ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದದ್ದು ₹4.49 ಲಕ್ಷ ಕೋಟಿ ಹೊಸ ನೋಟು

ನ. 8 ರಂದು ರದ್ದಾದ ನೋಟುಗಳ ಮೊತ್ತ ₹20.5 ಲಕ್ಷ ಕೋಟಿ: ಆರ್‌ಬಿಐ
Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ:  ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹1000 ಮತ್ತು ₹500 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸುವ ನಿರ್ಧಾರ ಘೋಷಿಸುವಾಗ ಆರ್‌ಬಿಐ ಬಳಿಯಲ್ಲಿ ಇದ್ದಿದ್ದು ₹2 ಸಾವಿರ ಮುಖಬೆಲೆಯ ₹4.49 ಲಕ್ಷ ಕೋಟಿ ಮೌಲ್ಯದ ನೋಟುಗಳು ಮಾತ್ರ!

ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಅನಿಲ್‌ ಗಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ  ಕೇಳಿದ ಪ್ರಶ್ನೆಗೆ ಆರ್‌ಬಿಐ ನೀಡಿರುವ ಉತ್ತರದಲ್ಲಿ ಈ ವಿಷಯ ತಿಳಿದು ಬಂದಿದೆ.

ನವೆಂಬರ್‌ 8ರವರೆಗೆ ದೇಶದಲ್ಲಿ ₹9.13 ಲಕ್ಷ ಕೋಟಿ ಮೌಲ್ಯದ  ₹1,000 ಮುಖಬೆಲೆಯ ನೋಟುಗಳು ಮತ್ತು ₹ 500 ಮುಖಬೆಲೆಯ ನೋಟುಗಳಲ್ಲಿ ₹11.38 ಲಕ್ಷ ಕೋಟಿ  ಚಲಾವಣೆಯಲ್ಲಿತ್ತು ಎಂದು ಆರ್‌ಬಿಐ ತಿಳಿಸಿದೆ.

ಅಂದರೆ, ನೋಟು ರದ್ದತಿ ನಿರ್ಧಾರ ಘೋಷಿಸುವ ಸಂದರ್ಭದಲ್ಲಿ, ಒಟ್ಟು ಚಲಾವಣೆಯಲ್ಲಿ ಇದ್ದ ಹಣದ ಕಾಲು ಭಾಗದಷ್ಟು ಮೌಲ್ಯದ ₹2 ಸಾವಿರದ ನೋಟುಗಳಿದ್ದವು. ‘ನವೆಂಬರ್‌ 8ರಂದು ₹2 ಸಾವಿರ ಮುಖಬೆಲೆಯ 247.3 ಕೋಟಿ ನೋಟುಗಳಿದ್ದವು. ಇದರ ಮೌಲ್ಯ ₹4.94 ಲಕ್ಷ ಕೋಟಿ’ ಎಂದು ಆರ್‌ಬಿಐ ತಿಳಿಸಿದೆ. ಅಚ್ಚರಿಯ ಸಂಗತಿ ಎಂದರೆ, ನವೆಂಬರ್‌ 9ರಿಂದ 19ರ ಅವಧಿಯಲ್ಲಿ ಬ್ಯಾಂಕುಗಳಿಗೆ ಎಷ್ಟು ನೋಟುಗಳನ್ನು ವಿತರಣೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಆರ್‌ಬಿಐ ಪ್ರತಿಕ್ರಿಯಿಸಿಲ್ಲ.

ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8(1)(ಜಿ) ಉಲ್ಲೇಖಿಸಿ, ಈ ಮಾಹಿತಿ ನೀಡಲು ನಿರಾಕರಿಸಿದೆ. ಯಾವುದೇ ವ್ಯಕ್ತಿ ಜೀವಕ್ಕೆ ಅಪಾಯವಿದ್ದರೆ ಅಂತಹ ಮಾಹಿತಿಗಳನ್ನು ತಡೆಹಿಡಿಯಲು ಈ ಸೆಕ್ಷನ್‌ ಅವಕಾಶ ಕಲ್ಪಿಸುತ್ತದೆ. ಕಾನೂನು ಜಾರಿ ಮತ್ತು ಭದ್ರತಾ ಕಾರಣಗಳ ಅಡಿಯಲ್ಲೂ ಮಾಹಿತಿ ನೀಡುವುದಕ್ಕೆ ಈ ಸೆಕ್ಷನ್‌ ಅಡಿಯಲ್ಲಿ ವಿನಾಯಿತಿ ಇದೆ.

ಆ್ಯಕ್ಸಿಸ್‌ ಬ್ಯಾಂಕ್‌ ಸ್ಪಷ್ಟನೆ:  ನೋಟು ರದ್ದತಿ ನಂತರ ತನ್ನ ಕೆಲವು ಸಿಬ್ಬಂದಿ ಅವ್ಯವಹಾರದಲ್ಲಿ ತೊಡಗಿದ್ದು ಬೆಳಕಿಗೆ ಬಂದಿರುವುದರಿಂದ ಮುಜುಗರಕ್ಕೆ ಒಳಗಾಗಿರುವ ಆ್ಯಕ್ಸಿಸ್ ಬ್ಯಾಂಕ್‌, ‘ನಾವು ಹಿಂದೆಂದೂ ಕಾಣದಂತಹ ಕ್ರಮ ಕೈಗೊಂಡಿದ್ದೇವೆ. ಕೆಲವು ಅನುಮಾನಾಸ್ಪದ ಖಾತೆಗಳನ್ನು ಅಮಾನತಿನಲ್ಲಿ ಇರಿಸಿದ್ದೇವೆ’ ಎಂದು ಹೇಳಿದೆ.

2005ರ ಹಿಂದಿನ ನೋಟು ನಿರಾಕರಿಸುವಂತಿಲ್ಲ

ಹಳೆಯ ₹500 ಮತ್ತು ₹1,000 ಮುಖಬೆಲೆಯ ನೋಟುಗಳೂ ಸೇರಿದಂತೆ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ನೋಟುಗಳನ್ನು ಬ್ಯಾಂಕುಗಳು ನಿರಾಕರಿಸುವಂತಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

‘2005ರ ಮೊದಲು ಮುದ್ರಿಸಿರುವ ₹500 ಮತ್ತು ₹1,000ದ ನೋಟುಗಳನ್ನು ಬ್ಯಾಂಕುಗಳು ಠೇವಣಿಯಾಗಿ ಸ್ವೀಕರಿಸಬೇಕು. ಆದರೆ, ಅದರ ಬದಲಿಗೆ ಹೊಸ ನೋಟುಗಳನ್ನು ನೀಡುವಂತಿಲ್ಲ. ಇಂತಹ ನೋಟುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು’ ಎಂದು ಆರ್‌ಬಿಐ ಸ್ಪಷ್ಟನೆಯಲ್ಲಿ ತಿಳಿಸಿದೆ.

ಸಣ್ಣ ವರ್ತಕರಿಗೆ ತೆರಿಗೆ ವಿನಾಯಿತಿ
ನವದೆಹಲಿ: 
ಗ್ರಾಹಕರಿಂದ ಬ್ಯಾಂಕಿಂಗ್‌ ಮತ್ತು ಡಿಜಿಟಲ್‌ ವ್ಯವಸ್ಥೆಯಲ್ಲಿ ಹಣ ಸ್ವೀಕರಿಸುವ, ₹2 ಕೋಟಿವರೆಗಿನ ವಹಿವಾಟು ನಡೆಸುವ ಸಣ್ಣ ವರ್ತಕರಿಗೆ ವಿಧಿಸುವ ತೆರಿಗೆಯಲ್ಲಿ ವಿನಾಯಿತಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಈ  ನಿರ್ಧಾರಕ್ಕೆ ಬಂದಿದ್ದು, ಗ್ರಾಹಕರಿಂದ ನಗದು ಮೂಲಕ ಹಣ ಸ್ವೀಕರಿಸುವ ವ್ಯಾಪಾರಿಗಳಿಗೆ ತೆರಿಗೆಯಲ್ಲಿ ಕಡಿತ ಇರುವುದಿಲ್ಲ.

‘ ಡಿಜಿಟಲ್‌ ವ್ಯವಸ್ಥೆಯ ಮೂಲಕ ಗ್ರಾಹಕರಿಂದ ಸ್ವೀಕರಿಸಿದ ಒಟ್ಟಾರೆ ಹಣಕ್ಕೆ  ಮೇಲೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 44ಎಡಿಯ ಅಡಿ
ಯಲ್ಲಿ   ವಿಧಿಸುವ ತೆರಿಗೆಯಲ್ಲಿ ಶೇ 2ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ. ಸದ್ಯ ಈ ತೆರಿಗೆ ಪ್ರಮಾಣ ಶೇ 8ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT