‘ಕೀವು ತುಂಬಿದ ಬಾವು' ನಿವಾರಣೆಗೆ ಮಿತವ್ಯಯ ಚಿಕಿತ್ಸೆ

7
ವಿಜ್ಞಾನ ಲೋಕದಿಂದ

‘ಕೀವು ತುಂಬಿದ ಬಾವು' ನಿವಾರಣೆಗೆ ಮಿತವ್ಯಯ ಚಿಕಿತ್ಸೆ

Published:
Updated:
‘ಕೀವು ತುಂಬಿದ ಬಾವು' ನಿವಾರಣೆಗೆ ಮಿತವ್ಯಯ ಚಿಕಿತ್ಸೆ

ಸೋಂಕಿನ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ, ನಮ್ಮ ದೇಹದ ರಕ್ಷಣಾತ್ಮಕ ಪ್ರತಿರಕ್ಷಣಾ ಪ್ರಕ್ರಿಯೆಯು, ನಮ್ಮ ಅಂಗಾಂಶಗಳಿಗೆ ಹಾಗೂ ಅಂಗಗಳಿಗೇ ಗಾಯ ಮಾಡಿದರೆ, ಆಗ ಉಂಟಾಗುವ ರೋಗಾತ್ಮಕ ಸ್ಥಿತಿಯನ್ನು ಕೀವು ತುಂಬಿದ ಬಾವು ಎನ್ನುತ್ತೇವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 90 ಸಾವಿರ ಜನರ ಸಾವಿಗೆ ಇದು ಕಾರಣವಾಗತ್ತಿದೆ. ಜಾಗತಿಕ ಮಟ್ಟದಲ್ಲಿ  ಸಾವು ಹೆಚ್ಚಳದ ಹಿಂದಿನ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ. ಒಮ್ಮೆ ಕೀವು ತುಂಬಿದ ಬಾವು ಆರಂಭವಾದರೆ ‘ಕೀವುಗಟ್ಟುವ ಆಘಾತ’ ಎಂಬ ಸ್ಥಿತಿಗೆ ಕಾರಣವಾಗಿ, ನಂತರ ಅಂಗಾಂಶಗಳಿಗೆ ಹಾನಿಯಾಗುತ್ತದೆ. ಇದರ ಪರಿಣಾಮವಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ.

 

 ಅಂತಿಮವಾಗಿ, ಅಧಿಕ ಅಪಾಯ ಎದುರಿಸುತ್ತಿರುವ ರೋಗಿಗಳ ಸಾವಿಗೂ ಇದು ಕಾರಣವಾಗುತ್ತದೆ. ಶಿಲೀಂಧ್ರ, ವೈರಸ್ ಅಥವಾ ಯಾವುದೇ ಪರಾವಲಂಬಿಯ ಕಾರಣದಿಂದ ಸೋಂಕು ಉಂಟಾಗಿದ್ದರೂ, ಅದರ ಫಲವಾಗಿ ‘ಸೆಪ್ಸಿಸ್’ ಅಥವಾ ಕೀವು ತುಂಬಿದ ಬಾವು ಉಂಟಾಗುತ್ತದೆ; ಅದರಲ್ಲೂ, ಸಾಮಾನ್ಯವಾಗಿ ಬ್ಯಾಕ್ಟೀರಿಯಾದ ಕಾರಣದಿಂದ ಹೆಚ್ಚು ಸೋಂಕು ಉಂಟಾಗುತ್ತದೆ.  ಕೀವು ತುಂಬಿದ ಬಾವು  ಉಂಟಾದಾಗ ಚಿಕಿತ್ಸೆಗೆ ದುಬಾರಿ ಪ್ರತಿಜೀವಕ ಬಳಸಲಾಗುತ್ತದೆ.  ಇವು ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಈ ಸಮಸ್ಯೆಗೆ  ಕಡಿಮೆ ವೆಚ್ಚದ ಪರಿಣಾಮಕಾರಿ ಚಿಕಿತ್ಸೆ ಕಂಡುಕೊಂಡಿದ್ದಾರೆ.  

 

‘ಇ ಕೊಲೈ’, ‘ಸಾಲ್ಮೊನೆಲ’ ಮತ್ತು ‘ಕ್ಲಾಮೈಡಿಯಾ’ದಂತಹ ಬ್ಯಾಕ್ಟೀರಿಯಾ ಸೋಂಕು ಸಾಮಾನ್ಯವಾಗಿ ಕೀವು ತುಂಬಿದ ಬಾವು ಉಂಟುಮಾಡುತ್ತವೆ. ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿರುವ ರೋಗಿಗಳು, ಈ ಸೋಂಕುಗಳ ಮುಖ್ಯ ಗುರಿಯಾಗಿರುತ್ತಾರೆ ಎಂದು ಕಂಡುಬಂದಿದೆ. ‘ಎಂಡೋಟಾಕ್ಸಿನ್’ ಅಥವಾ ಜೀವಾಣುವಿಷಗಳೆಂಬ ಕೆಲವು ರಾಸಾಯನಿಕಗಳು ಈ ಬ್ಯಾಕ್ಟೀರಿಯಾಗಳಲ್ಲಿ ಇರುತ್ತವೆ. ಇವು, ದೇಹದ ರೋಗನಿರೋಧಕ ಜೀವಕೋಶಗಳ ಮೇಲಿರುವ ನಿರ್ದಿಷ್ಟ ಗ್ರಾಹಿ ಪ್ರೋಟೀನ್‌ಗಳೊಂದಿಗೆ ಪರಸ್ಪರ ಪ್ರತಿಕ್ರಿಯೆ ನಡೆಸುತ್ತವೆ. ಇದರ ಫಲವಾಗಿ ಹಲವು ಬೆಳವಣಿಗೆಗಳು ನಡೆಯುತ್ತವೆ.  ಸೋಂಕನ್ನು ಎದುರಿಸುವ ಸಲುವಾಗಿ ತೀವ್ರ ಉರಿಯೂತ ಉಂಟಾಗುತ್ತದೆ. ಸೆಪ್ಸಿಸ್ ಪ್ರಕರಣಗಳಲ್ಲಿ ಅರ್ಧಕ್ಕಿಂತಾ ಹೆಚ್ಚು ಪ್ರಕರಣಗಳು ಬ್ಯಾಕ್ಟೀರಿಯಾದ ಜೀವಾಣುವಿಷಗಳಿಂದಲೇ ಉಂಟಾಗಿರುತ್ತವೆ.

 

ಇಂತಹ ಪ್ರತಿ ಪ್ರಕರಣದಲ್ಲೂ, ಸೂಕ್ಷ್ಮಜೀವಿ ವಿರೋಧಿ ಚಿಕಿತ್ಸೆಯ ಕ್ಷಿಪ್ರ ಅಗತ್ಯವಿರುತ್ತದೆ. ಜೀವಾಣುವಿಷಗಳನ್ನು ತಟಸ್ಥಗೊಳಿಸುವ ಒಂದು ಬಗೆಯ ಗ್ಲೈಕೊಪ್ರೊಟೀನ್ ಲಭ್ಯವಿದ್ದು, ಇಂತಹ ಚಿಕಿತ್ಸೆಯಲ್ಲಿ ಇದನ್ನು ಬಳಸಬಹುದಾಗಿದು.  ‘ಬ್ಯಾಕ್ಟೀರಿಯಾಗಳನ್ನು ನಾಶಮಾಡುವ / ಪ್ರವೇಶ ಸಾಧ್ಯತೆಯನ್ನು ಹೆಚ್ಚಿಸುವ ಪ್ರೋಟೀನ್’ (ಬಿ.ಪಿ.ಐ) ಎಂಬ ಈ ಗ್ಲೈಕೊಪ್ರೊಟೀನ್, ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಕಂಡುಬಂದಿದೆ. ಸೆಪ್ಸಿಸ್  ವಿರುದ್ಧದ  ಚಿಕಿತ್ಸೆಗಾಗಿ ಇದನ್ನು ಬಳಸಬಹುದು.  ಆದರೂ ಇದರ ಕಳಪೆ ಸ್ಥಿರತೆ,  ಹೆಚ್ಚಿನ ಉತ್ಪಾದನಾ ವೆಚ್ಚ ಮತ್ತು  ಸಂಗ್ರಹಕ್ಕೆ ಇರುವ ಇತಿಮಿತಿ ಕಾರಣದಿಂದ ಇದನ್ನು ವ್ಯಾಪಕವಾಗಿ ಬಳಸುತ್ತಿಲ್ಲ.

 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ‘ಆಣ್ವಿಕ ರೋಗೋತ್ಪತ್ತಿ ಪ್ರಯೋಗಾಲಯ’ದ   ಪ್ರೊ. ದೀಪ್ಶಿಖಾ ಚಕ್ರವರ್ತಿ ಈ ಅಧ್ಯಯನವನ್ನು ಮುನ್ನಡೆಸಿದರು. ಈ ಅಧ್ಯಯನದ ಫಲವಾಗಿ, ಅಧಿಕ ಅಪಾಯ ಎದುರಿಸುವ ರೋಗಿಗಳಿಗೆ ಚಿಕಿತ್ಸಕ ‘ಬಿ.ಪಿ.ಐ’ಯನ್ನು ತಲುಪಿಸುವ ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನ ರೂಪಿಸಿದರು. ಇದು ತಳೀಯ ಎಂಜಿನಿಯರಿಂಗ್ ವಿಧಾನವನ್ನು ಒಳಗೊಂಡಿದ್ದು, ಇಲಿಗಳಲ್ಲಿ ಲಭ್ಯವಿರುವ ‘ಬಿ.ಪಿ.ಐ’, ಅಂದರೆ, ‘ಎಂ.ಬಿ.ಪಿ.ಐ’ನ ಸಮ್ಮಿಳನ ಪ್ರೋಟೀನನ್ನು ವ್ಯಕ್ತಪಡಿಸುವ ಮೂಲಕ, ‘ಬಿ.ಪಿ.ಐ’ನ  ಸ್ಥಿರ ರೂಪವನ್ನು ಸಂಶ್ಲೇಷಿಸಲಾಗುತ್ತದೆ.  ಇದರೊಂದಿಗೆ, ‘ಹಾಲೋ ಬ್ಯಾಕ್ಟೀರಿಯಾ’ ಎಂಬ ಜಾತಿಯ ಬ್ಯಾಕ್ಟೀರಿಯಾದಲ್ಲಿರುವ, ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳ ಮೇಲ್ಮೈಯಲ್ಲಿರುವ ‘ಕೋಶಕ ಪ್ರೋಟೀನ್ ಅನ್ನು ಬಳಸಿ, ‘mBPIN-GVNP’ ಎಂಬ ಸಮ್ಮಿಳಿತ ರೂಪವನ್ನು ಉತ್ಪಾದಿಸಲಾಗುತ್ತದೆ. ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳು ಟೊಳ್ಳಾಗಿದ್ದು ಸುಲಭವಾಗಿ ತೇಲುತ್ತವೆ. ಇವು ಸ್ಥಿರವಾದ ಪೊರೆಯನ್ನು ಹೊರ ಕವಚವಾಗಿ ಹೊಂದಿದ್ದು, ನೈಸರ್ಗಿಕವಾಗಿ ‘ಹಾಲೋ ಬ್ಯಾಕ್ಟೀರಿಯಾ’ದಂತಹ ಉಪ್ಪು- ಪ್ರಿಯ ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾಗುತ್ತವೆ. ಈ ‘ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳು’ ಆದರ್ಶ ವಿತರಣಾ ವ್ಯವಸ್ಥೆ ಎಂದು ಸಾಬೀತಾಗಿದೆ. ಇದರ ಹಿಂದಿರುವ ಕಾರಣಗಳೆಂದರೆ, ಇವುಗಳ ತಯಾರಿಕೆ ಪ್ರಕ್ರಿಯೆಯು ತುಲನಾತ್ಮಕವಾಗಿ ಸುಲಭ ಮತ್ತು ಅಗ್ಗವಾಗಿದೆ. ಅಷ್ಟೇ ಅಲ್ಲದೇ, ಇವುಗಳು ನಿಷ್ಕ್ರಿಯ ಮತ್ತು ಸುರಕ್ಷಿತವಾದ್ದರಿಂದ ಬಳಕೆಗೆ ಯೋಗ್ಯ.

 

 ‘ಸಂಕ್ಷಿಪ್ತವಾಗಿ ವಿವರಿಸಬೇಕಾದರೆ, ಇಲಿಯ ‘ಬಿ.ಪಿ.ಐ’ ಅಥವಾ ‘ಎಂ.ಬಿ.ಪಿ.ಐ’ಗೆ ಕಾರಣಕರ್ತ ವಂಶವಾಹಿಯನ್ನು, ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊ ಕಣಗಳ ಮೇಲ್ಮೈಯಲ್ಲಿರುವ ‘ಕೋಶಕ   ಪ್ರೊಟೀನ್’ಗೆ ಕಾರಣಕರ್ತ ವಂಶವಾಹಿಗೆ ತಳುಕು ಹಾಕಲಾಗುತ್ತದೆ. ಇದು, ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳ ಮೇಲ್ಮೈಯಲ್ಲಿ ‘ಸಮ್ಮಿಳನ ಪ್ರೋಟೀನ್’ನ ಅಭಿವ್ಯಕ್ತಿಗೆ ಎಡೆ ಮಾಡಿಕೊಡುತ್ತದೆ’ ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯ  ಅರ್ಜುನ್ ಬಾಲಕೃಷ್ಣನ್. 

 

ಹಲವು ಅಧ್ಯಯನಗಳ ಪ್ರಕಾರ, ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳು ಸ್ವತಂತ್ರವಾಗಿ ಉರಿಯೂತದ ಉಂಟಾಗುವಿಕೆಯನ್ನು ಪ್ರೇರೇಪಿಸುವುದಿಲ್ಲ ಮತ್ತು ಇಲಿಗಳಲ್ಲಿ ಇವು ರೋಗಕಾರಕವೂ ಅಲ್ಲ. ಇದಲ್ಲದೇ, ಈ ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳ ಮೇಲೆ ‘ಬಿ.ಪಿ.ಐ’ಗಳನ್ನು ವ್ಯಕ್ತಪಡಿಸುವುದರಿಂದ, ಇವುಗಳ ಸ್ಥಿರತೆಯೂ ಸುಧಾರಿಸುತ್ತದೆ ಮತ್ತು ಇವುಗಳನ್ನು ಸಂಗ್ರಹ ಮಾಡಿಡಬಹುದಾದ ಅವಧಿ ಕೂಡ ಹೆಚ್ಚುತ್ತದೆ.

 

ಇದಕ್ಕೂ ಮುಂಚೆ, ನಾವು ‘ಹಾಲೋ ಬ್ಯಾಕ್ಟೀರಿಯಾ’ಗಳ ಕೋಶಕಗಳಲ್ಲಿ ಸಾಲ್ಮೊನೆಲ್ಲಾದ ಪ್ರೋಟೀನ್ ಅನ್ನು ಅಭಿವ್ಯಕ್ತಿಪಡಿಸಿ, ಇವುಗಳ ವಿರುದ್ಧ ಇಲಿಗಳಲ್ಲಿ ಪ್ರತಿರಕ್ಷಣೆಯನ್ನು ಉಂಟುಮಾಡುವುದರ ಮೇಲೆ ಕೆಲಸ ಮಾಡುತ್ತಿದ್ದೆವು. ಈ ಅಧ್ಯಯನಗಳಿಂದ ನಾವು ಅರ್ಥೈಸಿಕೊಂಡ ವಿಚಾರವೆಂದರೆ, ಈ ಕೋಶಕಗಳು ಸ್ವತಃ ಯಾವುದೇ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರೇರೇಪಿಸುವುದಿಲ್ಲ ಮತ್ತು ಈ ಕೋಶಕದಲ್ಲಿ ಅಭಿವ್ಯಕ್ತಿಯಾದ ಪ್ರೋಟೀನ್‌ಗಳು ಬಹಳ ಸ್ಥಿರವಾಗಿರುತ್ತವೆ’ ಎಂದು ಅರ್ಜುನ್ ಬಾಲಕೃಷ್ಣನ್ ವಿವರಿಸುತ್ತಾರೆ.

 

ಒಂಟಿ ‘ಎಂ.ಬಿ.ಪಿ.ಐ’ಗೆ ಹೋಲಿಸಿದರೆ. ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳೊಂದಿಗೆ ಜಂಟಿಯಾಗಿರುವ ‘ಎಂ.ಬಿ.ಪಿ.ಐ’ ಗಳು ಹೆಚ್ಚು ಸ್ಥಿರ, ಲಭ್ಯ ಹಾಗೂ ಪರಿಣಾಮಕಾರಿಯಾಗಿವೆ ಎನ್ನುತ್ತವೆ ಈ ಅಧ್ಯಯನಗಳ ಫಲಿತಾಂಶಗಳು. ‘ಈ ಆವಿಷ್ಕಾರದೊಂದಿಗೆ, ಅಸ್ತಿತ್ವದಲ್ಲಿರುವ ಚಿಕಿತ್ಸೆಯನ್ನು ನಾವು  ಮಿತವ್ಯಯಕಾರಿಯಾಗಿ ಮಾರ್ಪಡಿಸಿದ್ದೇವೆ. ಅನಿಲ ತುಂಬಿದ ಚಲಿಸುವ ಕೋಶಕದ ನ್ಯಾನೊಕಣಗಳ ಮೇಲೆ ಅಭಿವ್ಯಕ್ತಿ ಹೊಂದುವ ಪ್ರೊಟೀನ್, ಬಹಳ ಸ್ಥಿರವಾಗಿದ್ದು, ಅದನ್ನು ಶುದ್ಧೀಕರಿಸುವ ಪ್ರಕ್ರಿಯೆ ಸುಲಭ ಹಾಗೂ ಕಡಿಮೆ ವೆಚ್ಚದ್ದಾಗಿದೆ. ಈ ಕಾರಣದಿಂದಾಗಿ, ಇದರ ಸಂಗ್ರಹ ಮತ್ತು ಉತ್ಪಾದನೆ ವೆಚ್ಚ ಹಾಗೂ ಇತಿಮಿತಿ ಕಡಿಮೆಯಾಗುತ್ತವೆ’ ಎನ್ನುತ್ತಾರೆ  ಅರ್ಜುನ್. 

 

ಪೂರ್ವ ಚಿಕಿತ್ಸೆಯ ಮೂಲಕ, ರಕ್ತಪರಿಚಲನಾ ವ್ಯವಸ್ಥೆಯಲ್ಲಿ mBPIN-GVNPಗಳನ್ನು ಸೇರಿಸಬೇಕಾಗುತ್ತದೆ; ಇದರ ಫಲವಾಗಿ ಲಿಪೋ ಪಾಲಿಸ್ಯಾಕರೆಡ್‌ನಂತಹ ಜೀವಾಣುವಿಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬಹುದು ಎಂದು ಸಂಶೋಧನಾ ಫಲಿತಾಂಶ ತಿಳಿಸುತ್ತವೆ. ಇದು ಜೀವಾಣುವಿಷ ಮತ್ತು ಪ್ರತಿರಕ್ಷಣಾ ಜೀವಕೋಶ ಗ್ರಾಹಿಯ ನಡುವಿನ ಪರಸ್ಪರ ಪ್ರತಿಕ್ರಿಯೆಯನ್ನು ತಗ್ಗಿಸುತ್ತದೆ ಮತ್ತು ಈ ಮುಖಾಂತರ, ಕೀವು ತುಂಬಿದ ಬಾವಿನ ತೀವ್ರತೆ ಕಡಿಮೆಗೊಳಿಸುತ್ತದೆ. ಕೀವುಗಟ್ಟುವ ಆಘಾತಕ್ಕೆ ಸಂಬಂಧಿಸಿದಂತೆ, ಇಲಿಯಲ್ಲಿರುವ  ‘ಎಂ.ಬಿ.ಪಿ.ಐ’ಗಳು ಲಿಪೋ ಪಾಲಿಸ್ಯಾಕರೈಡ್‌ಗಳನ್ನು ತಟಸ್ಥಗೊಳಿಸುತ್ತವೆ ಎಂದು ಮೌಲ್ಯೀಕರಿಸಿದ ಈ ಬಗೆಯ ಅಧ್ಯಯನಗಳಲ್ಲಿ ಇದು ಮೊದಲನೆಯದ್ದಾಗಿದೆ. 

 

‘ಜೀವಾಣುವಿಷ ಪ್ರೇರಿತ ಕೀವು ತುಂಬಿದ ಬಾವು ಮತ್ತು ಅದರ ಹಿಂದಿರುವ ಜೀವರಾಸಾಯನಿಕ ಮಾರ್ಗಗಳ ಪರಿಶೋಧನೆಗೆ ಬೇಕಾದ ಮತ್ತಷ್ಟು ಅಧ್ಯಯನಗಳು, ಹೆಚ್ಚು ವಿಕಾಸವಾಗಿರುವ ಸಂಕೀರ್ಣ ಪ್ರಾಣಿಗಳಲ್ಲಿ ನಡೆಸಲಾಗುವ ವೈದ್ಯಕೀಯ ಪರೀಕ್ಷೆಗಳು, ಸರಿಯಾದ ಅಂಗೀಕಾರಗಳು - ಇವುಗಳೆಲ್ಲಾ ಆದ ನಂತರ ನಾವು ಮಾನವನ ಮೇಲೆ ಪ್ರಯೋಗ ನಡೆಸಲು ಮುಂದುವರಿಯಬಹುದು. ಸದ್ಯಕ್ಕೆ, mBPIN-GVNPಗಳ ಔಷಧೀಯ ಪ್ರಾಬಲ್ಯವು, ಸುರಕ್ಷತೆ ಮತ್ತು ಪರಿಣಾಮಕಾರಿತ್ವವೆಂಬ ಎರಡೂ ದೃಷ್ಟಿಕೋನದಿಂದ ಭರವಸೆದಾಯಕವಾಗಿ ತೋರುತ್ತದೆ’ ಎಂದು  ಅರ್ಜುನ್ ವಿವರಿಸುತ್ತಾರೆ.

 –  ಗುಬ್ಬಿ ಲ್ಯಾಬ್ಸ್‌,

 (ಸಂಶೋಧನಾ ಚಟುವಟಿಕೆಗಳ 

ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry