ಸೋಮವಾರ, ಸೆಪ್ಟೆಂಬರ್ 27, 2021
21 °C
ಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರಡ್ಡಿ

ಪ್ರಾಂಶುಪಾಲರ ನೇಮಕಾತಿಗೆ ಅಗತ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಸಾಗರ: ‘ರಾಜ್ಯದ 412 ಕಾಲೇಜುಗಳ ಪೈಕಿ 42 ಕಾಲೇಜುಗಳಿಗೆ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ. ಉಳಿದ ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರನ್ನು ನೇಮಿಸಲು ಶೀಘ್ರ   ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರಡ್ಡಿ ಹೇಳಿದರು.


 


ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಜ್ಞಾನ ಸಂಗಮ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.


 


‘ಹಿರಿತನ, ರೋಸ್ಟರ್‌ ಪದ್ದತಿ ಹಾಗೂ ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದರು.


 


‘ರಾಜ್ಯದ ವಿವಿಧ ಕಾಲೇಜುಗಳಲ್ಲಿ 3,200 ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ. ಮೊದಲ ಹಂತದಲ್ಲಿ 2,160 ಹುದ್ದೆಯನ್ನು ಭರ್ತಿ ಮಾಡಲು ಪಟ್ಟಿ ಸಿದ್ಧವಾಗಿದೆ. ಕೆಲವು ಸಣ್ಣಪುಟ್ಟ ಲೋಪದೋಷಗಳಿಂದ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ವಿಳಂಬ ವಾಗುತ್ತಿದೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.


 


‘ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪನೆಗೆ ₹ 90 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅಕಾಡೆಮಿಯಲ್ಲಿ ಶಿಕ್ಷಣದ ಗುಣಮಟ್ಟ  ಸುಧಾರಿಸಲು ತರಬೇತಿ ಅಗತ್ಯವಿದೆ’ ಎಂದರು.


 


‘ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದು ಕಾನೂನಿನ ಚೌಕಟ್ಟಿನಲ್ಲಿ ಅಸಾಧ್ಯವಾದ ಸಂಗತಿ. ಅವರ ಬಾಕಿ ವೇತನ ಬಿಡುಗಡೆಗೆ ಹಣಕಾಸಿನ ತೊಂದರೆ ಇಲ್ಲ. ತಾಂತ್ರಿಕ ತೊಡಕುಗಳನ್ನು ನಿವಾರಿಸಿ ವೇತನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.


 


ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಎನ್‌.ಉಷಾ, ಉಪಾಧ್ಯಕ್ಷೆ ಮರಿಯಾ ಲೀಮಾ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದರಾಮಯ್ಯ, ಪ್ರಾಂಶುಪಾಲರಾದ ಪ್ರೊ.ಉಮೇಶ್‌ ಪಿ, ಕಾಲೇಜು ಅಭಿವೃದ್ಧಿ ಸಮಿತಿಯ ಎಸ್‌.ಬಿ.ಮಹಾದೇವ, ಡಾ.ಡಿ.ಬಿ.ಕಾರಿಯಪ್ಪ, ಎಂ.ರಾಮಪ್ಪ ಇನ್ನಿತರರು ಹಾಜರಿದ್ದರು. ಎಚ್‌.ಎಸ್‌.ರಘುನಾಥ್‌ ಕಾರ್ಯಕ್ರಮ ನಿರೂಪಿಸಿದರು.   


 


*


‘ಸರ್ಕಾರ ಉರುಳಿಸಲು ಬಿಜೆಪಿ ಸಂಚು’


ಸಾಗರ:  ‘ಕೇಂದ್ರದ ಬಿಜೆಪಿ ಮುಖಂಡರು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ   ದುರುಪಯೋಗ ಪಡಿಸಿಕೊಂಡು ವಾಮಮಾರ್ಗದಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು ನಡೆಸುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರಡ್ಡಿ ಆರೋಪಿಸಿದ್ದಾರೆ.


 


ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯ ಮಾಡಿರುವುದರಿಂದ ಕಪ್ಪು ಹಣ ತರಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಮುಚ್ಚಿ ಹಾಕಲು ರಾಜ್ಯದ ಕೆಲವು ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರಕ್ಕೆ ಕೆಟ್ಟು ಹೆಸರು ತರಲು ಪ್ರಯತ್ನಿಸಲಾಗುತ್ತಿದೆ’ ಎಂದರು.


 


‘ರಾಜ್ಯದ ಇಬ್ಬರು ಸಚಿವರು ರಾಜೀನಾಮೆ ನೀಡುವ ಪ್ರಸಂಗ ಬರುತ್ತದೆ ಎಂದು ಖಚಿತವಾಗಿ  ಯಡಿಯೂರಪ್ಪ ಹೇಳಿದ್ದರು. ಹಾಗಾದರೆ ಅವರು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ಸಂಪರ್ಕ ದಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದರು.


 


‘ಬಿಜೆಪಿ ಮುಖಂಡರು ಸತ್ಯ ಹರಿಶ್ಚಂದ್ರನ ಮಕ್ಕಳಂತೆ ಮಾತ ನಾಡುತ್ತಿದ್ದಾರೆ. ಆದರೆ, ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರು  ಎಂಬುದನ್ನು ಜನ ಮರೆತಿಲ್ಲ. ಕಪ್ಪು ಹಣದ ಬಗ್ಗೆ ಮಾತನಾಡುವ ಪ್ರಧಾನಿ  ಮೋದಿಯವರಿಗೆ ಕಳೆದ ಚುನಾವಣೆ ಸಂದರ್ಭದಲ್ಲಿ ದಿನಕ್ಕೆ ಐದಾರು ಬಾರಿ ವಿಮಾನದಲ್ಲಿ ಪ್ರಯಾಣಿಸಲು ಹಣ ಬಂದಿದ್ದು ಎಲ್ಲಿಂದ ಎಂಬುದನ್ನು ದೇಶದ ಜನತೆಗೆ ಅವರು ವಿವರಿಸಬೇಕು’ ಎಂದು ಛೇಡಿಸಿದರು. 


 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.