ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟದ ಹಲವೆಡೆ ಶೋಲಿಗ ಕಪ್ಪೆ ಪತ್ತೆ

ಅಳಿವಿನಂಚಿನ ಪಟ್ಟಿಗೆ ಸೇರ್ಪಡೆಗೊಂಡಿದ್ದ ಪ್ರಭೇದ
Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಳಿವಿನಂಚಿನ ಪಟ್ಟಿಗೆ ಸೇರಿದ್ದ ಕಿರು ಗಂಟಲಿನ ಶೋಲಿಗ ಕಪ್ಪೆಗಳು ರಾಜ್ಯದ ಹಲವೆಡೆ ಕಂಡುಬಂದಿವೆ. 16 ವರ್ಷಗಳ ಹಿಂದೆ ಈ ಕಪ್ಪೆಗಳು ಪಶ್ಚಿಮಘಟ್ಟದ ಎರಡು ಜಾಗಗಳಲ್ಲಿ ಮಾತ್ರ ಕಂಡು ಬಂದಿದ್ದವು. ಆದರೆ, ಪಶ್ಚಿಮ ಘಟ್ಟದುದ್ದಕ್ಕೂ ಶೋಲಿಗ ಕಪ್ಪೆಗಳು ವ್ಯಾಪಕವಾಗಿ ಇರುವುದನ್ನು ಗುಬ್ಬಿ ಲ್ಯಾಬ್ಸ್‌ ಮತ್ತು ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ನ ವಿಜ್ಞಾನಿಗಳು ಹಾಗೂ ಸಿಂಗಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ.

ಒಡಿಶಾದ ಉತ್ಕಲ್‌ ವಿ.ವಿಯ ನಿವೃತ್ತ ಪ್ರಾಧ್ಯಾಪಕ ಸುಶೀಲ್‌ ಕುಮಾರ್‌ ದತ್ತ, ಭಾರತೀಯ ಪ್ರಾಣಿ ವಿಜ್ಞಾನ ಸರ್ವೇಕ್ಷಣಾ ಇಲಾಖೆಯ ಪಿ.ರಾಯ್‌ ಅವರು ಶೋಲಿಗ ಕಪ್ಪೆಗಳನ್ನು ಬಿಳಿರಂಗನಬೆಟ್ಟದ ಹುಲಿ ಅಭಯಾರಣ್ಯದಲ್ಲಿ 2000ರಲ್ಲಿ ಪತ್ತೆ ಮಾಡಿದ್ದರು. ಇದು ಸಣ್ಣ ಗಾತ್ರದ 1.7 ಸೆಂ.ಮೀ. ಉದ್ದ ಹೊಂದಿತ್ತು. ಇದೇ ಪ್ರಭೇದದ ಕಪ್ಪೆ ಕೇರಳದ ವೈನಾಡಿನಲ್ಲಿ ಕಂಡು ಬಂದಿತ್ತು. ಇದನ್ನು ಪರಿಗಣಿಸಿದ ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (ಐಯುಸಿಎನ್) ಸಂಸ್ಥೆಯು ಈ ಕಪ್ಪೆಯನ್ನು ಅಳಿವಿನಂಚಿನ ಪಟ್ಟಿಗೆ ಸೇರಿಸಿತ್ತು.

ಶೋಲಿಗ ಕಪ್ಪೆ ‘ಮೈಕ್ರೊಹೈಲಿಡ್ಸ್‌’  (microhylids) ಎಂಬ ವರ್ಗಕ್ಕೆ ಸೇರಿದೆ. ಗ್ರೀಕ್‌ ಭಾಷೆಯಲ್ಲಿ ಇದನ್ನು ‘ಕಿರಿದಾದ ಬಾಯಿ’ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಈ ಪ್ರಭೇದದಲ್ಲಿ 39 ಜಾತಿಯ ಕಪ್ಪೆಗಳಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ್ಯಂತ ಕಂಡು ಬರುತ್ತವೆ. ಇವು ನೀರು ಹಾಗೂ ಹುಲ್ಲು ಇರುವ ಕಡೆ ವಾಸಿಸುತ್ತವೆ.

‘ಐ.ಟಿ. ಉದ್ಯೋಗಿ ದೀಪಿಕಾ ಪ್ರಸಾದ್‌ ಎಂಬುವರು 2012ರ ಮುಂಗಾರು ತಿಂಗಳಿನಲ್ಲಿ ಸಕಲೇಶಪುರದ ಬಳಿ ಇರುವ ಬಿಸ್ಲೆ ಎಂಬಲ್ಲಿ ಶೋಲಿಗ ಕಪ್ಪೆಯನ್ನು ನೋಡಿದ್ದರು. ಬಳಿಕ ‘ಬಿಸ್ಲೆ ಕಪ್ಪೆ ವೀಕ್ಷಣೆ ತಂಡ’ವನ್ನು ಕಟ್ಟಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಈ ಕಪ್ಪೆಯನ್ನು ಹುಡುಕುತ್ತಿದ್ದರು. ಈ ಬಗ್ಗೆ ದೀಪಿಕಾ ಅವರು ನನಗೆ ಮಾಹಿತಿ ನೀಡಿದರು’ ಎಂದು ಗುಬ್ಬಿ ಲ್ಯಾಬ್ಸ್‌ನ ಪ್ರಧಾನ ಸಂಶೋಧಕ ಡಾ. ಕೆ.ವಿ.ಗುರುರಾಜ್‌ ತಿಳಿಸಿದರು.

‘ದೀಪಿಕಾ ಅವರು ನಮ್ಮನ್ನು ಒಂದು ಕೊಳದ ಬಳಿಗೆ ಕರೆದೊಯ್ದರು. ಅಲ್ಲಿ ಮಿಡತೆಯಂತೆ ಕೂಗುತ್ತಿದ್ದ ಶೋಲಿಗ ಕಪ್ಪೆ ಕಂಡಿತು. ಆ ಕಪ್ಪೆಯನ್ನು ಹಿಡಿದು ತಂದೆವು’ ಎಂದು ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಕೆ.ಎಸ್‌.ಶೇಷಾದ್ರಿ ಹೇಳಿದರು.

ಡಿಎನ್‌ಎ ಪರೀಕ್ಷೆ: ‘2000ರಲ್ಲಿ ಪತ್ತೆಯಾಗಿದ್ದ ಕಪ್ಪೆಯ ಡಿಎನ್‌ಎ ಹಾಗೂ ಈಗ ಸಿಕ್ಕಿರುವ ಕಪ್ಪೆಯ ಡಿಎನ್‌ಎ ಪರೀಕ್ಷೆ ನಡೆಸಲಾಯಿತು. ಎರಡೂ ಕಪ್ಪೆಯ ಡಿಎನ್‌ಎನಲ್ಲಿ ಸಾಮ್ಯತೆ ಕಂಡು ಬಂದಿತು.’

‘ಶೋಲಿಗ ಕಪ್ಪೆಗಳನ್ನು ಪಶ್ಚಿಮ ಘಟ್ಟದಲ್ಲಿ ನೋಡಿರುವುದಾಗಿ ರಮಿತ್‌ ಸಿಂಘಾಲ್‌ ಎಂಬುವರು ತಿಳಿಸಿದ್ದರು. ಅಲ್ಲದೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲೂ ಈ ಕಪ್ಪೆ ಕಂಡು ಬಂದಿದೆ. ಇದೇ ರೀತಿಯಲ್ಲಿ ಒಟ್ಟು 15 ಕಡೆಗಳಲ್ಲಿ ಈ ಕಪ್ಪೆಗಳು ಕಂಡುಬಂದಿವೆ. ಈ ಪ್ರದೇಶಗಳ ವ್ಯಾಪ್ತಿ ಒಟ್ಟು 28 ಸಾವಿರ ಕಿ.ಮೀ. ಇದೆ. ಈ ಕುರಿತ ವರದಿಯು ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ 2016ರ ಡಿ. 21 ರಂದು ಪ್ರಕಟಗೊಂಡಿದೆ’ ಎಂದು ಗುರುರಾಜ್‌ ತಿಳಿಸಿದರು.

ಕೆ.ಎಸ್‌.ಶೇಷಾದ್ರಿ, ಎಚ್‌.ಪ್ರೀತಿ, ಜಿ. ರವಿಕಾಂತ್‌, ಎಂ.ಕೆ.ವಿದಿಶಾ, ಕೆ.ಕೆ. ವಿನೀತಾ, ರಮಿತ್‌ ಸಿಂಘಾಲ್‌, ಆರ್‌.ಆರ್‌. ಶರ್ಮಾ, ಎನ್‌.ಎ.ಅರವಿಂದ್‌, ಡಾ.ಕೆ.ವಿ. ಗುರುರಾಜ್‌ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT