7

ನಿಖರ ಫೋಕಸ್‌ನ ಕ್ಯಾಮೆರಾ ಫೋನ್

ಯು.ಬಿ. ಪವನಜ
Published:
Updated:
ನಿಖರ ಫೋಕಸ್‌ನ ಕ್ಯಾಮೆರಾ ಫೋನ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವವೆಲ್ಲ ಚೀನಾ ದೇಶದ ಕಂಪೆನಿಗಳೇ. ಅವುಗಳಲ್ಲಿ ಏಸುಸ್ ಒಂದು ಗಮನಾರ್ಹ ಹೆಸರು. ಈ ಕಂಪೆನಿಯು ಮೊದಲು ಲ್ಯಾಪ್‌ಟಾಪ್‌ಗಳ ಮೂಲಕ ಗಮನ ಸೆಳೆದಿತ್ತು. ತದನಂತರ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿತ್ತು. ಈ ಕಂಪೆನಿಯ ಹಲವು ಫೋನ್‌ಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ನಮ್ಮ ಈ ವಾರದ ಗ್ಯಾಜೆಟ್ ‘ಏಸುಸ್ ಝೆನ್‌ಫೋನ್ 3 ಲೇಸರ್’ (Asus Zenfone 3 Laser).ಗುಣವೈಶಿಷ್ಟ್ಯಗಳು

1.4 ಗಿಗಾಹರ್ಟ್ಸ್ ವೇಗದ 8 ಹೃದಯಗಳ ಪ್ರೊಸೆಸರ್ (Qualcomm Snapdragon 430), ಆಡ್ರಿನೋ 505 ಗ್ರಾಫಿಕ್ಸ್ ಪ್ರೊಸೆಸರ್, 4 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2ಜಿ/3ಜಿ/4ಜಿ ಎರಡು ಸಿಮ್, 5.5 ಇಂಚು ಗಾತ್ರದ 1920x1080 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು, 13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾಗಳು, ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, 149 x 76 x 7.9 ಮಿ.ಮೀ. ಗಾತ್ರ, 150 ಗ್ರಾಂ ತೂಕ, 3000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಎಫ್‌ಎಂ ರೇಡಿಯೊ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0+ ಝೆನ್ ಯೂಸರ್ ಇಂಟರ್‌ಫೇಸ್ 3, ಇತ್ಯಾದಿ. ನಾಲ್ಕು ಬಣ್ಣಗಳಲ್ಲಿ ಲಭ್ಯ.4+32 ಗಿಗಾಬೈಟ್ ಮಾದರಿಯ ಮಾರುಕಟ್ಟೆ ಬೆಲೆ ₹16,999. ಏಸುಸ್‌ನವರು ತಮ್ಮ ಹಳೆಯ ವಿನ್ಯಾಸವನ್ನು ಇತ್ತೀಚೆಗಿನ ಫೋನ್‌ಗಳಲ್ಲಿ ಬಿಟ್ಟೇಬಿಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆ. ಈಗಿನ ಏಸುಸ್ ಫೋನ್‌ಗಳನ್ನು ಕೈಯಲ್ಲಿ ಹಿಡಿದಾಗ ಮೇಲ್ದರ್ಜೆ ಫೋನನ್ನು ಹಿಡಿದುಕೊಂಡ ಭಾವನೆ ಬರುತ್ತದೆ. ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಝೆನ್‌ಫೋನ್ 3 ರದ್ದು. ಲೋಹದ ದೇಹದಂತೆ ಕಾಣುತ್ತದೆ. ಹಿಂಭಾಗ ಸ್ವಲ್ಪ ದೊರಗಾಗಿದೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಕೆಳಭಾಗದಲ್ಲಿ ಹಳೆಯ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಇದು ಯುಎಸ್‌ಬಿ-ಸಿ ನಮೂನೆಯದಲ್ಲ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ಹಾಕುವ ಟ್ರೇ ಇದೆ. ಅದನ್ನು ಹೊರತೆಗೆಯಲು ಚಿಕ್ಕ ಪಿನ್‌ ಬಳಸಿ ಚುಚ್ಚಬೇಕು. ಈ ಟ್ರೇಯಲ್ಲಿ ಎರಡು ಸಿಮ್ ಅಥವಾ ಒಂದು ಸಿಮ್, ಒಂದು ಮೆಮೊರಿ ಕಾರ್ಡ್ ಹಾಕಬಹುದು. ಮೊದಲನೆಯದು ಮೈಕ್ರೊ ಸಿಮ್.ಎರಡನೇ ಸಿಮ್ ಜಾಗದಲ್ಲಿ ನ್ಯಾನೊ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು. ಅಂದರೆ ಎರಡು ಸಿಮ್ ಹಾಕಿದಾಗ ಮೆಮೊರಿ ಜಾಸ್ತಿ ಮಾಡಲು ಸಾಧ್ಯವಿಲ್ಲ. ಹಿಂಭಾಗದಲ್ಲಿ ಮಧ್ಯದಲ್ಲಿ ಕ್ಯಾಮೆರಾ ಇದೆ. ಕ್ಯಾಮೆರಾದ ಒಂದು ಪಕ್ಕದಲ್ಲಿ ಫ್ಲಾಶ್ ಮತ್ತು ಇನ್ನೊಂದು ಪಕ್ಕದಲ್ಲಿ ಲೇಸರ್ ಕಿರಣದ ಕಿಂಡಿ ಇವೆ. ಕ್ಯಾಮೆರಾದ ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದರ ಬೆರಳಚ್ಚು ಸ್ಕ್ಯಾನರ್‌ನ ಸಂವೇದನೆ ಚೆನ್ನಾಗಿದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.ಇದರಲ್ಲಿರುವುದು ಅತಿ ಶಕ್ತಿಶಾಲಿಯಾದ ಪ್ರೊಸೆಸರ್ ಅಲ್ಲ. ಆದರೂ ಇದರ ಕೆಲಸದ ವೇಗ ಪರವಾಗಿಲ್ಲ ಎನ್ನಬಹುದು. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ ಎನ್ನಬಹುದು. ಇದರ ಕೆಲಸದ ವೇಗ ಅತಿಯಾಗಿಲ್ಲ. ಆದರೆ ದಿನನಿತ್ಯದ ಕೆಲಸಗಳಲ್ಲಿ ಈ ವ್ಯತ್ಯಾಸ ಗೋಚರಿಸುವುದಿಲ್ಲ. ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದು ಹೈಡೆಫಿನಿಶನ್‌ನ ವಿಡಿಯೊ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೊ ಪ್ಲೇ ಮಾಡುವುದಿಲ್ಲ. ಈ ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಫೋನಿನ ಜೊತೆ ತೃಪ್ತಿದಾಯಕ ಗುಣಮಟ್ಟದ ಇಯರ್‌ಬಡ್ ನೀಡಿದ್ದಾರೆ. ನಿಮ್ಮಲ್ಲಿ ಇದಕ್ಕಿಂತ ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಫೋನ್ ಇದ್ದಲ್ಲಿ ಅದನ್ನು ಬಳಸಿದರೆ ಇನ್ನೂ ಉತ್ತಮ ಸಂಗೀತವನ್ನು ಆಲಿಸುವ ಅನುಭವ ಪಡೆಯಬಹುದು.ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಎಲ್ಲ ಏಸುಸ್ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶ ಇದರಲ್ಲೂ ಇದೆ. ಅದೇ ಸೌಲಭ್ಯಗಳು ಇಲ್ಲೂ ಇವೆ. ಈ ಕಿರುತಂತ್ರಾಂಶವನ್ನು ಸ್ವಲ್ಪ ಸುಧಾರಿಸಿದ್ದಾರೆ. ಈಗ ಮ್ಯಾನ್ಯುವಲ್ ವಿಧಾನ ಉತ್ತಮವಾಗಿದೆ. ಅದರಲ್ಲಿ ಮ್ಯಾನ್ಯುವಲ್ ಫೋಕಸ್ ಕೂಡ ಇದೆ. ನಿಖರವಾದ ಫೋಕಸ್‌ಗೆ ಲೇಸರ್ ಕಿರಣದ ಸಹಾಯ ಇದೆ. ಕೇವಲ 0.03 ಸೆಕೆಂಡುಗಳಲ್ಲಿ ಫೋಕಸ್ ಮಾಡುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ವೇಗವಾಗಿ ಫೋಕಸ್ ಮಾಡುವುದು ನನ್ನ ಅನುಭವಕ್ಕೂ ಬಂದಿದೆ. ಕ್ಯಾಮೆರಾದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ.

ಎಲ್ಲ ಸಂದರ್ಭಗಳಲ್ಲೂ ಉತ್ತಮ ಫೋಟೊ ತೆಗೆಯುತ್ತದೆ. ಅತಿ ಹೆಚ್ಚಿನ ರೆಸೊಲೂಶನ್‌ನ ಫೋಟೊ ತೆಗೆಯಲು ಒಂದು ವಿಶೇಷ ಸವಲತ್ತು ನೀಡಿದ್ದಾರೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ತೆಗೆಯುತ್ತದೆ. ಹೈಡೆಫಿನಿಶನ್ ವಿಡಿಯೊ (1080p) ಚಿತ್ರೀಕರಣ ಸೌಲಭ್ಯ ಇದೆ. ಉತ್ತಮ ಕ್ಯಾಮೆರಾ ಫೋನ್‌ಗಳ ಪಟ್ಟಿಗೆ ಇದನ್ನೂ ಸೇರಿಸಬಹುದು.ಆಂಡ್ರಾಯ್ಡ್‌ 6.0 ಆಧಾರಿತ ಫೋನ್ ಆಗಿರುವುದರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಜೊತೆಗೆ ಅವರದೇ ಕೀಲಿಮಣೆಯೂ ಇದೆ. ಏಸುಸ್‌ನವರದೇ ಆದ ಝೆನ್ ಯುಐ ಇದೆ. ಈ ಯೂಸರ್ ಇಂಟರ್‌ಫೇಸ್ ಬಳಸಿ ಅಭ್ಯಾಸವಿದ್ದವರಿಗೆ ಇದು ಹಿಡಿಸಬಹುದು. ಏಸುಸ್‌ನವರ ಇತರೆ ಫೋನ್‌ಗಳಂತೆ ಇದರಲ್ಲೂ ಅಗತ್ಯಕ್ಕಿಂತ ಹೆಚ್ಚು ಕಿರುತಂತ್ರಾಂಶಗಳಿವೆ.  ಅವುಗಳಲ್ಲಿ ಅತೀ ಅಗತ್ಯವಿಲ್ಲದವುಗಳನ್ನು ಕಿತ್ತುಹಾಕಿದರೆ ಉತ್ತಮ.ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ, ಅಂದರೆ ಹತ್ತರಿಂದ ಹದಿನೈದು ಸಾವಿರದ ಆಸುಪಾಸಿನಲ್ಲಿ ಹಲವು ಉತ್ತಮ ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆ ನಿಟ್ಟಿನಲ್ಲಿ ಯೋಚಿಸಿದರೆ ಈ ಫೋನಿನ ಬೆಲೆ ಸ್ವಲ್ಪ ಜಾಸ್ತಿಯಾಯಿತು ಎನ್ನಬಹುದು.

ವಾರದ ಆ್ಯಪ್ -ಷಟ್ಭುಜ ತಯಾರಿಸಿ

ಹೊತ್ತು ಕಳೆಯಲು ಒಂದು ಸರಳ ಆಟ, ಜೊತೆಗೆ ಮೆದುಳಿಗೆ ಸ್ವಲ್ಪ ಕಸರತ್ತು ಬೇಕಾ? ಅಂತಹ ಹಲವು ಆಟಗಳು ಆಂಡ್ರಾಯ್ಡ್‌ ಫೋನ್‌ಗಳಿಗೆ ಲಭ್ಯವಿವೆ. ಅವುಗಳಲ್ಲಿ ಕೆಲವನ್ನು ಈ ಅಂಕಣದಲ್ಲಿ ಆಗಾಗ ಪರಿಚಯಿಸಲಾಗುತ್ತಿದೆ. ಅಂತಹ ಒಂದು ಆಟ ಈಗ ನಿಮಗಾಗಿ. ಇದರ ಹೆಸರು Make Hexa Puzzle. ಇದೇ ಹೆಸರಿನಲ್ಲಿ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ಸಿಗುತ್ತದೆ. ಅಥವಾ bit.ly/gadgetloka257 ಜಾಲತಾಣಕ್ಕೆ ಭೇಟಿ ನೀಡಬಹುದು.

ಇದರಲ್ಲಿ ಹಲವು ಖಾಲಿ ತ್ರಿಕೋನಗಳು ಪ್ರಾರಂಭದಲ್ಲಿ ಕಂಡುಬರುತ್ತವೆ. ಕೆಳಗಡೆ ತ್ರಿಕೋನಗಳ ತುಂಡುಗಳು ಒಂದೊಂದಾಗಿ ಅಥವಾ ಜೊತೆಜೊತೆಯಾಗಿ ಕಂಡುಬರುತ್ತವೆ. ಈ ತುಂಡುಗಳನ್ನು ಖಾಲಿ ತ್ರಿಕೋನಗಳಲ್ಲಿ ಜೋಡಿಸಿ ಒಂದೇ ಬಣ್ಣ ಮತ್ತು ವಿನ್ಯಾಸಗಳ ಷಟ್ಭುಜಗಳನ್ನು ತಯಾರಿಸಬೇಕು. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳಿವೆ.

ಗ್ಯಾಜೆಟ್‌ ಸಲಹೆ - ಮೋಹನ ವಿಠ್ಠಲ ರಾವ್ ಅವರ ಪ್ರಶ್ನೆ:  ಮೊಬೈಲ್ ನಲ್ಲಿ ವಿವಿಧ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಪ್ಲೇ ಸ್ಟೋರ್ ಇರುವ ಹಾಗೆ ಗಣಕಯಂತ್ರದಲ್ಲಿ ಹೇಗೆ ಡೌನ್‌ಲೋಡ್ ಮಾಡಬಹುದು ತಿಳಿಸಿ.

ಉ: ನೀವು ಯಾವ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಬಳಸುತ್ತಿದ್ದೀರಿ ಎಂದು ತಿಳಿಸಿಲ್ಲ. ಬಹುಪಾಲು ಜನರಂತೆ ನೀವೂ ವಿಂಡೋಸ್ ಬಳಸುತ್ತಿದ್ದೀರೆಂದು ನಂಬಿದ್ದೇನೆ. ವಿಂಡೋಸ್‌ನಲ್ಲೇ ಸ್ಟೋರ್ ಇದೆ. ಅದನ್ನು ತೆರೆದು ನಿಮಗೆ ಬೇಕಾದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗ್ಯಾಜೆಟ್‌ ತರ್ಲೆ - ಆಂಡ್ರಾಯ್ಡ್‌ ಫೋನ್‌ಗಳಲ್ಲಿರುವ ಗೂಗಲ್‌ ನೌ ಧ್ವನಿಯಿಂದ ಪಠ್ಯಕ್ಕೆ (speech to text) ಸೌಲಭ್ಯವು ತುಂಬ ಬುದ್ಧಿವಂತವಾಗಿದೆ. ಒಬ್ಬಾತ ಅದನ್ನು ಆನ್ ಮಾಡಿದಾಗ ಅದು ಎಂದಿನಂತೆ ‘ನಾನು ಸಿದ್ಧನಾಗಿದ್ದೇನೆ, ನೀವು ಮಾತನಾಡಿ’ ಎಂದಿತು. ಆತ ಮಾತನಾಡಲು ಪ್ರಾರಂಭಿಸಬೇಕು ಎಂದುಕೊಂಡಾಗ ಆತನಿಗೆ ಜೋರಾಗಿ ಕೆಮ್ಮು ಬಂತು. ಕೂಡಲೇ ಆತನ ಫೋನ್ ಅದನ್ನು ಅರ್ಥಮಾಡಿಕೊಂಡು ಅರವಿಂದ ಕೇಜ್ರಿವಾಲ್ ಎಂದು ತೋರಿಸಿತು!

ಗ್ಯಾಜೆಟ್‌ ಸುದ್ದಿ -ಕಫದ ಔಷಧಿ ಕಳ್ಳರ ಸೆರೆ

ಕಫದ ಔಷಧಿಯಲ್ಲಿ ಸ್ವಲ್ಪ ಅಮಲುಕಾರಕವೂ ಇರುತ್ತದೆ. ಅದಕ್ಕೇ ಅದನ್ನು ಕುಡಿದರೆ ತೂಕಡಿಕೆ ಬರುವುದು, ತಲೆ ತೂಕವಾದಂತೆ ಆಗುವುದು. ಅಮೆರಿಕದ ನಗರವೊಂದರಲ್ಲಿ ಅಂಗಡಿಗಳಿಂದ ಕಫದ ಔಷಧಿ ಬಾಟಲಿಗಳು ಕಳುವಾಗುತ್ತಿದ್ದವು. ಈ ಕಳ್ಳರನ್ನು ಹಿಡಿಯಲು ಪೊಲೀಸರು ಒಂದು ಉಪಾಯ ಮಾಡಿದರು. ಅವರು ಕಫದ ಔಷಧಿಯ ಬಾಟಲಿಯ ಕೆಳಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದರು. ಕಳ್ಳರು ಬಾಟಲಿಯನ್ನು ಕದ್ದು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry