ಹೆದ್ದಾರಿ ರಸ್ತೆಗಳಲ್ಲಿ ಸತ್ತವರ ಸಂಖ್ಯೆ 5,218!

7

ಹೆದ್ದಾರಿ ರಸ್ತೆಗಳಲ್ಲಿ ಸತ್ತವರ ಸಂಖ್ಯೆ 5,218!

Published:
Updated:

ಬೆಂಗಳೂರು:  ವಾಹನಗಳ ಸುಗಮ ಸಂಚಾರಕ್ಕೆ ಅನುವಾಗಬೇಕಿದ್ದ ರಾಜ್ಯದ ಹೆದ್ದಾರಿಗಳು ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗುತ್ತಿವೆ.  ಈ ವರ್ಷವೂ ಹತ್ತು ತಿಂಗಳಲ್ಲಿ 18,317 ಅಪಘಾತಗಳು ಸಂಭವಿಸಿ, 5,218 ಮಂದಿ ಜೀವ ತೆತ್ತಿದ್ದಾರೆ.ಒಟ್ಟು ಅಪಘಾತಗಳ ಪೈಕಿ ಶೇ 30ರಷ್ಟು ಪಾನಮತ್ತ ಚಾಲನೆಯಿಂದ ಸಂಭವಿಸಿದವು ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಅಂದಾಜಿಸಿದ್ದಾರೆ.‘ರಾಜ್ಯದ ಹೆದ್ದಾರಿಗಳಲ್ಲಿ ಪ್ರತಿವರ್ಷ ಕನಿಷ್ಠ ಐದು ಸಾವಿರ ಮಂದಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವಾಹನಗಳ ಅತಿಯಾದ ವೇಗ ಹಾಗೂ ಪಾನಮತ್ತ ಚಾಲನೆಯೇ ಅಪಘಾತಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳು’ ಎನ್ನುತ್ತಾರೆ  ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್‌) ಎ.ಎಂ.ಪ್ರಸಾದ್.‘ಪ್ರಜಾವಾಣಿ’ ಜತೆ ಮಾತನಾಡಿದ ಪ್ರಸಾದ್, ‘ಸಾಮಾನ್ಯವಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ಹೆದ್ದಾರಿಗಳನ್ನು ಬಳಸುತ್ತಾರೆ. ರಸ್ತೆ ಬದಿಯ ಬಾರ್‌ ಹಾಗೂ ರೆಸ್ಟೋರೆಂಟ್‌ಗಳು ಅವರನ್ನು ಆಕರ್ಷಿಸುತ್ತವೆ. ಕುಡಿದು ಪ್ರಯಾಣ ಮುಂದುವರಿಸುವ ಅವರು, ಅಮಲು ಏರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಗಂಭೀರ ಸ್ವರೂಪದ ಅಪಘಾತಗಳಿಗೆ ಕಾರಣರಾಗುತ್ತಾರೆ.’‘ಹೆದ್ದಾರಿಗಳಲ್ಲಿ ವಾಹನಗಳ ವೇಗಕ್ಕಾಗಲೀ, ಚಾಲಕರ ಅಜಾಗರೂಕತೆಗಾಗಲೀ ಕಡಿವಾಣ ಇರಲಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ನ ಆದೇಶ ಮಹತ್ವದ್ದು ಎನಿಸುತ್ತದೆ. ಹೆದ್ದಾರಿಗಳಲ್ಲಿ ಬಾರ್‌ ಮುಚ್ಚಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಶೇ 10ರಷ್ಟಂತೂ ಇಳಿಕೆಯಾಗುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಇಲ್ಲಿಯವರೆಗೆ ಪಾನಮತ್ತ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಬಗ್ಗೆ ಪ್ರತ್ಯೇಕ ದಾಖಲೆ ನಿರ್ವಹಣೆ ಮಾಡಿರಲಿಲ್ಲ. ಇತರೆ ಅಪಘಾತಗಳ ಅಂಕಿ ಅಂಶಗಳ ಜತೆಗೇ ಅವುಗಳನ್ನೂ ಸೇರಿಸುತ್ತಿದ್ದೆವು. ಇನ್ನು ಮುಂದೆ  ಪಾನಮತ್ತ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಅಂಕಿ ಅಂಶವನ್ನು ಪ್ರತ್ಯೇಕವಾಗಿ ದಾಖಲಿಸುತ್ತೇವೆ. ಈ ಬಗ್ಗೆ ಪ್ರತಿ ಜಿಲ್ಲೆಯ ಪೊಲೀಸರಿಗೂ ಸೂಚನೆ ನೀಡಲಾಗಿದೆ’ ಎಂದು  ಹೇಳಿದರು.ವಿಮೆ ಸಿಗಲೆಂದು ಕನಿಕರ

‘ಸಾಕಷ್ಟು ಅಪಘಾತ ಪ್ರಕರಣಗಳಲ್ಲಿ ಮೃತ ವ್ಯಕ್ತಿ ಪಾನಮತ್ತನಾಗಿರುತ್ತಾನೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವಾಗ ‘ಆತ ಕುಡಿದಿದ್ದ’ ಎಂದು ಎಫ್‌ಐಆರ್ ಮಾಡುವುದಿಲ್ಲ. ಏಕೆಂದರೆ ಪಾನಮತ್ತನಾಗಿದ್ದ ಎಂದು ಎಫ್‌ಐಆರ್ ಮಾಡಿದರೆ ಮೃತನ ಕುಟುಂಬಕ್ಕೆ ವಿಮೆ ಸಿಗುವುದಿಲ್ಲ.  ಹೀಗಾಗಿ ಪರಿಹಾರ ಸಿಗಲೆಂದು ನಾವೂ ಕನಿಕರ ತೋರುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry