7

ನೋಟು ರದ್ದತಿ: ಗ್ರಹಿಕೆಗೆ ನಿಲುಕದ ಪರಿಣಾಮ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ನೋಟು ರದ್ದತಿ: ಗ್ರಹಿಕೆಗೆ ನಿಲುಕದ ಪರಿಣಾಮ

ಐದು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ನಾಟಕೀಯ ಬೆಳವಣಿಗೆಯೊಂದರಲ್ಲಿ, ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ವಿಶಿಷ್ಟ ಪ್ರಯೋಗಕ್ಕೆ ಚಾಲನೆ ನೀಡಿ ಅಚ್ಚರಿ ಮೂಡಿಸಿದ್ದರು. ‘ದೇಶ ನಿರ್ಮಾಣ ಮತ್ತು ಪುನರ್‌ ರಚನೆಯಲ್ಲಿ ಎಲ್ಲರೂ ಒಳಗೊಳ್ಳುವ ವಿಶಿಷ್ಟ ಮತ್ತು ಅಪರೂಪದ  ಪ್ರಯತ್ನ ಇದಾಗಿದೆ.ಗರಿಷ್ಠ ಮುಖಬೆಲೆಯ ₹ 1,000 ಮತ್ತು ₹ 500 ನೋಟುಗಳು ಮಾನ್ಯತೆ ಕಳೆದುಕೊಂಡಿದ್ದು ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ವಿರುದ್ಧದ ಸರ್ಕಾರದ ನಿರ್ಣಾಯಕ ಹೋರಾಟ ಇದಾಗಿದೆ’ ಎಂದೂ ಹೇಳಿಕೊಂಡಿದ್ದರು. ಈ   ಐದು ವಾರಗಳ ಅವಧಿಯಲ್ಲಿ ಈ ನಿರ್ಧಾರದ ಬಗ್ಗೆಯೇ  ಎಲ್ಲೆಡೆ  ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ಮುಂದೆ ಬೇರೆಲ್ಲ  ವಿಷಯಗಳು ನೇಪಥ್ಯಕ್ಕೆ ಸರಿದಿವೆ.ದೇಶಿ ಅರ್ಥ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ದೃಢವಾಗಿ ನಂಬಲಾಗಿದ್ದ ಮತ್ತು ಬಹಳಷ್ಟನ್ನು ನಿರೀಕ್ಷಿಸಿದ್ದ ಈ ನಿರ್ಧಾರವು ರಾಜಕೀಯ ಚದುರಂಗದಾಟದ ದಾಳವಾದ ಕಾರಣಕ್ಕೆ ದಿಢೀರನೆ ಅನೇಕ ತಿರುವುಗಳನ್ನೂ ಪಡೆದುಕೊಂಡಿದೆ.ಪ್ರಧಾನಿ ಕೈಗೊಂಡಿದ್ದ ಈ ಐತಿಹಾಸಿಕ ನಿರ್ಧಾರ ಜಾರಿಗೆ ಬಂದು ಈಗಾಗಲೇ ಐದು ವಾರಗಳು ಗತಿಸಿವೆ.  ಭಾರಿ ಧ್ರುವೀಕರಣಕ್ಕೆ  ನಮ್ಮ ಸಮಾಜ ಸಾಕ್ಷಿಯಾಗಿದೆ. ದುರದೃಷ್ಟವಶಾತ್ ಎಲ್ಲ ಕ್ರಿಯೆಗಳು ಮತ್ತು ಅವುಗಳ  ಪರಿಣಾಮಗಳನ್ನು ಕಪ್ಪು ಬಿಳುಪಿನ ರೂಪದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ನಿಜವಾದ ಪರಿಣಾಮಗಳ ಪರಾಮರ್ಶೆಯಲ್ಲಿಯೇ ಸತ್ಯ ಅಡಗಿರುವುದನ್ನು ನಿರ್ಲಕ್ಷಿಸಲಾಗಿದೆ.ನೋಟು ರದ್ದತಿ ಬಗ್ಗೆ ಯಾರು ಏನನ್ನು ಹೇಳುತ್ತಾರೆ ಎನ್ನುವುದು ಅವರು ಯಾರ ಪರವಾಗಿದ್ದಾರೆ ಎನ್ನುವುದನ್ನು ಆಧರಿಸಿರುತ್ತದೆ. ಬಿಜೆಪಿ ಬೆಂಬಲಿಗರು ಅದರಲ್ಲೂ ವಿಶೇಷವಾಗಿ ಪ್ರಧಾನಿ ಬೆಂಬಲಿಗರಾಗಿದ್ದರೆ ಈ ನಿರ್ಧಾರವನ್ನು ಹಾಡಿ ಹೊಗಳುತ್ತಾರೆ.  ಸ್ವಾತಂತ್ರ್ಯಾನಂತರ ಭಾರತದಲ್ಲಿ  ರಾಜಕೀಯ ಮುಖಂಡನೊಬ್ಬ ಕೈಗೊಂಡ  ಅತ್ಯುತ್ತಮ ನಿರ್ಧಾರ ಇದಾಗಿದೆ ಎಂದು ಮನವರಿಕೆ ಮಾಡಿಕೊಡಲು ಸಾಕಷ್ಟು ಹೆಣಗಾಡುತ್ತಿದ್ದಾರೆ.ಇಡೀ ದೇಶಕ್ಕೆ ಒಳಿತಾಗುವ ಕಾರಣಕ್ಕೆ ಸಾರ್ವಜನಿಕರು ಸೀಮಿತ ದಿನಗಳವರೆಗೆ ತಮಗಾಗುತ್ತಿರುವ ತೊಂದರೆ ಮತ್ತು ಅನನುಕೂಲತೆಯನ್ನು ಸಹಿಸಿಕೊಳ್ಳುತ್ತಿದ್ದಾರೆ.ಒಂದು ವೇಳೆ ಯಾರಾದರೂ ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿದ್ದರೆ ಅವರ ದೃಷ್ಟಿಕೋನ ಬೇರೆಯೇ ಆಗಿರುತ್ತದೆ. ನೋಟು ರದ್ದತಿ ನಿರ್ಧಾರವು ಆರ್ಥಿಕ ಪ್ರಮಾದ ಆಗಿದ್ದು, ರಾಜಕೀಯವಾಗಿ ವಿನಾಶಕಾರಿ ಪರಿಣಾಮ ಬೀರಲಿದೆ ಎನ್ನುವ ತೀರ್ಮಾನಕ್ಕೆ ಬಂದಿರುತ್ತಾರೆ. ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ ಈ ಎರಡೂ ಅಭಿಪ್ರಾಯಗಳ ಮಧ್ಯೆಯೇ ಸತ್ಯ ಅಡಗಿರುವುದು ಸ್ಪಷ್ಟವಾಗುತ್ತದೆ.ನೋಟು ರದ್ದತಿಯ ಕಸರತ್ತನ್ನು ಪಕ್ಷಪಾತರಹಿತವಾಗಿ ವಿಶ್ಲೇಷಿಸಿದಾಗ ಮಾತ್ರ ಅದು ಬೀರಬಹುದಾದ ವ್ಯಾಪಕ  ಪರಿಣಾಮಗಳು ನಮ್ಮ ಅರಿವಿಗೆ ಬರಲಿವೆ.

ಮೊದಲನೆಯದಾಗಿ, ಪ್ರಧಾನಿ ಮೋದಿ ಅವರು ನವೆಂಬರ್‌ 8ರ ರಾತ್ರಿ ನೋಟು ರದ್ದತಿ ನಿರ್ಧಾರ ಪ್ರಕಟಿಸುತ್ತ, ಅದೊಂದು ಭ್ರಷ್ಟಾಚಾರ ಮತ್ತು ಕಪ್ಪು ಹಣ ವಿರುದ್ಧದ ತಮ್ಮ ಸರ್ಕಾರದ  ದಿಟ್ಟ ಹೋರಾಟ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದರು.ಕೇಂದ್ರ ಸರ್ಕಾರವು ಸರಿಯಾದ ದಿಕ್ಕಿನಲ್ಲಿ  ದೃಢ ಹೆಜ್ಜೆ ಇರಿಸಿದೆ ಎಂದೇ ಅನೇಕರು ಕೊಂಡಾಡಿದ್ದರು. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಯಾವ ಮಟ್ಟಿಗಿನ ರೋಷ ಮಡುಗಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಈ ಸಾಮಾಜಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಗೆಲುವು ಸಿಗಲಿ ಎನ್ನುವುದು ಎಲ್ಲರ ಹಾರೈಕೆಯಾಗಿತ್ತು. ಆದರೆ ದಿನ ಕಳೆದಂತೆ, ಆರಂಭದ ದಿನಗಳಲ್ಲಿ ಕಂಡು ಬಂದಿದ್ದ ಉತ್ಸಾಹ ಕುಗ್ಗಿತು. ಕಪ್ಪು ಹಣ ವಿರುದ್ಧದ ಹೋರಾಟ ಕುರಿತ ಭ್ರಮೆ ಕಳಚಿ ಬಿದ್ದಿತು.ಜನಸಾಮಾನ್ಯರು ಹಲವು ಬಗೆಯಲ್ಲಿ ಅನನುಕೂಲತೆ ಎದುರಿಸಬೇಕಾಯಿತು. ಬಾಗಿಲು ಹಾಕಿದ ಇಲ್ಲವೆ ಸಮರ್ಪಕವಾಗಿ ಕಾರ್ಯನಿರ್ವಹಿಸದ  ಎಟಿಎಂಗಳು, ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಹೊಸ ಕರೆನ್ಸಿಗಳಿಗೆ ಬದಲಿಸುವಲ್ಲಿ ಎದುರಿಸಿದ ಕಿರಿಕಿರಿಗಳು, ಸ್ವಂತದ ಖಾತೆಯಿಂದ ಹಣ ಮರಳಿ ಪಡೆಯುವಲ್ಲಿನ ಸವಾಲುಗಳು ಲೆಕ್ಕಕ್ಕೇ ಇಲ್ಲ.ಅದರಲ್ಲೂ ವಿಶೇಷವಾಗಿ  ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳ ಜನರು ಪಟ್ಟ ಪಡಿಪಾಟಲಿಗೆ ಕೊನೆ ಮೊದಲೇ ಇದ್ದಿರಲಿಲ್ಲ.  ದೇಶದ ವಿವಿಧ ನಗರಗಳಲ್ಲಿ  ಪ್ರವಾಸಿಗರು ಕೈಯಲ್ಲಿ ಕಾಸಿಲ್ಲದೆ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಬೇಕಾಯಿತು. ಜನರ ಬಳಿ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಚಲಾವಣೆ ಮಾಡಬಹುದಾದ ಕಡಿಮೆ ಮುಖಬೆಲೆಯ ನೋಟುಗಳಿಲ್ಲದೆ  ದಿನನಿತ್ಯದ ವ್ಯಾಪಾರ ವಹಿವಾಟು, ಸರಕುಗಳ ಖರೀದಿಯನ್ನೇ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.  ಇದೊಂದು ಕೆಲ ದಿನಗಳವರೆಗಿನ ತಾತ್ಕಾಲಿಕ ಹಂತವಾಗಿದೆ ಎಂದು ಈಗಲೂ ಕೆಲವರು ಪರಿಗಣಿಸುತ್ತಿದ್ದಾರೆ.‘ಇಂತಹ ಸಣ್ಣಪುಟ್ಟ ಸಂಕಷ್ಟಗಳನ್ನು ನಿರ್ಲಕ್ಷಿಸಿ’ ಎಂದು ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ದಿನಗಳೆದಂತೆ ಇದೊಂದು ಸಣ್ಣ ಪ್ರಮಾಣದ ತೊಂದರೆಯೇ ಅಥವಾ ಜನಜೀವನವನ್ನೇ ಸ್ತಬ್ಧಗೊಳಿಸುವ ಮಹಾವಿಪತ್ತಿನ ಆರಂಭಿಕ ಲಕ್ಷಣಗಳೇ ಎಂದೂ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.  ದಿನಗಳು ಉರುಳುತ್ತಿದ್ದಂತೆ ಇದೊಂದು ಅಲ್ಪಕಾಲೀನ ಸಂಕಷ್ಟವಲ್ಲ. ಇನ್ನೂ ಕೆಲ ದಿನಗಳವರೆಗೆ ಈ ಪರಿಸ್ಥಿತಿಯೊಂದಿಗೇ ನಾವು ಏಗಬೇಕಾಗಿದೆ ಎನ್ನುವುದು ಸ್ಪಷ್ಟಗೊಳ್ಳುತ್ತಿದೆ.ಪ್ರತಿಯೊಂದು ಪ್ರತಿಕೂಲ ಪರಿಸ್ಥಿತಿಯೂ  ಕೆಲ ಹೊಸ  ಭರವಸೆಯ  ಆಶಾಕಿರಣ ಮೂಡಿಸುತ್ತದೆ ಎಂದು ಭಾವಿಸಲಾಗಿರುತ್ತದೆ. ನಗದುರಹಿತ ಆರ್ಥಿಕತೆಯತ್ತ ತ್ವರಿತವಾಗಿ ಸಾಗಲು ಬಹುಶಃ ಇದೊಂದು ಸೂಕ್ತ ಸಮಯ ಆಗಿರಲೂಬಹುದು. ತಮ್ಮ ಜೀವನೋಪಾಯಕ್ಕೆ   ನಗದು ವಹಿವಾಟನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದ ಜನಸಾಮಾನ್ಯರ ಮೇಲೆ ನೋಟು ರದ್ದತಿಯ ಈ ಪರಿಯ ಪ್ರತಿಕೂಲ ಪರಿಣಾಮಗಳು ಕಂಡು ಬರಲಿವೆ ಎಂದು ಬಹುಶಃ ಸರ್ಕಾರ ನಿರೀಕ್ಷಿಸಿರಲಿಕ್ಕಿಲ್ಲ.ಜನಸಾಮಾನ್ಯರಿಗೆ ಆದ ಇರುಸು ಮುರುಸು, ಅನನುಕೂಲತೆ  ಮತ್ತು ಕಾಡುತ್ತಿರುವ ಅಭದ್ರತೆಯ ಭಾವನೆಯನ್ನು ನೋಟು ರದ್ದತಿ ನಿರ್ಧಾರ ಕೈಗೊಂಡವರು ಮತ್ತು ಅವರ ಸಲಹೆಗಾರರು ನಿರೀಕ್ಷಿಸಿದ್ದಂತೆ ಕಾಣುತ್ತಿಲ್ಲ.ಇಂತಹ ನಿರ್ಧಾರ ಕೈಗೊಳ್ಳುವಾಗ ಅಚ್ಚರಿ ಮತ್ತು ಗೋಪ್ಯತೆ ಕಾಯ್ದುಕೊಳ್ಳಬೇಕಾದ  ಅನಿವಾರ್ಯತೆ ಇರುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುತ್ತಾರೆ.  ಸೂಕ್ತ ಪೂರ್ವ ಸಿದ್ಧತೆ ಮತ್ತು ಸಂಭವನೀಯ ಪರಿಣಾಮಗಳ ಲೆಕ್ಕಾಚಾರ ಹಾಕದೇ ಮುಂದುವರೆದಿರಲಿಕ್ಕಿಲ್ಲ. ಎರಡನೆಯದಾಗಿ, ‘ಈ ನಿರ್ಧಾರವು ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧದ ಸುಸ್ಥಿರ ಯುದ್ಧವಾಗಿದೆ’ ಎಂದು ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದ್ದರು. ಅಂತಹ ಹೋರಾಟದಲ್ಲಿ ನೋಟು ರದ್ದತಿ ನಿರ್ಧಾರವು ಮೊದಲ ಹೆಜ್ಜೆಯಾಗಿದ್ದು,  ಯುದ್ಧ ಕಾರ್ಯತಂತ್ರದ ಅಂಗವಾಗಿ, ಸಾಕಷ್ಟು ಅಳೆದು ಸುರಿದು ಈ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಬಹುದು.ಕಪ್ಪು ಹಣ ವಿರುದ್ಧದ ನಿರಂತರ ಹೋರಾಟದ ಭಾಗವಾಗಿ ಸರ್ಕಾರ ಇನ್ನೂ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದೇ ಪ್ರತಿಯೊಬ್ಬರೂ ಭಾವಿಸಿದ್ದಾರೆ. ಅಂತಹ ಸಾಧ್ಯತೆಗಳು ಸಾಕಷ್ಟು ಇವೆ ಎಂದರೂ ಸದ್ಯಕ್ಕೆ ಮಾತ್ರ ಅಂತಹ ಕ್ರಮಗಳು ಸ್ಪಷ್ಟವಾಗಿ ಕಾಣುತ್ತಿಲ್ಲ.ನೋಟು ರದ್ದತಿ ನಿರ್ಧಾರದ ಆರಂಭದ ದಿನಗಳಲ್ಲೇ ಈ ನಿರ್ಧಾರದ ಗುರಿಗಳನ್ನು ಸಾಕಷ್ಟು ಬಾರಿ ಬದಲಾಯಿಸಲಾಯಿತು. ಕಪ್ಪು ಹಣ ಹೊರತೆಗೆಯುವ ಮತ್ತು ಭ್ರಷ್ಟಾಚಾರಕ್ಕೆ  ಮೂಗುದಾರ ಹಾಕುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದು  ಆರಂಭಿಕ ದಿನಗಳಲ್ಲಿ ಹೇಳಲಾಯಿತು. ನಕಲಿ ನೋಟುಗಳ ಹಾವಳಿ ತಪ್ಪಿಸಲು ನೋಟು ರದ್ದತಿ ನಿರ್ಧಾರ ಅಗತ್ಯವಾಗಿತ್ತು ಎಂದೂ ವಿವರಿಸಲಾಯಿತು. ನಗದು ರಹಿತ ಆರ್ಥಿಕತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೋಟು ರದ್ದತಿ ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ.  ನೋಟು ರದ್ದತಿ ನಿರ್ಧಾರದ ಆದ್ಯತೆಗಳು ಅತ್ಯಲ್ಪ ಸಮಯದಲ್ಲಿ ಬದಲಾಗಿರುವುದು ಖಂಡಿತವಾಗಿಯೂ ಗೊಂದಲ ಹೆಚ್ಚಿಸಿವೆ.ನಾವು ಈಗಾಗಲೇ ನಗದುರಹಿತ ಅರ್ಥ ವ್ಯವಸ್ಥೆಯಲ್ಲಿ ಇದ್ದೇವೆ.  ನಗದು ರಹಿತ ಆರ್ಥಿಕತೆಯತ್ತ ಚರ್ಚೆ ಹೊರಳಿದಾಗ, ಮೂಲ ಉದ್ದೇಶವಾಗಿದ್ದ ಕಪ್ಪು ಹಣ ನಿರ್ಮೂಲನೆ ವಿಷಯವು ಆಸಕ್ತಿ ಕಳೆದುಕೊಂಡಂತಾಗಿದೆ.ನೋಟು ರದ್ದತಿ  ನಂತರ ಎದುರಾದ ಸಂಕಷ್ಟಗಳಿಂದ ಪಾರಾಗಲು ಅನೇಕರು ತೋರಿದ ಜಾಣ್ಮೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬಂದಿವೆ.  ಕಪ್ಪು ಹಣ ಹೊರತೆಗೆಯುವ ಪ್ರಯತ್ನಗಳಿಗೆ ಕಾಳಧನಿಕರು ಅಥವಾ ಸಾಮಾಜಿಕ ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಅನುಸರಿಸಿದ ವಿಧಾನಗಳ ಪ್ರತಿಕೂಲ ಪರಿಣಾಮಗಳಿಂದ  ಜನ ಸಾಮಾನ್ಯರಿಗೇ ಹೆಚ್ಚು ತೊಂದರೆಯಾಗಲಿದೆ.  ಕಪ್ಪು ಹಣ ಹೊರ ತೆಗೆಯುವ ಸದುದ್ದೇಶದ ಗುರಿ ಮತ್ತು  ಭ್ರಷ್ಟಾಚಾರ ವಿರುದ್ಧದ ಹೋರಾಟ ಬರೀ ಘೋಷಣೆಗಳಾಗಿಯೇ ಉಳಿಯಲಿರುವುದು ಹೆಚ್ಚಾಗಿ ಅನುಭವಕ್ಕೆ ಬರುತ್ತಿದೆ.ನೋಟು ರದ್ದತಿಯು ನಿಜವಾಗಿಯೂ ಭಾರಿ ಬದಲಾವಣೆಯ  ನಿರ್ಧಾರವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ನಿರ್ಧಾರಕ್ಕೆ ಅದರದ್ದೇ ಆದ ಸ್ಪಷ್ಟ ಗುರಿ ಇರಬೇಕಾಗಿತ್ತು.ಈಗ, 2017ರ ಜನವರಿ ತಿಂಗಳವರೆಗೆ ಕಾಯಿರಿ. ಎಲ್ಲವೂ ಸರಿ ಹೋಗಲಿದೆ ಎಂದು ಹೇಳಲಾಗುತ್ತಿದೆ.  ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳೆಲ್ಲ ಹೊಸ ವರ್ಷದಿಂದ ದೂರವಾಗಲಿವೆ ಎಂದೂ  ಹೇಳಲಾಗುತ್ತಿದೆ.  ಇದೊಂದು ನಿಜವಾಗಿಯೂ ಈಡೇರುವಂತಹ ಹೊಸ ವರ್ಷದ ತೀರ್ಮಾನವಾಗಿರಲಿದೆಯೇ ಅಥವಾ ಎಂದೆಂದಿಗೂ ಈಡೇರದ  ಭರವಸೆಯಾಗಿಯೇ ಉಳಿಯಲಿದೆಯೇ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಘಂಟಾಘೋಷವಾಗಿ ಹೇಳಿಕೊಂಡಿರುವ ಉದ್ದೇಶಗಳನ್ನು ಈಡೇರಿಸುವ ಮೂಲಕ  ಸರ್ಕಾರ ತನ್ನ ಮೂಲ ಉದ್ದೇಶ ಈಡೇರಿಸುವಲ್ಲಿ ಸಫಲವಾಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry