ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಸ್ಯ ನೃತ್ಯ ಸ೦ಭ್ರಮ

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಲಾಸ್ಯ ಅಕಾಡೆಮಿ ಆಫ್ ಡ್ಯಾನ್ಸ್ ಸ೦ಸ್ಥೆಯ 8ನೇ ವಾರ್ಷಿಕೋತ್ಸವ ಪ್ರಯುಕ್ತ ಶಾಸ್ತ್ರೀಯ ನೃತ್ಯ ಪ್ರಕಾರಗಳ ಉತ್ಸವ ಸೇವಾಸದನ ಸಭಾ೦ಗಣದಲ್ಲಿ ನಡೆಯಿತು. ಮೋಹಿನಿ ಆಟ್ಟ೦, ಭರತನಾಟ್ಯ ಮತ್ತು ಕಥಕ್‌ ನೃತ್ಯಗಳ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಕಲಾವಿದೆ ಡಾ.ಶಾಲಿನಿ ಕೃಷ್ಣನ್ ಅವರು ಶಿವ ಪಂಚಾಕ್ಷರಿ ಮಂತ್ರ ‘ಓ೦ ನಮಃ ಶಿವಾಯ’ (ರಾಗ ಮಾಲಿಕಾ, ಆದಿ  ತಾಳ) ಮೋಹಿನಿ ಆಟ್ಟ೦ ಪ್ರಸ್ತುತಪಡಿಸಿದರು. ನೃತ್ಯವು ನೈಜವಾಗಿತ್ತು ಮಾತ್ರವಲ್ಲದೆ ಚೈತನ್ಯಭರಿತವಾಗಿತ್ತು.

‘ವರ್ಣ’ (ರಾಗ– ರೇವತಿ ಆದಿ ತಾಳ) ಭಾಗದಲ್ಲಿ ರಾಮನ ಬರುವಿಕೆಗಾಗಿ ಕಾಯುತ್ತಿರುವ ಸೀತೆಯನ್ನು ಬಿಂಬಿಸಲಾಯಿತು. ಸೀತೆಯಂತೆಯೇ ನಾನೂ ಸಹ ನನ್ನ ನಾಯಕನ ಬರುವಿಕೆಗಾಗಿ ಕಾಯುತ್ತಿರುವೆ ಎಂದು ನಾಯಕಿಯು ತನ್ನ ಸಖಿಯ ಬಳಿ ಹೇಳಿಕೊಳ್ಳುವ ಪರಿ ಸುಂದರವಾಗ ಮೂಡಿ ಬಂತು. ಕೊನೆಯ ಪ್ರಸ್ತುತಿಯಾಗಿ ಕುರಚಿರಾಗ ಆದಿತಾಳದಲ್ಲಿ ಸಂಯೋಜಿಸಿದ್ದ ನೃತ್ಯವನ್ನು ಕಲಾವಿದೆ ಪ್ರಸ್ತುತಪಡಿಸಿದರು.

ಡಾ.ಲಕ್ಷ್ಮೀ ರೇಖಾ ಅರುಣ್ ಅವರು ಭರತನಾಟ್ಯ ಪ್ರಕಾರದಲ್ಲಿ ‘ಪ್ರಣಮಾಮ್ಯ೦ ಶ್ರೀ ಗೌರಿಸುತಂ’ ಕೃತಿ ಪ್ರಸ್ತುತಪಡಿಸಿದರು. ಗೌರಿಪುತ್ರನಾದ ವಿನಾಯಕನಿಗೆ ವ೦ದನೆ (ಮೈಸೂರು ವಾಸುದೇವಚಾರ್ಯರ ರಚನೆ, ರಾಗ ಗೌಳ, ಆದಿತಾಳ) ಸಲ್ಲಿಸುವ ಮೂಲಕ ನೃತ್ಯ  ಪ್ರದರ್ಶಿಸಿದರು.

‘ಸ್ವಾಮಿಯ ಕರೆತಾರೆ ನೀ’  (ರಾಗ– ಅಮೃತವರ್ಷಿಣಿ, ಆದಿ ತಾಳ)  ಕೃತಿಯ ಮೂಲಕ ಬೃ೦ದಾವನವನ್ನು ತೊರೆದು ತನ್ನ ಕಾರ್ಯಕ್ಕಾಗಿ ಹೊರಟಿರುವ ಕೃಷ್ಣನಿಗೆ ತನ್ನ ವಿರಹ ವೇದನೆ ತಿಳಿಸುವಂತೆ ಅಮೃತವರ್ಷಿಣಿ ಮಳೆಯನ್ನು ರಾಧೆ ಬೇಡುವ ಸನ್ನಿವೇಶವನ್ನು ಕಲಾವಿದೆ ಸೃಷ್ಟಿಸಿದರು.

ಕೃಷ್ಣನ ಬಣ್ಣ, ಕೊಳಲಿನ ನಿನಾದ, ಅವನ ಆಭರಣ, ಎಲ್ಲರನ್ನೂ ಸೆಳೆಯುವ ಮನ್ಮಥ ರೂಪದ ಚಿಂತನೆ ಮೂಡಿಬಂತು. ಕೃಷ್ಣನಿಲ್ಲದ ಜೀವನ ಶೂನ್ಯ ಎಂದು ರಾಧೆ ವರ್ಣಿಸುತ್ತಾಳೆ (ರಚನೆ– ದ್ವಾರಕಿ ಕೃಷ್ಣಸ್ವಾಮಿ). ನೃತ್ಯ ಸ೦ಯೋಜನೆ ಸಶಕ್ತವಾಗಿ ಮೂಡಿ ಬಂತು. ಹೊಸ ವಿನ್ಯಾಸದ ಜತಿಗಳು, ಬೆಡಗು, ಸು೦ದರವಾದ ಭ೦ಗಿಗಳು, ಅ೦ಗ ವಿನ್ಯಾಸಗಳು ಗಮನ ಸೆಳೆದವು.

‘ಪದ೦’ ಭಾಗದಲ್ಲಿ ‘ನವರಸ ನಿಲಯೆ’ ಪ್ರಸ್ತುತಪಡಿಸಿದರು. ತಾಟಕಿ ರಾಕ್ಷಸಿಯನ್ನು ಶ್ರೀರಾಮ ಕೊಲ್ಲುವ ಸ೦ದರ್ಭವನ್ನು ಹಾಸ್ಯರಸದಲ್ಲಿ ತೊರಿಸಲಾಯಿತು, ಕಲ್ಲಾಗಿದ್ದ ಅಹಲ್ಯೆಗೆ ರಾಮನ ಪಾದಸ್ವರ್ಶದಿ೦ದ ಮತ್ತೆ ಸ್ತ್ರೀರೂಪ ದೊರಕಿತು. ಇದು ಅದ್ಬುತರಸ,  ಸೀತಾ ಸ್ವಯಂವರದಲ್ಲಿ ಶೃ೦ಗಾರ ರಸ, ಮಾಯಾಜಿಂಕೆಯನ್ನು ಬೆನ್ನಟ್ಟಿ ಮಾರಿಚನನ್ನು  ಕೊಲ್ಲುವ ಸನ್ನಿವೇಶದಲ್ಲಿ ಭೀತಿ, ರಾವಣ ಸೀತೆಯನ್ನು ಅಪಹರಿಸಿದ ಸುದ್ದಿಯನ್ನು  ಕೇಳಿ ರಾಮ ಕೋಪಗೊಳ್ಳುವ ಸಂದರ್ಭದಲ್ಲಿ  ಕ್ರೋಧರಸವನ್ನು ಬಿ೦ಬಿಸಲಾಯಿತು.

ಇದೇ ಮಾದರಿಯಲ್ಲಿ ರಾಮಾಯಣದ ವಿವಿಧ ದೃಶ್ಯಾವಳಿಗಳನ್ನು ಆಧರಿಸಿ ನವರಸಗಳನ್ನೂ ಚಿತ್ರಿಸಲಾಯಿತು (ರಾಗ ಮಾಲಿಕೆ, ಆದಿತಾಳ, ರಚನೆ– ದ೦ಡಾಯುಧ ಪಾಣಿಪಿಳ್ಳೈ) ಕಲಾವಿದೆಯ ಅಭಿನಯ ನೃತ್ಯ ನೃತ್ತಗಳು ಮನೋಜ್ಞವಾಗಿದ್ದವು.

ಉತ್ಸವದ ಕೊನೆಯ ನೃತ್ಯವಾಗಿ  ದಕ್ಷಾ ಸ್ವಾಮಿನಾಥನ್ ರಮೇಶ್ ಅವರು ಕಥಕ್ ಸಾದರಪಡಿಸಿದರು. ಗಣೇಶ ಶ್ಲೋಕದೊ೦ದಿಗೆ ನೃತ್ಯ ಆರಂಭಿಸಿದರು. ಮು೦ದುವರಿದ ಭಾಗದಲ್ಲಿ ಕವಿತಾ ಪ್ರದರ್ಶಿಸಿದರು. ಮೀರಾ ಭಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕೂಚುಪುಡಿ ನೃತ್ಯ ವೈಭೋಗ
ನಾಟ್ಯ ನೀನಾದ ಅಕಾಡೆಮಿಯು  ಕೂಚುಪುಡಿಯ ‘ಶಬ್ದ೦’ ನೃತ್ಯ ಪ್ರಕಾರದ ಪ್ರದರ್ಶನವನ್ನು ಪರ೦ಪರ ಆರ್ಟ್ಸ್ ಸಭಾ೦ಗಣದಲ್ಲಿ ಈಚೆಗೆ ಆಯೋಜಿಸಿತ್ತು.
ಅಕಾಡೆಮಿಯ ಧರಣಿ ಟಿ.ಕಶ್ಯಪ್ ಅವರ ಶಿಷ್ಯ೦ದಿರು ನಟರಾಜನ ಪ್ರಾರ್ಥನೆ ಮತ್ತು ಜಯ೦ (ರಾಗ ಹ೦ಸದ್ವನಿ, ಆದಿತಾಳ), ರಾಜಶ್ರೀ ಹೊಳ್ಳ ಅವರು ದೇವರನಾಮ  ‘ಜಗನ್ಮೋಹನ ಕೃಷ್ಣ’ (ರಾಗ ಷಣ್ಮುಖ ಪ್ರಿಯಾ, ಆದಿತಾಳ, ರಚನೆ– ಪುರ೦ದರದಾಸರು) ಪ್ರದರ್ಶಿಸಿದರು.

ಅರ್ಚನಾ ಪುಣ್ಯೇಶ್ ಅವರ ಶಿಷ್ಯ೦ದಿರು ‘ಅರ್ಧ ನಾರೀಶ್ವರ’ ನೃತ್ಯ ಪ್ರದರ್ಶಿಸಿದರು. ದೀಪಾ ಶಶಿಧರನ್ ಮತ್ತು ತಂಡದ ಕಲಾವಿದರು ‘ಶಿವಸ್ತುತಿ’ ಪ್ರಸ್ತುತಪಡಿಸಿದರು. ವಿಶೇಷ ಚೇತನ ವಿದ್ಯಾರ್ಥಿ ನಿವೇದಿತಾ ಜಗನ್ನಾಥ ಅವರು ಕೃಷ್ಣ ಶಬ್ದಂ (ರಾಗ– ಮೋಹನ, ಆದಿತಾಳ)  ಮತ್ತು ದೇವರನಾಮ ‘ಏಕೆ ನಿರ್ದಯನಾದೆ’ (ರಾಗ ರ೦ಜನಿ, ಆದಿತಾಳ) ಕಲಾವಿದೆಯ ಲಯಜ್ಞಾನ ಮತ್ತು ಅಭಿನಯವು ಉತ್ತಮವಾಗಿತ್ತು. ಮಧುಮತಿ ಕುಲಕರ್ಣಿ ಅವರ ವಿಧ್ಯಾರ್ಥಿಗಳು ಪ್ರಹ್ಲಾದ ಪಟ್ಟಾಭಿಷೇಕ೦ ಮತ್ತು ಮೋಹಿನಿ ಅವತಾರ ನೃತ್ಯಗಳನ್ನು ಅಭಿನಯಿಸಿದರು.

ರಾಜಶ್ರೀಯವರು ‘ಮ೦ಡೂಕ ಶಬ್ದಂ’, ಅರ್ಚನಾ ಪುಣೇಶ್‌ ಅವರ ಕಲಿಕಾ ವಿದ್ಯಾರ್ಥಿಗಳು ‘ದಶಾವತಾರ ಶಬ್ದಂ’ ಅನ್ನು ಪ್ರಸ್ತುತಪಡಿಸಿದರು. ಸೀತಾಲಕ್ಷ್ಮಿ ಪ್ರಸಾದ ಅವರ ಶಿಷ್ಯರು ‘ಕೃಷ್ಣ ಜನನ ಶಬ್ದಂ’ ಭಾಗವನ್ನು ನಿರೂಪಿಸಿದರು.

ರಮಾ ಜಗನ್ನಾಥ (ಹಾಡುಗಾರಿಕೆ) ಅರ್ಚನ ಪುಣೇಶ್, ಧರಣಿ ಟಿ.ಕಶ್ಯಪ್, ರಾಜಶ್ರೀ ಹೊಳ್ಳ (ನಟುವಾ೦ಗ), ಜನಾರ್ದನರಾವ್ (ಮೃದ೦ಗ), ಎಚ್.ಎಸ್.ವೇಣುಗೋಪಾಲ್ (ಕೊಳಲು), ಗಣೇಶ ಕುಮಾರ್ (ಪಿಟೀಲು), ವಿಜಯಕುಮಾರ್ (ಪ್ರಸಾಧನ) ನೃತ್ಯಕ್ಕೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT