ಇವರ ಮನೆಯಲ್ಲಿದೆ ತಲೆಮಾರುಗಳ ಕಥೆ

7

ಇವರ ಮನೆಯಲ್ಲಿದೆ ತಲೆಮಾರುಗಳ ಕಥೆ

Published:
Updated:
ಇವರ ಮನೆಯಲ್ಲಿದೆ ತಲೆಮಾರುಗಳ ಕಥೆ

ಹವ್ಯಾಸಗಳಿಗೆ ಹಲವು ಕವಲುಗಳಿರುತ್ತವೆ. ಬಾಲ್ಯದಲ್ಲಿ ಮನೆಯಲ್ಲಿ ಬೇಡವೆಂದು ಬಿಸಾಡಿದ್ದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡವರು ರಿಗ್ರೆಟ್‌ ಅಯ್ಯರ್‌.ಇವರ ಇದೇ ಗುಣ ಮುಂದೆ  ಕೌಟುಂಬಿಕ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲು ಕಾರಣವಾಯಿತು. ‘ರಿಗ್ರೆಟ್‌ ಅಯ್ಯರ್‌ ಫ್ಯಾಮಿಲಿ ಮ್ಯೂಸಿಯಂ’ ಎಂಬುದು ಸಂಗ್ರಹಾಲಯಕ್ಕೆ ಇರಿಸಿರುವ ಹೆಸರು.ತ್ಯಾಗರಾಜನಗರ ನಿವಾಸಿಯಾಗಿರುವ ಅಯ್ಯರ್ ಅವರಿಗೆ ತಮ್ಮ ಪೂರ್ವಿಕರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸುವುದರ ಜೊತೆಗೆ  ಅದರ ಕುರಿತ ಮಾಹಿತಿಯನ್ನು ಕಲೆ ಹಾಕುವುದು ಹವ್ಯಾಸ.ದಿನದ ಬಹುಪಾಲು ಸಮಯವನ್ನು ಹವ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಎಂಟು ತಲೆಮಾರಿನವರು ಬೆಳೆದು ಬಂದ ಪಯಣದ ಕುರಿತು ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.ಮುಳಬಾಗಲು ತಾಲ್ಲೂಕು ಕೊತ್ತಮಂಗಲ ಗ್ರಾಮ ಅಯ್ಯರ್ ಕುಟುಂಬದ ಮೂಲ. ತಮ್ಮ ಕುಟುಂಬದವರು ಬಳಸುತ್ತಿದ್ದ ವಸ್ತುಗಳನ್ನೆಲ್ಲ ತಂದು ಬೆಂಗಳೂರಿನ ತಮ್ಮ ಮನೆಯಲ್ಲಿ ಸ್ಥಳ ಒದಗಿಸಿದ್ದಾರೆ.‘ನನ್ನ ವಂಶದ ಮೂಲವನ್ನು ಹುಡುಕುವುದರಲ್ಲಿ ನನಗೆ ಆಸಕ್ತಿಯಿದೆ.  ಮಾಹಿತಿ ಸಂಗ್ರಹಿಸಲು ಸಾಕಷ್ಟು ಶ್ರಮ ವಹಿಸಿದ್ದೇನೆ. ತಂದೆ ಮತ್ತು ಅಜ್ಜನ ಡೈರಿಯಲ್ಲಿ ದೊರಕಿದ ಮಾಹಿತಿಯಿಂದಾಗಿ ಕುಟುಂಬದ ಬಗ್ಗೆ ತಿಳಿಯುವುದು ಸುಲಭವಾಯಿತು’ ಎನ್ನುತ್ತಾರೆ ಅವರು.ಮ್ಯೂಸಿಯಂ ಒಳಗೆ ಪ್ರವೇಶಿಸಿದರೆ ಪಾಕಿಸ್ತಾನದಿಂದ ತಂದ ತೊಟ್ಟಿಲು, ತಾಳೆಗರಿ ಬರಹಗಳು,ಡೈರಿಗಳು, ವಿವಿಧ ಸಂಗೀತ ಉಪಕರಣ, ಪಾತ್ರೆಗಳು, ಸುಮಾರು 150 ವರ್ಷಗಳ ಹಳೆಯ ಛಾಯಾಚಿತ್ರಗಳು, 1900ನೇ ಇಸವಿಯ ಪೂಜಾ ಸಾಮಗ್ರಿಗಳು, ಹಳೆಯ ಹೊಲಿಗೆ ಯಂತ್ರ ಗಮನ ಸೆಳೆಯುತ್ತವೆ.ಹಳೆಯ ಕಾಲದ ಕಡಾಯಿ, ಈಳಿಗೆ ಮಣೆ, ಗಾಜಿನ ಭರಣಿಗಳು, ಅಲಂಕಾರಿಕ ದೀಪಗಳು, ಪೂಜಾ ಸಾಮಗ್ರಿಗಳು, ಕ್ಯಾಮೆರಾ, ಒಡವೆಗಳನ್ನು ಇರಿಸುವ ಪೆಟ್ಟಿಗಳ ಜೊತೆಗೆ ಪ್ರಾಚೀನ ಪಂಚಾಂಗಗಳು, ಲೇಖನಿಗಳು, ಬಿದಿರು ಬುಟ್ಟಿ, ಪಿಟೀಲು, ಊಟದ ಕ್ಯಾರಿಯರ್... ಹೀಗೆ ಇವರ ಸಂಗ್ರಹಗಳ ಪಟ್ಟಿ ಬೆಳೆಯುತ್ತದೆ. ಪುರಾತತ್ವ ಮೌಲ್ಯದ ವಸ್ತುಗಳ ಸಂಗ್ರಹದ ಜೊತೆಗೆ ಅವುಗಳ ರಕ್ಷಣೆಗೂ ಪ್ರಾಮುಖ್ಯತೆ ನೀಡಿದ್ದಾರೆ.‘ಕುಟುಂಬದ ಪರಂಪರೆಯನ್ನು ರಕ್ಷಿಸುವ ಜೊತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಉದ್ದೇಶ ನನಗಿದೆ. ನನ್ನ ಈ ಹವ್ಯಾಸಕ್ಕೆ ಪತ್ನಿ ಮತ್ತು ಮಕ್ಕಳು ನೆರವಾಗಿದ್ದಾರೆ’ ಎನ್ನುವುದು ಅವರ ಹೆಮ್ಮೆಯ ನುಡಿ. ಇವರ ಸಂಗ್ರಹಗಳಿಗೆ 2011ರಲ್ಲಿ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌’ ಮನ್ನಣೆಯೂ ದೊರಕಿದೆ.

ಅಯ್ಯರ್ ಅವರ ಸಂಪರ್ಕ ಸಂಖ್ಯೆ– 9448544997

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry