7

ಶಿಕ್ಷಣ ನೀತಿಯ ಕರಡು ಶಿಫಾರಸು:ಆದ್ಯತೆಗಳ ಅನುಪಸ್ಥಿತಿ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ಕಳೆದ ತಿಂಗಳ ಮೊದಲ ವಾರದಲ್ಲಿ (ನವೆಂಬರ್ 5ರಂದು) ಕರ್ನಾಟಕ ಜ್ಞಾನ ಆಯೋಗದ ವಿಶೇಷ ಕಾರ್ಯಪಡೆಯು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. ಈ ವಿಶೇಷ ಕಾರ್ಯಪಡೆಯನ್ನು ಆರ್.ವಿ.ದೇಶಪಾಂಡೆಯವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ, ಪ್ರೊ. ಕೆ.ಎಸ್.ರಂಗಪ್ಪ ಮತ್ತು ಮೋಹನದಾಸ್ ಪೈ ಇವರ ನೇತೃತ್ವದಲ್ಲಿ ರಚಿಸಲಾಗಿತ್ತು.ಈ ಕಾರ್ಯಪಡೆಯ ಉದ್ದೇಶವೆಂದರೆ ಮುಂದಿನ ದಶಕಗಳಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯದ ಶಿಕ್ಷಣ ನೀತಿ ಹೇಗಿರಬೇಕು ಎನ್ನುವ ವಿಷಯದ ಕುರಿತಾಗಿ ಕೂಲಂಕಷವಾಗಿ ಅಧ್ಯಯನ ಮಾಡಿ, ಶಿಫಾರಸುಗಳನ್ನು ಮಾಡುವುದು. ಮೇ 2015ರಲ್ಲಿ ನಿಯೋಜಿತವಾದ ಈ ಕಾರ್ಯಪಡೆಯು ಒಂದು ವರ್ಷದ ಸಿದ್ಧತೆಯ ನಂತರ ಸುಮಾರು 200  ಶಿಫಾರಸುಗಳನ್ನು ಮಾಡಿದೆ.ಕಾರ್ಯಪಡೆಯ ವರದಿಯು ರಾಜ್ಯದ ಇಬ್ಬರೂ ಶಿಕ್ಷಣ ಸಚಿವರಿಗೆ ಸಲ್ಲಿಕೆಯಾದ ಸಂದರ್ಭದಲ್ಲಿ ಕೆಲವು ಪತ್ರಿಕಾ ವರದಿಗಳು ಬಂದವು.  ಕಾರ್ಯಪಡೆಯು ಮಾಡಿದ ಮುಖ್ಯ ಶಿಫಾರಸುಗಳನ್ನು ಕುರಿತಂತೆ ಈ ವರದಿಗಳು ಇದ್ದವು.  ಉದಾಹರಣೆಗೆ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಕಾರ್ಯಪಡೆಯು ಆರ್.ಟಿ.ಇ. ನೀತಿಯನ್ನು 12ನೆಯ ತರಗತಿಯವರೆಗೆ ವಿಸ್ತರಿಸುವಂತೆ ಇಲ್ಲವೆ 1ರಿಂದ 4ನೆಯ ತರಗತಿಯವರೆಗೆ ಕಡ್ಡಾಯ ಕನ್ನಡ ಮಾಧ್ಯಮವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ್ದು ಹೆಚ್ಚು ಪ್ರಚಾರ ಪಡೆಯಿತು.ಅದೇ ರೀತಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಜಾನಪದ ಅಥವಾ ಸಂಸ್ಕೃತಗಳಂತಹ ಏಕವಿಷಯ ವಿಶ್ವವಿದ್ಯಾಲಯಗಳನ್ನು ರದ್ದು ಮಾಡಬೇಕೆಂದು ಕಾರ್ಯಪಡೆಯು ಆಗ್ರಹಿಸಿದೆ. ಎಲ್ಲ ವಿಶ್ವವಿದ್ಯಾಲಯಗಳೂ ತಮಗೆ ಸಾಮರ್ಥ್ಯವಿದ್ದರೆ, ಸಂಪನ್ಮೂಲಗಳಿದ್ದರೆ ಎಲ್ಲ ಬಗೆಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಬೇಕು ಎನ್ನುವುದು ಈ ನಿಲುವಿನ ಹಿಂದಿರುವ ಆಶಯ.ಆದರೆ ಮೇಲೆ ಹೇಳಿದಂತೆ ಸುಮಾರು 200 ಶಿಫಾರಸುಗಳಿರುವ ಈ ವರದಿಯನ್ನು ಸಮಗ್ರವಾಗಿ ವಿಮರ್ಶಿಸುವ ಕೆಲಸ ಆಗಲಿಲ್ಲ. ಹಾಗಾಗಿ ಈ ವಿಶೇಷ ಕಾರ್ಯಪಡೆಯ ರಚನೆ, ಕಾರ್ಯವೈಖರಿ ಮತ್ತು ಸಂಪೂರ್ಣ ಕರಡು ವರದಿಯತ್ತ ಮತ್ತೊಮ್ಮೆ ನಾವು ಗಮನ ಹರಿಸಬೇಕೆನ್ನಿಸುತ್ತಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹೆಗಳನ್ನೇ ಮುಖ್ಯವಾಗಿ ಗಮನದಲ್ಲಿರಿಸಿಕೊಂಡು, ಕೆಲವು ಟಿಪ್ಪಣಿಗಳನ್ನು ಓದುಗರೊಡನೆ ಹಂಚಿಕೊಳ್ಳಬಯಸುತ್ತೇನೆ. ಕಾರ್ಯಪಡೆಯ ಸಂಯೋಜನೆಯನ್ನು ನೋಡಿದಾಗ ಮೊದಲು ಗಮನ ಸೆಳೆಯುವುದು ಈಗ ಸಕ್ರಿಯವಾಗಿ ಬೋಧನೆ ಹಾಗೂ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವವರ ಅನುಪಸ್ಥಿತಿ. ಇದು ಉನ್ನತ ಶಿಕ್ಷಣ ಕ್ಷೇತ್ರದ ವಿಚಾರದಲ್ಲಿ ಹೆಚ್ಚು ಸತ್ಯ. ಕಾರ್ಯಪಡೆಯ ನೇತಾರರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಿದ್ದರು. ಜೊತೆಗೆ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಅಥವಾ ಅವರ ಪ್ರತಿನಿಧಿಗಳು ಸಹ ಈ ಕಾರ್ಯಪಡೆಯ ಅಂಗವಾಗಿದ್ದರು. ಇದೆಲ್ಲವೂ ನಿಜವೆ.ಆದರೆ ಈಗ ಆಡಳಿತದಲ್ಲಿ ತೊಡಗಿಸಿಕೊಂಡಿರುವವರಿಗಿಂತಲೂ ವಿವಿಧ ವಿಷಯಗಳನ್ನು ಇಂದು ಬೋಧಿಸುತ್ತಿರುವ, ತಮ್ಮ ವೃತ್ತಿಜೀವನದ ಮಧ್ಯದಲ್ಲಿರುವ ಬೋಧಕರ ಅನುಭವ ಬಹುಶಃ ಹೆಚ್ಚು ಮೌಲಿಕವಾಗಿರುತ್ತಿತ್ತೇನೊ ಎನ್ನುವ ಅನುಮಾನ ಶಿಫಾರಸುಗಳನ್ನು ಅವಲೋಕಿಸುವಾಗ ನಮ್ಮನ್ನು ಕಾಡುತ್ತದೆ. ಈ ಕಾರ್ಯಪಡೆಯ ವಿವಿಧ ಸಮಿತಿಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕೇವಲ ಇಬ್ಬರು ಪ್ರಾಧ್ಯಾಪಕರ ಹೆಸರು ಕಂಡುಬರುತ್ತದೆ.ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈಗ ಸೇವೆ ಸಲ್ಲಿಸುತ್ತಿರುವ ಐವರು ಶಿಕ್ಷಕರು ಹಾಗೂ ಒಬ್ಬರು ನಿವೃತ್ತ ಶಿಕ್ಷಕರು ಇದ್ದರು. ಇದಕ್ಕೆ ಪ್ರತಿಯಾಗಿ ಖಾಸಗಿ ಮತ್ತು ಸ್ವಯಂಸೇವಾ ಕ್ಷೇತ್ರದ ಸಂಸ್ಥೆಗಳಿಂದ ಇಪ್ಪತ್ತಕ್ಕೂ ಹೆಚ್ಚು ತಜ್ಞರು ಕರಡು ರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿಯೇ ಈ ವರದಿಯನ್ನು ವೃತ್ತಿಪರ ಸಲಹೆಗಾರರು ಮತ್ತು ಸ್ವಯಂಸೇವಾ ಸಂಸ್ಥೆಯ ಧುರೀಣರು ಬರೆದಂತೆ ಹಲವೆಡೆ ಕಾಣುತ್ತದೆ.ಈ ಹಿನ್ನೆಲೆಯಲ್ಲಿ ವರದಿಯನ್ನು ಅವಲೋಕಿಸಿದಾಗ ನನಗೆ ಎರಡು ಅಂಶಗಳು ಸ್ಪಷ್ಟವಾದವು. ಮೊದಲನೆಯದಾಗಿ, ಜಾಗತಿಕವಾಗಿ ಒಳ್ಳೆಯ ಅಭ್ಯಾಸಗಳು ಎಂದು ಈಗಾಗಲೆ ಮಾನ್ಯತೆ ಪಡೆದಿರುವ ಹಾಗೂ ಸಾಮಾನ್ಯ ತಿಳಿವಳಿಕೆಗೆ ಗೋಚರಿಸುವ ಎಲ್ಲ ಅಂಶಗಳನ್ನೂ ಇಲ್ಲಿ ಶಿಫಾರಸುಗಳಾಗಿ ನೀಡಲಾಗಿದೆ. ಇದಕ್ಕೆ ಉದಾಹರಣೆಯಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಈ ಕೆಳಗಿನ ಎರಡು ಸಲಹೆಗಳನ್ನು ಪರಿಗಣಿಸಿ. ಒಂದನೆಯದಾಗಿ, ಬೋಧಕ ವರ್ಗದವರ ನೇಮಕಾತಿ ಪ್ರಕ್ರಿಯೆಯನ್ನು ಸುಧಾರಿಸಲು ಪಶ್ಚಿಮದ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ‘ಟೆನ್ಯೂರ್’ ಪದ್ಧತಿಯನ್ನು ಅನುಸರಿಸಬೇಕೆಂದು ಕಾರ್ಯಪಡೆಯು ಸೂಚಿಸುತ್ತದೆ.ಇದರ ಅನ್ವಯ ಅರ್ಹತೆಯಿರುವ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡುವುದಲ್ಲದೆ, ಅವರ ಕೆಲಸದ ಗುಣಮಟ್ಟವನ್ನು ಐದು ವರ್ಷಗಳ ಕಾಲ ಅವಲೋಕಿಸಬೇಕು. ಯಾರು ಉತ್ತಮ ಅಧ್ಯಾಪಕ- ಸಂಶೋಧಕ ಎಂದು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುತ್ತಾರೊ ಅವರು ಮಾತ್ರ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ. ಇಂತಹ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗದೊಡನೆ ಚರ್ಚಿಸಬೇಕೆಂದು ಕಾರ್ಯಪಡೆಯು ಶಿಫಾರಸು ಮಾಡುತ್ತದೆ.ಇದೇ ರೀತಿಯ ಎರಡನೆಯ ಸಲಹೆಯನ್ನು ಗಮನಿಸಿ. ನಮ್ಮ ಅಧ್ಯಾಪಕರ ಗುಣಮಟ್ಟ ಚೆನ್ನಾಗಿಲ್ಲವೆ? ಎಲ್ಲ ವಿಶ್ವವಿದ್ಯಾಲಯಗಳ ಶೇ 1ರಷ್ಟು ಬೋಧಕ ವರ್ಗದವರನ್ನು ತರಬೇತಿ ಮತ್ತು ಹೊಸ ಅನುಭವಗಳನ್ನು ಪಡೆಯುವ ಸಲುವಾಗಿ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಬೇಕೆಂದು ಕಾರ್ಯಪಡೆಯು ಹೇಳುತ್ತದೆ. ಹೀಗೆ ಮಾಡುವುದರಿಂದ ಎಲ್ಲ ಬೋಧಕರ ಗುಣಮಟ್ಟ ಸುಧಾರಣೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಐಟಿ ಅಥವಾ ಭಾರತೀಯ ವಿಜ್ಞಾನ ಸಂಸ್ಥೆಗಳಂತಹ ದೇಶದೊಳಗಿನ ಪ್ರತಿಷ್ಠಿತ ಸಂಸ್ಥೆಗಳಿಗೂ ಕಳುಹಿಸಬೇಕೆನ್ನುವ ಶಿಫಾರಸು ಸಹ ಇಲ್ಲಿದೆ. ಹೀಗೆ ತರಬೇತಿ ಹಾಗೂ ಹೊಸ ಅನುಭವಗಳನ್ನು ಪಡೆದ ಅಧ್ಯಾಪಕರು ತಾವು ಕಲಿತದ್ದನ್ನು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುತ್ತಾರೆ ಎನ್ನುವುದು.ಇವುಗಳು ನನಗೂ ಒಪ್ಪಿಗೆಯಾಗುವ ಒಳ್ಳೆಯ ಸಲಹೆಗಳೆ. ಆದರೆ ಆನ್‌ಲೈನ್ ವಿಶ್ವವಿದ್ಯಾಲಯಗಳಿಂದ ಸಾಂಪ್ರದಾಯಿಕ ಸಂಸ್ಥೆಗಳವರೆಗೆ, ತಾಂತ್ರಿಕ ಶಿಕ್ಷಣದಿಂದ ಲಿಬರಲ್ ಆರ್ಟ್ಸ್ ಶಿಕ್ಷಣದವರೆಗೆ ಇಂತಹ ಸಲಹೆಗಳು ಎಷ್ಟಿವೆಯೆಂದರೆ, ಇವುಗಳಲ್ಲಿ ಆದ್ಯತೆ ಯಾವುದಕ್ಕೆ ನೀಡಬೇಕು ಎನ್ನುವುದನ್ನು ಕಾರ್ಯಪಡೆಯು ಸ್ಪಷ್ಟಪಡಿಸುತ್ತಿಲ್ಲ. ಎಲ್ಲ ವರದಿಗಳೂ ಹೇಳುವಂತೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಸಂಶೋಧಕರಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವಂತೆಯೂ, ಉದ್ಯಮಗಳೊಡನೆ ಸಂಪರ್ಕವನ್ನು ತೀವ್ರಗೊಳಿಸುವಂತೆ ಈ ವರದಿಯು ಸೂಚಿಸುತ್ತದೆ.ಆದರೆ ಈಗಿರುವ ನಮ್ಮ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ಪುನಾರಚನೆ ಮಾಡಬಹುದು ಎನ್ನುವ ಮಾರ್ಗಸೂಚಿ ಇಲ್ಲಿ ಕಾಣಿಸುತ್ತಿಲ್ಲ. ಉದಾಹರಣೆಗೆ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇಂದು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಇರುವ ಪ್ರಾದೇಶಿಕ ಮಿತಿಗಳನ್ನು ತೆಗೆಯುವ ರ್‍ಯಾಡಿಕಲ್ ಸಲಹೆಯನ್ನು ಕಾರ್ಯಪಡೆಯು ನೀಡುತ್ತದೆ. ಅಂದರೆ ರಾಜ್ಯದ ಯಾವ ವಿದ್ಯಾರ್ಥಿಯಾದರೂ ತನ್ನ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆಯಬಹುದು. ಇದು ಭವಿಷ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಲ್ಲಂತಹ ಹೆಜ್ಜೆ. ಆದರೆ 200  ಶಿಫಾರಸುಗಳ ನಡುವೆ ಇಂತಹ ಸಲಹೆಯೊಂದು ಮರೆಯಾಗುತ್ತದೆ.ಜೊತೆಗೆ ಈ ಕರಡು ಶಿಫಾರಸುಗಳ ವಿಮರ್ಶಕರು- ಟೀಕಾಕಾರರು ಏನು ಹೇಳಿದರೂ ಆ ಅಂಶ ವರದಿಯ ಒಂದು ಮೂಲೆಯಲ್ಲಿದೆ ಎಂದು ಹೇಳಲು ಸಾಧ್ಯವಾಗುವಂತೆ ಈ ವರದಿ ರಚನೆಯಾಗಿದೆ. ಆದುದರಿಂದ ಒಂದೆಡೆ ಆದ್ಯತೆಗಳ ಅನುಪಸ್ಥಿತಿ ಕಂಡುಬಂದರೆ ಮತ್ತೊಂದೆಡೆ ಅನುಷ್ಠಾನ ಮಾಡುವಾಗ ಎದುರಾಗಬಹುದಾದ ಪ್ರಾಯೋಗಿಕ ಸಮಸ್ಯೆಗಳು ಈ ವರದಿಯಲ್ಲಿ ಎದ್ದುಕಾಣುತ್ತವೆ. ಇದು ನಾನು ಗುರುತಿಸಬಯಸುವ ಎರಡನೆಯ ಅಂಶ. ಹಾಗಾಗಿಯೆ ಕರ್ನಾಟಕ ಜ್ಞಾನ ಆಯೋಗದ ವಿಶೇಷ ಕಾರ್ಯಪಡೆಯು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರವು ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿಯುವಲ್ಲಿ ಯಶಸ್ವಿಯಾಗಿದೆಯೆ ಎನ್ನುವ ಸಂಶಯ ಮೂಡುತ್ತದೆ.ಈ ಕಾರ್ಯಪಡೆಯ ನೇಮಕಾತಿ ಆದೇಶವನ್ನು ಗಮನಿಸಿದರೆ, ಸರ್ಕಾರವೂ  ವಾಡಿಕೆಯ ನಿತ್ಯಕ್ರಮದಂತೆ ಈ ಸಮಿತಿಯನ್ನು ನೇಮಿಸಿದಂತೆ ತೋರುತ್ತದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಗಂಭೀರ ಬಿಕ್ಕಟ್ಟಿರಬಹುದು, ಇದಕ್ಕೆ ನಾವು ತಕ್ಷಣವೇ ಪರಿಹಾರಗಳನ್ನು ಕಂಡುಕೊಳ್ಳಬೇಕು ಎನ್ನುವ ಆತಂಕದಿಂದ ಸರ್ಕಾರವು ಈ ಕಾರ್ಯಪಡೆಯನ್ನು ನೇಮಿಸಲಿಲ್ಲ. ಬದಲಿಗೆ, ಕಾರ್ಯಪಡೆಯ ನೇಮಕಾತಿ ಆದೇಶದಲ್ಲಿ ಸರ್ಕಾರವು ಕರ್ನಾಟಕವನ್ನು ಶಿಕ್ಷಣ ಕ್ಷೇತ್ರದಲ್ಲಿ ನೇತಾರ ರಾಜ್ಯವೆಂದೇ ಗುರುತಿಸುತ್ತಿದೆ.ಹಾಗಾಗಿ ಕಾರ್ಯಪಡೆಗೆ ಅದರಿಂದ ಸಿಗುತ್ತಿರುವ ಸೂಚನೆಯೆಂದರೆ ಭವಿಷ್ಯದ ಆರ್ಥಿಕ ವ್ಯವಸ್ಥೆಗೆ ನಮ್ಮ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸಲು ಅಗತ್ಯವಿರುವ ಬದಲಾವಣೆಗಳನ್ನು ಸೂಚಿಸುವುದು. ಇಲ್ಲಿ ಉದ್ಯೋಗಗಳಿಗೆ, ಇಂದಿನ ಔದ್ಯಮಿಕ ಅಗತ್ಯಗಳಿಗೆ ಸಾಟಿಯಾಗುವ ಕೌಶಲಗಳನ್ನು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಒದಗಿಸಬೇಕು ಎನ್ನುವ ನಿರೀಕ್ಷೆ ಮಾತ್ರ ಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತಿದೆ. ನಮ್ಮ ಇತರ ಬಿಕ್ಕಟ್ಟು-ಸಮಸ್ಯೆಗಳು ಮರೆಯಾಗುತ್ತಿವೆ.ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ನೈತಿಕ, ಶೈಕ್ಷಣಿಕ ಮತ್ತು ಬೌದ್ಧಿಕ ಬಿಕ್ಕಟ್ಟುಗಳ ಬಗ್ಗೆ ಈ ಅಂಕಣದಲ್ಲಿ ಹಲವಾರು ಬಾರಿ ಸುದೀರ್ಘವಾಗಿ ಬರೆದಿದ್ದೇನೆ. ಆ ಆಯಾಮಗಳ ಚರ್ಚೆಯನ್ನು ಪುನಃ ಇಲ್ಲಿ ಮಾಡಬೇಕಿಲ್ಲ. ಆದರೆ ಕರ್ನಾಟಕ ಜ್ಞಾನ ಆಯೋಗದ ಕಾರ್ಯಪಡೆಯ ಶಿಫಾರಸುಗಳ ಚರ್ಚೆಯನ್ನು ಈ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಮಾಡಿದರೆ ಉಚಿತವೆನಿಸುತ್ತದೆ. ಜೊತೆಗೆ ಅವುಗಳ ಅನುಷ್ಠಾನ ಕೂಡ ಸುಲಭವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry