6

ಚೀನಾದ ಕಂಕುಳ ಕೂಸಿಗೆ ಟ್ರಂಪ್ ಮಿಠಾಯಿ

ಸುಧೀಂದ್ರ ಬುಧ್ಯ
Published:
Updated:
ಚೀನಾದ ಕಂಕುಳ ಕೂಸಿಗೆ ಟ್ರಂಪ್ ಮಿಠಾಯಿ

ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಇನ್ನೂ ನಾಲ್ಕು ವಾರಗಳಿವೆ. ಆದರೆ ಈಗಾಗಲೇ ಅವರು ಅತ್ಯುತ್ಸಾಹದಿಂದ ತಮ್ಮ ಕೆಲಸಕ್ಕೆ ಚಾಲನೆ ಕೊಟ್ಟಂತೆ ಕಾಣುತ್ತಿದೆ. ಮುಖ್ಯವಾಗಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಅವರು ಉತ್ಸುಕರಾದಂತೆ ತೋರುತ್ತಿದೆ. ಟ್ರಂಪ್ ಮತ್ತು ತೈವಾನ್ ಅಧ್ಯಕ್ಷೆ ತ್ಸಯ್ ಇಂಗ್-ವೆನ್ ನಡುವೆ ನಡೆದ 10 ನಿಮಿಷಗಳ ಕುಶಲೋಪರಿ, ವಾಷಿಂಗ್ಟನ್‌ನಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚೀನಾದ ಮುಖ ಮತ್ತಷ್ಟು ಕೆಂಪಾಗುವಂತೆ ಮಾಡಿದೆ.  

 

ಕಾರಣವಿಷ್ಟೆ, ಅಮೆರಿಕ ಮತ್ತು ತೈವಾನ್ ನಾಯಕರ ನಡುವೆ ಹೀಗೊಂದು ಮಾತುಕತೆ ನಡೆದು 35 ವರ್ಷಗಳೇ ಆಗಿದ್ದವು. ಹಾಗಾಗಿ ಈ ಮಾತುಕತೆಯಿಂದ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹದಗೆಡಬಹುದೇ, ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮವಾಗುತ್ತದೆಯೇ ಎಂಬ ಆತಂಕದ ಮಾತುಗಳು ಕೇಳಿಬರುತ್ತಿವೆ. ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ. ಟೀಕೆಯ ಕುರಿತು ಟ್ವೀಟಿಸಿರುವ ಟ್ರಂಪ್ ‘ಅಮೆರಿಕ ಶತಕೋಟಿ ಡಾಲರ್ ಮೊತ್ತದ ಯುದ್ಧ ಸಾಮಗ್ರಿಗಳನ್ನು ಹಲವು ವರ್ಷಗಳಿಂದ ತೈವಾನಿಗೆ ರಫ್ತು ಮಾಡುತ್ತಿದೆ. ಆದರೆ ನಾನು ಅಭಿನಂದನೆಯ ಕರೆ ಸ್ವೀಕರಿಸಿದ್ದು ಅಪರಾಧವಾಗಿಬಿಟ್ಟಿದೆ!’ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ‘ಅಖಂಡ ಚೀನಾ’ ನೀತಿಗೆ ಅಮೆರಿಕ ಬದ್ಧವಾಗಬೇಕಿಲ್ಲ ಎಂಬ ಮಾತಿನ ಸಿಡಿಗುಂಡು ಹಾರಿಸಿದ್ದಾರೆ. ಅದು ನೇರಹೋಗಿ ಚೀನಾಕ್ಕೆ ನಾಟಿದೆ. ಚೀನಾ ಕುಪಿತಗೊಂಡಿದೆ. ಅದಕ್ಕೆ ಕಾರಣವೂ ಇದೆ. 

 

ಕೇವಲ ಜಿಡಿಪಿಯನ್ನಷ್ಟೇ ನೋಡಿದರೆ ತೈವಾನ್ ಎಂಬ ಪುಟ್ಟ ದ್ವೀಪ, ಗಾತ್ರದಲ್ಲಿ ತನಗಿಂತ ಹಿರಿದಾಗಿರುವ ಜಗತ್ತಿನ ಇತರ ದೇಶಗಳನ್ನು ಹಿಂದಿಕ್ಕಿ 21ನೆಯ ಸ್ಥಾನದಲ್ಲಿದೆ. ಆದರೆ ತೈವಾನಿಗೆ ತನ್ನದೇ ಅಸ್ತಿತ್ವವಿಲ್ಲ. ಚೀನಾದ ದೈತ್ಯ ಬಾಹುಗಳಲ್ಲಿ ಅದು ತಿಣುಕುತ್ತಿದೆ. ಚೀನಾ ತನ್ನ ಸಾಮರ್ಥ್ಯ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವದಿಂದ ದೊರಕಿರುವ ನಿಷೇಧಾಧಿಕಾರ ಬಳಸಿ, ತೈವಾನನ್ನು ರಾಜತಾಂತ್ರಿಕವಾಗಿ ತೆರೆಮರೆಯಲ್ಲೇ ಉಳಿಸಿದೆ. ಇತರ ದೇಶಗಳು ತೈವಾನ್ ಜೊತೆ ನೇರ ಕೈಕುಲುಕುವಂತಿಲ್ಲ ಎಂಬ ಕಟ್ಟಪ್ಪಣೆ ಮಾಡಿದೆ. 

 

ಹಾಗೆ ನೋಡಿದರೆ, ಚೀನಾ ಮತ್ತು ತೈವಾನ್ ನಡುವಿನ ಸಂಘರ್ಷಕ್ಕೆ ಹಲವು ದಶಕಗಳ ಇತಿಹಾಸ ಇದೆ. ತೈವಾನಿನ ಮೂಲ ನಿವಾಸಿಗಳು ದಕ್ಷಿಣ ಚೀನಾ ಪ್ರಾಂತ್ಯದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ. 1642-61ರವರೆಗೆ ಈ ದ್ವೀಪ ಡಚ್ಚರ ವಸಾಹತು ಆಗಿತ್ತು. ಚೀನಾ ಗಣತಂತ್ರದ ಬಳಿಕ ‘ಕೂಮಿಂಟ್ಯಾಂಗ್’ (ಕೆಎಂಟಿ) ಎಂಬ ರಾಷ್ಟ್ರೀಯವಾದಿ ಪಕ್ಷದ ಆಡಳಿತಕ್ಕೆ ಒಳಪಟ್ಟಿತು. ನಾನ್ಜಿಂಗ್, ‘ರಿಪಬ್ಲಿಕ್ ಆಫ್ ಚೀನಾ’ದ ಆಡಳಿತ ಕೇಂದ್ರವಾಯಿತು. ತೈವಾನ್ ಚೀನಾದ ಜೊತೆಗೇ ಇತ್ತು. ಚೀನಾದ ಸರ್ವೋಚ್ಚ ನಾಯಕ ಸನ್ ಯಾಟ್-ಸೇನ್, ದೇಶವನ್ನು ಒಂದೊಂದೇ ಹೆಜ್ಜೆ ಮುನ್ನಡೆಸಲು ‘ಮೂರು ಹಂತದ ಕ್ರಾಂತಿ’ಯನ್ನು ಮುಂದಿಟ್ಟರು. ಆ ಮೂರು ಹಂತಗಳೆಂದರೆ ಸಾಮರಿಕವಾಗಿ ಬಲ ವೃದ್ಧಿಸಿಕೊಳ್ಳುವುದು, ರಾಜಕೀಯ ಮತ್ತು ನಾಗರಿಕ ಹಕ್ಕುಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು, ನಂತರ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ಜಾರಿಗೆ ತರುವುದು. ಈ ಪೈಕಿ ಎರಡು ಹಂತಗಳನ್ನು ಚೀನಾ ದಾಟುವ ಹೊತ್ತಿಗೇ, ಎರಡನೇ ವಿಶ್ವಸಮರ ನಡೆದು, ಜಪಾನ್ ಸೇನೆ ನಾನ್ಜಿಂಗ್ ವಶಪಡಿಸಿಕೊಂಡಿತು. ಜನಾಂಗೀಯ ಹತ್ಯೆಯಿಂದಾಗಿ ನೆತ್ತರು ಹರಿಯಿತು. 

 

ಎರಡನೇ ವಿಸ್ವಸಮರ ಮುಗಿಯುತ್ತಲೇ, ಕೆಎಂಟಿ ನೇತೃತ್ವದ ಸರ್ಕಾರ, ಚೀನಾದ ಸಂವಿಧಾನವನ್ನು ರೂಪಿಸಿತು. ಚೀನಾದ ಸಾಂವಿಧಾನಿಕ ಸರ್ಕಾರದ ಮೊದಲ ಅಧ್ಯಕ್ಷರಾಗಿ ಚಿಯಾಂಗ್ ಕೈ-ಶೇಕ್ ಆಯ್ಕೆಯಾದರು. ತೈವಾನ್ ‘ರಿಪಬ್ಲಿಕ್ ಆಫ್ ಚೀನಾ’ದ ಭಾಗವಾಗಿಯೇ ಆಗಲೂ ಇತ್ತು. ಆದರೆ ಕೆಲವು ವರ್ಷಗಳಲ್ಲೇ, ಅಂದರೆ 1949ರಲ್ಲಿ ಅಂತರ್ಯುದ್ಧ ನಡೆದು, ಮಾವೋ ಜಿಡಾಂಗ್ ನೇತೃತ್ವದ ಕಮ್ಯುನಿಸ್ಟ್‌ ಸೇನೆ, ಚಿಯಾಂಗ್ ಪಡೆಯನ್ನು ಚೀನಾದಿಂದ ಹೊರದಬ್ಬಿತು. ತನ್ನ ಬೆಂಬಲಿಗರೊಂದಿಗೆ ಚಿಯಾಂಗ್, ತೈವಾನ್ ಸೇರಿಕೊಂಡರು. ಮಾವೋ ವಶದಲ್ಲಿದ್ದ ಚೀನಾದ ಮುಖ್ಯ ಭೂಭಾಗ ಸಂಪೂರ್ಣ ಕೆಂಪುಹೊದ್ದು ‘ಪೀಪಲ್ ರಿಪಬ್ಲಿಕ್ ಆಫ್ ಚೀನಾ’ (PRC) ಎಂದು ಕರೆಸಿಕೊಂಡರೆ. ಚಿಯಾಂಗ್ ಅಧಿಕಾರ ವ್ಯಾಪ್ತಿಯಲ್ಲಿದ್ದ ತೈವಾನ್ ‘ರಿಪಬ್ಲಿಕ್ ಆಫ್ ಚೀನಾ’ (ROC) ಆಗಿ ಉಳಿಯಿತು. 

 

ಆನಂತರ ನಾಲ್ಕು ದಶಕಗಳ ಕಾಲ ಪರಸ್ಪರ ವಶಪಡಿಸಿಕೊಳ್ಳುವ ಮಾತು ಎರಡೂ ಕಡೆಯಿಂದ ಕೇಳಿ ಬರುತ್ತಿತ್ತು. ಬೀಜಿಂಗ್ ಮತ್ತು ತೈವಾನ್ ಒಂದೇ ಭೂಭಾಗದ ಒಡೆತನವನ್ನು ಘೋಷಿಸಿಕೊಂಡಾಗ ಜಾಗತಿಕ ಸಮುದಾಯ ಗೊಂದಲಕ್ಕೆ ಬಿತ್ತು. ಅದೇ ಹೊತ್ತಿಗೆ ಆರ್ಥಿಕ ಶಕ್ತಿಯಾಗಿ ಬೆಳೆದು, ಜಾಗತಿಕ ರಾಜಕೀಯ ವೇದಿಕೆಯಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿದ್ದ ಚೀನಾ, ‘ಒಂದೇ ಚೀನಾ’ ನೀತಿಯನ್ನು ಬೆಂಬಲಿಸುವಂತೆ ಇತರ ರಾಷ್ಟ್ರಗಳ ಮೇಲೆ ಒತ್ತಡ ತರುವಲ್ಲಿ ಯಶಸ್ವಿಯಾಯಿತು. 1971ರಲ್ಲಿ ವಿಶ್ವಸಂಸ್ಥೆ ಬೀಜಿಂಗ್ ಅನ್ನು ಚೀನಾದ ರಾಜತಾಂತ್ರಿಕ ಕೇಂದ್ರವನ್ನಾಗಿ ಗುರುತಿಸಿ, ‘ಪೀಪಲ್ ರಿಪಬ್ಲಿಕ್ ಆಫ್ ಚೀನಾ’ಕ್ಕೆ ಅಧಿಕೃತ ಮಾನ್ಯತೆ ನೀಡಿತು. ವಿಶ್ವಸಂಸ್ಥೆಯ ನಿಲುವನ್ನೇ ಇತರ ರಾಷ್ಟ್ರಗಳು ಅನುಸರಿಸಿದವು. ಚೀನಾ, ತೈವಾನನ್ನು ‘ವಿಚ್ಛಿನ್ನ ಸಂಸ್ಥಾನ’ ಎಂದು ಕರೆಯಿತು. ತೈವಾನ್ ನಾಯಕರು ನಮ್ಮದು ಸ್ವತಂತ್ರ  ರಾಷ್ಟ್ರ ಎಂದು ಹೇಳಿದರೂ, ಇತರ ರಾಷ್ಟ್ರಗಳು ಅಧಿಕೃತವಾಗಿ ತೈವಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಸಾಧಿಸಲು ಹಿಂಜರಿದವು. 

 

ತೈವಾನ್ ಮತ್ತು ಚೀನಾ ಸಮಸ್ಯೆ, ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರಕ್ಕೂ ತಳಕು ಹಾಕಿಕೊಂಡಿತು. ರಷ್ಯಾ, ಚೀನಾದ ಬೆನ್ನಿಗೆ ನಿಂತರೆ, ಅಮೆರಿಕವು ತೈವಾನ್ ಎಂಬ ಕೂಸಿಗೆ ಕೈ ಹಾಕಿತು. 70ರ ದಶಕದಲ್ಲಿ ನಿಕ್ಸನ್ ಅಮೆರಿಕದ ಅಧ್ಯಕ್ಷರಾದ ಮೇಲೆ ರಷ್ಯಾಕ್ಕೆ ಸಡ್ಡು ಹೊಡೆಯಲು ‘ಚೀನಾಕ್ಕೆ ತೆರೆದುಕೊಳ್ಳುತ್ತೇವೆ’ ಎಂದರು, 1972ರಲ್ಲಿ ಚೀನಾಕ್ಕೆ ಭೇಟಿ ಇತ್ತರು. ಚೀನಾದೊಂದಿಗೆ ನಂಟು ಸಾಧಿಸಲು, ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಬೀಜಿಂಗ್‌ನಲ್ಲಿ ತೆರೆಯಲು, 1979ರಲ್ಲಿ ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್, ತೈವಾನ್‌ನೊಂದಿಗಿನ ಅಮೆರಿಕದ ರಾಜತಾಂತ್ರಿಕ ಸಂಬಂಧಕ್ಕೆ ಕೊನೆಹಾಡಿದರು. ಅಂತಿಮವಾಗಿ ಅಮೆರಿಕ ‘ಒಂದೇ ಚೀನಾ’ ಧೋರಣೆಗೆ ಬದ್ಧವಾಯಿತು. ತನ್ನ ರಾಯಭಾರ ಕಚೇರಿಯನ್ನು ಬೀಜಿಂಗ್‌ನಲ್ಲಿ ತೆರೆಯಿತು. ಆದರೆ ತನ್ನ ಜನ್ಮಜಾತ ದ್ವಿಮುಖ ನೀತಿಯನ್ನು ಬಿಟ್ಟುಕೊಡದೆ, ಅನಧಿಕೃತವಾಗಿ ‘ಅಮೆರಿಕನ್ ಇನ್‌ಸ್ಟಿಟ್ಯೂಟ್ ಇನ್ ತೈವಾನ್’ ಎಂಬ ಸಂಸ್ಥೆಯ ಮೂಲಕ ತೈವಾನಿಗೆ ಅಗತ್ಯ ನೆರವು ನೀಡುವ ಕಾರ್ಯ ಮುಂದುವರೆಸಿತು. ಒಂದೊಮ್ಮೆ ಚೀನಾ ಆಕ್ರಮಣ ಮಾಡಿದರೆ ಪ್ರತಿರೋಧ ಒಡ್ಡಲು, ಯುದ್ಧೋಪಕರಣಗಳನ್ನು ಒದಗಿಸಿ ತೈವಾನಿಗೆ ಶಕ್ತಿ ತುಂಬಿತು. 

 

1980ರವರೆಗೂ ತೈವಾನ್ ಮತ್ತು ಚೀನಾ ಮುಖ ತಿರುಗಿಸಿಕೊಂಡೇ ಇದ್ದವು. 1980ರಲ್ಲಿ ‘ಒಂದು ಚೀನಾ, ಎರಡು ವ್ಯವಸ್ಥೆ’ ಎಂಬ ಪ್ರಸ್ತಾಪವಿಟ್ಟು, ‘ಹೆಚ್ಚಿನ ಸ್ವಾಯತ್ತತೆ ನೀಡುತ್ತೇವೆ ನಮ್ಮೊಂದಿಗೆ ಜೋಡಿಸಿಕೊಳ್ಳಿ’ ಎಂದು ಚೀನಾ ತೈವಾನನ್ನು ಆಹ್ವಾನಿಸಿತು. ತೈವಾನ್ ನಾಯಕರು ಒಪ್ಪಿಕೊಳ್ಳಲಿಲ್ಲ. ಆದರೆ ಉಭಯ ದೇಶಗಳ ನಡುವೆ ಜನಸಂಪರ್ಕ, ವ್ಯಾಪಾರ, ಬಂಡವಾಳ ಹೂಡಿಕೆಗೆ ಇದ್ದ ಅಡೆತಡೆಗಳು ಸರಿದವು. ಪರಿಣಾಮ ಸುಮಾರು 6000 ಕೋಟಿ ಡಾಲರ್ (ಅಂದಾಜು ₹ 4 ಲಕ್ಷ ಕೋಟಿ) ಮೊತ್ತದ ಹೂಡಿಕೆಯನ್ನು ಚೀನಾದಲ್ಲಿ ತೈವಾನ್ ತೊಡಗಿಸಿತು. ತೈವಾನ್ ಮೂಲದ ಉದ್ಯಮಿಗಳು, ಚೀನಾದಲ್ಲಿ ಕೈಗಾರಿಕೆಗಳನ್ನೂ ತೆರೆದರು. 

 

ಇಷ್ಟಾದರೂ ಚೀನಾ ಹಿಡಿತದಿಂದ ಹೊರಬಂದು, ಸ್ವತಂತ್ರ ರಾಷ್ಟ್ರವಾಗಿ ಜಗತ್ತಿನೆದುರು ಗುರುತಿಸಿಕೊಳ್ಳಬೇಕು ಎಂಬ ಒಳದನಿ ತೈವಾನಿನಲ್ಲಿ ಇದ್ದೇ ಇತ್ತು. 90ರ ದಶಕದಲ್ಲಿ ಅಮೆರಿಕದ ಒತ್ತಾಸೆಯಿಂದ ತೈವಾನ್ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಹೊರಳಿದ ಮೇಲೆ, ಒಳದನಿ ಏರುದನಿಯಾಗಿ ಬದಲಾಯಿತು. ಬೀಜಿಂಗ್ ಎಚ್ಚೆತ್ತುಕೊಂಡಿತು. ‘ಸ್ವತಂತ್ರ ತೈವಾನ್’ ಕೂಗನ್ನು ಮಟ್ಟಹಾಕಲು ನೋಡಿತು. 2005ರಲ್ಲಿ ಚೀನಾ ಸರ್ಕಾರ ವಿಯೋಜನಾ ತಡೆ ಕಾಯ್ದೆ ತಂದು, ಒಂದೊಮ್ಮೆ ತೈವಾನ್ ಚೀನಾದಿಂದ ಬೇರ್ಪಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸೇನಾಶಕ್ತಿ ಎದುರಿಸಬೇಕಾದೀತು ಎಂಬ ಬೆದರಿಕೆ ಒಡ್ಡಿತು. ‘ಸ್ವತಂತ್ರ ತೈವಾನ್’ಗೆ ಆಗ್ರಹಿಸಿದ್ದ ಹಲವರ ದನಿ ಮೆತ್ತಗಾಯಿತು. 2008ರಲ್ಲಿ ಆಡಳಿತ ಕೈ ಬದಲಾವಣೆ ಆಗಿ, ಮಾ ಯಿಂಗ್-ಜಿಯೋ ಅಧ್ಯಕ್ಷರಾದರು. ಚೀನಾದೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುವ ಕೆಲಸಕ್ಕೆ ಚಾಲನೆ ಕೊಟ್ಟರು. 

 

ಆದರೆ 2014ರಲ್ಲಿ ಚೀನಾದ ಆರ್ಥಿಕತೆ ಅಲುಗಿದಾಗ ತೈವಾನ್ ಬಡವಾಯಿತು. ‘ಸೂರ್ಯಕಾಂತಿ ಆಂದೋಲನ’ ರೂಪುಗೊಂಡಿತು. ಸುಮಾರು 5 ಲಕ್ಷ ವಿದ್ಯಾರ್ಥಿಗಳು ತೈವಾನ್ ಸಂಸತ್ತಿಗೆ ಮುತ್ತಿಗೆ ಹಾಕಿದರು. ಆಂದೋಲನದ ಮುಖ್ಯ ಆಗ್ರಹವಿದ್ದದ್ದು ಬೀಜಿಂಗ್ ಒತ್ತಡಕ್ಕೆ ಮಣಿದು, ತೈವಾನ್ ಸರ್ಕಾರ ವಾಣಿಜ್ಯಿಕ ಒಪ್ಪಂದಗಳನ್ನು ಚೀನಾದೊಂದಿಗೆ ಮಾಡಿಕೊಂಡಿದೆ, ಇದರಿಂದ ಚೀನಾ ಮೇಲಿನ ಅವಲಂಬನೆ ಮತ್ತಷ್ಟು ಹೆಚ್ಚುತ್ತದೆ. ಚೀನಾ ಮೇಲಿನ ಅಧಿಕ ಅವಲಂಬನೆಗಿಂತ, ಅಮೆರಿಕ, ಜಪಾನ್ ಮತ್ತು ಭಾರತದಂತಹ ಆರ್ಥಿಕ ಶಕ್ತಿಗಳೊಂದಿಗೆ ವಾಣಿಜ್ಯಿಕ ಸಂಬಂಧ ಹೊಂದಬೇಕು ಎಂಬ ವಾದ ಹುಟ್ಟಿತು. ಇದು ಈ ವರ್ಷ ಜನವರಿಯಲ್ಲಿ ನಡೆದ ಚುನಾವಣೆಯ ಮೇಲೆ ಪರಿಣಾಮ ಬೀರಿತು. ‘ಸ್ವತಂತ್ರ ತೈವಾನ್’ ಬೆಂಬಲಿಸುವ, ‘ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ’ಯ ತ್ಸಯ್ ಇಂಗ್-ವೆನ್ ಅಧ್ಯಕ್ಷರಾಗಿ ಚುನಾಯಿತರಾದರು. ತ್ಸಯ್ ಗೆಲುವಿಗೆ ಪ್ರತಿಕ್ರಿಯಿಸಿದ್ದ ಬೀಜಿಂಗ್, ‘ಸ್ವತಂತ್ರ ತೈವಾನ್ ಕೇವಲ ಭ್ರಮೆ’ ಎಂದಿತ್ತು. ಇದೀಗ ಆ ಭ್ರಮೆ ನಿಜವಾಗಿಬಿಡಬಹುದೇ ಎಂಬ ಅನುಮಾನ ಚೀನಾವನ್ನು ಕಾಡುತ್ತಿದೆ. ಹಾಗಾಗಿ ಟ್ರಂಪ್ ಮಾತಿಗೆ ಸಿಟ್ಟಾಗಿದೆ.

 

ಬಿಡಿ, ಹತ್ತು ನಿಮಿಷಗಳ ಒಂದು ಕರೆ ತಕ್ಷಣಕ್ಕೆ ಏನನ್ನೂ ಬದಲಿಸಲಾರದು. ಆದರೆ ಈ ಮೂಲಕ ಟ್ರಂಪ್ ಮತ್ತು ತ್ಸಯ್, ತಮ್ಮ ಸಮಾನ ಎದುರಾಳಿಗೆ ಸ್ಪಷ್ಟ ಸಂದೇಶವನ್ನಂತೂ ರವಾನಿಸಿದ್ದಾರೆ. ಚೀನಾ ಬಗ್ಗೆ ಟ್ರಂಪ್ ಅವರಿಗೆ ಪ್ರೀತಿ ಇಲ್ಲ ಎನ್ನುವುದು ಅವರ ಚುನಾವಣಾ ಪ್ರಚಾರದ ದಿನಗಳಲ್ಲೇ ಜಾಹೀರಾಗಿದೆ. ಹಾಗಾಗಿ ದಶಕಗಳ ಜಟಿಲ ಸಮಸ್ಯೆಗೆ ಪರಿಹಾರ ಹುಡುಕಲು ಇದು ಸಕಾಲ ಎಂದು ತೈವಾನ್ ಭಾವಿಸಿರಬಹುದು. ‘ನಾವು ಮಾನವ ಹಕ್ಕುಗಳ ಪರವಾಗಿದ್ದೇವೆ, ವಾಕ್ ಸ್ವಾತಂತ್ರ್ಯಹರಣ ಒಪ್ಪುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಂಬಲಿಸುತ್ತೇವೆ, ಸರ್ವಾಧಿಕಾರ ಕೂಡದು’ ಎಂದು ಹೇಳುವ ಅಮೆರಿಕಕ್ಕೆ ತೈವಾನನ್ನು ಬೆಂಬಲಿಸಲು ಬೇರಾವ ಕಾರಣವೂ ಬೇಕಿಲ್ಲ. ಚೀನೀ ಭಾಷಿಕರ ಏಕೈಕ ಪ್ರಜಾಪ್ರಭುತ್ವ ರಾಷ್ಟ್ರ ತೈವಾನ್. ತೈವಾನ್ ತನ್ನದೇ ಆದ ಸಂವಿಧಾನ, ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. 3 ಲಕ್ಷ ಸೈನಿಕರ ಶಸ್ತ್ರಸಜ್ಜಿತ ಸೇನೆಯನ್ನು ಹೊಂದಿದೆ. ಆರ್ಥಿಕವಾಗಿ ತನ್ನ ಕಾಲಮೇಲೆ ನಿಂತಿದೆ. ಸ್ವತಂತ್ರ ರಾಷ್ಟ್ರ ಎನಿಸಿಕೊಳ್ಳುವ ಎಲ್ಲ ಗುಣಲಕ್ಷಣಗಳು ಅದಕ್ಕಿದೆ.

 

ಇನ್ನು, ‘ಒಂದೇ ಚೀನಾ ಧೋರಣೆಗೆ ಅಂಟಿಕೊಂಡಿರಬೇಕಾದ ಅಗತ್ಯ ಅಮೆರಿಕಕ್ಕಿಲ್ಲ’ ಎಂದು ಟ್ರಂಪ್ ಹೇಳುತ್ತಿದ್ದಂತೇ, ಚೀನಾ ದೂರಗಾಮಿ ಕ್ಷಿಪಣಿಯ ಪರೀಕ್ಷೆ ನಡೆಸಿರುವುದು ಸುದ್ದಿಯಾಗಿದೆ. ಚೀನಾದ ಈ ವರ್ತನೆ ಹೊಸದೇನೂ ಅಲ್ಲ. 1996ರಲ್ಲಿ ತೈವಾನ್ ಪ್ರಜಾಪ್ರಭುತ್ವದ ಹಾದಿ ಹಿಡಿದಾಗ, ಚೀನಾ ಬೆದರಿಕೆಯ ತಂತ್ರವನ್ನೇ ಉಪಯೋಗಿಸಿತ್ತು. ಕ್ಷಿಪಣಿಗಳ ಮೂಲಕ ತನ್ನ ತೋಳ್ಬಲ ಪ್ರದರ್ಶಿಸಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ದಿಟ್ಟ ನಿಲುವು ತಳೆದು ಅಮೆರಿಕದ ಯುದ್ಧನೌಕೆಗಳನ್ನು ತೈವಾನ್‌ನತ್ತ ಕಳುಹಿಸಿದ್ದರು, ಬೀಜಿಂಗ್ ಸುಮ್ಮನಾಯಿತು. ಉಳಿದಂತೆ, ಚೀನಾ ವಿರುದ್ಧ ಟ್ರಂಪ್ ಮಾತನಾಡುತ್ತಿರುವುದಕ್ಕೆ ಮತ್ತೊಂದು ಕಾರಣವಿದೆ. ಉತ್ತರ ಕೊರಿಯಾ, ಅಮೆರಿಕದ ಮೇಲೆ ಕೆಂಡ ಉಗುಳುತ್ತಲೇ ಇದೆ. ಅಣ್ವಸ್ತ್ರ, ದೂರಗಾಮಿ ಕ್ಷಿಪಣಿಗಳನ್ನು ಪರೀಕ್ಷಿಸಿ, ಅಮೆರಿಕದ ಎದೆಬಡಿತ ಹೆಚ್ಚಿಸುತ್ತಿದೆ. ಇದಕ್ಕೆ ಚೀನಾದ ಕುಮ್ಮಕ್ಕು ಕಾರಣ ಎನ್ನುವ ವಾದವಿದೆ. ‘ಉತ್ತರ ಕೊರಿಯಾವನ್ನು ಚೀನಾ ಹತೋಟಿಯಲ್ಲಿಡಬೇಕು’ ಎಂದು ಟ್ರಂಪ್ ಹೇಳುತ್ತಲೇ ಬಂದಿದ್ದಾರೆ. ಇದೀಗ ತೈವಾನ್ ಸ್ವಾತಂತ್ರ್ಯಾಗ್ರಹದ ಕೂಗನ್ನು ಬಳಸಿಕೊಂಡು, ಚೀನಾವನ್ನು ಸುಮ್ಮನಾಗಿಸುವುದು ಟ್ರಂಪ್ ಲೆಕ್ಕಾಚಾರ ಇರಬಹುದು.

 

ಈ ಕೆಣಕುವ ಆಟ ಎಲ್ಲಿಗೆ ಮುಟ್ಟುತ್ತದೋ ಕಾದು ನೋಡಬೇಕು. ಒಂದಂತೂ ಸ್ಪಷ್ಟ, ಟ್ರಂಪ್ ಎಂಬ ರಾಜಕೀಯ ಅನನುಭವಿ, ಅಮೆರಿಕದ ಹಿಂದಿನ ಅಧ್ಯಕ್ಷರು ನಡೆದ ಹಾದಿಯಲ್ಲಿ ಸಾಗದೇ ಹೊಸ ದಿಕ್ಕಿನತ್ತ ಹೊರಟಿದ್ದಾರೆ. ಚೀನಾ ವಿಷಯದಲ್ಲಿ ನಿಕ್ಸನ್ ಸಿದ್ಧ ಸೂತ್ರಗಳನ್ನು ಮುರಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry