ಬ್ರಹ್ಮಚರ್ಯ

7
ಅಮೃತವಾಕ್ಕು

ಬ್ರಹ್ಮಚರ್ಯ

Published:
Updated:
ಬ್ರಹ್ಮಚರ್ಯ

ಭಾರತೀಯ ಸಂಸ್ಕೃತಿಯಲ್ಲಿ ಬ್ರಹ್ಮ­ಚರ್ಯಕ್ಕೆ ಬಹು ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಜಗತ್ತಿನ ಎಲ್ಲ ಸಮಾಜಗಳಲ್ಲಿಯೂ ಇದರ ಮಹತ್ವದ ಅರಿವಿದ್ದರೂ ಭಾರತೀಯರು ಮಾತ್ರ ಇದನ್ನು ಬಹುವಾಗಿ ಗೌರವಿಸುತ್ತಾರೆ ಬ್ರಹ್ಮಚರ್ಯೇಣ ತಪಸಾ ದೇವಾಃ ಮೃತ್ಯುಮಪಾಘ್ನತ ಎಂಬ ಉಪನಿಷತ್ ವಾಕ್ಯವು ಬ್ರಹ್ಮಚರ್ಯ ರೂಪದ ತಪಸ್ಸಿನಿಂದ ದೇವತೆಗಳು ಮೃತ್ಯುವನ್ನು ಜಯಿಸಿದ್ದಾರೆ ಎಂದು ಉದ್ಘೋಷಿಸುತ್ತದೆ. ಯಾರೇ ಇರಲಿ ಜೀವನದ ಅತ್ಯುನ್ನತ ಗುರಿಯಾದ ಅಮರತ್ವ ಅಥವಾ ಪರಮಾತ್ಮನ ಸಾಕ್ಷಾತ್ಕಾರ ಹೊಂದಲು ಅವರಿಗೆ ಬ್ರಹ್ಮಚರ್ಯದ ಅವಶ್ಯಕತೆ ಬಹಳಷ್ಟಿದೆ.

 

ಭಾರತೀಯ ದಾರ್ಶನಿಕರು ಬ್ರಹ್ಮ­ಚರ್ಯವೆಂದರೆ ಪರಮತತ್ವ(ಬ್ರಹ್ಮ)ದ ಅನ್ವೇಷಣೆಯಲ್ಲಿ ಮನುಷ್ಯನು ಹೊಂದಿ­ರುವ ಜೀವನಕ್ರಮ ಎಂಬುದನ್ನು ಸ್ಪಷ್ಟ­ಪಡಿಸಿದ್ದಾರೆ. ನೈಷ್ಠಿಕ ಮತ್ತು ನೈತಿಕ ಜೀವನವನ್ನು ನಡೆಸುತ್ತ ದೈಹಿಕ ಕಾಮನೆಗಳನ್ನು ನಿಗ್ರಹಿಸುವ ಕ್ರಮವನ್ನು ಬ್ರಹ್ಮಚರ್ಯವೆನ್ನಬಹುದು. ಮನಸ್ಸಿನ ವಾಸನೆಗಳನ್ನು ಮತ್ತು ಕಾಮನೆಗಳನ್ನು ನಿಯಂತ್ರಿಸಿದಾಗ ನಮ್ಮ ಮನಸ್ಸು ಪರಮತತ್ವವಾದ ಬ್ರಹ್ಮದತ್ತ ಮುಖ­ಮಾಡುವುದು.

 

ಭಾರತೀಯ ಆಶ್ರಮಗಳಲ್ಲಿ ಬ್ರಹ್ಮ­ಚರ್ಯವೆಂಬ ಪ್ರತ್ಯೇಕ ಆಶ್ರಮ ವ್ಯವಸ್ಥೆ ಇದ್ದರೂ ಉಳಿದೆಲ್ಲ ಆಶ್ರಮವಾಸಿಗಳೂ ಬ್ರಹ್ಮಚರ್ಯವನ್ನು ಅಂದರೆ ನೈತಿಕ ಜೀವನವನ್ನು ನಡೆಸುವುದು ಅನಿವಾರ್ಯ ಹಾಗೂ ಆವಶ್ಯಕವೆನಿಸಿದೆ. ಗುರುವಿನಿಂದ ವಿದ್ಯೆಯನ್ನು ಪಡೆಯುವ ವ್ಯಕ್ತಿಯ 12ನೆಯ ವಯಸ್ಸಿನಿಂದ 25ನೆಯ ವಯಸ್ಸಿನವರೆಗಿನ ಅವಧಿಯನ್ನು ಬ್ರಹ್ಮಚರ್ಯಾಶ್ರಮವೆನ್ನಲಾಗಿದೆ. ಈ ಅವಧಿಯಲ್ಲಿ ಮದುವೆಯಾಗದೇ ಇರುವುದು, ಸಂಯಮದ ಜೀವನ ನಡೆಸುವುದು, ಧಾರ್ಮಿಕ ವಿಧಿ ವಿಧಾನಗಳನ್ನು ನಿತ್ಯ ಪೂರೈಸುವುದು ಇತ್ಯಾದಿ ಆಚಾರ ಸಂಹಿತೆ (code of conduct)ಗಳನ್ನು ಪಾಲಿಸಬೇಕಾಗುವುದು. ಇದೂ ಅಲ್ಲದೇ ಸತ್ಯ ಮಾತನಾಡುವುದು, ನಯ-ವಿನಯ ಸಂಪನ್ನರಾಗಿರುವುದು, ತಣ್ಣೀರು ಸ್ನಾನ ಮಾಡುವುದು, ಸಾತ್ವಿಕ ಆಹಾರ ಸೇವಿಸುವುದು, ಗುರು ಸೇವೆ ಮಾಡುವುದು ಹಾಗೆಯೇ ಶ್ರದ್ಧೆ ಮತ್ತು ಏಕಾಗ್ರತೆಗಳಿಂದ ಅಧ್ಯಯನ ಮಾಡುವುದು ಇವೇ ಮುಂತಾದ ನಿಯಮಗಳನ್ನು ಪಾಲಿಸುವುದೂ ಕೂಡ ಅವಶ್ಯವೆಂದು ಬ್ರಹ್ಮಚರ್ಯ  ವ್ಯವಸ್ಥೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 

ಇಂದ್ರಿಯ ನಿಗ್ರಹ ಮಾಡುವುದನ್ನು ಮಾತ್ರ ಬ್ರಹ್ಮಚರ್ಯವೆಂದು ತಿಳಿದವರೇ ಬಹಳ. ಆದರೆ ಬಸವಣ್ಣನವರು ಮನಸ್ಸಿನಲ್ಲಿ ವಿಷಯ ಸುಖದ ಕಾಮನೆಗಳನ್ನು ಇಂಬಿಟ್ಟುಕೊಂಡು ಇಂದ್ರಿಯಗಳನ್ನು ಕೃತಕವಾಗಿ ನಿಗ್ರಹಿಸುವುದು ಅಪಾಯಕಾರಿ ಎನ್ನುತ್ತಾರೆ. ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು ಎಂದು ಹೇಳುವ ಮೂಲಕ ಅವರು ಇಂದ್ರಿಯಗಳ ಮಿತಿಯನ್ನು ಅರಿತು ಜೀವನವನ್ನು ಸಾಗಿಸಬೇಕು. ನೈಷ್ಠಿಕ ಮತ್ತು ನೈತಿಕ ಜೀವನವನ್ನು ನಡೆಸಬೇಕು. ಇದರಲ್ಲಿ ಸನ್ಯಾಸಿಗಳು-ಸಂಸಾರಿಗಳು ಎಂಬ ಭೇದವಿಲ್ಲ. ಬ್ರಹ್ಮಚರ್ಯದ ಜೀವನ ಅಂದರೆ ಸಂಯಮದ ಜೀವನ. ಅದು ಬ್ರಹ್ಮ ವಿಷಯಕ್ಕೆ ಸಂಬಂಧಿಸಿದ ಜ್ಞಾನ ಹಾಗು ಸಾಕ್ಷಾತ್ಕಾರಕ್ಕೆ ಪೂರಕ ಮತ್ತು ಅತ್ಯಾವಶ್ಯಕ ಎಂಬುದು ಅನುಭಾವಿಗಳ ಅಂಬೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry