ಭಾನುವಾರ, ಡಿಸೆಂಬರ್ 6, 2020
22 °C
ಮನೆಯಂಗಳದಲ್ಲಿ ಮಾತುಕತೆಯಲ್ಲಿ ನೆನಪು ಮೆಲುಕು ಹಾಕಿದ ಬರಗೂರು

‘ಮೌಢ್ಯಾಚರಣೆಗೆ ಬಲಿಯಾದ ಅಕ್ಕ–ತಂಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೌಢ್ಯಾಚರಣೆಗೆ ಬಲಿಯಾದ ಅಕ್ಕ–ತಂಗಿ’

ಬೆಂಗಳೂರು: ‘ನನಗೆ ಆರು ಮಂದಿ ಅಕ್ಕಂದಿರು, ಒಬ್ಬ ಅಣ್ಣ ಹಾಗೂ ತಂಗಿಯಂದಿರು ಇದ್ದರು. ಈ ಪೈಕಿ ಒಬ್ಬ ಅಕ್ಕ, ತಂಗಿ ಮೌಢ್ಯಾಚರಣೆಗೆ ಬಲಿಯಾದರು. ಅಕ್ಕ, ತಂಗಿಗೆ ಹಿಡಿದಿದ್ದ ದೆವ್ವ ಬಿಡಿಸುತ್ತೇನೆ ಎಂದು ಮಂತ್ರವಾದಿಯೊಬ್ಬ ಅವರ ಬಲಿ ಪಡೆದ.’ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.‘ಅಕ್ಕ–ತಂಗಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣಕ್ಕಾಗಿಯೇ ನಾನು ವೈದ್ಯನಾಗಬೇಕು ಎಂದು ನಿರ್ಧರಿಸಿದ್ದೆ. ಪಿಯುಸಿವರೆಗೆ ವಿಜ್ಞಾನ ವಿಭಾಗವನ್ನು ತೆಗೆದುಕೊಂಡು ಶೇ 86ರಷ್ಟು ಅಂಕಗಳನ್ನು ಗಳಿಸಿದ್ದೆ. ಆದರೆ, ಸಾಹಿತ್ಯದ ಮೇಲೆ ಒಲವು ಹೆಚ್ಚಾಗಿದ್ದರಿಂದ ಬಿ.ಎ. ಐಚ್ಛಿಕ ಕನ್ನಡವನ್ನು ಆಯ್ಕೆ ಮಾಡಿಕೊಂಡೆ’ ಎಂದರು.‘ನಂಬಿಕೆ ಹಾಗೂ ಮೂಢನಂಬಿಕೆ ನಡುವಿನ ವ್ಯತ್ಯಾಸ ಸೂಕ್ಷ್ಮವಾದದ್ದು. ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಜಾರಿಗೆ ನನ್ನ ಬೆಂಬಲವಿದೆ’ ಎಂದು ತಿಳಿಸಿದರು.‘ನಮ್ಮೂರಿನಲ್ಲಿ ನಾನು ದೊಡ್ಡವನು ಎನಿಸಿಕೊಳ್ಳುವುದು ಹೇಗೆ? ಚೆನ್ನಾಗಿ ಓದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವುದು, ದೊಡ್ಡದೊಡ್ಡ ಪುಸ್ತಕಗಳನ್ನು ಓದುವುದು, ಎಂ.ಎ ಪರೀಕ್ಷೆ ಪಾಸು ಮಾಡುವುದು– ಇವೇ ನನ್ನ ಕನಸು, ಗುರಿ ಆಗಿತ್ತು. ಇಂತಹ ಸಣ್ಣ ಸಣ್ಣ ಕನಸುಗಳಲ್ಲೇ ನಮ್ಮ ಅಸ್ಮಿತೆಯ ಹುಡುಕಾಟ ಇರುತ್ತದೆ’ ಎಂದು ಹೇಳಿದರು.‘ನನಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ಕೊರಗುವವನು ನಾನಲ್ಲ. ಸಾಮಾನ್ಯ ಜನರು ನನಗೆ ಯಾವುದೇ ನೋವು, ಕೊರಗು ನೀಡಿಲ್ಲ. ಬುದ್ಧಿವಂತರು ಎನ್ನುವ ಭ್ರಮೆಯಲ್ಲಿರುವ, ಕಾಮಾಲೆ ಕಣ್ಣಿನವರು ನನಗೆ ನೋವು ನೀಡಿದ್ದಾರೆ’ ಎಂದರು.‘ನನ್ನ ಸಾಧನೆಯ ಹಾದಿಯಲ್ಲಿ ಪತ್ನಿ, ಮಕ್ಕಳ ಪಾತ್ರ ಮುಖ್ಯವಾಗಿದೆ. ಆತ್ಮಕಥೆ ಬರೆಯುವಂತೆ ಕೆಲವರು ಒತ್ತಾಯ ಮಾಡುತ್ತಾರೆ. ಆತ್ಮಕಥೆ ಬರೆಯುವಷ್ಟು ದೊಡ್ಡವನೇ? ಆತ್ಮಕಥೆ ಎನ್ನುವುದು ಆತ್ಮರತಿ, ಆತ್ಮಪ್ರತ್ಯಯ ಆಗಬಾರದು. ಅನುಭವಗಳನ್ನು ಆತ್ಮಕಥೆಯ ಮೂಲಕವೇ ಹೇಳಬೇಕೇ? ಕವನ, ಕಥೆ, ಕಾದಂಬರಿ ರೂಪದಲ್ಲೂ ಹೇಳಬಹುದಲ್ಲವೇ’ ಎಂದು ಪ್ರಶ್ನಿಸಿದರು.ಎಂ.ಎಲ್‌.ಸಿ.ಗೆ ಆಹ್ವಾನ: ‘ವಿಧಾನ ಪರಿಷತ್‌ಗೆ ನಾಮನಿರ್ದೇಶಿತ ಸದಸ್ಯರಾಗುವಂತೆ ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಎಸ್‌.ಎಂ.ಕೃಷ್ಣ ಆಹ್ವಾನ ನೀಡಿದ್ದರು. ಆದರೆ, ನಾನು ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ’ ಎಂದು ಹೇಳಿದರು.‘ಈ ಊರಿಗೆ ನಿನ್ನ ಹೆಸರು ಇಟ್ಟಿದ್ದಾರೆ!’

‘ಬರಗೂರಿನಲ್ಲಿ ನನ್ನನ್ನು ಚಂದ್ರಣ್ಣ ಎಂದೇ ಕರೆಯುತ್ತಿದ್ದರು. ಆದರೆ, ಮಿತ್ರರು, ಹಿತೈಷಿಗಳು ನನ್ನನ್ನು ಬರಗೂರು ಎಂದೇ ಕರೆಯುತ್ತಿದ್ದರು. ಒಮ್ಮೆ ಮಗನನ್ನು ಊರಿಗೆ ಕರೆದುಕೊಂಡು ಹೋಗಿದ್ದೆ. ಊರಿನ ಹೆಸರನ್ನು ನೋಡಿದ ಮಗ, ಅಪ್ಪ... ನಿನ್ನ ಹೆಸರನ್ನು ಊರಿಗೆ ಇಟ್ಟಿದ್ದಾರೆ? ಎಂದು ಆಶ್ಚರ್ಯದಿಂದ ಕೇಳಿದ್ದ’ ಎಂದು ಬರಗೂರು ನೆನಪು ಮಾಡಿಕೊಂಡರು.ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ

‘ನನಗೆ ಮೇಷ್ಟ್ರು ಎನಿಸಿಕೊಳ್ಳುವುದು ಹೆಮ್ಮೆ, ಸಂತೋಷದ ವಿಷಯ. ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕೆಂಬ ಆಸೆಯಿಂದಲೇ ಪ್ರಾಧ್ಯಾಪಕನಾದೆ. ಆದರೆ, ಕೆಲ ಪ್ರಾಧ್ಯಾಪಕರು ತಮ್ಮ ಅವಧಿಯಲ್ಲಿ ತರಗತಿ ತೆಗೆದುಕೊಳ್ಳುತ್ತಿರಲಿಲ್ಲ. ಆ ಅವಧಿಯಲ್ಲಿ ನಾನು ಪಾಠ ಮಾಡುತ್ತಿದ್ದೆ. ಹೀಗೆ ಪಾಠ ಮಾಡುವುದೇ ದೊಡ್ಡ ಅಪರಾಧ ಎಂದು ಕೆಲವರು ವಿವಾದ ಉಂಟು ಮಾಡಿದ್ದರು. ಇದರಿಂದ ಬೇಸರಗೊಂಡು ನನ್ನ ಇಷ್ಟದ ಮೇಷ್ಟ್ರು ಹುದ್ದೆಗೆ ರಾಜೀನಾಮೆ ನೀಡಿದ್ದೆ’ ಎಂದು ಬರಗೂರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.