ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸಮಸ್ಯೆ ನೀಗುವ ಯಂತ್ರ

ಹೊಸ ಹೆಜ್ಜೆ-32
Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬಾವಿ, ಕೆರೆ ಅಥವಾ ಕೊಳವೆಬಾವಿಗಳಿಂದ ಹೊಲಗಳಿಗೆ ನೀರು ಹಾಯಿಸುವುದು ರೈತರಿಗೆ ದೊಡ್ಡ ಸವಾಲು. ಆಗಾಗ ಕೈಕೊಡುವ ವಿದ್ಯುತ್‌, ವೋಲ್ಟೇಜ್‌ ಕಡಿಮೆ ಇದ್ದರೆ, ವಿದ್ಯುತ್‌ ಸಂಪರ್ಕ ಇದ್ದರೂ ಇಲ್ಲದಂತಹ ಸ್ಥಿತಿ. ಇನ್ನು, ಡೀಸೆಲ್‌ ಜನರೇಟರ್‌ಗಳಿಗೆ ತಾಸಿಗಿಷ್ಟು ಎಂದು ದುಡ್ಡು ಸುರಿಯಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಇದನ್ನೆಲ್ಲ ನಿರ್ವಹಿಸಲು ಒಬ್ಬ ವ್ಯಕ್ತಿ ಇರಲೇಬೇಕು.

ಈ ಎಲ್ಲ ಸಮಸ್ಯೆ ನೀಗಲು ನೈಸರ್ಗಿಕವಾಗಿ ಸುಲಭವಾದ ಮಾರ್ಗವೊಂದನ್ನು ಹುಬ್ಬಳ್ಳಿಯ ಎಂಜಿನಿಯರ್‌ ಸದಾನಂದ ಹೊಳೆಯಣ್ಣವರ ಕಂಡುಕೊಂಡಿದ್ದಾರೆ. ಪವನ ಶಕ್ತಿಯನ್ನು ಬಳಸಿಕೊಂಡು ನೀರನ್ನು ಮೇಲೆತ್ತುವ ಯಂತ್ರವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಬಾವಿ, ಕೆರೆ, ಹೊಂಡದಿಂದ 300 ಅಡಿ ಆಳದವರೆಗಿನ ನೀರನ್ನು ಈ ಯಂತ್ರ ಮೇಲಕ್ಕೆತ್ತುತ್ತದೆ.

ಕಡಿಮೆ ವೆಚ್ಚ, ದೀರ್ಘ ಬಾಳಿಕೆ
ಹುಬ್ಬಳ್ಳಿಯಲ್ಲಿ ಸಿಗುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು ಈ ಯಂತ್ರವನ್ನು ಸದಾನಂದ ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರ ಖರೀದಿಗೆ ₹1.50 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ಇದರಲ್ಲಿ ಅಳವಡಿಕೆಯ ಶುಲ್ಕವೂ ಸೇರಿದೆ.

100 ಅಡಿ ಎತ್ತರದವರೆಗೂ ಈ ಯಂತ್ರವನ್ನು ಅಳವಡಿಸಬಹುದಾದರೂ, ಸರಾಸರಿ ವೇಗದ ಗಾಳಿಗೆ 25 ಅಡಿ ಎತ್ತರದವರೆಗೆ ಅಳವಡಿಸಿದರೂ ಸಾಕು. ಗಾಳಿ ಇದ್ದರೆ ನಿರಂತರವಾಗಿ ನೀರನ್ನು ಈ ಯಂತ್ರವು ಎತ್ತುತ್ತಿರುತ್ತದೆ. ಗಾಳಿಯ ವೇಗ ಗಂಟೆಗೆ 67 ಕಿ.ಮೀ. ವೇಗದಲ್ಲಿದ್ದರೆ, ದಿನಕ್ಕೆ 25 ಸಾವಿರ ಲೀಟರ್‌ ನೀರನ್ನು ಈ ಯಂತ್ರವು ಮೇಲಕ್ಕೆ ಎತ್ತುತ್ತದೆ. ಗಾಳಿಯ ವೇಗ ಜಾಸ್ತಿಯಾದಂತೆ, ಮೇಲಕ್ಕೆತ್ತುವ ನೀರಿನ ಪ್ರಮಾಣವೂ ಜಾಸ್ತಿಯಾಗುತ್ತದೆ. ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲ ಈ ಯಂತ್ರ ಬಾಳಿಕೆಗೆ ಬರುತ್ತದೆ.

‘ಯುರೋಪಿಯನ್‌ ರಾಷ್ಟ್ರಗಳಲ್ಲಿ ಈ ಮಾದರಿಯ ಯಂತ್ರದ ಬಳಕೆ ಹೆಚ್ಚಾಗಿದೆ. ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿದ್ದ ಹಳ್ಳಿಯೊಂದರಲ್ಲಿ ಸರ್ಕಾರವೇ ಇಂತಹ ಯಂತ್ರವನ್ನು ಅಳವಡಿಸಿದ್ದನ್ನು ನೋಡಿದ್ದೆ. ಬಾವಿ ಅಥವಾ ಕೆರೆಯಿಂದ ನೀರನ್ನು ಎತ್ತಿ ಹಳ್ಳಿಗೆ ಅದನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆ ಯಂತ್ರ ಕೆಲಸ ಸ್ಥಗಿತಗೊಳಿಸಿತ್ತು. ನಾನು ಇಂತಹ ಯಂತ್ರ ಅಭಿವೃದ್ಧಿಪಡಿಸಬೇಕು ಎನಿಸಿತು. ಹುಬ್ಬಳ್ಳಿಯಲ್ಲಿ ಸಿಗುವ ಕಚ್ಚಾ ವಸ್ತಗಳನ್ನು ಬಳಸಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದೇನೆ’ ಎನ್ನುತ್ತಾರೆ ಸದಾನಂದ ಹೊಳೆಣ್ಣವರ.

ಯಂತ್ರಕ್ಕೆ ಬೇಡಿಕೆ ಬಂದರೆ, 30 ದಿನದೊಳಗೆ ಅದನ್ನು ಪೂರೈಸುತ್ತೇನೆ. ಇದನ್ನು ನಾನು ಇನ್ನೂ ನೋಂದಣಿ ಮಾಡಿಸಿಲ್ಲ. ಆಸಕ್ತರು ಈ ಮಾದರಿಯನ್ನು ಒಮ್ಮೆ ನೋಡಿದರೆ, ಅವರೇ ಅಭಿವೃದ್ಧಿಪಡಿಸಬಹುದು. ಅಷ್ಟು ಸರಳವಾಗಿದೆ ಎಂದು ಅವರು ಹೇಳಿದರು.

ನವೀಕರಿಸಬಹುದಾದ ಶಕ್ತಿ ಮೂಲವನ್ನು ಬಳಸಿಕೊಂಡು ಯಾವುದಾದರೂ ಉಪಕರಣ ಅಭಿವೃದ್ಧಿ ಪಡಿಸಬೇಕು ಎಂದುಕೊಂಡಾಗ ಈ ಉಪಾಯ ನನಗೆ ಹೊಳೆಯಿತು.ಪ್ರಕೃತಿಯಲ್ಲಿ ಉಚಿತವಾಗಿ ಸಿಗುವ ಗಾಳಿಯನ್ನು ಬಳಸಿಕೊಂಡು ನೀರನ್ನು ಮೇಲಕ್ಕೆತ್ತಬಹುದು. ರೈತರು ಡೀಸೆಲ್‌ ಜನರೇಟರ್‌ ಬಳಸಲು ಮೂರು ತಾಸಿಗೆ ₹500 ವ್ಯಯಿಸಬೇಕಾಗುತ್ತದೆ. ಅಲ್ಲದೆ, ಜನರೇಟರ್‌ ಚಾಲನೆಗೊಳಿಸಲು, ನೀರೆತ್ತುವ ಪ್ರಕ್ರಿಯೆ ನಿರ್ವಹಿಸಲು ಒಬ್ಬ ವ್ಯಕ್ತಿ ಇರಲೇಬೇಕಾಗುತ್ತದೆ. ಆದರೆ, ಈ ಯಂತ್ರ ಬಳಸಲು ಯಾವ ನಿರ್ವಹಣೆಯೂ ಬೇಕಾಗುವುದಿಲ್ಲ. ಬೇಡವಾದಾಗ, ಯಂತ್ರವನ್ನು ಸ್ಥಗಿತಗೊಳಿಸಬಹುದು ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಈ ಯಂತ್ರ ಅಳವಡಿಸಲು 6x6 ಅಡಿ ಜಾಗ ಬೇಕಾಗುತ್ತದೆ. ಇನ್ನು, ಬಾವಿ ಮೇಲೆ ಈ ಯಂತ್ರ ಅಳವಡಿಸಬೇಕೆಂದರೆ, ಬಾವಿ ಎಷ್ಟು ಅಗಲ ಇರುತ್ತದೋ ಅಷ್ಟು ವಿಸ್ತಾರದ ಜಾಗದಲ್ಲಿ ಯಂತ್ರ ಹಾಕಬೇಕು. ಕೈ ಪಂಪ್‌ ರೀತಿಯಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT