ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ನನಸಾಗುವುದು ಯಾವಾಗ?

ವಿಶ್ವಕುಸ್ತಿಯಲ್ಲಿ ಅಗ್ರಸ್ಥಾನ
Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅರವತ್ತನಾಲ್ಕು ವರ್ಷಗಳ ಹಿಂದಿನ ಮಾತು. ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕಶಾಬಾ ದಾದಾಸಾಹೇಬ್ ಜಾಧವ್ ಅವರು ಕಂಚಿನ ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಭಾರತದ ಕುಸ್ತಿ ಕ್ರೀಡೆಯ ಶಕ್ತಿಯನ್ನು ಮೊಟ್ಟಮೊದಲ ಬಾರಿಗೆ ಜಗತ್ತಿಗೆ ಸಾರಿದ್ದರು.

ಅವರ ಸಾಧನೆಯು ದೇಶದ ಯುವ ಕುಸ್ತಿಪಟುಗಳ ರಕ್ತದ ಬಿಸಿಯನ್ನು ಇಮ್ಮಡಿಗೊಳಿಸಿತ್ತು. ಬರೋಬ್ಬರಿ ನಾಲ್ಕು ವರ್ಷಗಳ ನಂತರ ಹರಿಯಾಣದ ಉದಯಚಂದ್ ವಿಶ್ವ ಕುಸ್ತಿಯಲ್ಲಿ ಭಾರತದ ಪದಕದ ಖಾತೆ ತೆರೆದರು. ಯೊಕೊಹಾಮಾದಲ್ಲಿ ಕಂಚಿನ ಪದಕ ಗೆದ್ದ ಅವರು ಹೊಸ ಅಧ್ಯಾಯ ಬರೆದಿದ್ದರು.  ಅದಾಗಿ ಆರು ವರ್ಷಗಳ ನಂತರ (1967ರಲ್ಲಿ) ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಿಷಂಬರ್ ಸಿಂಗ್ ಬೆಳ್ಳಿಯ ಮಿಂಚು ಹರಿಸಿದ್ದರು.

ಕಳೆದ 49 ವರ್ಷಗಳಲ್ಲಿ ದೇಶದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಕುಸ್ತಿ ಕ್ರೀಡೆಯೂ ಆಧುನಿಕತೆ ಮೈಗೂಡಿಸಿಕೊಂಡು ಬೆಳೆಯುತ್ತಿದೆ. ಆದರೆ, ಪದಕ ಗಳಿಕೆಯ ವೇಗ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ಇದುವರೆಗೆ ಭಾರತದ ಒಟ್ಟು ಪದಕಗಳ ಸಾಧನೆ ಹತ್ತು ಮಾತ್ರ. ಅದರಲ್ಲಿ ಮಹಿಳೆಯರ ವಿಭಾಗದ ಮೂರು ಕಂಚಿನ ಪದಕಗಳೂ ಸೇರಿವೆ. ಕೇವಲ ಒಂದು ಚಿನ್ನದ ಹೊಳಪು ಇದೆ. ವಿಶ್ವ ಚಾಂಪಿಯನ್‌ಷಿಪ್‌ನ ಯಾವುದೇ ಟೂರ್ನಿಯ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದ ಸಮೀಪವೂ ಹೋಗಿಲ್ಲ. ಇಲ್ಲಿಯವರೆಗೆ ಪದಕಗಳೆಲ್ಲವೂ ಫ್ರೀಸ್ಟೈಲ್‌ ವಿಭಾಗದ್ದು, ಗ್ರಿಕೊ ರೋಮನ್ ವಿಭಾಗದಲ್ಲಿ ಇನ್ನೂ ಶೂನ್ಯ ದಾಟಿಲ್ಲ!

ಈಗ ಮತ್ತೊಮ್ಮೆ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕುಸ್ತಿಪಟುಗಳು ತೊಡೆ ತಟ್ಟಿದ್ದಾರೆ. ಡಿಸೆಂಬರ್ 9 ರಿಂದ 11ರವರೆಗೆ ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕುಸ್ತಿಪಟುಗಳ ಸಾಧನೆಯನ್ನು ನಾವು ನೋಡಿದ್ದೇವೆ. 2008ರಿಂದ ಇಲ್ಲಿಯವರೆಗೆ ನಡೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತದ ಕುಸ್ತಿಪಟುಗಳು ಪದಕ ಸಾಧನೆ ಮಾಡಿರುವುದರಿಂದ ಈ ಕೂಟದಲ್ಲಿ ವಿಶೇಷ ಸಾಧನೆಯ ನಿರೀಕ್ಷೆ ಇತ್ತು. ಅದನ್ನು ನಮ್ಮ ಕುಸ್ತಿಪಟುಗಳು ಈಡೇರಿಸಿದ್ದಾರೆಯೇ?

ಬೆಳವಣಿಗೆಯ ವೇಗ ಕುಂಠಿತ
1952 ರಿಂದ 1967ರವರೆಗೆ ಭಾರತಕ್ಕೆ ಕುಸ್ತಿಯಲ್ಲಿ ಒಲಿದ ಮೂರು ಮಹತ್ವದ ಪದಕಗಳು ದೊಡ್ಡ ಬೆಳವಣಿಗೆಗೆ ಪ್ರೇರಣೆಯಾಗಬೇಕಾಗಿತ್ತು. ಆದರೆ, ಹಾಗಾಗಲಿಲ್ಲ.  ಬಿಷಂಬರ್ ಸಿಂಗ್ ಬೆಳ್ಳಿ ಸಾಧನೆ ನಂತರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಪಡೆಯಲು 42 ವರ್ಷಗಳವರೆಗೆ ಕಾಯಬೇಕಾಯಿತು. ಕುಸ್ತಿ ಕ್ರೀಡೆ ಅಕ್ಷರಶಃ ಪದಕಗಳ ಬರ ಎದುರಿಸಿತು. ಹಂಗೆರಿ, ಕ್ಯೂಬಾದಂತಹ ದೇಶಗಳು ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟವು. ಆದರೆ, ಇಲ್ಲಿಯ ಕುಸ್ತಿಪಟುಗಳು ಸೌಲಭ್ಯಗಳ ಕೊರತೆ, ಬಡತನಗಳಿಂದ ಹೊರಬರುವ ಸೆಣಸಾಟದಲ್ಲಿ ಸಾಧನೆಯಲ್ಲಿ ಹಿಂದುಳಿದರು. 
ಆದರೆ, 2009ರಲ್ಲಿ ರಮೇಶ್‌ ಕುಮಾರ್ ಕಂಚು ಗೆಲ್ಲುವುದರೊಂದಿಗೆ ಮತ್ತೆ ಭರವಸೆಯ ಬೆಳಕು ಮೂಡಿತ್ತು. ಅದರ ನಂತರದ ವರ್ಷದಲ್ಲಿ ಭಾರತದ ಸಾಧನೆ ಏರುಮುಖವಾಯಿತು.

ಸುಶೀಲ್‌ ಹೊಳಪು
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡ ಪೈಲ್ವಾನ ಸುಶೀಲ್ ಕುಮಾರ್ ವಿಶ್ವ ಕುಸ್ತಿಯಲ್ಲಿ ಭಾರತದ ಭಾಗ್ಯದ ಬಾಗಿಲನ್ನೇ ತೆರೆದರು ಎಂದರೆ ಸುಳ್ಳಲ್ಲ. ಅವರ ಛಲ, ಬಲ ಮತ್ತು ಪರಿಶ್ರಮಕ್ಕೆ ನಿರಂತರ ಯಶಸ್ಸು ಲಭಿಸಿದ್ದು ಹಲವರಿಗೆ ಸ್ಫೂರ್ತಿಯಾಯಿತು. 2010ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಸ್ಪರ್ಧೆಯಲ್ಲಿ ಅವರು ಚಿನ್ನ ಗೆಲ್ಲುವದರೊಂದಿಗೆ ಭಾರತದ ಕೀರ್ತಿ ಉತ್ತುಂಗಕ್ಕೇರಿತು. ಕುಸ್ತಿ ಲೋಕದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಸಾಧನೆ ಅದು. ಲಭ್ಯವಿದ್ದ ಮೂಲಭೂತ ಸೌಲಭ್ಯಗಳಲ್ಲಿಯೇ ಮೂಡಿಬಂದ ಸಾಧನೆಯು ಯುವಕರಿಗೆ ಪ್ರೇರಣೆಯಾಯಿತು. 2012ರ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಮತ್ತು ಯೋಗೇಶ್ವರ್ ದತ್ ಪದಕ ಸಾಧನೆ ಮತ್ತಷ್ಟು ಬಲ ತುಂಬಿತು.

ಅಮಿತ್, ಬಜರಂಗ್ ಭರವಸೆ
2013ರಲ್ಲಿ ಬುಡಾಪೆಸ್ಟ್‌ನಲ್ಲಿ ಎರಡು ಪದಕಗಳು ದೇಶಕ್ಕೆ ಒಲಿದವು.  ಭಾರತದ ಅಮಿತ್ ಕುಮಾರ್ ಮತ್ತು ಬಜರಂಗ್ ಪುನಿಯಾ ಬುಡಾಪೆಸ್ಟ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದು ತಂದರು. ಈಗ ಇವರಿಬ್ಬರು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಅವರ ಮೇಲೆ ನಿರೀಕ್ಷೆಯ ಭಾರ ಇದೆ. 2015ರಲ್ಲಿ ಅವರಿಬ್ಬರು ಲಾಸ್‌ ವೆಗಾಸ್‌ನಲ್ಲಿ ಭಾಗವಹಿಸಿದ್ದರು. ಆದರೆ, ಕ್ವಾರ್ಟರ್‌ಫೈನಲ್ ಹಂತ ತಲುಪಲೂ ಸಾಧ್ಯವಾಗಿರಲಿಲ್ಲ. ಅಲ್ಲಿ ನರಸಿಂಗ್ ಪಂಚಮ್ ಯಾದವ್ ಕಂಚಿನ ಪದಕ ಗೆದ್ದು ದೇಶದ ಮಾನ ಕಾಪಾಡಿದ್ದರು. ಆ ಕೂಟದಲ್ಲಿ ಸುಶೀಲ್ ಬದಲಿಗೆ ಅವರು ಭಾಗವಹಿಸಿದ್ದರು. ಅದರಿಂದಾಗಿ ರಿಯೊ ಒಲಿಂಪಿಕ್ಸ್‌ ಅರ್ಹತೆಯನ್ನೂ ಪಡೆದಿದ್ದರು. ನಂತರ ಸುಶೀಲ್ ಮತ್ತು ಅವರ ನಡುವಿನ ಜಟಾಪಟಿ ಮತ್ತು ನರಸಿಂಗ್ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಲಿಂಪಿಕ್ಸ್‌ನಿಂದ ಹೊರಬಿದ್ದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾಗದಿಂದ ಯಾವುದೇ ಪದಕ ಸಾಧನೆಯಾಗಿಲ್ಲ. ಆದರೆ, ಮಹಿಳೆಯರ ವಿಭಾಗದಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲಿಕ್ ಕುಸ್ತಿ ಮತ್ತು ದೇಶದ ಗೌರವ ಕಾಪಾಡಿದ್ದರು. ಮುಂದಿನ ಒಲಿಂಪಿಕ್ಸ್‌ಗೆ ಈಗಿನಿಂದಲೇ ತಯಾರಿ ಆರಂಭಿಸುವ ನಿಟ್ಟಿನಲ್ಲಿ ಬುಡಾಪೆಸ್ಟ್‌ ಕೂಟವೂ ಗಮನ ಸೆಳೆದಿದೆ. ಇಲ್ಲಿ ಪದಕ ಸಾಧನೆ ಮಾಡುವ ಪಟುಗಳ ಆತ್ಮವಿಶ್ವಾಸ ಹೆಚ್ಚಲಿದೆ.

ಮಹಿಳೆಯರ ಮೇಲೆ ಭರವಸೆ
ಮಹಿಳೆಯರ ವಿಭಾಗದಲ್ಲಿ ತಂಡದೊಂದಿಗೆ ತೆರಳಿದ್ದ ಲಲಿತಾ (55 ಕೆಜಿ), ಸರಿತಾ (61ಕೆಜಿ) ಅವರು ಭವಿಷ್ಯದಲ್ಲಿ ಮಿಂಚುವ ಭರವಸೆಯ ಕುಸ್ತಿಪಟುಗಳಾಗಿದ್ದಾರೆ. ನಾಲ್ಕು ವರ್ಷಗಳ ನಂತರ  ಮಹಿಳೆಯರ ವಿಭಾಗದಲ್ಲಿ ದೇಶಕ್ಕೆ ಪದಕ ತಂದುಕೊಡುವ ಸಾಮರ್ಥ್ಯ ಅವರಲ್ಲಿ ಇದೆ.
2006ರಲ್ಲಿ  ನಡೆದಿದ್ದ ವಿಶ್ವ ಟೂರ್ನಿಯಲ್ಲಿ ಅಲ್ಕಾ ತೋಮರ್ ಕಂಚು ಗೆದ್ದಿದ್ದು ಮಹಿಳೆಯರ ವಿಭಾಗದ ಮೊದಲ ಸಾಧನೆ. ಅದಾದ ನಂತರ 2012ರಲ್ಲಿ ಬಬಿತಾ ಕುಮಾರಿ ಮತ್ತು ಗೀತಾ ಪೋಗಟ್ ತಲಾ ಒಂದು ಕಂಚು ಗೆದ್ದ ಸಾಧನೆ ಮಾಡಿದ್ದರು.

ಕಳೆದ ಒಂದು ದಶಕದಲ್ಲಿ ಮೂಡಿಬಂದ ಸಾಧನೆಗಳೇ ಮುಂದಿನವರಿಗೆ ಸ್ಪೂರ್ತಿಯ ಹಾದಿ. ಆದ್ದರಿಂದಲೇ ಭಾರತದ ಕುಸ್ತಿಪಟುಗಳು ಯಾವುದೇ ಚಾಂಪಿಯನ್‌ಷಿಪ್‌ಗೆ ಹೊರಟರೂ ಅಭಿಮಾನಿಗಳ ಕಣ್ಣಲ್ಲಿ ನಿರೀಕ್ಷೆಯ ಮಿಂಚು ಸುಳಿಯುತ್ತದೆ. ವಿಶ್ವ ಸ್ಪರ್ಧೆಯ ಪದಕಪಟ್ಟಿಯ ಅಗ್ರಸ್ಥಾನದಲ್ಲಿ ಭಾರತದ ತ್ರಿವರ್ಣ ಧ್ಜಜವನ್ನು ನೋಡುವ ಕನಸು ಗರಿಗೆದರುತ್ತದೆ. 

ನಾನ್ ಒಲಿಂಪಿಕ್ ವಿಭಾಗ?
ಬುಡಾಪೆಸ್ಟ್‌ನಲ್ಲಿ ಈಗ ಮುಕ್ತಾಯವಾಗಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಕೂಟವು ‘ನಾನ್ ಒಲಿಂಪಿಕ್ ಕೆಟಗರಿ’ಯದ್ದಾಗಿದೆ.
‘ಒಲಿಂಪಿಕ್ಸ್ ನಡೆದ ವರ್ಷದಲ್ಲಿ ವಿಶ್ವ ಚಾಂಪಿಯನ್‌ಷಿಪ್ ನಡೆಸಬೇಕಾದರೆ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಿದ್ದ ತೂಕದ ವಿಭಾಗಗಳನ್ನು ಬಿಟ್ಟು ಉಳಿದವುಗಳನ್ನು ಮಾತ್ರ ಇಲ್ಲಿ ಆಯೋಜಿಸಬೇಕು. ಇದರಿಂದ ಒಲಿಂಪಿಕ್ಸ್‌ನಿಂದ ಹೊರಗಿದ್ದ ತೂಕದ ವಿಭಾಗಗಳ ಕುಸ್ತಿಪಟುಗಳಿಗೆ ಅವಕಾಶ ನೀಡುವುದಾಗಿದೆ. ಈ ಕೂಟದಲ್ಲಿ ಸೀನಿಯರ್ ಹಂತದ ಎರಡು ತೂಕದ ವಿಭಾಗಗಳ ಸ್ಪರ್ಧೆಗಳು ನಡೆದವು’  ಎಂದು ರಾಷ್ಟ್ರೀಯ ಜೂನಿಯರ್ ವನಿತೆಯರ ತಂಡದ ಕೋಚ್ ಶ್ಯಾಮ್ ಬುಡಕಿ ಹೇಳುತ್ತಾರೆ.

ತಂಡದಲ್ಲಿ ಕನ್ನಡಿಗ ರಫೀಕ್
ಧಾರವಾಡದ ರಫೀಕ್ ಹೊಳಿ ಬುಡಾಪೆಸ್ಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ತಂಡದಲ್ಲಿದ್ದ ಕರ್ನಾಟಕದ ಏಕೈಕ ಕುಸ್ತಿಪಟು ಇವರು, ದಾವಣಗೆರೆಯ ಕ್ರೀಡಾ ವಸತಿನಿಲಯದಲ್ಲಿ  ಅವರು ತರಬೇತಿ ಪಡೆದಿದ್ದಾರೆ. ರಫೀಕ್ 71 ಕೆಜಿ ವಿಭಾಗದ ಗ್ರಿಕೊ ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ಗೆ ಅವರು ಆಯ್ಕೆಯಾಗಿದ್ದು ಇದು ಎರಡನೇ ಬಾರಿ. ಹೋದ ವರ್ಷ ಲಾಸ್‌ ವೆಗಾಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ಗೂ ಅವರು ಆಯ್ಕೆಯಾಗಿದ್ದರು.ಅದರಲ್ಲಿ ಅವರು 32ರ ಘಟ್ಟದಲ್ಲಿ ಅಲ್ಗೇರಿಯಾದ ಅಕ್ರಮ್ ಬೌಜೆಮೆಲಿನ್ ವಿರುದ್ಧ ಸೋತು ಹೊರಬಿದ್ದಿದ್ದರು. ಇತ್ತೀಚೆಗಷ್ಟೇ ಸಿಂಗಪುರದಲ್ಲಿ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದರು.  

ಈ ಹಿಂದೆ ಜೂನಿಯರ್ ವಿಶ್ವ ಕಪ್ ಟೂರ್ನಿಯಲ್ಲಿ ಕರ್ನಾಟಕದ ಮಾರುತಿ ಢುಕ್ರೆ ಭಾಗವಹಿಸಿದ್ದರು. ಒಲಿಂಪಿಯನ್ ಎಂ.ಆರ್. ಪಾಟೀಲ ಅವರು ಒಮ್ಮೆ ವಿಶ್ವ ಕುಸ್ತಿಯಲ್ಲಿ ಸ್ಪರ್ಧಿಸಿದ್ದರು. ಆದರೆ, ವಿಶ್ವ ಸ್ಪರ್ಧೆಯಲ್ಲಿ ಎರಡು ಬಾರಿ ಸ್ಪರ್ಧಿಸಿರುವುದು ರಫೀಕ್ ಒಬ್ಬರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT