7

ಜನಪರಂಪರೆಗಳು ಹಾಗೂ ಬಿಳಿಯಾನೆ ತುಳಿತ

ಪ್ರಸನ್ನ
Published:
Updated:
ಜನಪರಂಪರೆಗಳು ಹಾಗೂ ಬಿಳಿಯಾನೆ ತುಳಿತ

ದೊಡ್ಡದು ದೂರವಿದ್ದರೇನೇ ಚಂದ; ಸೂರ್ಯನಂತೆ, ತಾರಾಪುಂಜಗಳಂತೆ, ದೊಡ್ಡದು ದೂರವಿದ್ದರೇನೇ ಚಂದ. ದೊಡ್ಡದನ್ನು ಹತ್ತಿರ ತಂದುಕೊಂಡು, ಸಣ್ಣವರು ನಾವು, ಸಂಕಟಪಡುತ್ತೇವೆ.

ನೋಟು ಓಡಾಡಿಸುವ ವ್ಯವಸ್ಥೆಗಳಿವು. ತನ್ನಲ್ಲಿ ಎಲ್ಲವೂ ಇದೆ, ಪಂಜಾಬಿ ಊಟದಿಂದ ಹಿಡಿದು ಫ್ರೆಂಚ್ ಕ್ಯೂಸೀನಿನವರೆಗೆ, ಟಾಯ್‌ಲೆಟ್ಟಿನಿಂದ ಹಿಡಿದು ಗಾರ್ಡನ್ನಿನವರೆಗೆ, ಪಾರ್ಕಿಂಗಿನಿಂದ ಹಿಡಿದು ಡ್ರೈವರುಗಳ ಸ್ನಾನದವರೆಗೆ... ಎಲ್ಲವೂ ಇದೆ ಎಂದು ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಈ ವ್ಯವಸ್ಥೆಗಳಿಗೆ. ಮಾತೆತ್ತಿದರೆ ಟಿಶ್ಯೂ ಪೇಪರು, ಮಾತೆತ್ತಿದರೆ ಡಿಸಿನ್‌ಫೆಕ್ಟೆಂಟು, ಮಾತೆತ್ತಿದರೆ ಮುಜರೆ ಸಲ್ಲಿಸುವ ಡವಾಲಿಗಳು, ಎಲ್ಲವೂ ಇರಲೇಬೇಕಾದ, ಇರುವುದೆಲ್ಲವನ್ನೂ ಬಂದೂಕು ಹಿಡಿದು ರಕ್ಷಿಸಲೇಬೇಕಾದ ಬಿಳಿಯಾನೆಗಳಿವು. ಅತ್ತ ನಾವು ಆನೆ ಸಾಕುತ್ತಿದ್ದರೆ, ಇತ್ತ ತಿಪ್ಪೆಯ ಕಸದಂತಾಗಿ ಬಿದ್ದಿದೆ ಈ ದೇಶ, ಆನೆಯ ಪದಾಘಾತಕ್ಕೆ ಸಿಲುಕಿ ನಜ್ಜುಗುಜ್ಜಾಗುತ್ತಿದೆ. ಇರಲಿ, ನಾನು ಹೇಳಹೊರಟಿರುವುದು ಬಿಳಿಯಾನೆ ತುಳಿತದ ಬಗ್ಗೆ ಅಲ್ಲ, ನಮ್ಮ ಪರಂಪರೆಗಳ ಬಗ್ಗೆ.

ತಿಪ್ಪೆಯ ಕಸ ಹಾಗೂ ಬಿಳಿಯಾನೆ ತುಳಿತದ ನಡುವೆ, ಆಶ್ಚರ್ಯಕರ ರೀತಿಯಲ್ಲಿ ಸಣ್ಣದಾದ ಸಭ್ಯ ವ್ಯವಸ್ಥೆಗಳು ಈಗಲೂ ಉಳಿದು ಬಂದಿವೆ. ಜನ ವ್ಯವಸ್ಥೆಗಳಿವು ಅಥವಾ ಜನ ಪರಂಪರೆಗಳು. ಇವುಗಳನ್ನು ಹುಡುಕುತ್ತ ತಿಪ್ಪೆ ಕೆದಕುತ್ತಿರುತ್ತೇನೆ ನಾನು.

ಮೊನ್ನೆ ಉಡುಪಿಯಿಂದ ಮೈಸೂರಿಗೆ ಹೊರಟಿದ್ದೆ. ಬೇಡಬೇಡವೆಂದರೂ ಬಿಡದೆ ಕಾರಿನಲ್ಲಿ ಕಳುಹಿಸಿಕೊಟ್ಟರು ಉಡುಪಿಗೆ ಕರೆಸಿಕೊಂಡಿದ್ದವರು. ಸ್ವಂತ ವಾಹನದಲ್ಲಿ ಪಯಣಿಸುವ ಸ್ವಾತಂತ್ರ್ಯ, ಆಹಾ! ದಾರಿಯುದ್ದಕ್ಕೂ ಎಲ್ಲಿ ನೋಡಿದರೂ ಸುಂದರಳಾದ ಪ್ರಕೃತಿ, ವೈವಿಧ್ಯಮಯಳಾದ ಪ್ರಕೃತಿ. ನಾನು ಪ್ರಸ್ತಾಪಿಸಿದ ಜನಪರಂಪರೆಗಳು. ಈ ಪ್ರಕೃತಿಯೊಟ್ಟಿಗೆ ಹಾಸುಕೊಕ್ಕಾಗಿ ಬೆಳೆದುಕೊಂಡವುಗಳು.

ಗಾಡಿ ಸುಳ್ಯ ಸಮೀಪಿಸುತ್ತಿತ್ತು. ಊಟದ ಸಮಯವಾಗಿತ್ತು. ‘ಊಟ ಮಾಡೋಣ’ ಎಂದೆ. ಡ್ರೈವರನಿಗೆ ನೆಗಡಿ ಕೆಮ್ಮು ಕಾಡುತ್ತಿತ್ತು. ಹಿಂಜರಿದ. ‘ಇಲ್ಲಿ ಗಂಜಿ ಊಟ ಸಿಕ್ಕುತ್ತದೆ, ಬಿಸಿ ಬಿಸಿ ಗಂಜಿ ಊಟ ಮಾಡುವ’ ಎಂದು ಹೇಳಿ ಅವನನ್ನೊಪ್ಪಿಸಿದೆ. ಬಯಲುಸೀಮೆಯವರಿಗೆ ಕರಾವಳಿಯ ಗಂಜಿ ಊಟದ ಬಗ್ಗೆ ಕೊಂಚ ವಿವರಣೆ ಅಗತ್ಯ. ಹಿಟ್ಟು ಅಥವಾ ರವೆಯ ಅಂಟಂಟಾದ ಗಂಜಿಯಲ್ಲ ಇದು. ಕುಸುಬಲಕ್ಕಿಯನ್ನು ಹದವಾಗಿ ಬೇಯಿಸಿ, ಬೇಯಿಸಿದ ನೀರು ಬಸಿಯದೆ ಹಾಗೆಯೇ ಉಳಿಸಿ, ಬಿಸಿಬಿಸಿಯಾಗಿ ಬಡಿಸಿದರೆ ಅದೇ ಗಂಜಿಯೂಟ. ಒಂದು ಚಮಚೆ ತೆಂಗಿನೆಣ್ಣೆ ಒಂದು ಹೋಳು ಉಪ್ಪಿನಕಾಯಿ ಅಥವಾ ಕರಿಮೀನು ಮೇಲೆ ಬಡಿಸಿದರೆ ಮುಗಿಯಿತು. ನಿಜಕ್ಕೂ ಸುಧಾಮನ ಊಟವಿದು. ಊಟದ ರುಚಿ ಉಂಡವರಿಗೇ ಗೊತ್ತು.

ರಾಜಮಾರ್ಗದ ಮೇಲಿದ್ದೆವು. ಮಾರ್ಗದ ಇಕ್ಕೆಲಗಳಲ್ಲೂ ಬೋರ್ಡುಗಳ ನೆರವಿ. ಬೋರ್ಡುಗಳನ್ನು ನಂಬಿ ಊಟ ಉಂಡಿರೆಂದರೆ ಬೇಸ್ತು ಬಿದ್ದಿರೆಂದೇ ಸರಿ. ಬೋರ್ಡಿಲ್ಲದ ಜಾಗೆಗಳನ್ನು ಹುಡುಕುತ್ತ ಮುಂದುವರಿದೆವು. ಒಬ್ಬ ಯಜಮಾನರು, ‘ಇಲ್ಲೇ ಕೊಂಚ ಮುಂದೆ ಹೋಗಿ, ರಸ್ತೆಯ ಎಡಕ್ಕೆ ಊಟ ಸಿಕ್ಕುತ್ತದೆ’ ಅಂದರು. ಹೋದೆವು. ಹೊಗೆ ಹಿಡಿದು ಕರಕಲಾದ ಕಿಷ್ಕಿಂದದ ಒಂದು ಜಾಗೆ ಕಂಡಿತು. ಸಣ್ಣದೊಂದು ಬೋರ್ಡು ಸಹಿತ ಗೂಟವೊಂದಕ್ಕೆ ನೇತಾಡುತ್ತಿತ್ತು. ಡ್ರೈವರು ಹಿಂಜರಿದ. ಹುರಿದುಂಬಿಸಿ ಒಳನಡೆದೆ. ಒಳಗೆ ಕತ್ತಲು. ಮಣ್ಣಿನ ನೆಲಕ್ಕೆ ಗೂಟ ಬಡಿದು, ಮೇಲೆ ಅಡ್ಡಡ್ಡಲಾಗಿ ಹಲಗೆ ಬಡಿದು, ಮಾಡಿದ ಟೇಬಲ್ಲು. ಅದೇ ಮಾದರಿಯ ಬೆಂಚು ಕೂರಲಿಕ್ಕಿತ್ತು.

ಕೆಲವರು ಊಟ ಮಾಡುತ್ತಿದ್ದರು. ಅವರ ತಟ್ಟೆಯೊಳಗಿನಿಂದ ಗಂಜಿಯ ಹಬೆ ಏಳುತ್ತಿತ್ತು. ಹಾಗೂ ಪರಿಮಳ. ಅಲ್ಲಿ ಸಿಕ್ಕುತ್ತಿದ್ದುದು ಅದೊಂದೇ ಊಟ. ಹೇಳುವ ಕೇಳುವ, ಮೆನುಕಾರ್ಡು ಪಠಿಸುವ ಪ್ರಮೇಯವೇ ಬರಲಿಲ್ಲ. ಮತ್ತೊಮ್ಮೆ ಹೊರಹಾಯ್ದು, ರಸ್ತೆಯ ಬದಿಗಿಟ್ಟಿದ್ದ ಬಕೆಟ್ಟಿನಿಂದ ನೀರು ಹುಯ್ದುಕೊಂಡು ಕೈಕಾಲು ಮುಖ ತೊಳೆದುಕೊಂಡು, ಒಳಬಂದು ಕುಳಿತೆವು. ನೀರು ಶುದ್ಧವಿತ್ತು. ಮುಂಡು ಪಂಚೆ ಮೇಲಕ್ಕೆತ್ತಿ ಕಟ್ಟಿಕೊಂಡಿದ್ದ, ಬತ್ತಲೆ ಎದೆಯ ಆಸಾಮಿಯೊಬ್ಬ ಗಂಜಿ ತಟ್ಟೆ ತಂದಿಟ್ಟ. ಎಣ್ಣೆ ಬಡಿಸಿದ, ಉಪ್ಪಿನಕಾಯಿ ಬಡಿಸಿದ. ಒಂದು ಮಾದರಿಯ ತೊಕ್ಕು ತಂದು, ನನ್ನ ಮುಖಕಂಡು ಅನುಮಾನಪಟ್ಟುಕೊಂಡ. ಒಣಮೀನಿನ ಚಟ್ನಿ ಅಂದ. ಮುಗುಳುನಕ್ಕೆ. ಬಡಿಸಿ ಮುಂದೆ ಹೋದ.

ಉಂಡ ಊಟದ ಹಿತವನ್ನಿಲ್ಲಿ ವರ್ಣಿಸುತ್ತ ಕೂರುವುದಿಲ್ಲ. ಮುಂದುವರಿಯಬೇಕಿದೆ ನನಗೆ. ದೂರದಲ್ಲಿ ‘ರಂಗಮನೆಗೆ ದಾರಿ’ ಎಂಬ ವಿಚಿತ್ರವಾದ ಬೋರ್ಡೊಂದು ರಾಜಮಾರ್ಗದ ಮತ್ತೊಂದು ಬದಿಗೆ ತೂಗುತ್ತಿತ್ತು. ಮುಂಡು ಮೇಲಕ್ಕೆತ್ತಿಕೊಂಡು ಬಡಿಸುತ್ತಿದ್ದ ವ್ಯಕ್ತಿಯನ್ನೇ ಕೇಳಿದೆ. ಆತ ‘ಜೀವನರಾಮರ ಮನೆಯಲ್ಲವೋ ಅದು’ ಎಂದ. ಜೀವನರಾಮ ನನಗೆ ಪರಿಚಿತನಾದ ಒಬ್ಬ ರಂಗಕರ್ಮಿ. ಸುಳ್ಯದ ಮೂಲೆಯಲ್ಲೆಲ್ಲೋ ರಂಗಚಟುವಟಿಕೆ ನಡೆಸುತ್ತಿದ್ದಾನೆ, ಶೈಕ್ಷಣಿಕ ರಂಗಭೂಮಿ ಹಾಗೂ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಗೊತ್ತಿತ್ತು ನನಗೆ. ಅದೇ ಇರಬಹುದು ಇದು ಅನ್ನಿಸಿ ಕೇಳಿದೆ.

‘ಹೋ! ಜೀವನರಾಮ ಗೊತ್ತೋ ನಿಮಗೆ!’ ಎಂದು ನಕ್ಕ ಮುಂಡುಟ್ಟ ವ್ಯಕ್ತಿ. ಜೀವನರಾಮನ ಪುರಾಣ ಬಿಚ್ಚಿದ. ಬಿಚ್ಚುವ ಮೊದಲು, ‘ನಿಮಗೆಲ್ಲಿ ಆಯಿತು’ ಎಂದು ವಿಚಾರಿಸಿಕೊಂಡ. ‘ಜೀವನರಾಮ ಊರಲ್ಲಿದ್ದಾನೆಯೋ’ ಎಂದು ಕೇಳಿದೆ. ‘ಅಪ್ಪ ಇದ್ದಾನು, ಲಕ್ವ ಹೊಡೆದಿದೆಯಲ್ಲವೋ ಅವನಪ್ಪನಿಗೆ’ ಎಂದ. ಗಂಜಿಯೂಟದಿಂದಾಗಿ ಡ್ರೈವರ್ ಚೇತರಿಸಿಕೊಂಡಿದ್ದ. ‘ಹೋಗೋಣವೋ’ ಎಂದೆ. ‘ನಡೀರಿ ಸರ್’ ಅಂದ. ರಾಜಮಾರ್ಗದಿಂದ ಹೊರಳಿ, ಹಾವಿನಂತೆ ಹೊರಳುತ್ತ ಹೊರಳುತ್ತ, ಅಡ್ಡರಸ್ತೆಯಲ್ಲಿ ಹೊರಟೆವು.

ಕಿರುರಸ್ತೆ. ಇಕ್ಕೆಲಗಳಲ್ಲಿ ಮೋಟುಗೋಡೆಗಳು; ಅಂಗಡಿ ಮನೆ ಕೊಟ್ಟಿಗೆ ತೆಂಗಿನಮರ ಎಲ್ಲವೂ ಒತ್ತಿಕೊಂಡು ಬಂದಿದ್ದವು. ಒಂದೆರಡು ಬಾರಿ ದಾರಿತಪ್ಪಿದಂತಾದರೂ ಜನರ ಸಹಕಾರದಿಂದ ಜೀವನರಾಮನ ರಂಗಮನೆಯನ್ನು ತಲುಪಿದೆವು. ಸಣ್ಣ ಮನೆ, ದೊಡ್ಡ  ರಂಗಮಂದಿರವನ್ನು ನುಂಗಿಕೊಂಡಿತ್ತು. ಈಗ ಜೀರ್ಣಿಸಿಕೊಳ್ಳಲಾಗದೆ ಉಬ್ಬಸಪಡುತ್ತಿತ್ತು. ಎಲ್ಲಿ ನೋಡಿದರಲ್ಲಿ ಮುಖವಾಡಗಳು, ಮುಖವರ್ಣಿಕೆಗಳು ಹಾಗೂ ಪ್ಲಾಸ್ಟರಿನ ಮೂರ್ತಿಗಳು ಮಕಾಡೆ ಮಲಗಿದ್ದವು. ಕಾರಂತರು, ಬೇಂದ್ರೆ, ಕುವೆಂಪು, ರಂಭೆ, ಊರ್ವಶಿ ಇತ್ಯಾದಿ ಯಾರ್‌್್ಯಾರೋ ಇದ್ದರು ಮೂರ್ತಿರೂಪದಲ್ಲಿ. ಜೊತೆಗೆ ನಾಟಕದ ಚಿತ್ರಗಳು.

ರಂಗಭೂಮಿಯ ನವೋದಯದ ಬಗ್ಗೆ ಇತ್ತೀಚೆಗೆ ಉತ್ಸಾಹದಿಂದ ಮಾತನಾಡ ತೊಡಗಿದ್ದೇನೆ ನಾನು. ಮಾತು ಕೇಳಿದ ಹೆಚ್ಚಿನವರು, ಹುಚ್ಚುಮಾತು ಎಂಬಂತೆ ನನ್ನತ್ತ ನೋಡುತ್ತಾರೆ. ಗಿರೀಶ ಕಾರ್ನಾಡರು ಹಾಗೂ ಚಂದ್ರಶೇಖರ ಕಂಬಾರರು ಕನ್ನಡದ ಕಟ್ಟಕಡೆಯ ನಾಟಕಕಾರರು ಎಂದು ನಂಬಿದವರು ಇವರು. ಜ್ಞಾನಪೀಠವೆಂಬ ವ್ಯಾಪಾರಿ ಮೂಲದ, ಶ್ರೀಮಂತ ಪ್ರಶಸ್ತಿ ಕನ್ನಡ ಸಂಸ್ಕೃತಿಯ ಶ್ರೇಷ್ಠತೆಯ ಏಕೈಕ ಮಾನದಂಡ ಎಂದು ನಂಬಿದವರು ಇವರು. ತಿಪ್ಪೆಯ ಹುಡುಕಾಟಗಳು ಇವರಿಗೆ ಹುಚ್ಚುಚ್ಚಾಗಿ ಕಾಣುವುದು ಸಹಜವೇ ಇದೆ.

ಆದರೆ ಜೀವನರಾಮ ಇದ್ದಾನೆ, ರಂಗಭೂಮಿಯನ್ನು ಜನಪರಂಪರೆಯಾಗಿ ಕಟ್ಟುವ ಸಾಹಸಪಡುತ್ತಿದ್ದಾನೆ. ಗಿರೀಶ ಕಾರ್ನಾಡರು ಹಾಗೂ ಚಂದ್ರಶೇಖರ ಕಂಬಾರರು ಘಟಿಸಿ ಐವತ್ತು ವರ್ಷ ಕಳೆದುಹೋಗಿದೆ. ಕನ್ನಡ ಸಾಹಿತ್ಯ, ಅದರಲ್ಲೂ ನಾಟಕ ಸಾಹಿತ್ಯ ಮುದಿಯಾಗಿದೆ. ವಿಮರ್ಶಕರು ಮುದಿಯಾಗಿದ್ದಾರೆ. ಸಾಹಿತಿಗಳು ರಚಿಸುವ ನಾಟಕಗಳನ್ನು ಯಥಾವತ್ತಾಗಿ ಪ್ರದರ್ಶಿಸಲಿಕ್ಕಿರುವ ನಿರ್ಜೀವವೇದಿಕೆ ರಂಗಭೂಮಿ ಎಂದು ಇವರು ಈಗಲೂ ನಂಬುತ್ತಾರೆ.

ಜೀವನರಾಮ ಊರಿನಲ್ಲಿರಲಿಲ್ಲ. ಲಕ್ವ ಹೊಡೆದಿರುವ ಆತನ ತಂದೆ, ತನ್ನ ಸೊಟ್ಟ ಕೈಕಾಲುಗಳನ್ನೇ ಬಳಸಿಕೊಂಡು ರಂಗಮನೆಯ ತುಂಬ ಓಡಾಡಿಸಿದರು. ತೊದಲು ನುಡಿಯುತ್ತಿದ್ದರು. ಅಲ್ಲಿಯೇ ಬಿದ್ದಿದ್ದ ಮೊಬೈಲ್ ಕಂಡು, ಕೈಗೆತ್ತಿಕೊಂಡು ಅವರತ್ತ ಚಾಚಿ ‘ಜೀವನರಾಮನ ನಂಬರು ಒತ್ತಿ’ ಎಂದೆ, ‘ಒತ್ತಿ ಒತ್ತಿ’ ಅಂದೆ. ಒತ್ತಿದರು. ಜೀವನರಾಮನ ಮಾತುಗಳು ಮೊಬೈಲಾಗಿ ಕೇಳಿಸತೊಡಗಿದವು. ಭಾವುಕನಾಗಿದ್ದ.

‘ಮನೆಯಲ್ಲಿ ಮತ್ತಾರೂ ಇಲ್ಲವೊ’ ಎಂದು ಕೇಳಿದೆ. ಯಾರೂ ಇದ್ದಂತೆ ಕಾಣುತ್ತಿರಲಿಲ್ಲ. ‘ತಂದೆಯ ಅಕ್ಕ ಒಬ್ಬರಿದ್ದಾರೆ... ಕಣ್ಣು ಕಾಣದು ಅವರಿಗೆ, ಹಾಸಿಗೆ ಹಿಡಿದಿದ್ದಾರೆ... ತಂದೆಯೇ ನೋಡಿಕೊಳ್ಳುತ್ತಾರೆ’ ಅಂದ. ತಾನು ಮೂಡುಬಿದರೆಯಲ್ಲಿ ನಾಟಕ ಮಾಡಿಸುತ್ತಿರುವ ವಿಚಾರ ತಿಳಿಸಿದ. ಜೀವನರಾಮನ ತಂಗಿಯೂ ನಾಟಕ ಮಾಡಿಸುತ್ತಾಳೆ. ಅವಳ ಬಗ್ಗೆ ವಿಚಾರಿಸಿದೆ. ಧಾರವಾಡದಲ್ಲಿದ್ದಾಳೆ ಅಂದ. ‘ತಂದೆಯವರು ಹೋಗೇಬಿಟ್ಟಿದ್ದರು ಸರ್!... ಎರಡು ಬಾರಿ ಬಾಯಿಗೆ ನೀರು ಬಿಟ್ಟಿದ್ದೆ. ರಂಗಮನೆಯ ಚಟುವಟಿಕೆಯಿಂದಾಗಿ, ಈಗ ಚೇತರಿಸಿಕೊಂಡಿದ್ದಾರೆ’ ಅಂದ. ಹೌದು ಹೌದು ಎಂದು ಗೋಣಾಡಿಸಿ ಹಲ್ಲುಕಿರಿದರು ತಂದೆ. ಸೊಟ್ಟಗಾದ ಬದುಕಿನ ನಡುವೆಯೂ ನೆಟ್ಟಗಿರುವ ಇವರ ಜೀವನೋತ್ಸಾಹ ಕಂಡು ಕಣ್ಣು ತುಂಬಿ ಬಂದಿತು.

ಜೀವನರಾಮನ ರಂಗಮನೆಗೂ, ಗಂಜಿಯೂಟ ಬೇಯಿಸಿ ಕರಕಲಾದ ಊಟದ ಮನೆಗೂ ನಂಟಿದೆ, ಇರಬೇಕು. ನವೋದಯ ಕಾಲದಲ್ಲಿ, ಸಾಹಿತಿ ಕಲಾವಿದರಿಗೂ ಜನ ಪರಂಪರೆಗಳಿಗೂ ನಡುವೆ ನಂಟಿರುತ್ತಿತ್ತು. ಸುಳ್ಯ, ಪುತ್ತೂರು, ಕುಪ್ಪಳಿ, ಸಾಧನಕೇರಿಗಳು ಆಗೆಲ್ಲ ಗ್ರಾಮಗಳಾಗಿದ್ದವು. ಕಾಡಿನ ಅಂಚಿನಲ್ಲಿ ನಾಡು, ನಾಡಿನ ಅಂಚಿನಲ್ಲಿ ಕಾಡು ಇರುತ್ತಿತ್ತು. ಇವುಗಳ ನಡುವಣ ಅನುಸಂಧಾನವನ್ನು ಚಿತ್ರಿಸುತ್ತಿದ್ದರು ನವೋದಯ ಸಾಹಿತಿಗಳು; ಹೊಸ ವಿಚಾರಗಳು ಹಾಗೂ ಹಳೆಯ ಪರಂಪರೆಗಳ ನಡುವಿನ ಅನುಸಂಧಾನ, ಹೊಸ ಜನಗಳು ಹಾಗೂ ಹಳೆಯ ಸಭ್ಯತೆಯ ನಡುವಿನ ಅನುಸಂಧಾನ ಚಿತ್ರಿಸುತ್ತಿದ್ದರು.

ಈಗ, ಅನುಸಂಧಾನ ಸಾಧ್ಯವೇ ಇಲ್ಲದಷ್ಟು ಛಿದ್ರವಾಗಿ ಹೋಗಿದೆ ಸಮಾಜ: ಜನರು, ಪರಂಪರೆಗಳು, ಪ್ರಕೃತಿ ಎಲ್ಲವೂ ಛಿದ್ರವಾಗಿ ಹೋಗಿವೆ. ಸುಳ್ಯ, ಪುತ್ತೂರು, ಸಾಧನಕೇರಿಗಳು ಗಲೀಜು ತುಂಬಿದ ನಗರಗಳಾಗಿವೆ. ಸಾಹಿತಿ, ಕಲಾವಿದರು, ಚಿಂತಕರು ನಗರ ಸೇರಿಕೊಂಡಿದ್ದಾರೆ. ಸಂವಹನ ಕಾರಖಾನೆಗಳಲ್ಲಿ ಅಥವಾ ದುಡ್ಡಿರುವ ವಿದ್ಯಾಸಂಸ್ಥೆಗಳಲ್ಲಿ ಅವರಿಗೆ ಬೇಡಿಕೆ ಬಂದಿದೆ. ಅವರು ತಯಾರಿಸುವ ಸೀರಿಯಲ್ಲುಗಳು ಸಿನಿಮಾಗಳು ಹಾಗೂ ಡಿಗ್ರಿಗಳಿಗೆ ಬೇಡಿಕೆ ಬಂದಿದೆ.

ಕಾರ್ನಾಡರಾಗುವುದು ಈಗ ಸುಲಭ. ಜೀವನರಾಮರಾಗುವುದು ಕಷ್ಟ, ಆಗಿ ಸುಳ್ಯದ ಹೊರವಲಯದಲ್ಲಿ ಬದುಕಿ ಉಳಿಯುವುದು ಕಷ್ಟ. ಆದರೂ ಉಳಿದಿದ್ದಾರೆ ಕೆಲವರು ರಾಜ್ಯದ ಹೊರವಲಯಗಳಲ್ಲಿ. ಹೊಸಪೇಟೆಯಲ್ಲೊಬ್ಬ ಪಿಂಜಾರ, ಹಾಸಿಗೆ ಮಾಡುತ್ತಿದ್ದವನು, ಬೀದಿಮಕ್ಕಳಿಗೆ ನಾಟಕ ಮಾಡಿಸುತ್ತಿದ್ದಾನೆ. ಮಂತ್ರ ಹೇಳುತ್ತಿದ್ದ ಉತ್ತರ ಕನ್ನಡದ ಭಟ್ಟರೊಬ್ಬರು ನಾಟಕಗಳಿಗೆ ಆಂಗಿಕವನ್ನು ಪೋಣಿಸುತ್ತಿದ್ದಾರೆ. ಕೋಲಾರದ ರಾಮಯ್ಯ ಹಾಡು ಪೋಣಿಸುತ್ತಿದ್ದಾನೆ. ಸರಸ್ವತಿ ಸಣ್ಣತಿಮ್ಮಿಯ ರಾಮಾಯಣ ಪೋಣಿಸುತ್ತಿದ್ದಾಳೆ. ಉಲ್ಲಾಳದ ಚಂದ್ರಹಾಸ ಕಡಲತಡಿಯಲ್ಲಿ ಇದೇ ಕೆಲಸ ಮಾಡುತ್ತಿದ್ದಾನೆ... ಇತ್ಯಾದಿ.

ದೊಡ್ಡ ವ್ಯವಸ್ಥೆಗಳು ಭ್ರಷ್ಟವಾಗತೊಡಗಿವೆ, ಪಾಪಿಷ್ಟವಾಗತೊಡಗಿವೆ. ಪತ್ರಿಕೆಯ ಮುಖಪುಟಗಳಲ್ಲಿ ಹಾಗೂ ಚಾನೆಲ್‌ಗಳಲ್ಲಿ ಭ್ರಷ್ಟತೆಯನ್ನು ನೋಡಿ ನೋಡಿ ಮನಸ್ಸು ಕೆಡಿಸಿಕೊಳ್ಳುತ್ತಿದ್ದೇವೆ ನಾವು. ನಿಜ, ದೊಡ್ಡ ಪೇಟೆ, ದೊಡ್ಡ ವೃತ್ತಿ ದೊಡ್ಡ ಹಣಗಳನ್ನು ತೊರೆಯುವುದು ಕಷ್ಟ. ತೊರೆಯಲಾಗದಿದ್ದರೇನಂತೆ, ಜನಪರಂಪರೆಗಳ ಜೊತೆ ಸ್ನೇಹ ಸಾಧಿಸಬಹುದು ತಾನೆ, ತಕ್ಷಣಕ್ಕಂತು.

ಜೀವನರಾಮನ ತಂದೆಗೆ ನಮಿಸಿ ನಿರ್ಗಮಿಸಿದೆ. ಸಂಪಾಜೆಯ ಘಾಟಿಯ ಉದ್ದಕ್ಕೂ ಗಿರಿಕಂದರಗಳ ನಡುವೆ, ಗಾಡಿ ನಿಲ್ಲಿಸಿ ನಿಲ್ಲಿಸಿ, ಮೈಸೂರು ತಲುಪುವುದನ್ನು ಎಷ್ಟೆಷ್ಟು ತಡಮಾಡಬಹುದೋ ಅಷ್ಟೆಲ್ಲ ಮಾಡಿ, ಕೊನೆಗೊಮ್ಮೆ ಮೈಸೂರು ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry