7

ಸಾಹಿತ್ಯ, ರಾಜಕಾರಣ ಮತ್ತು ಪರಿಷತ್ತು

Published:
Updated:
ಸಾಹಿತ್ಯ, ರಾಜಕಾರಣ ಮತ್ತು ಪರಿಷತ್ತು

ಅದು ಬಹಳ ಅಪರೂಪದ ಘಟನೆ. ಬಹುಶಃ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಮೇಲೆ ನಡೆದ ಮೊದಲ ಘಟನೆ. ಈಚಿನ ವರ್ಷಗಳಲ್ಲಿ ಮಾತ್ರವಲ್ಲ ಹಿಂದೆ  ಕೂಡ ಇಂಥ ನಿದರ್ಶನ ಇತ್ತೋ ಇಲ್ಲವೋ ನನಗೆ ತಿಳಿಯದು.ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಇನ್ನೇನು ಆರಂಭವಾಗಬೇಕಿತ್ತು. ಒಬ್ಬೊಬ್ಬರೇ ಅತಿಥಿಗಳು ವೇದಿಕೆ ಮೇಲೆ ಬರುತ್ತಿದ್ದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರೂ ವೇದಿಕೆಗೆ ಬಂದರು. ಆ ವೇಳೆಗಾಗಲೇ ವೇದಿಕೆಯ ಮುಂದಿನ ಆಸನಗಳಲ್ಲಿ ಕುಳಿತಿದ್ದವರ ಜೊತೆಗೆ ಅವರು ಕುಶಲೋಪರಿ ಪೂರೈಸಿ ಹಿಂದಿನ ಸಾಲಿಗೆ ಹೊರಟರು.ಮುಂದಿನ ಆಸನಗಳಲ್ಲಿ ಕುಳಿತಿದ್ದ ಸಚಿವ ಶರಣಪ್ರಕಾಶ್‌ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಮನು ಬಳಿಗಾರ್‌ ಎಷ್ಟು ಕರೆದರೂ ರಾಯರೆಡ್ಡಿ ಮುಂದೆ ಬರಲಿಲ್ಲ.ತಮ್ಮ ಹಟವನ್ನು ಕೊನೆಗೂ ಬಿಡದೆ ಅವರು ಹಿಂದಿನ ಸಾಲಿನಲ್ಲಿಯೇ ಕುಳಿತರು. ತಾವು ಮಾತನಾಡುವ ಸರದಿ ಬಂದಾಗ ಅಲ್ಲಿಂದಲೇ ಎದ್ದು ಬಂದು ಮಾತನಾಡಿ ಕೆಳಗೆ ಇಳಿದು ಹೊರಟು ಬಿಟ್ಟರು.ತಮ್ಮ ಮಾತಿನ ಕೊನೆಯಲ್ಲಿ,  ‘ಇದು ನಮ್ಮ ವೇದಿಕೆಯಲ್ಲ. ನಾವು ಇಲ್ಲಿಗೆ ಬರಬೇಕು, ಆದರೆ, ವೇದಿಕೆಯ ಮೇಲೆ ಕುಳಿತುಕೊಳ್ಳಲು ಅಲ್ಲ. ಅಲ್ಲಿ ಸಾಹಿತಿಗಳು ಇರಬೇಕು.ನಾವು ವೇದಿಕೆ ಮುಂಭಾಗದಲ್ಲಿ ಕುಳಿತುಕೊಳ್ಳಬೇಕು. ಸಾಹಿತಿಗಳಿಗೂ ರಾಜಕಾರಣಿಗಳೇ ಬೇಕು, ಮಠಾಧೀಶರಿಗೂ ರಾಜಕಾರಣಿಗಳೇ ಬೇಕು. ಯಾಕೆ’ ಎಂದು ಕೇಳಿದರು. ‘ಇದನ್ನೆಲ್ಲ ನಾನು ಪ್ರಚಾರಕ್ಕಾಗಿ ಮಾಡುತ್ತಿಲ್ಲ, ಪತ್ರಿಕೆಯವರು ಇದನ್ನು ಬರೆಯಲೂ ಬೇಕಿಲ್ಲ’ ಎಂದು ಅವರು ಕೋರಿಕೊಂಡರು.ರಾಜಕಾರಣಿಗಳಲ್ಲಿ ಅತ್ಯಂತ ವಿರಳವಾದ ವಿನಯ ಇದು. ‘ಎಲ್ಲವನ್ನೂ ತಿಳಿದವರು ನಾವು, ಯಾವ ವೇದಿಕೆಯಾದರೂ ಅದರ ಮೇಲೆ ನಿಂತು ಯಾವ  ವಿಷಯದ ಮೇಲೆಯಾದರೂ ಮಾತನಾಡಬಲ್ಲೆವು’ ಎಂದು ತಿಳಿದಿರುವ ‘ಸವ್ಯಸಾಚಿ’ ರಾಜಕಾರಣಿಗಳೇ ಈಗ ಎಲ್ಲ ಕಡೆ ಇರುವಾಗ ರಾಯರೆಡ್ಡಿಯವರು ವಿರಳಾತಿವಿರಳರು. ಅವರು ತಮ್ಮ ನಡೆಯಿಂದ ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಚಿವ ಶರಣಪ್ರಕಾಶ್‌  ಪಾಟೀಲರು ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಮುಜುಗರವುಂಟು ಮಾಡಿದರು.ಹೌದು, ರಾಯರೆಡ್ಡಿಯವರು ಮತ್ತೆ ಹಳೆಯ ಪ್ರಶ್ನೆಗೆ ಚಾಲನೆ ನೀಡಿದ್ದಾರೆ. ಸಾಹಿತ್ಯ ಮತ್ತು ರಾಜಕೀಯದ ನಂಟು ಏನು? ಪರಿಷತ್ತಿಗೂ ರಾಜಕಾರಣಕ್ಕೂ ಇರಬೇಕಾದ ಸಂಬಂಧದ ಸ್ವರೂಪವೇನು ಎಂಬ ಪ್ರಶ್ನೆಗಳು ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ತದನಂತರ ಏಳುವ ಹಾಗೆಯೇ ಈ ಸಾರಿಯೂ ಎದ್ದಿವೆ. ಅದೇ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಚಂದ್ರಶೇಖರ ಪಾಟೀಲರೂ ಈ ಪ್ರಶ್ನೆ ಎತ್ತಿದರು.‘ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿದೆಯೇ’ ಎಂದು ಅವರೇ ಪ್ರಶ್ನೆ ಹಾಕಿಕೊಂಡು ಇದನ್ನು ತಾನು ಹೇಗೆ ನಿಭಾಯಿಸಿದೆ ಎಂದು ಹೇಳಿದರು.ಅವರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ಶಿವಮೊಗ್ಗದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಆಗಿನ ಬಿಜೆಪಿ ಸರ್ಕಾರದಲ್ಲಿ ಇದ್ದವರು ಅಧ್ಯಕ್ಷರ ಆಯ್ಕೆಯಿಂದ ಹಿಡಿದು ಗೋಷ್ಠಿಯಲ್ಲಿ ಯಾರೆಲ್ಲ ಇರಬೇಕು ಎಂದೂ ಕೈ ಹಾಕಲು ನೋಡಿದರು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಗಮನಕ್ಕೆ  ಇದನ್ನೆಲ್ಲ ತಂದು ‘ಇದು ನಿಮ್ಮ ಕೆಲಸವಲ್ಲ ಎಂದೆ. ಅವರು ಒಪ್ಪಿಕೊಂಡರು’ ಎಂದು ಪಾಟೀಲರು ನೆನಪಿಸಿಕೊಂಡರು.ಪಾಟೀಲರು ಹಾಗೆ ನೆನಪಿಸಿಕೊಳ್ಳುವುದಕ್ಕೆ ಕಾರಣವಿತ್ತು: ರಾಯಚೂರು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಮತ್ತು ಸಮಾರೋಪ ಭಾಷಣ ಮಾಡಿದ ಚಂದ್ರಶೇಖರ ಪಾಟೀಲರನ್ನು ಬಿಟ್ಟರೆ ಬೇರೆ ಯಾವ ಸಾಹಿತಿಯೂ ವೇದಿಕೆ ಮೇಲೆ ಇರಲಿಲ್ಲ.ಸಾಲಾಗಿ ಕುಳಿತವರೆಲ್ಲ ರಾಜಕಾರಣಿಗಳು. ಅದರಲ್ಲಿ ಹಿರಿಯ ರಾಜಕಾರಣಿಗಳು ಇದ್ದರು, ಮರಿ ರಾಜಕಾರಣಿಗಳೂ ಇದ್ದರು. ಅವರಿಂದಲೇ ವೇದಿಕೆ ತುಂಬಿ ಹೋಗಿತ್ತು. ತಮ್ಮ ಸರದಿ ಬಂದಾಗ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರು, ‘ಈ ಸಾರಿಯ ಸಮ್ಮೇಳನದ ಚಟುವಟಿಕೆಗಳಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಆದರೆ, ಸಾಹಿತ್ಯಕ್ಕೆ ಮೀಸಲಾದ ಒಂದು ಸಮ್ಮೇಳನದಲ್ಲಿ ಇಷ್ಟು ದೊಡ್ಡ  ಸಂಖ್ಯೆಯಲ್ಲಿ ರಾಜಕಾರಣಿಗಳು ವೇದಿಕೆ ಮೇಲೆ ಇರಬೇಕೇ?ಅವರು ವೇದಿಕೆ ಮೇಲೆ ಬಂದರೆ ಏನಾಗುತ್ತದೆ ಎಂದರೆ ಮಾತನಾಡುವ ಎಲ್ಲರೂ ಅವರ ಹೆಸರು ತೆಗೆದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಸ್ವಾಗತ ಮಾಡಬೇಕು.ಪ್ರತಿಯೊಬ್ಬರಿಗೂ ವಂದಿಸಬೇಕು. ಒಬ್ಬರ ಹೆಸರು ಹೇಳದೇ ಇದ್ದರೆ ಮುಗಿಯಿತು. ಅವರಿಗೆ ಮುನಿಸು. ಆಮೇಲೆ ಅವರ ಸಿಟ್ಟನ್ನು ಸಂಭಾಳಿಸಬೇಕು. ಎಲ್ಲ ಜನಪ್ರತಿನಿಧಿಗಳನ್ನು ಕರೆಯಲೇಬೇಕೆಂಬ ರಾಜಕೀಯ ವೇದಿಕೆಯಲ್ಲಿ ಇರಬಹುದಾದ ಶಿಷ್ಟಾಚಾರ ಸಾಹಿತ್ಯ ಸಮ್ಮೇಳನದಲ್ಲಿ ಏಕೆ ಪಾಲನೆಯಾಗಬೇಕು?ಆದರೆ, ಅವರನ್ನು ಕರೆಯಲೇಬೇಕಾದ ಒಂದು ಅನಿವಾರ್ಯ ಸ್ಥಿತಿಗೆ ಪರಿಷತ್ತು ತನ್ನನ್ನೇ ತಾನು ಒಡ್ಡಿಕೊಂಡಿದೆ.  ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನಿಸಿರುವ ಕನ್ನಡ  ಸಾಹಿತ್ಯ ಪರಿಷತ್ತು ನೂರು ವರ್ಷಗಳನ್ನು ಪೂರೈಸಿದ್ದರೂ ಇನ್ನೂ ತನ್ನ ಕಾಲ ಮೇಲೆ ತಾನು ನಿಂತಿಲ್ಲ. ಸಮ್ಮೇಳನ ಆಗಬೇಕು ಎಂದರೆ ಸರ್ಕಾರದ ಮುಂದೆ ಅಂಗಲಾಚಲೇ ಬೇಕು.‘ಇದು ಅಂಗಲಾಚುವಿಕೆ ಅಲ್ಲ, ಇದು ತನ್ನ ಹಕ್ಕು’ ಎಂದು ಪರಿಷತ್ತು ಪ್ರತಿಪಾದಿಸಬಹುದು. ಸರ್ಕಾರವೂ ಅದನ್ನು ಒಪ್ಪಿಕೊಳ್ಳಬಹುದು. ಆದರೆ, ಸಮ್ಮೇಳನ ನಡೆಸಬೇಕು ಎಂದರೆ ಕೋಟಿಗಟ್ಟಲೆ ಅನುದಾನ ಬೇಕು. ಈ ಸಾರಿ ರಾಯಚೂರು ಸಮ್ಮೇಳನಕ್ಕೆ ದಾಖಲೆಯ ₹ ನಾಲ್ಕು ಕೋಟಿ ಸಹಾಯವನ್ನು ಸರ್ಕಾರ  ನೀಡಿತು. ಲಕ್ಷಾಂತರ ಜನರು ಭಾಗವಹಿಸುವ ಒಂದು ಸಮ್ಮೇಳನ ಸಂಘಟಿಸಬೇಕು ಎಂದರೆ ಸರ್ಕಾರದ ಎಲ್ಲ ಯಂತ್ರಗಳ ಪಾಲುಗೊಳ್ಳುವಿಕೆ ಬೇಕೇ ಬೇಕು.ಬಹುಶಃ ಅದಕ್ಕಾಗಿಯೇ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚನೆಯಾಗುತ್ತದೆ. ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ನಗರಸಭೆ ಅಥವಾ ಪುರಸಭೆಗಳ ಅಧ್ಯಕ್ಷರು ಸದಸ್ಯರಾಗಬೇಕಾಗುತ್ತದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರನ್ನೂ ಸಮಿತಿ ಒಳಗೊಳ್ಳಬೇಕಾಗುತ್ತದೆ.ಅಧಿಕಾರದಲ್ಲಿ ಇರುವ ಪಕ್ಷಗಳ ಜೊತೆಗೆ ವಿರೋಧ ಪಕ್ಷಗಳ ಒಬ್ಬಿಬ್ಬರು ಧುರೀಣರನ್ನೂ  ಸೇರಿಸಿಕೊಳ್ಳಬೇಕಾಗುತ್ತದೆ. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು, ಅವರು ಸಾಹಿತಿಯೇ ಆಗಿರಬೇಕು ಎಂದೇನೂ ಇಲ್ಲ, ಬಿಟ್ಟರೆ ಬೇರೆ ಯಾವ ಹೆಸರಾಂತ ಸಾಹಿತಿಯೂ ಸ್ವಾಗತ ಸಮಿತಿಯಲ್ಲಿ ಇರುವುದಿಲ್ಲ. ಅಲ್ಲಿಗೆ ಸಮ್ಮೇಳನ ಒಂದು ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮದ ಸ್ವರೂಪ ಪಡೆದುಕೊಳ್ಳುತ್ತದೆ. ಸ್ವಲ್ಪ ಹೆಚ್ಚೂ ಕಡಿಮೆ ತಾವು ಅಧ್ಯಕ್ಷರಾಗಿದ್ದಾಗಲೂ ಇದೆಲ್ಲ ಆಗಿತ್ತು ಎಂದು ಚಂಪಾ ಒಪ್ಪಿಕೊಂಡರು.ಲಕ್ಷಗಟ್ಟಲೆ ಜನ ಭಾಗವಹಿಸುವ ಸಮ್ಮೇಳನ ಸಂಘಟಿಸಲು ರಾಜಕಾರಣಿಗಳ ನೆರವು ಖಂಡಿತ ಬೇಕಾಗುತ್ತದೆ. ಈ ಸಾರಿಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎನ್‌.ಎಸ್‌.ಬೋಸರಾಜ ಹೇಗೆ ಹಗಲು ಇರುಳು ಕೆಲಸ ಮಾಡಿದರು ಎಂದು ನನಗೆ ಗೊತ್ತು. ಹಾಗಾದರೆ ಸಮ್ಮೇಳನದ ದೈತ್ಯ ಸ್ವರೂಪದಲ್ಲಿಯೇ ರಾಜಕೀಯದ ನಂಟಿನ ಅನಿವಾರ್ಯತೆ ಉದ್ಭವಿಸುತ್ತದೆಯೇ ಎಂಬ ಪ್ರಶ್ನೆಗೆ ಹೌದು ಎಂದೇ ಉತ್ತರ ಸಿಗುತ್ತದೆ.ಬಂದವರಿಗೆಲ್ಲ ಊಟ ಹಾಕಬೇಕು, ವಸತಿಗೆ ವ್ಯವಸ್ಥೆ ಮಾಡಬೇಕು. ಜನರನ್ನು ನಿಯಂತ್ರಿಸಲು ಪೊಲೀಸರ ನೆರವು ಬೇಕು. ಭಾರಿ ಪೆಂಡಾಲು ಹಾಕಬೇಕು. ಸಾವಿರಾರು ಕುರ್ಚಿಗಳನ್ನು ಹಾಕಬೇಕು. ಸಮ್ಮೇಳನ ಎಂದರೆ ಒಂದೇ ಎರಡೇ? ಸಂಘಟಕರು ಎಷ್ಟೆಲ್ಲ ಮಾಡಿದರೂ ಕೊನೆಗೆ ಯಾರಿಗೆಲ್ಲ ಅಸಮಾಧಾನ ಆಗುತ್ತದೆಯೋ ಹೇಳುವುದು ಕಷ್ಟ.ಆದರೆ, ರಾಜಕಾರಣದ ಸಮಸ್ಯೆಯೇನು ಎಂದರೆ ಅದು ಭಟ್ಟಂಗಿತನವನ್ನು ಬಯಸುತ್ತದೆ. ತನ್ನನ್ನು ಆದರಿಸಬೇಕು, ಗೌರವಿಸಬೇಕು ಎಂದು ಸೂಕ್ಷ್ಮವಾಗಿ ಒತ್ತಾಯಿಸುತ್ತದೆ.ವೇದಿಕೆ ಮೇಲೆ ಇರಬೇಕಾದವರಲ್ಲಿ ಒಬ್ಬರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಬಿಟ್ಟು ಹೋದರೂ ಸಮಸ್ಯೆಯಾಗುತ್ತದೆ. ತಮ್ಮ ನಾಯಕರ ಹೆಸರು ಎದ್ದು ಕಾಣುವಂತೆ ಇರಬೇಕಿತ್ತು ಎಂದು ಬಯಸುವುದು ಕೂಡ ಈ ಭಟ್ಟಂಗಿತನದ ಒಂದು ಭಾಗವೇ ಆಗಿರುತ್ತದೆ.ಇನ್ನೊಂದು ಪಕ್ಷದ ರಾಜಕಾರಣಿಯನ್ನು ಆಮಂತ್ರಿಸಿದ್ದು ಏಕೆ ಎಂದು ಕೇಳುವುದು ಕೂಡ ಅದೇ ಸಮಸ್ಯೆಯಿಂದ ಹುಟ್ಟಿಕೊಂಡ ಪ್ರಶ್ನೆಯಾಗಿರುತ್ತದೆ. ಹಾಗೆಂದು ರಾಜಕಾರಣಿಗಳನ್ನು ದೂರ ಇಟ್ಟು ಸಮ್ಮೇಳನ ಮಾಡುವುದು ಸಾಧ್ಯವೇ? ಸಾಧ್ಯ ಎಂದು ನೆರೆಯ ಮಹಾರಾಷ್ಟ್ರ ರಾಜ್ಯ ಅನೇಕ ವರ್ಷಗಳಿಂದ ತೋರಿಸಿಕೊಟ್ಟಿದೆ.ಅಲ್ಲಿನ ಮರಾಠಿ ಸಾಹಿತ್ಯ ಪರಿಷತ್ತು ಕೂಡ ಸರ್ಕಾರದ ನೆರವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾವ ರಾಜಕಾರಣಿಯನ್ನೂ ಉದ್ಘಾಟನೆಗೋ, ಸಮಾರೋಪಕ್ಕೋ ಕರೆಯುವುದಿಲ್ಲ; ಅಷ್ಟೇ ಏಕೆ ವೇದಿಕೆಗೇ ಕರೆಯುವುದಿಲ್ಲ. ಹಾಗೆ ನೋಡಿದರೆ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಅನೇಕ ಸಾರಿ ಕನ್ನಡದ ಹೆಸರಾಂತ ಸಾಹಿತಿಗಳು ಉದ್ಘಾಟಿಸಿದ್ದಾರೆ. ಶರದ್‌ ಪವಾರ್‌ ಅವರಂಥ ಪ್ರಬಲ ರಾಜಕಾರಣಿಗಳು ಕೂಡ ಸಮ್ಮೇಳನಕ್ಕೆ ಹೋಗಿ ವೇದಿಕೆಯ ಮುಂಭಾಗದಲ್ಲಿ ಹಾಕಿದ ಕುರ್ಚಿಯಲ್ಲಿ ಕುಳಿತುಕೊಂಡು ವಿಚಾರಗಳನ್ನು ಆಲಿಸಿ ಹೊರಟು ಹೋಗಿದ್ದಾರೆ.ಇದು ಕನ್ನಡಕ್ಕೆ ಏಕೆ ಸಾಧ್ಯವಾಗುವುದಿಲ್ಲ? ಅದಕ್ಕೆ ಅನೇಕ ವರ್ಷಗಳಿಂದ ಸರ್ಕಾರದ ಆಶ್ರಯದಲ್ಲಿ ಸಮ್ಮೇಳನಗಳು ನಡೆದುಕೊಂಡು ಬಂದ ರೀತಿ ಕಾರಣವಾಗಿರಬಹುದು.ಹಾ.ಮಾ.ನಾಯಕರು, ಪರಿಷತ್ತನ್ನು ರಾಜಕೀಯ ಹಸ್ತಕ್ಷೇಪದಿಂದ ಬಿಡಿಸಲು ಪ್ರತಿಯೊಬ್ಬ ಕನ್ನಡಿಗ ಒಂದು ರೂಪಾಯಿ ಕೊಟ್ಟು ಮೂರು ಕೋಟಿ ರೂಪಾಯಿಗಳ ಒಂದು ಶಾಶ್ವತ ನಿಧಿಯನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದ್ದರು. ಆಗ ಕನ್ನಡಿಗರ ಸಂಖ್ಯೆ ಮೂರು ಕೋಟಿ ಇತ್ತು. ಆದರೆ, ಅದು ಕಾರ್ಯಗತವಾಗಲಿಲ್ಲ.ಇನ್ನು ಮುಂದೆಯೂ ಅದು ಆಗುವಂತೆ ಕಾಣುವುದಿಲ್ಲ. ಹಾಗೆಂದು ರಾಜಕೀಯಕ್ಕೆ ಮತ್ತು ಸಾಹಿತ್ಯಕ್ಕೆ ಸಂಬಂಧ ಇರಬಾರದೇ? ಗೋಷ್ಠಿಯೊಂದರಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌. ವಿಶ್ವನಾಥ್‌, ‘ಸಂಬಂಧ ಇರಬೇಕು’ ಎಂದು ಪ್ರತಿಪಾದಿಸಿದರು. ಶಂಕರ್‌ ಮೊಖಾಶಿ ಪುಣೇಕರ್‌ ಅವರ ‘ಅವಧೇಶ್ವರಿ’ ಕಾದಂಬರಿ ರಾಜಕೀಯ ಕೃತಿ ಎಂಬ ಕಾರಣಕ್ಕಾಗಿ ಜ್ಞಾನಪೀಠ ಪ್ರಶಸ್ತಿ ತಪ್ಪಿಸಿಕೊಂಡಿತು ಎಂದು ರಾಜಕೀಯವನ್ನು ಅಸ್ಪೃಶ್ಯವಾಗಿ ನೋಡುವ ಸಾಹಿತ್ಯವನ್ನು ಖಂಡಿಸಿದರು. ಹಾಗೆ ನೋಡಿದರೆ ಈ ಸಾರಿಯ ಸಮ್ಮೇಳನದಲ್ಲಿ ರಾಜಕೀಯ ನಾಯಕರು ಗೋಷ್ಠಿಗಳಲ್ಲಿಯೂ ಭಾಗವಹಿಸಿದ್ದರು. ಅವರು ತಮ್ಮ ಭಾಷಣಗಳನ್ನು ಬರೆದುಕೊಂಡು ಬಂದು ಚೆನ್ನಾಗಿಯೂ ಮಾತನಾಡಿದರು.ಅವರಲ್ಲಿ ಕೆಲವರು ವೇಳೆಯ ಕಟ್ಟುಪಾಡಿಗೆ ಒಳಪಡಲಿಲ್ಲ. ಅವರನ್ನು ನಿಯಂತ್ರಿಸಬೇಕಾಗಿದ್ದವರು ಸುಮ್ಮನೆ ಸಹಿಸಿಕೊಂಡುದು ರಾಜಕಾರಣಿಗಳ ಬಗೆಗಿನ ಗೌರವಕ್ಕಿಂತ ಅವರ ಬಗೆಗಿನ ಹೆದರಿಕೆ ತೋರಿಸುತ್ತಿತ್ತು! ವಿಶ್ವನಾಥ್‌ ಅವರು ಭಾಗವಹಿಸಿದ್ದ ಗೋಷ್ಠಿಯಲ್ಲಿಯೇ ಮಾತನಾಡಿದ ಲೇಖಕ ಬಂಜಗೆರೆ ಜಯಪ್ರಕಾಶ್‌, ರಾಜಕಾರಣ ಮತ್ತು ಸಾಹಿತ್ಯದ ನಡುವಿನ ಸಂಘರ್ಷಮಯ ಸಂಬಂಧವನ್ನು ಅತ್ಯಂತ ರೂಪಕಾತ್ಮಕವಾಗಿ ವಿಶ್ಲೇಷಿಸಿದರು.ಅವರದು, ಸಮ್ಮೇಳನದ ಅತ್ಯುತ್ತಮ ಉಪನ್ಯಾಸಗಳಲ್ಲಿ ಒಂದು. ಅವರು ಕೆನ್ಯಾದ ಬಂಡುಕೋರ ಲೇಖಕ ಗೂಗಿ–ವಾ–ಥಿಯಾಂಗೊನ ಉದಾಹರಣೆ ಕೊಟ್ಟು ಮಾತನಾಡಿದರು : ‘ಥಿಯಾಂಗೊ ತನ್ನ ದೇಶದಲ್ಲಿ ಪ್ರಭುತ್ವ ಬದಲಾಗಬೇಕು ಎಂದು ಹೋರಾಡಿದ, ಬರೆದ. ಪ್ರಭುತ್ವ ಬದಲಾಗಿ ಆತನ ಸ್ನೇಹಿತನೇ ಆಡಳಿತಕ್ಕೆ ಬಂದ. ಆದರೆ, ಆತನೂ ಸ್ಥಗಿತನಾದ. ಪ್ರಭುತ್ವ, ಸ್ಥಗಿತತೆಯ  ಪರವಾಗಿ ಇರುತ್ತದೆ.ಆಡಳಿತಕ್ಕೆ ಬರುವವರೆಗೆ ಕ್ರಾಂತಿಕಾರಿಯಾಗಿ ಇರುವ ಮತ್ತು ಸಾಹಿತ್ಯದ ಸಹಾಯ ಬಯಸುವ ರಾಜಕಾರಣ ಅಧಿಕಾರಕ್ಕೆ ಬಂದ ಕೂಡಲೇ ‘ವ್ಯವಸ್ಥೆ’ಯಾಗಿ ಬಿಡುತ್ತದೆ.‘ಸ್ಥಗಿತ’ತೆಯನ್ನು ಅಪ್ಪಿಕೊಳ್ಳುತ್ತದೆ. ಆದರೆ, ಸಾಹಿತಿ ಕನಸುಗಾರ. ಸಾಹಿತಿಗೆ ಚಲನಶೀಲತೆ ಬೇಕು. ತನ್ನ ಕನಸಿನಂತೆ ಆಡಳಿತ ನಡೆಯುತ್ತಿಲ್ಲ ಎಂದು ಅನಿಸಿದಾಗ ಪ್ರಭುತ್ವದ ಜೊತೆಗೆ ಸಾಹಿತಿಯ ಸಂಘರ್ಷ ಶುರುವಾಗುತ್ತದೆ. ಅದು ಆರಂಭದಲ್ಲಿ ಮೃದುವಾದ ಪ್ರತಿಭಟನೆಯಾಗಿರಬಹುದು, ನಂತರ ಕಠೋರವಾಗಬಹುದು. ಕೊನೆಗೆ ಲೇಖಕ ಬೀದಿಗೇ ಇಳಿದುಬಿಡಬಹುದು. ಸಾಹಿತಿ ಯಾವಾಗಲೂ ಈ ಸ್ವಾತಂತ್ರ್ಯ ಉಳಿಸಿಕೊಂಡಿರುತ್ತಾನೆ’ ಎಂದು ಬಂಜಗೆರೆ ವ್ಯಾಖ್ಯಾನಿಸಿದರು.ಸಾಹಿತ್ಯ ಮತ್ತು ರಾಜಕಾರಣಕ್ಕೆ ಇರುವ ಸಂಬಂಧದ ಈ ವ್ಯಾಖ್ಯಾನ ರಾಜಕಾರಣ ಮತ್ತು ಪರಿಷತ್ತಿನ ನಡುವಣ ಸಂಬಂಧಕ್ಕೂ ಅನ್ವಯಿಸಬೇಕು. ನಾಡು ಮತ್ತು ನುಡಿ ಸಂಕಟಕ್ಕೆ ಸಿಲುಕಿದಾಗಲೆಲ್ಲ ಪರಿಷತ್ತು ಜನರ ಪರವಾಗಿ ಬಲವಾದ ಧ್ವನಿ ಎತ್ತಬೇಕು.  ಅದು ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು.  ವೇದಿಕೆ ಮುಂದಿನ ಸಾಲಿನಿಂದ ಹಿಂದಿನ ಸಾಲಿಗೆ  ಹೋಗಿ ಕುಳಿತ ಸಚಿವ ರಾಯರೆಡ್ಡಿ ಏನು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry