ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹೆಚ್ಚಿಸಲು ಸಲಹೆ

Last Updated 14 ಡಿಸೆಂಬರ್ 2016, 19:29 IST
ಅಕ್ಷರ ಗಾತ್ರ

ಬೆಂಗಳೂರು: ಸುರಕ್ಷತೆಗೆ ಇನ್ನಷ್ಟು ಆದ್ಯತೆ ನೀಡಬೇಕೆಂದು ನಗರದ ಜನ ಬಯಸುತ್ತಿದ್ದಾರೆಯೇ?  ಜನಾಗ್ರಹ ಸಂಸ್ಥೆ ಹಮ್ಮಿಕೊಂಡ ‘ನನ್ನ ನಗರ ನನ್ನ ಬಜೆಟ್‌’ (ಮೈ ಸಿಟಿ ಮೈ ಬಜೆಟ್‌) ಅಭಿಯಾನದಲ್ಲಿ  ವ್ಯಕ್ತವಾದ ಜನರ  ಬೇಡಿಕೆಗಳು ಇದನ್ನು ಪುಷ್ಟೀಕರಿಸುವಂತಿವೆ.  ಈ ಅಭಿಯಾನದಲ್ಲಿ ಪಾಲ್ಗೊಂಡವರ ಪೈಕಿ  4,473 ಮಂದಿ  ಜನವಸತಿ ಪ್ರದೇಶದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂಬ ಸಲಹೆ ನೀಡಿದ್ದಾರೆ.   ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿ  ಒಟ್ಟು 4,791 ಸಲಹೆಗಳು  ಬಂದಿವೆ.

ಬಿಬಿಎಂಪಿ ಬಜೆಟ್‌ ತಯಾರಿಸುವಾಗ ಜನರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಸಿಗಬೇಕು ಎಂಬ ಆಶಯದಿಂದ ಜನಾಗ್ರಹ ಸಂಸ್ಥೆ ಅಕ್ಟೋಬರ್‌ 3ರಂದು ಈ ಅಭಿಯಾನವನ್ನು ಆರಂಭಿಸಿತ್ತು. ಇದರಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ಆಧರಿಸಿದ ವರದಿಯನ್ನು ಬುಧವಾರ ಪುರಭವನದಲ್ಲಿ  ಮೇಯರ್‌ ಜಿ.ಪದ್ಮಾವತಿ ಹಾಗೂ ಪಾಲಿಕೆ ಆಯುಕ್ತ  ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸಲ್ಲಿಸಲಾಯಿತು.

‘ಜನಾಗ್ರಹ’ದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ಮಾತನಾಡಿ, ‘ಕಳೆದ ವರ್ಷದ ಅಭಿಯಾನದಲ್ಲಿ ಬೆರಳೆಣಿಕೆ  ಮಂದಿ ಜನವಸತಿ ಪ್ರದೇಶದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂಬ ಬೇಡಿಕೆ  ಮುಂದಿಟ್ಟಿದ್ದರು. ಆದರೆ, ಈ ಬಾರಿ 4 ಸಾವಿರಕ್ಕೂ ಹೆಚ್ಚು ಮಂದಿ  ಈ ಸಲಹೆ ನೀಡಿದ್ದು ಅಚ್ಚರಿ ತಂದಿದೆ. ಜನ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲು ಬಯಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದರು.

‘ಕಳೆದ ವರ್ಷ ನಾವು ಪ್ರಾಯೋಗಿಕವಾಗಿ ಮೈ ಸಿಟಿ ಮೈ ಬಜೆಟ್‌ ಅಭಿಯಾನ ನಡೆಸಿದ್ದೆವು. ಆಗ ಕೇವಲ 6 ಸಾವಿರ ಸಲಹೆಗಳು ಬಂದಿದ್ದೆವು. ಇದೇ ಮೊದಲ ಬಾರಿ ನಾವು ನಗರದಾದ್ಯಂತ ವ್ಯಾಪಕವಾಗಿ ಈ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಜನರ ಪಾಲ್ಗೊಳ್ಳುವಿಕೆಯೂ ಹೆಚ್ಚಿದೆ’ ಎಂದರು.
ಅಭಿಯಾನದ ಉದ್ದೇಶಕ್ಕಾಗಿ ಸಿದ್ಧಪಡಿಸಲಾದ ವಿಶೇಷ  ‘ಬಜೆಟ್‌ ಬಸ್‌’ 160 ವಾರ್ಡ್‌ಗಳಲ್ಲಿ   ಜನರ ಅಭಿಪ್ರಾಯ ಸಂಗ್ರಹಿಸಿತ್ತು.

‘ಜನಾಗ್ರಹ’ದ ಸಹಸಂಸ್ಥಾಪಕಿ ಸ್ವಾತಿ ರಾಮನಾಥನ್‌ ಮಾತನಾಡಿ, ‘15 ವರ್ಷ ಹಿಂದೆ ಜನಾಗ್ರಹ ಸಂಸ್ಥೆಯನ್ನು ಆರಂಭಿಸಿದಾಗ  ಈ ಮಟ್ಟಿನ ಜನಬೆಂಬಲ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ.  ಬಜೆಟ್‌ಗೆ ಜನರ ಸಲಹೆ ಪಡೆಯಲು ಆರಂಭಿಸಿದಾಗ ಕೆಲವರು ಸಂಶಯದಿಂದ ನೋಡಿದರು. ಇದು ಸರ್ಕಾರದ ಕೆಲಸ ಎಂದೇ ಹೆಚ್ಚಿನವರು ಭಾವಿಸಿದ್ದರು. ಬಿಬಿಎಂಪಿ, ಬೆಸ್ಕಾಂ ಮೊದಲಾದ  ಸರ್ಕಾರದ ಅಂಗಸಂಸ್ಥೆಗಳಿಗೂ ನಮ್ಮ ಬಗ್ಗೆ ಅಪನಂಬಿಕೆ  ಇತ್ತು. ಈಗ  ಸರ್ಕಾರಿ ಸಂಸ್ಥೆಗಳಿಗೂ ನಮ್ಮ ಉದ್ದೇಶ ಸರಿ ಎಂದು ಅರ್ಥವಾಗಿದೆ. ಜನರೂ ಬಜೆಟ್‌ಗೆ ಸಲಹೆ ನೀಡುವುದನ್ನು ಹಕ್ಕು ಎಂದು ಭಾವಿಸಿದ್ದಾರೆ’ ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ್ ಕೌರ್‌ ಮಾತನಾಡಿ, ‘ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಬಿಬಿಎಂಪಿಯ ಸಹಾಯ ಬೇಕು. ಕೆಲವು ನಿಲ್ದಾಣಗಳಲ್ಲಿ ವೈಟ್‌ಟಾಪಿಂಗ್‌ಗೆ ಬಿಬಿಎಂಪಿ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

***

‘ಸ್ವಚ್ಛತೆಗೆ ಸಹಕರಿಸಿ’
‘ಮೈಸೂರು, ಮಂಗಳೂರು ನಗರಗಳು ಸ್ವಚ್ಛತೆ ವಿಚಾರದಲ್ಲಿ ಮುಂಚೂಣಿಯಲ್ಲಿವೆ. ಹಸಿಕಸ ಹಾಗೂ ಒಣಕಸವನ್ನು ಮೂಲದಲ್ಲೇ ಬೇರ್ಪಡಿಸುವ ಮೂಲಕ ನಗರ ಸ್ವಚ್ಛವಾಗಿಡಲು ನಾಗರಿಕರು ಸಹಕರಿಸಬೇಕು’ ಎಂದು ಮೇಯರ್‌ ಜಿ. ಪದ್ಮಾವತಿ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT