂ ಹೌದು. ಆದರೆ, ಈ ಆಕರ್ಷಣೆಯ ಅಯಸ್ಕಾಂತದಿಂದ ಪಾರಾಗುವುದು ಸುಲಭವಲ್ಲ. ಈ ಸೆಳೆತ ಹಾಗೂ ಪಾರಾಗುವ ತುಡಿತವನ್ನು ಇಲ್ಲಿನ ಕವಿತೆಗಳಲ್ಲೂ ಕಾಣಬಹುದು. 

 

‘ಅಲೆ ಸಾಕಿದರೆ ದಡ’ ವಾಸುದೇವ ನಾಡಿಗ್‌ರ ಆರನೇ ಕವನ ಸಂಕಲನ. ‘ವೃಷಭಾಚಲದ ಕನಸು’ ಸಂಕಲನದಿಂದ, ‘ಹೊಸ್ತಿಲು ಹಿಮಾಲಯದ ಮಧ್ಯೆ’ ಕೃತಿಯ ರಚನೆಗಳವರೆಗೆ – ಕಳೆದ ಎರಡು ದಶಕಗಳಿಂದಲೂ ಕಾವ್ಯವನ್ನು ತನ್ನ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿ ಪರಿಗಣಿಸಿದ ‘ಕಾವ್ಯನಿಷ್ಠೆ’ ಅವರದು. ಈ ಅವಧಿಯಲ್ಲಿ ಅವರದು ಭರವಸೆಯ ವ್ಯವಸಾಯ. ನಾಡಿಗರಿಗೆ ಕಾವ್ಯದ ಭಾಷೆ ಹಾಗೂ ಲಯ ಹಿಡಿತಕ್ಕೆ ಸಿಕ್ಕಿದೆ. ಹಾಗಾಗಿಯೇ ಕಾವ್ಯದ ದೇಹವನ್ನು ಸೃಜಿಸುವುದು ಅವರಿಗೆ ಸರಾಗ. ಆ ಮಟ್ಟಿಗೆ, ನಾಡಿಗರು ಕವಿಯಾಗಿ ಗೆಲ್ಲುತ್ತಾರೆ; ‘ಅಲೆ ತಾಕಿದರೆ ದಡ’ ಸಂಕಲನದ ಕವಿತೆಗಳು ಯಶಸ್ವಿಯಾಗಿವೆ. ಅವರ ಕಸುಬುದಾರಿಕೆಗೊಂದು ಒಳ್ಳೆಯ ಉದಾಹರಣೆ – ‘ಮಗಳ ಚರಿತೆ’ ಕವಿತೆ. ‘ಬ್ರಹ್ಮಾಂಡವನೇ ಹೊತ್ತವಳ ಚರಿತೆ’ಯನ್ನು ಪುರಾಣ ಪಾತ್ರಗಳ ಮೂಲಕ ಕಾಣಿಸುವ ಸುಂದರವೂ ಭಾವುಕವೂ ಆದುದು ಈ ಕವಿತೆ. ಚರಿತ್ರೆಯನೇ ಬದಲಾಯಿಸುವ ತೊಟ್ಟಿಲು ಕಟ್ಟಿದವಳ ವರ್ತಮಾನ ಹೇಗಿದೆ? ಕವಿತೆ ಆ ದಿಕ್ಕಿನತ್ತ ಯೋಚಿಸುವುದಿಲ್ಲ. ಇದಕ್ಕೆ ವಿರುದ್ಧ ದಿಕ್ಕಿನಲ್ಲಿದೆ ‘ಅಕ್ಕಿ ಆರಿಸುವಾಗ’ ಕವಿತೆ. ‘ಸಸಿ ಕರುಳ ನೋಯದಂತೆ ನೆಡುವವರ’ ನೆನಪಿಸಿಕೊಳ್ಳುವ ಈ ರಮ್ಯಕವಿತೆಯ ಅಂತರಾಳದಲ್ಲಿ ರೈತರ ತವಕತಲ್ಲಣಗಳೂ ಇವೆ. ‘ಮೊರದಲ್ಲಿ ಏನೆಲ್ಲಾ ಹರಿವು / ರೂಪ ರೂಪಾಂತರದಲ್ಲಿ ಮೆರೆಯದ ಮೂಲ ಅರಿವು’ ಎನ್ನುವ ತಿಳಿವಳಿಕೆಯೊಂದಿಗೆ ಪರಂಪರೆಯೊಂದಿಗಿನ ಅನುಸಂಧಾನವನ್ನೂ ಕವಿತೆ ಸಾಧಿಸುತ್ತದೆ. ಈ ಕವಿತೆಯನ್ನು ಓದುವಾಗ ಕೆ.ಎಸ್‌. ನರಸಿಂಹಸ್ವಾಮಿ ನೆನಪಾಗುತ್ತಾರೆ. ಕವಿಯ ‘ಅಲೆ’ದಾಟ ಅಡಿಗ, ತಿರುಮಲೇಶರನ್ನೂ ನೆನಪಿಸುತ್ತದೆ. ಕವಿಯ ಮೂಲಕ ಮತ್ತೊಬ್ಬ ಕವಿ ನೆನಪಾಗುವುದು ಕೂಡ ಕೃತಿಯ ಶಕ್ತಿಯೇ. 

 

ಕವಿಯೊಬ್ಬನ ನಿಜದ ಯಶಸ್ಸು ಇರುವುದು ಕಾವ್ಯಶಿಲ್ಪದೊಂದಿಗೆ ಬೆರೆತ ಆತ್ಮರೂಪಿ ಧ್ವನಿಯಲ್ಲಿ. ಅದರ ಹುಡುಕಾಟದ ಪ್ರಯತ್ನವನ್ನು ‘ಅಲೆ ತಾಕಿದರೆ ದಡ’ದ ಬಹುತೇಕ ಕವಿತೆಗಳಲ್ಲಿ ಕಾಣಬಹುದು. ಇಪ್ಪತ್ತು ವರ್ಷ, ಆರು ಸಂಕಲನ – ಈ ವಿಶೇಷಣಗಳೇ ಹಕ್ಕಿ ದಿಕ್ಕು ಬದಲಿಸಿಕೊಳ್ಳಲು ಸೂಚನೆಯಂತಿವೆ. ಹೊಸ ದಿಕ್ಕನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ದಣಿವನ್ನು ಮರೆಸುವ ವಿಧಾನವೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry