ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಲೋಡ್‌ ಶೆಡ್ಡಿಂಗ್!

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಬೆಂಗಳೂರು: ಚಳಿಗಾಲ ಕಳೆಯುವ ಮೊದಲೇ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅನಧಿಕೃತ ಲೋಡ್‌ಶೆಡ್ಡಿಂಗ್‌ ಆರಂಭವಾಗಿದೆ.
 
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಪದೇ ಪದೇ ವಿದ್ಯುತ್‌ ಕೈಕೊಡುತ್ತಿದೆ. ಆದರೆ, ಕೆಪಿಟಿಸಿಎಲ್‌ ಅಧಿಕಾರಿಗಳು ಇದನ್ನು ನಿರಾಕರಿಸುತ್ತಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ 6ರಿಂದ 8 ಗಂಟೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುತ್ತಿದೆ. 
 
ರಾಜ್ಯದ ಒಟ್ಟಾರೆ ವಿದ್ಯುತ್‌ ಬೇಡಿಕೆ 7,193 ಮೆಗಾವಾಟ್‌ ಇದೆ. ಶಾಖೋತ್ಪನ್ನ, ಪವನ, ಜಲ ವಿದ್ಯುತ್, ನವೀಕೃತ ಇಂಧನ ಸೇರಿ ವಿವಿಧ ಮೂಲಗಳಿಂದ 4,136 ಮೆ.ವಾ ಮಾತ್ರ ಉತ್ಪಾದನೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಸರಾಸರಿ 2,200 ಮೆ.ವಾ. ಪೂರೈಕೆ ಆಗುತ್ತಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ 700ರಿಂದ 800 ಮೆ.ವಾ. ವ್ಯತ್ಯಾಸ ಇದೆ.
 
ನಿರಂತರ ಜ್ಯೋತಿ ಯೋಜನೆಯಡಿ ಬರುವ ಗ್ರಾಮಗಳಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಕೆ ಇದೆ. ಆದರೆ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ ಎಂಬುದನ್ನು ಇಂಧನ ಇಲಾಖೆ ಅಧಿಕಾರಿಗಳು ಒಪ್ಪುವುದಿಲ್ಲ. ಪ್ರಸರಣ ವ್ಯವಸ್ಥೆ, ಸ್ಥಳೀಯ  ಸಮಸ್ಯೆಗಳಿಂದ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ. 
 
ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ: ಸದ್ಯ ನಿರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ತಾಸು 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇನ್ನು ಮುಂದೆ  ಇದನ್ನು ಇನ್ನಷ್ಟು ಕಡಿತಗೊಳಿಸಲು ಇತ್ತೀಚೆಗೆ ನಡೆದ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್)  ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
 
ರಾಜ್ಯದಲ್ಲಿ 139 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೆಚ್ಚು ನೀರು ಆಶ್ರಯಿಸುವ ಬೆಳೆಗಳನ್ನು ಬೆಳೆಯದಿರಲು ಸರ್ಕಾರ ಈಗಾಗಲೇ ಸೂಚಿಸಿದೆ. ಈ ಮಧ್ಯೆ ಅಂತರ್ಜಲವೂ ತೀವ್ರ ಕುಸಿದಿದೆ. ಹೀಗಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ವಿದ್ಯುತ್ ಪ್ರಮಾಣ ತಗ್ಗಿಸಿ, ಅದರಿಂದ ಉಳಿಯುವ ವಿದ್ಯುತ್ತನ್ನು ನಗರ ಪ್ರದೇಶಗಳಿಗೆ ಪೂರೈಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
 
ಕಲ್ಲಿದ್ದಲು, ನೀರು ಕೊರತೆ: ಕಲ್ಲಿದ್ದಲು ಕೊರತೆಯಿಂದ ಯರಮರಸ್‌ ಶಾಖೋ  ತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್‌) ಇದುವರೆಗೆ ಕಾರ್ಯಾರಂಭವನ್ನೇ ಮಾಡಿಲ್ಲ. ಮತ್ತೊಂದೆಡೆ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (ಬಿಟಿಪಿಎಸ್) ನೀರಿನ ಕೊರತೆ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ಬೇಸಿಗೆ ಮತ್ತಷ್ಟು ಭೀಕರ ಆಗುವ ಸಾಧ್ಯತೆಯಿದೆ.
 
1,600 ಮೆ.ವಾ. ಸಾಮರ್ಥ್ಯದ ವೈಟಿಪಿಎಸ್‌ಗೆ ಕಲ್ಲಿದ್ದಲು ಹಂಚಿಕೆ ಆಗಿದ್ದರೂ ಪೂರೈಕೆ ಆಗುತ್ತಿಲ್ಲ. ಸದ್ಯ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಿಂದಲೇ ಅಲ್ಪ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ. ಆದರೆ, ಅದರಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ತುಂಗ ಭದ್ರಾ ನದಿಯಲ್ಲಿ ನೀರು ಬತ್ತಿರುವುದ ರಿಂದ ಬಿಟಿಪಿಎಸ್‌ಗೆ ಅಗತ್ಯದಷ್ಟು ನೀರು ಸಿಗುತ್ತಿಲ್ಲ. ಹೀಗಾಗಿ 1,700 ಮೆ.ವಾ. ಸಾಮರ್ಥ್ಯ ಇದ್ದರೂ ಸಹ 802 ಮೆ.ವಾ. ಮಾತ್ರ ಉತ್ಪಾದನೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಚಳಿಗಾಲ ಆರಂಭ ಆಗಿರುವು ದರಿಂದ ಗಾಳಿ ಕಡಿಮೆಯಾಗಿ ಪವನ ವಿದ್ಯುತ್ (ವಿಂಡ್ ಪವರ್) ಉತ್ಪಾದನೆಯೂ ಕುಸಿದಿದೆ. ಮಳೆ ಕೊರತೆಯಿಂದಾಗಿ ಜಲಾಶಗಳಲ್ಲಿ ನೀರು ಇಲ್ಲದಿರುವುದರಿಂದ ಜಲ ವಿದ್ಯುತ್ (ಹೈಡ್ರೊ ಪವರ್) ಉತ್ಪಾದನೆಯನ್ನೂ ಕಡಿಮೆ ಮಾಡಲಾಗಿದೆ. ಹೋಡ್ರೊದಿಂದ ನಿತ್ಯ 5ರಿಂದ 6 ಮಿಲಿಯನ್ ಯುನಿಟ್‌ ಮಾತ್ರ ಲಭ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
 
***
ವಿದ್ಯುತ್‌ ಕೊರತೆ ಇಲ್ಲ: ರವಿಕುಮಾರ್
ಇತ್ತೀಚೆಗೆ ಮಳೆ ಆಗಿರುವು ದರಿಂದ ವಿದ್ಯುತ್‌ಗೆ ಬೇಡಿಕೆ ಇಲ್ಲದೆ ಎಲ್ಲ ಘಟಕಗಳಲ್ಲಿ  ಉತ್ಪಾದನೆ ಪ್ರಮಾಣ ಕಡಿಮೆ ಮಾಡುತ್ತಿದ್ದೇವೆ. ಹೀಗಾಗಿ ಅಧಿಕೃತ ಅಥವಾ ಅನಧಿಕೃತ ಲೋಡ್‌ ಶೆಡ್ಡಿಂಗ್ ಮಾಡುವ ಪ್ರಮೇಯವೇ ಇಲ್ಲ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಹೇಳಿದರು.
 
ಮುಂದಿನ ತಿಂಗಳು ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಆದಕ್ಕಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ವಿವಿಧ ಮೂಲಗಳಿಂದ 800 ಮೆ.ವಾ.ನಷ್ಟು ವಿದ್ಯುತ್ ಖರೀದಿ ಮಾಡಲಾಗಿದೆ. ಮುಂದಿನ ಬೇಸಿಗೆಯಲ್ಲೂ ತೊಂದರೆ ಆಗದಂತೆ ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT