ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಅರ್ಥವ್ಯವಸ್ಥೆಯೆಂಬ ಸವಾಲು

ಚರ್ಚೆ
Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ದೇಶದೆಲ್ಲೆಡೆ ನಗದುರಹಿತ ವಹಿವಾಟಿನ ಕುರಿತು ಈಗ ಚರ್ಚೆ ನಡೆಯುತ್ತಿದೆ. ನೋಟು ರದ್ದತಿ ನಂತರ, ದೇಶದ ಜನರು ಡಿಜಿಟಲ್ ಪಾವತಿಗೆ ಒತ್ತು ನೀಡಬೇಕೆಂದು  ಕೇಂದ್ರ ಸರ್ಕಾರ ಕರೆ ನೀಡಿದೆ. ನಿಜ, ಕಾಲ ಬದಲಾದಂತೆ ನಾವೂ ಬದಲಾಗಬೇಕು. ಹಿಂದೆ ಹೇಗೆ ವಸ್ತು ವಿನಿಮಯ ಪದ್ಧತಿಯಿಂದ ನಗದು ಪದ್ಧತಿಗೆ ಅರ್ಥವ್ಯವಸ್ಥೆ ಬದಲಾಯಿತೋ ಹಾಗೆ ಇಂದು ನಗದು ಪದ್ಧತಿಯಿಂದ ಡಿಜಿಟಲ್ ಪದ್ಧತಿಗೆ ಬದಲಾಗಬೇಕಾದ ಅನಿವಾರ್ಯ ಉಂಟಾಗಿದೆ.
 
ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ನಮ್ಮ ಹಣ ನಮ್ಮ ಜೇಬಿನಲ್ಲಿ ಇರುವುದಿಲ್ಲ; ಬದಲಾಗಿ ಅದು ಬ್ಯಾಂಕಿನಲ್ಲಿರುತ್ತದೆ. ಇದರಿಂದ ನಮ್ಮ ಹಣ ಸುರಕ್ಷಿತವಾಗಿರುವುದಲ್ಲದೆ ಒಂದಿಷ್ಟು ಬಡ್ಡಿಯೂ ಬರುತ್ತಿರುತ್ತದೆ. ಸರ್ಕಾರಕ್ಕೆ ನೋಟು ಮುದ್ರಣದ ವೆಚ್ಚ ಕಡಿಮೆಯಾಗುತ್ತದೆ. ನಕಲಿ ನೋಟುಗಳ ಹಾವಳಿಯೂ ತಪ್ಪುತ್ತದೆ. ಕಪ್ಪುಹಣ ಸಂಗ್ರಹ ನಿಯಂತ್ರಿಸಬಹುದು. ಸರ್ಕಾರಿ ಕಚೇರಿಗಳಲ್ಲಿ ಪಾವತಿ ಮತ್ತು ಸ್ವೀಕೃತಿಗಳಿಗೆ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಪ್ರತಿ ಹಣಕಾಸು ವ್ಯವಹಾರಕ್ಕೂ ಸೂಕ್ತ ದಾಖಲೆ ಇರುತ್ತದೆ. ಆದರೆ ಭಾರತದಲ್ಲಿ ಡಿಜಿಟಲ್ ಅರ್ಥವ್ಯವಸ್ಥೆಯನ್ನು ಏಕಾಏಕಿ ಜಾರಿಗೊಳಿಸಲು ಸಾಧ್ಯವೇ ಎಂದು ಚಿಂತಿಸಬೇಕಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ (ಪಾಯಿಂಟ್ ಆಫ್ ಸೇಲ್) ಸಾಧನ ಮೂಲಕ ಪಾವತಿ- ಹೀಗೆ ವಿವಿಧ ಬಗೆಯಲ್ಲಿ ನಗದುರಹಿತ ವಹಿವಾಟು ನಡೆಸಲು ಅವಕಾಶವಿದೆ. ನಗರ ಪ್ರದೇಶಗಳ ಶಿಕ್ಷಿತ ಜನರು ಈ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ.
 
ಶೇ 27ರಷ್ಟು ಅನಕ್ಷರಸ್ಥರು ಇರುವ ದೇಶದಲ್ಲಿ ಇದನ್ನು ಅನುಷ್ಠಾನಗೊಳಿಸುವುದಾದರೂ ಹೇಗೆ? ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಂಕುಗಳೇ ಇಲ್ಲ. ಬ್ಯಾಂಕ್ ಖಾತೆ ಇಲ್ಲದವರು ಇನ್ನೂ ಇದ್ದಾರೆ. ಡೆಬಿಟ್– ಕ್ರೆಡಿಟ್ ಕಾರ್ಡ್‌ಗಳ ಬಳಕೆಗೆ ತಿಳಿವಳಿಕೆ ಇರಬೇಕು. ಮೊಬೈಲ್‌ ವಹಿವಾಟಿಗೆ ‘ಸ್ಮಾರ್ಟ್ ಫೋನ್’ ಬೇಕು. ದೇಶದಲ್ಲಿ ಶೇ 17ರಷ್ಟು ಜನರು ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದಾರೆ. ಉಳಿದವರು ಸಾಧಾರಣ ಮೊಬೈಲ್ ಸೆಟ್ ಬಳಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ಆ ರಾಜ್ಯದ ಜನರಿಗೆ ಸ್ಮಾರ್ಟ್ ಫೋನ್ ನೀಡಲು ಮುಂದಾಗಿದೆ. ಇಂತಹ ಪ್ರಯತ್ನವನ್ನು ದೇಶದಾದ್ಯಂತ ವಿಸ್ತರಿಸುವುದು ಒಳಿತು.
 
ಮೊಬೈಲ್ ಬ್ಯಾಂಕಿಂಗ್‌ಗೆ ಅಂತರ್ಜಾಲ ಸೌಲಭ್ಯ ಬೇಕು. ದೇಶದ ಮೊಬೈಲ್ ಬಳಕೆದಾರರ ಪೈಕಿ ಶೇ 27ರಷ್ಟು ಮಂದಿ ಮಾತ್ರ ಅಂತರ್ಜಾಲ ಬಳಸುತ್ತಿದ್ದಾರೆ. ಭಾರತದಲ್ಲಿ ಶ್ರೀಲಂಕಾ, ಬಾಂಗ್ಲಾದೇಶಗಳಿಗಿಂತ ಅಂತರ್ಜಾಲದ ವೇಗ ಕಡಿಮೆ ಇದೆ. ಈ ಆಮೆ ವೇಗದ ಅಂತರ್ಜಾಲವನ್ನು ನಂಬಿಕೊಂಡು ಹಣಕಾಸು ವಹಿವಾಟು ನಡೆಸಲು ಸಾಧ್ಯವಿಲ್ಲ. ಅಂತರ್ಜಾಲದ ವೇಗ ಕಡಿಮೆಯಾದಾಗ ‘ಸರ್ವರ್ ಡೌನ್’ ಎಂದು ಹೇಳಿ ಬ್ಯಾಂಕ್‌ಗಳು ಗ್ರಾಹಕರಿಗೆ ಸೇವೆ ಒದಗಿಸುವುದಿಲ್ಲ. ಡಿಜಿಟಲ್ ಅರ್ಥವ್ಯವಸ್ಥೆಗೆ ಎಲ್ಲಾ ಬ್ಯಾಂಕ್‌ಗಳೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಬದಲಾಗಬೇಕು. ಆದರೆ ಸರ್ಕಾರಿ ಕ್ಷೇತ್ರದ ಅನೇಕ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಬ್ಯಾಂಕ್‌ಗಳು ಇನ್ನೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ.
 
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆಯೂ ಬಹಳ ಮುಖ್ಯ. ದೇಶದಾದ್ಯಂತ 32 ಲಕ್ಷ ಡೆಬಿಟ್ ಕಾರ್ಡ್‌ಗಳ ಮಾಹಿತಿಯನ್ನು ವಿದೇಶಿ ಹ್ಯಾಕರ್‌ಗಳು ಕದ್ದಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿದೆ. ಡಿಜಿಟಲ್ ಪಾವತಿಯಲ್ಲಿ ಗ್ರಾಹಕರು ಮತ್ತು ಸೇವೆ ಒದಗಿಸುವ ಕಂಪೆನಿಗಳ ಮಧ್ಯೆ ಈ ವಹಿವಾಟಿಗೆ ಸೇತುವೆಯಾಗಿ ಮೂರನೇ ವ್ಯವಸ್ಥೆಯೊಂದು ಕೆಲಸ ಮಾಡುತ್ತದೆ. ಇದು ಕಾರ್ಡ್‌ಗಳ ಮಾಹಿತಿಯನ್ನು ಸಂಗ್ರಹಿಸಿಟ್ಟು ದುರ್ಬಳಕೆ ಮಾಡುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಬಳಕೆಯಲ್ಲಿರುವ ಕ್ರೆಡಿಟ್‌ ಹಾಗೂ ಡೆಬಿಟ್ ಕಾರ್ಡ್‌ಗಳಲ್ಲಿ ದೃಢೀಕರಣಕ್ಕಾಗಿ ಕಾಂತೀಯ ಪಟ್ಟಿಗಳಿದ್ದು, ಇವುಗಳಿಂದ ಮಾಹಿತಿ ಕದಿಯುವುದು ಸುಲಭ. ಕಾಂತೀಯ ಪಟ್ಟಿಗಳ ಬದಲು ಕಾರ್ಡ್‌ಗಳಲ್ಲಿ ಕಂಪ್ಯೂಟರ್ ಚಿಪ್‌ ಅಳವಡಿಸುವ ಮೂಲಕ ಹ್ಯಾಕ್ ಮಾಡುವುದನ್ನು ತಡೆಗಟ್ಟಬಹುದು. ದತ್ತಾಂಶ ಅಕ್ಷರ ರೂಪದ ಬದಲು ಕೋಡ್‌ಗಳ ರೂಪದಲ್ಲಿ ಸಂಗ್ರಹವಾಗುವಂತೆ ಎಟಿಎಂ, ಪಿಒಎಸ್ ಯಂತ್ರಗಳನ್ನು ಮೇಲ್ದರ್ಜೆಗೇರಿಸಬೇಕಿದೆ. 
 
ಡಿಜಿಟಲ್ ವಹಿವಾಟಿಗೆ ಬದಲಾಗುವಂತೆ ಕೇಂದ್ರ ಸರ್ಕಾರ ಪ್ರಕಟಿಸಿದ ಮೇಲೆ ಹಲವು ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮದೇ ಮೊಬೈಲ್ ಆ್ಯಪ್‌ಗಳನ್ನು ಬಿಡುಗಡೆ ಮಾಡಿವೆ. ಇಂತಹ ಆ್ಯಪ್‌ಗಳು ಕೆಲವೊಮ್ಮೆ ‘ಗ್ರಾಹಕ ಸ್ನೇಹಿ’ಯಾಗಿರುವುದಿಲ್ಲ. ಸೂಚನೆಗಳೆಲ್ಲವೂ ಇಂಗ್ಲಿಷ್‌ನಲ್ಲಿ  ಇರುವುದರಿಂದ ಇಂಗ್ಲಿಷ್‌  ಬಾರದವರಿಗೆ ತೊಡಕಾಗುತ್ತದೆ. ಮೊಬೈಲ್ ಮತ್ತು ಆ್ಯಪ್‌ ಭಾಷೆಗಳು ಪ್ರಾದೇಶಿಕ ಭಾಷೆಗಳಲ್ಲಿದ್ದರೆ ಜನರಿಗೆ ವ್ಯವಹರಿಸಲು ಸುಲಭ. ಬಿಎಸ್ಎನ್‌ಎಲ್‌ನಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿಲ್ ಪಾವತಿಗೆ ಆನ್‌ಲೈನ್ ಪೋರ್ಟಲ್ ಸೌಲಭ್ಯ ಒದಗಿಸಿದ್ದರೂ, ಹಣ ಪಾವತಿಸಲು ಮುಂದಾದಾಗ  ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. 
 
ಆನ್‌ಲೈನ್ ಪಾವತಿ– ಖರೀದಿಯ ಸಂದರ್ಭದಲ್ಲಿ ಗ್ರಾಹಕರ ಮೇಲೆ ವಹಿವಾಟು ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು. ಬೇಕಾದರೆ ಮಾರಾಟ ಮಾಡುವ ಸಂಸ್ಥೆ ಅಥವಾ ಸೇವೆ ಒದಗಿಸುವ ಕಂಪೆನಿಗಳಿಂದ ಆ ಶುಲ್ಕವನ್ನು ವಸೂಲಿ ಮಾಡಿಕೊಳ್ಳಲಿ. ಹಾಗೆ ನೋಡಿದರೆ ಇತ್ತೀಚೆಗೆ ಪಿಒಎಸ್‌ ಯಂತ್ರಗಳ ಮೂಲಕ ಪಾವತಿ ಮಾಡುವವರಿಗೆ ₹ 2000ದವರೆಗೆ ಶುಲ್ಕ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಇದರಂತೆಯೇ ಬ್ಯಾಂಕ್‌ಗಳು ಕಾರ್ಡ್‌ಗೆ ಸಂಬಂಧಿಸಿದಂತೆ ಮಾಹಿತಿ ಶುಲ್ಕ ರದ್ದುಪಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳನ್ನು ವಿಸ್ತರಿಸುವುದರ ಜೊತೆಗೆ ಎಟಿಎಂಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲಾ ಹಳ್ಳಿಗಳಿಗೂ ಪಿಒಎಸ್‌ ಯಂತ್ರಗಳ ಸೌಲಭ್ಯ ಕಲ್ಪಿಸುವುದರ ಜೊತೆಗೆ, ಸಾರ್ವಜನಿಕರಿಗೆ ನೆರವಾಗಲು ಸಹಾಯಕರನ್ನು ನಿಯೋಜಿಸಬೇಕು. 
 
ಅಂದಾಜಿನ ಪ್ರಕಾರ ಭಾರತದಲ್ಲಿ ಶೇ 90ರಷ್ಟು ವ್ಯಾಪಾರ ವಹಿವಾಟು ನಗದು ರೂಪದಲ್ಲೇ ನಡೆಯುತ್ತಿದೆ. ಡಿಜಿಟಲ್ ಅರ್ಥವ್ಯವಸ್ಥೆಗೆ ಹೊರಳುವ ಮುನ್ನ ಆ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡಬೇಕು. ಜಗತ್ತಿನ ಯಾವ ರಾಷ್ಟ್ರದಲ್ಲೂ ಸಂಪೂರ್ಣ ನಗದುರಹಿತ ವಹಿವಾಟು ಸಾಧ್ಯವಾಗಿಲ್ಲ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಸಂಪೂರ್ಣ ನಗದುರಹಿತ ವಹಿವಾಟು ಎಂಬುದು ಸಾಧ್ಯವಿಲ್ಲದ ಮಾತು. ಆದರೆ ನಗದು ಬಳಕೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಿದೆ. ‘ಕ್ಯಾಷ್‌ಲೆಸ್’ ಎಂಬುದನ್ನು ‘ಲೆಸ್‌ಕ್ಯಾಷ್’ ಎಂದು ತಿದ್ದುಪಡಿ ಮಾಡಿಕೊಳ್ಳಬೇಕಿದೆ. ಇದನ್ನು ಹಂತ ಹಂತವಾಗಿ ಜಾರಿಗೊಳಿಸಬೇಕಿದೆ. 
 
ಸರ್ಕಾರಿ ಸಂಸ್ಥೆಗಳು, ದೊಡ್ಡ ವ್ಯಾಪಾರಿ ಮಳಿಗೆಗಳನ್ನು ಡಿಜಿಟಲ್ ಪಾವತಿಗೆ ಒಳಪಡಿಸಬೇಕು. ಆರ್‌ಟಿಒ, ಉಪನೋಂದಣಾಧಿಕಾರಿ ಕಚೇರಿ, ಕಂದಾಯ ಇಲಾಖೆ ಮುಂತಾದೆಡೆಗಳಲ್ಲಿ ಡಿಜಿಟಲ್ ಪಾವತಿ ಜಾರಿಗೊಳಿಸಿದರೆ, ಲಂಚ-ಕಮಿಷನ್ ದಂಧೆಗೆ ಕಡಿವಾಣ ಬೀಳುತ್ತದೆ. ಸಾರಿಗೆ ವಾಹನಗಳಲ್ಲಿ ಕಾರ್ಡ್ ಸ್ವೈಪಿಂಗ್ ಉಪಕರಣ ಬಳಸುವುದರಿಂದ ಚಿಲ್ಲರೆ ಸಮಸ್ಯೆ ನಿವಾರಿಸಬಹುದು. ಪೆಟ್ರೋಲ್, ಎಲ್‌ಪಿಜಿ, ಡಿಟಿಎಚ್, ನೀರಿನ ಶುಲ್ಕ, ದೂರವಾಣಿ, ವಿದ್ಯುತ್‌ನಂಥ ನಾಗರಿಕ ಸೇವೆಗಳ ಶುಲ್ಕ ಪಾವತಿಯನ್ನು ಡಿಜಿಟಲೀಕರಣ ಮಾಡುವುದರಿಂದ ನಗದು ಬಳಕೆ ಕಡಿಮೆ ಮಾಡಬಹುದು.
 
ಅರ್ಥವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಆಧುನಿಕ ಜ್ಞಾನ- ತಂತ್ರಜ್ಞಾನಗಳನ್ನು ಜನರಿಗೆ ತಲುಪಿಸುವ ಕೆಲಸ ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಆಗಬೇಕಿದೆ. ಮಿಗಿಲಾಗಿ ಬ್ಯಾಂಕ್‌ನಲ್ಲಿರುವ ನಮ್ಮ ಹಣಕ್ಕೆ ಸುರಕ್ಷತೆಯ ಖಾತ್ರಿ ಇರಬೇಕು. ಹ್ಯಾಕರ್‌ಗಳು ಖಾತೆಗಳಿಗೆ ಕನ್ನ ಕೊರೆದು, ಹಣವನ್ನೆಲ್ಲಾ ವರ್ಗಾಯಿಸಿಕೊಂಡು ಗ್ರಾಹಕರನ್ನು ಕ್ಷಣಮಾತ್ರದಲ್ಲಿ ಭಿಕ್ಷುಕರನ್ನಾಗಿ ಮಾಡುವಂತಾಗಬಾರದು. ಆಗ ಬ್ಯಾಂಕುಗಳೇ ಜವಾಬ್ದಾರಿ ಹೊರುವಂತಾಗಬೇಕು. ಆದ್ದರಿಂದ ನಗದುರಹಿತ ವಹಿವಾಟಿಗೆ ಹೊರಳುವ ಮುನ್ನ, ಅದಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು. ಸಿದ್ಧತೆಗಳಿಲ್ಲದೆ ಮಾಡುವ ಕೆಲಸಗಳು ಯಶಸ್ಸನ್ನು ತಂದು ಕೊಡಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT