ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ರಿವಳಿ ತಲಾಖ್ ಬೇಡ’

ಸಂಗತ
Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ತ್ರಿವಳಿ ತಲಾಖ್‌  (ಒಂದೇ ಸಲಕ್ಕೆ ಮೂರು ಬಾರಿ ‘ತಲಾಖ್‌’ ಎಂದು ಹೇಳಿ ವಿಚ್ಛೇದನ ಪಡೆಯುವ ಪದ್ಧತಿ) ಅತ್ಯಂತ ಕ್ರೂರ ವ್ಯವಸ್ಥೆ ಎಂದು ಅಲಹಾಬಾದ್ ಹೈಕೋರ್ಟ್ ಕಳೆದ ಶುಕ್ರವಾರ ಹೇಳಿದೆ. ಈ ಮಾತುಗಳ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್  ಕುರಿತಂತೆ ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ  ಸಚಿವೆಯಾಗಿದ್ದ (ರಾಜ್ಯದಲ್ಲಿ ಮುಸ್ಲಿಂ ಸಮುದಾಯದಿಂದ  ಸಚಿವರಾದ ಮೊದಲ ಮಹಿಳೆ) ನಫೀಸಾ ಫಜಲ್‌ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ...
 
* ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಕ್ಕೆ ನಿಮ್ಮ ಅನಿಸಿಕೆ ಏನು? 
ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಭಾರತದ ಸಂವಿಧಾನವು ಮುಸ್ಲಿಂ ಮಹಿಳೆಯರಿಗೆ ನೀಡಿರುವ ಹಕ್ಕಿನ ಬಗ್ಗೆ ಕೋರ್ಟ್‌ ಒತ್ತಿಹೇಳಿದೆ. ಕುರಾನ್‌ ಹಾಗೂ ಹದೀಸ್‌ (ಪ್ರವಾದಿ ಮೊಹಮ್ಮದ್‌ ಹೇಳಿಕೆ), ಪುರುಷ ಹಾಗೂ ಮಹಿಳೆಗೆ ಸಮಾನ ಅಧಿಕಾರ ನೀಡಿರುವಾಗ,  ಅದರ ವಿರುದ್ಧವೇ ಸಮರ ಸಾರಿ ಮುಸ್ಲಿಂ ಮಹಿಳೆಯರನ್ನು ತುಳಿಯಲು ಯತ್ನಿಸುತ್ತಿರುವವರಿಗೆ ಇದು ಪಾಠವಾಗಬೇಕಿದೆ.  ಹಾಗೆಂದು ನಾನು ‘ತಲಾಖ್ ’ ಅನ್ನೇ ವಿರೋಧಿಸುತ್ತಿದ್ದೇನೆ ಎಂದಲ್ಲ.
 
ದಂಪತಿ ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂದಾದಾಗ, ತೀರಾ ಅನಿವಾರ್ಯ ಸಂದರ್ಭಗಳಲ್ಲಿ ತಲಾಖ್ ನೀಡುವುದು ಒಳ್ಳೆಯದೇ. ಇದನ್ನು ನಮ್ಮ ಕುರಾನ್‌ ಕೂಡ ಒಪ್ಪಿಕೊಳ್ಳುತ್ತದೆ. ಆದರೆ ಮಹಿಳೆಯರನ್ನು ಎಷ್ಟು ಸಾಧ್ಯವೋ ಅಷ್ಟು ತುಳಿಯುವುದಕ್ಕಾಗಿ ಕೆಲವರು ತಾವೇ ರೂಪಿಸಿಕೊಂಡಿರುವ ಈ ಅಸಂಬದ್ಧ ತ್ರಿವಳಿ ತಲಾಖ್‌ಗೆ ನಾನು ವಿರೋಧಿ. 22 ಮುಸ್ಲಿಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್‌ಗೆ ನಿಷೇಧ ಇರುವಾಗ ನಮ್ಮ ದೇಶಕ್ಕೆ ಈ ಪದ್ಧತಿ ಬೇಕು ಎನ್ನುವುದು ತುಂಬಾ ವಿಚಿತ್ರ.
 
* ತ್ರಿವಳಿ ತಲಾಖ್‌ ಪರವಾಗಿ ಕೆಲ ಸಂಘಟನೆಗಳು ಕೆಲಸ ಮಾಡುತ್ತಿವೆ. ಬಹುಪತ್ನಿತ್ವ ಬೇಡ ಎಂದರೆ ಮೊದಲ ಹೆಂಡತಿಯನ್ನು ಕೊಂದುಹಾಕುತ್ತೇವೆ, ಆ್ಯಸಿಡ್‌ ಹಾಕಿ ಸುಡುತ್ತೇವೆ ಎಂಬೆಲ್ಲಾ ಹೇಳಿಕೆ ನೀಡುತ್ತಿವೆಯಲ್ಲ?
ತ್ರಿವಳಿ ತಲಾಖ್ ಪೋಷಿಸುತ್ತಿರುವವರು, ಅದು ಬೇಕು ಎಂದು ಬೀದಿಗಿಳಿದಿರುವವರು ‘ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ (ಎಐಎಂಪಿಎಲ್‌ಬಿ) ಸದಸ್ಯರು ಅಷ್ಟೇ. ಅಷ್ಟಕ್ಕೂ ಇವರ ಸಂಘಟನೆಗೆ ಶಾಸನಬದ್ಧ ಹಕ್ಕೇ ಇಲ್ಲದಿದ್ದಾಗ ಇವರೇನು ಬೇರೆಯವರ ಹಕ್ಕಿನ ಬಗ್ಗೆ ಮಾತನಾಡುವುದು?
 
ಈ ಮಂಡಳಿ ಸ್ಥಾಪನೆಯಾದದ್ದು 1973ರಲ್ಲಿ. ಸ್ವಯಂಸೇವಾ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡಿರುವ ಮುಸ್ಲಿಂ ಪುರುಷರು ನಂತರ  ತಮ್ಮ ಧರ್ಮದ ಮಹಿಳೆಯರನ್ನು ಸಂಪೂರ್ಣವಾಗಿ ತುಳಿಯಲು ಹೊಸ ಹೊಸ ಸ್ವಯಂ ಪ್ರೇರಿತ ಕಟ್ಟಳೆಗಳನ್ನು ತರಲು ಮುಂದಾಗುತ್ತಿದ್ದಾರೆ. ನಮ್ಮ ಕುರಾನ್‌ ಹಾಗೂ ಹದೀಸ್‌ಗೆ ಶತಶತಮಾನಗಳ ಪರಂಪರೆಯಿದೆ. ನಿನ್ನೆ-ಮೊನ್ನೆ ಅನಧಿಕೃತವಾಗಿ ಹುಟ್ಟಿಕೊಂಡ ಸಂಘಟನೆಯೊಂದು ಏನೋ ಹೇಳಿಬಿಟ್ಟರೆ ಅದಕ್ಕೆ ಮಾನ್ಯತೆ ನೀಡುವವರು ಯಾರು?  ಅಷ್ಟಕ್ಕೂ ‘ತ್ರಿವಳಿ ತಲಾಖ್’ ಎನ್ನುವ ಶಬ್ದವೇ ನಮ್ಮ ಕುರಾನ್‌ನಲ್ಲಿ ಇಲ್ಲದಾಗ ಇವರು ಬೀದಿಗಿಳಿದರೆಷ್ಟು ಬಿಟ್ಟರೆಷ್ಟು?
 
ಕುರಾನ್‌ ಪ್ರಕಾರ, ಗಂಡ ಹೆಂಡತಿಗೆ ತಲಾಖ್ ನೀಡುವಾಗ ಮೊದಲು ಒಂದು ಬಾರಿ ‘ತಲಾಖ್’ ಎಂದಿರಬೇಕು. ಅದಾದ ಒಂದು ತಿಂಗಳ ನಂತರ ಮತ್ತೊಂದು ಬಾರಿ ಹೇಳಬೇಕು. ಈ ಒಂದು ತಿಂಗಳಿನ ಅವಧಿಯಲ್ಲಿ ಅವನಿಗೆ ತಾನು ಮಾಡಿದ್ದು ತಪ್ಪು ಎನಿಸಿದರೆ ಹೆಂಡತಿಯ ಜೊತೆ ಬಾಳಬಹುದು. ಅದು ಸಾಧ್ಯವೇ ಇಲ್ಲ ಎಂದಾದಾಗ ಮೂರನೆಯ ತಿಂಗಳು ಅಂತಿಮವಾಗಿ ‘ತಲಾಖ್’ ಎನ್ನಬೇಕು. ಈ ಮೂಲಕ ವಿಚ್ಛೇದನ ಆಗುತ್ತದೆ. ಅದೇ ರೀತಿ ಹೆಂಡತಿ ಕೂಡ ಗಂಡನಿಗೆ ‘ತಲಾಖ್’ ನೀಡುವ ಹಕ್ಕು ನಮ್ಮಲ್ಲಿ ಇದೆ. ಅದಕ್ಕೆ ‘ಖುಲ್ಲಾ’ ಎನ್ನುತ್ತೇವೆ. ಇಷ್ಟೆಲ್ಲಾ ಸಮಾನ ಹಕ್ಕು ನಮಗೆ ಇದೆ. ಆದರೆ ತ್ರಿವಳಿ ತಲಾಖ್ ಮಾಡಿದ ನಂತರ ಗಂಡ ಹೆಂಡತಿ ಒಟ್ಟಿಗೇ ಬಾಳಬೇಕು ಎಂದರೆ ಹೆಂಡತಿಯಾದವಳು ಬೇರೊಬ್ಬ ಪುರುಷನ ಜೊತೆ ಮದುವೆಯಾಗಿ ಒಂದು ರಾತ್ರಿ ಕಳೆದು ಅವನಿಂದ ವಿಚ್ಛೇದನ ಪಡೆದು ನಂತರ ಮೊದಲ ಗಂಡನ ಬಳಿ ಬರಬೇಕು. ಇದಕ್ಕಿಂತ ಹೀನಾಯ ಸ್ಥಿತಿ ಉಂಟೇ? ಇದನ್ನು ಪೋಷಿಸುವ ಪುರುಷ ಸಂಘಟನೆಗಳ ಮನಸ್ಥಿತಿ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. 
 
ಅಲ್ಲಾಹ್‌ನ ಮನೆಯೆಂದೇ ಎನಿಸಿಕೊಂಡಿರುವ ಹಜ್‌ಗೆ ನಾವು ಹೋದಾಗ ಅಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಎಲ್ಲರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಹೆಣ್ಣು ತನ್ನ ಮುಖ ತೋರಿಸಲು ಅಲ್ಲಿ ಅನುಮತಿ ಇದೆ. ಆದರೆ ಅಲ್ಲಿಂದ ಹೊರಟು ಹೊರಕ್ಕೆ ಬಂದಾಗ ಮಾತ್ರ ಸಮಾನ ಹಕ್ಕಿನ ಮಾತೇ ಬರುವುದಿಲ್ಲ. ಇದಕ್ಕೆಲ್ಲ ಕಾರಣ ಇಂಥ ಪುರುಷ ಸಂಘಟನೆಗಳೇ.
 
* ‘ತಲಾಖ್’, ಮುಸ್ಲಿಮರ ಆಂತರಿಕ ವಿಷಯ. ಇದರ ಮಧ್ಯೆ ಪ್ರವೇಶ ಮಾಡುವುದು ಸರಿಯಲ್ಲ ಎಂಬುದಾಗಿ ಕೆಲವು ರಾಜಕಾರಣಿಗಳೂ ಹೇಳುತ್ತಿದ್ದಾರಲ್ಲ!
ಇದಕ್ಕಿಂತ ಕೆಟ್ಟದಾದ ಹೇಳಿಕೆ ಮತ್ತೊಂದಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿರುವಾಗ ಮುಸ್ಲಿಂ ಮಹಿಳೆಯರ ಹಕ್ಕು ಮಾತ್ರ ಆಂತರಿಕ ವಿಷಯ ಹೇಗಾಗುತ್ತದೆ? ದುರದೃಷ್ಟ ಎಂದರೆ ಮಹಿಳಾ ರಾಜಕಾರಣಿಗಳೂ ಈ ರೀತಿ ಮಾತನಾಡಿ ಮಹಿಳೆಯ ಹಕ್ಕಿನಲ್ಲೂ ರಾಜಕೀಯದ ವಿಷ ಬೆರೆಸುತ್ತಿದ್ದಾರೆ. ಮಹಿಳಾ ವಿರೋಧಿ ಪುರುಷರ ಕೈ ಬಲಪಡಿಸುತ್ತಿದ್ದಾರೆ. ಎಲ್ಲವೂ ಮತಕ್ಕಾಗಿ ಅಷ್ಟೇ. ನಾನೂ ಒಬ್ಬ ರಾಜಕಾರಣಿಯಾಗಿ ಈ ಮಾತನ್ನು ಹೇಳುವುದಕ್ಕೆ ಬೇಸರವಾಗುತ್ತಿದೆ.
 
ದೇಶದಲ್ಲಿ 8.3ಕೋಟಿ ಮುಸ್ಲಿಂ ಮಹಿಳೆಯರು ಇದ್ದಾರೆ. ಇವರ ಪೈಕಿ ಶೇ 43ರಷ್ಟು ಮಹಿಳೆಯರಿಗೆ ಸಹಿ ಹಾಕಲು ಕೂಡ ಬರುವುದಿಲ್ಲ. ಇವರಲ್ಲಿ ಸಾಕ್ಷರತೆಯ ಅರಿವು ಮೂಡಿಸುವ ಬದಲು ಇಂಥ ಹೇಳಿಕೆಗಳನ್ನು ನೀಡುವುದು ಕೊನೆಯ ಪಕ್ಷ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ.
 
* ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಧಾರ್ಮಿಕ ಅಸ್ಮಿತೆ ಹೊರಟುಹೋಗುತ್ತದೆ ಎನ್ನಲಾಗುತ್ತಿದೆ. ಇದಕ್ಕೇನು ಹೇಳುವಿರಿ?
ತ್ರಿವಳಿ ತಲಾಖ್‌ನಂತೆ, ಏಕರೂಪ ನಾಗರಿಕ ಸಂಹಿತೆ ಜಾರಿಗೂ ನಾನು ವಿರೋಧಿ. ಇದರಿಂದ ಧಾರ್ಮಿಕ ಅಸ್ಮಿತೆ ಹೊರಟುಹೋಗುತ್ತದೆ ಎನ್ನುವುದು ಅಕ್ಷರಶಃ ಸತ್ಯ. ಇದರಿಂದ ಬಹುಸಂಖ್ಯಾತರ ಕಾನೂನು ಅಲ್ಪಸಂಖ್ಯಾತರ ಮೇಲೆ ಹೇರಿಕೆ ಆಗುತ್ತದೆ.  ಮುಸ್ಲಿಂ ಮಹಿಳೆಯರಿಗೆ ಕುರಾನ್‌ ನೀಡಿರುವ ಸಮಾನ ಹಕ್ಕು, ಇದರ ಜಾರಿಯ ನಂತರ ಸಂಪೂರ್ಣ ನಾಶವಾಗುವ ಸಂಭವವಿದೆ. ಉದಾಹರಣೆಗೆ ಆಸ್ತಿಯ ವಿಚಾರವನ್ನೇ ತೆಗೆದುಕೊಳ್ಳಿ.
 
ಹಿಂದೂ ಧರ್ಮದ ಮಹಿಳೆಯರಿಗೆ ಅಪ್ಪನ ಆಸ್ತಿಯಲ್ಲಿ ಪಾಲು ಬಂದಿರುವುದು ಈಚಿನ ಬೆಳವಣಿಗೆ. ಆದರೆ ಮುಸ್ಲಿಂ ಮಹಿಳೆಯರಿಗೆ ಆಸ್ತಿ ಹಕ್ಕು ಮೊದಲಿನಿಂದಲೂ ಇದೆ. ಗಂಡ ಸತ್ತ ಮೇಲೆ ಆತನ ಆಸ್ತಿಯಲ್ಲಿ ಶೇ 20ರಷ್ಟು ಹೆಂಡತಿಗೆ ಪಾಲು. ಉಳಿದ ಪಾಲಿನಲ್ಲಿ ಮಗನಿಗೆ ಎರಡು ಭಾಗ ಹಾಗೂ ಮಗಳಿಗೆ ಒಂದು ಭಾಗವಿದೆ. ಇವೆಲ್ಲವನ್ನೂ ಏಕರೂಪ ನಾಗರಿಕ ಸಂಹಿತೆ ಕಸಿದುಕೊಳ್ಳುವ ಭಯವಿದೆ. ಇದರ ಜೊತೆಗೆ, ವಿಧವಾ ವಿವಾಹ ಮುಸ್ಲಿಂ ಧರ್ಮದಲ್ಲಿ ಪವಿತ್ರ ಎಂದು ಮುಂಚಿನಿಂದಲೂ ಪರಿಗಣಿಸಲಾಗಿದೆ. ಹೀಗೆ ತಲೆತಲಾಂತರಗಳಿಂದ ಮುಸ್ಲಿಂ ಮಹಿಳೆಯರಿಗೆ ಮಾತ್ರ ಇರುವ ಹಕ್ಕುಗಳನ್ನು ಹಾಗೆಯೇ ನಾವು ಉಳಿಸಿಕೊಳ್ಳಬೇಕಿದೆ. ಕುರಾನ್‌, ಹದೀಸ್‌ ವಿರುದ್ಧ ಹೋಗುವುದು ನನಗೆ ಇಷ್ಟವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT