ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ-ಭಾವಗುಚ್ಛ ಸೋನಿಕಾ ನೃತ್ಯ ವೈಶಿಷ್ಟ್ಯ

ನಾದನೃತ್ಯ
Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚಿಗೆ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಸೋನಿಕಾ ನಾಗರಾಜ್ ಅವರ ರಂಗಪ್ರವೇಶ ನಡೆಯಿತು. ‘ನಟನಂ’ ನೃತ್ಯಸಂಸ್ಥೆಯ ಕಲಾನಿರ್ದೇಶಕಿ, ದಂತ ವೈದ್ಯೆ ಡಾ. ರಕ್ಷಾ ಕಾರ್ತಿಕ್ ಅವರ ಶಿಷ್ಯೆ ಇವರು.

‘ನವಗ್ರಹ ಸ್ತೋತ್ರಂ ‘(ರಾಗಮಾಲಿಕೆ) ಶ್ರೀ ವ್ಯಾಸಮಹರ್ಷಿ ವಿರಚಿತ ಕೃತಿಯ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಮುಂದಿನ ಪ್ರಸ್ತುತಿಯಲ್ಲಿ ‘ವಿವಿಧಕು ವೊಕ್ಕೆಡಾ ಸಂಗೀತ’ ವೆಂಬ ಗಾಯನ ಮಾರ್ದನಿಗೆ ಅನುಗುಣವಾಗಿ ಭಕ್ತಿತಾದಾತ್ಮ್ಯದಿಂದ ಅಭಿನಯಿಸಿದರು.

‘ಹರಿ ನೀನೇ ಗತಿ’ ಎಂಬ ಪುರಂದರದಾಸರ ಕೃತಿಯನ್ನು ಅಭಿನಯಿಸಿ, ಭಕ್ತಿಪಯಣದ ಅನುಭೂತಿ ನೀಡಿದರು. ಭಸ್ಮಾಸುರನಿಂದ ಶಿವನನ್ನು ಸಂರಕ್ಷಿಸಲು ಹರಿಯ ಮೋಹಿನಿಯ ರೂಪ, ನೃತ್ಯ-ಲಾವಣ್ಯ ಇತ್ಯಾದಿ ಸಂಚಾರಿಭಾಗದಲ್ಲಿ ಗುರು ರಕ್ಷಾ ಅವರ ನೃತ್ಯ ಸಂಯೋಜನೆ ವಿಶಿಷ್ಟವಾಗಿತ್ತು. ಹಯಗ್ರೀವನಾಗಿ ವೇದಗಳ ಸಂರಕ್ಷಣೆ, ದ್ವಾಪರದಲ್ಲಿ ಕೃಷ್ಣನಾಗಿ, ಕಲಿಯುಗದಲ್ಲಿ ಕಲ್ಕಿಯಾಗಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಯ ಕಾರ್ಯ ನಿರ್ವಹಿಸಲು ಹರಿಸರ್ವೋತ್ತಮ ನೀನೊಬ್ಬನೇ ಗತಿ ಎಂಬ ಭಾವವನ್ನು ಸೋನಿಕಾ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದರು. ಅವರ ನೃತ್ಯ ಪ್ರಸ್ತುತಿಯಲ್ಲಿ ಆವರಿಗಿದ್ದ ಲಯ ಹಾಗೂ ತಾಳಜ್ಞಾನ ಸುವ್ಯಕ್ತವಾಯಿತು.

ಮುಂದೆ ಬೃಂದಾವನ ಸಾರಂಗ ರಾಗದ ಮುತ್ತುಸ್ವಾಮಿ ದೀಕ್ಷಿತರ ‘ಶ್ರೀರಂಗಪುರವಿಹಾರ’ದಲ್ಲಿ ಕಲಾವಿದೆ ಸೌಮ್ಯಮೂರ್ತಿ ಶ್ರೀ ರಾಮಚಂದ್ರನ ಸಾದ್ಯಂತ ವರ್ಣನೆಯನ್ನು ಸುಂದರ ಆಂಗಿಕಾಭಿನಯದ ಮೂಲಕ ಕಣ್ಮುಂದೆ ತಂದು ನಿಲ್ಲಿಸಿದರು. ಅಭಿನಯ ಬೇಡುವ ಸಂಚಾರಿಭಾಗದಲ್ಲಿ ಭಕ್ತಿಸೆಲೆ ಹೊರಹೊಮ್ಮಿತು.
ರಂಗಪ್ರವೇಶದ ಈ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ ವಿಶಿಷ್ಟ ರಂಗಸಜ್ಜಿಕೆ, ಕೃತಿಗಳ ಭಾವಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿನ ನೆರಳು ಬೆಳಕಿನ ಚಿತ್ರಗಳು, ಮತ್ತು ಭಾವ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಿದ್ದ  ಹಿನ್ನೆಲೆಯ ವರ್ಣಮೇಳ ಆಕರ್ಷಕವಾಗಿತ್ತು. ಇವುಗಳು ನಾಟ್ಯಪ್ರದರ್ಶನದ ಒಂದು ಸೃಜನಾತ್ಮಕ ಅಂಗವಾಗಿ ಕೆಲಸ ಮಾಡಿತ್ತು.

ಭೈರವಿ ರಾಗ, ಮಿಶ್ರಛಾಪು ತಾಳದ, ವಾಗ್ಗೇಯಕಾರ ಶಾಮಾಶಾಸ್ತ್ರಿಗಳ ‘ಅಂಬಾ ಕಾಮಾಕ್ಷಿ’ ಎಂಬ ಕೃತಿಯಲ್ಲಿ ದಕ್ಷಯಜ್ಞದ ಕಥಾಭಾಗವನ್ನು ಸುಂದರ ಸಂಯೋಜನೆಗಳಿಂದ ಅಣಿಗೊಳಿಸಲಾಗಿತ್ತು. ಜಗನ್ನಾಥದಾಸರ ‘ರೋಗ ಹರ ಕೃಪಾ ಸಾಗರ’ ಮಂತ್ರಾಲಯ ಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆಯನ್ನು ಮನಸಾರೆ ಪಾಡುವ, ಆಶೀರ್ವಾದ ಬೇಡುವ ನರ್ತನ, ಭಾವುಕತೆಯಿಂದ ಕೂಡಿತ್ತು.

ಮುಂದೆ ಆಭೋಗಿ ರಾಗದ ಚಿದಂಬರಂನ ನಟರಾಜ ಸ್ತುತಿಯಲ್ಲಿ ಮಾರ್ಕಂಡೆಯನನ್ನು ಯಮಪಾಶದಿಂದ ಕಾಪಾಡಿದ ಸಂಚಾರಿಯಲ್ಲಿನ ಅಭಿನಯ ಸೊಗಸಾಗಿತ್ತು. ಜತಿಗಳು, ಆಕಾಶಚಾರಿಯ ಬಳಕೆ ಸೂಕ್ತವಾಗಿತ್ತು. ಪುರಂದರದಾಸರ ‘ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ’ ಕೃತಿಯ ಅಭಿನಯದಲ್ಲಿ ಭಕ್ತಿಭಾವ ಮಡುಗಟ್ಟಿತ್ತು. ಅಂತ್ಯದಲ್ಲಿ ಸಾರ್ಥಕತೆಯ ಸಂಭ್ರಮದ ಅಭಿವ್ಯಕ್ತಿಯಾಗಿ ‘ತಿಲ್ಲಾನ’ ಸಂಕೀರ್ಣ ಜತಿಗಳು, ವೇಗದ ಪದಗತಿಯ ನೃತ್ತ-ನೃತ್ಯಗಳ ಸಮ್ಮಿಲನವಾಗಿ, ಮೋಹಕಭಂಗಿಗಳ ಮಂಗಳ ಪ್ರದರ್ಶನದೊಂದಿಗೆ ಸಂಪನ್ನವಾಯಿತು.

ವಾದ್ಯ ಸಹಕಾರ- ಗಾಯನ ಬಾಲಸುಬ್ರಮಣ್ಯ ಶರ್ಮ, ನಟುವಾಂಗ-ಡಾ.ರಕ್ಷಾ ಕಾರ್ತಿಕ್, ಕೊಳಲು- ಜಯರಾಂ ಕಿಕ್ಕೇರಿ, ಮೃದಂಗ-ಜನಾರ್ಧನ್, ವೀಣೆ-ಗೋಪಾಲ ಮತ್ತು  ರಿದಂಪ್ಯಾಡ್- ಪ್ರಸನ್ನ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT