ಏಕ ವ್ಯಕ್ತಿಯ ಸಾಮರ್ಥ್ಯ ಒರೆಗಲ್ಲಿಗೆ

6

ಏಕ ವ್ಯಕ್ತಿಯ ಸಾಮರ್ಥ್ಯ ಒರೆಗಲ್ಲಿಗೆ

ಶೇಖರ್‌ ಗುಪ್ತ
Published:
Updated:
ಏಕ ವ್ಯಕ್ತಿಯ ಸಾಮರ್ಥ್ಯ ಒರೆಗಲ್ಲಿಗೆ

ಕಳಂಕಿತ ವ್ಯಕ್ತಿತ್ವದ ಆರೋಪ ಇರದ ಮತ್ತು ಭವಿಷ್ಯದ ಬಗ್ಗೆ ದುರಾಸೆ ಇಲ್ಲದ ಪ್ರಾಮಾಣಿಕ ವ್ಯಕ್ತಿಯೊಬ್ಬನಿಂದ ಮಾತ್ರ ಸಂಸ್ಥೆಯೊಂದರ ಘನತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ನಾನು, 2010ರಲ್ಲಿ ಪ್ರಕಟವಾಗಿದ್ದ ಅಂಕಣದಲ್ಲಿ ಬರೆದಿದ್ದೆ. ಆ ಸಾಲುಗಳು ಈಗ ಮತ್ತೆ ನನಗೆ ನೆನಪಾಗುತ್ತಿವೆ. ಹಿಂದಿನ ಬರಹದಲ್ಲಿ ಇದ್ದ  ‘ಸಂಸ್ಥೆಯೊಂದರ’ ಶಬ್ದದ ಬದಲಿಗೆ, ಸದ್ಯದ ಸಂದರ್ಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಂತಹ ಸಂಸ್ಥೆಗಳ ಹೆಸರನ್ನು ಸೇರಿಸಲು ಬಯಸುವೆ.

ಅಂಕಣಕಾರನೊಬ್ಬ ತಾನೇ ಬರೆದ ಸಾಲುಗಳನ್ನು ಬೇರೊಂದು ಸಂದರ್ಭದಲ್ಲಿ ಯಥಾವತ್ತಾಗಿ ಬಳಸಿಕೊಂಡರೆ ಅದು ಖಂಡಿತವಾಗಿಯೂ ಕೃತಿಚೌರ್ಯವಾಗಲಾರದು. ಆದರೆ, ಕೆಲವರು ನನ್ನನ್ನು ಈ ಕಾರಣಕ್ಕೆ ತನ್ನಷ್ಟಕ್ಕೆ ತಾನೇ ಬೆನ್ನು ಚಪ್ಪರಿಸಿಕೊಳ್ಳುವ ಸ್ವಪ್ರತಿಷ್ಠೆಯ ಅಥವಾ ಆಲಸಿ ಲೇಖಕ ಎಂದೂ ದೂರಬಹುದು. ಹೀಗಾಗಿ ನಾನು ಈ ಹಿಂದೆ ಬರೆದಿದ್ದ ಲೇಖನದಲ್ಲಿನ ಸಂಸ್ಥೆಯ ಹೆಸರಿನ ಬದಲಿಗೆ ‘ಆರ್‌ಬಿಐನಂತಹ...’ ಎನ್ನುವ ಹೊಸ ಶಬ್ದ ಸೇರಿಸಲು ಇಷ್ಟಪಡುವೆ.ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತರಾದ, ಅಸಾಧಾರಣ ವ್ಯಕ್ತಿತ್ವದ  ಕೆ.ಜೆ.ರಾವ್‌ ಅವರು ಬರೆದಿದ್ದ ‘ದಿ ಕೋಬ್ರಾ ಡಾನ್ಸರ್‌’ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ವರ್ಮಾ ಅವರು ಆಡಿದ ಮಾತು, ಆರು ವರ್ಷಗಳ ಹಿಂದೆ ನಾನು ಬರೆದ ಸಾಲುಗಳನ್ನು ಮತ್ತೆ ನೆನಪಿಸುವಂತೆ ಮಾಡಿತು. ಬಿಹಾರದಲ್ಲಿ ಮೊದಲ ಬಾರಿಗೆ, ಅತ್ಯಂತ ಕಟ್ಟುನಿಟ್ಟಾಗಿ ದಕ್ಷತೆಯಿಂದ ಚುನಾವಣೆ ನಡೆಸಿದ್ದರಿಂದ ಲಾಲು ಪ್ರಸಾದ್‌ ಅವರ ಕುಟುಂಬದ ಆಡಳಿತ ಕೊನೆಗೊಂಡಿತ್ತು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ, ನಾನು ನ್ಯಾಯಮೂರ್ತಿ ವರ್ಮಾ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದೆ. ‘ಪರಿಮಿತ ಅಧಿಕಾರ ಹೊಂದಿರುವ ವ್ಯಕ್ತಿಯೊಬ್ಬ ಸೀಮಿತ ಅವಧಿಯಲ್ಲಿ ಸಂಸ್ಥೆಯೊಂದರ ವರ್ಚಸ್ಸನ್ನು ಆಮೂಲಾಗ್ರವಾಗಿ ಬದಲಾಯಿಸಲು ಸಾಧ್ಯವಾಗುವುದೇ?’ ಎನ್ನುವುದು ನನ್ನ ಪ್ರಶ್ನೆಯಾಗಿತ್ತು.ಅದಕ್ಕೆ ಪ್ರತಿಕ್ರಿಯಿಸಿದ್ದ ವರ್ಮಾ, ‘ಅದೊಂದು ಕಠಿಣ ಸವಾಲು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರೂ, ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯ. ವ್ಯಕ್ತಿಯೊಬ್ಬನಲ್ಲಿ ಕನಿಷ್ಠ ಎರಡು ಅರ್ಹತೆಗಳಿದ್ದರೆ ಆತ ಸಂಸ್ಥೆಯೊಂದನ್ನು ಪೂರ್ಣ ಪ್ರಮಾಣದಲ್ಲಿ ಬದಲಿಸಿ, ಸಂವಿಧಾನ ರಚನೆಕಾರರ ಉದಾತ್ತ ಆಶೋತ್ತರಗಳನ್ನು ಈಡೇರಿಸಬಲ್ಲ. ಮೊದಲನೆಯದಾಗಿ, ಆತನ ಬೆನ್ನಿಗೆ ಕಪಟ– ವಂಚನೆಗಳ ಆರೋಪಗಳು ಇರಬಾರದು.

ಭವಿಷ್ಯದ ಬಗ್ಗೆ ಆತನಲ್ಲಿ ಯಾವುದೇ ದುರಾಸೆಗಳೂ ಇರಬಾರದು. ಇದು ಮೇಲ್ನೋಟಕ್ಕೆ ತುಂಬ ಸರಳವಾಗಿ ಕಾಣುತ್ತದೆ. ಆದರೆ, ಇಂತಹ ಅರ್ಹತೆ ಹೊಂದಿರುವ ವ್ಯಕ್ತಿಗಳು ಸಿಗುವುದು ಅಪರೂಪ. ಅದರಲ್ಲೂ ವಿಶೇಷವಾಗಿ ನಮ್ಮ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗೆ ಏರುವವರಲ್ಲಿ ಇಂತಹ ಗುಣವಿಶೇಷಗಳು ಕಾಣಸಿಗುವುದು ತುಂಬ ವಿರಳ’ ಎಂದು ಹೇಳಿದ್ದರು.ನಿವೃತ್ತ  ನ್ಯಾಯಮೂರ್ತಿ ವರ್ಮಾ ಅವರದ್ದು ಆದರ್ಶ ವ್ಯಕ್ತಿತ್ವ. ನೈತಿಕ ಮೌಲ್ಯಗಳ ಮೂರ್ತ ರೂಪವೂ ಅವರಾಗಿದ್ದಾರೆ. ದೇಶದ ಎರಡು ಉನ್ನತ ಸಂಸ್ಥೆಗಳಾದ  ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸ್ವರೂಪ ಮತ್ತು ಧೋರಣೆ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಮೂರು ದಶಕಗಳ ಹಿಂದೆ ಇಂದಿರಾ ಗಾಂಧಿ ಅವರ ಸರ್ವಾಧಿಕಾರದ ಉಚ್ಛ್ರಾಯ ಕಾಲದಲ್ಲಿಯೂ, ನ್ಯಾಯಮೂರ್ತಿ ಎಚ್‌.ಆರ್‌.ಖನ್ನಾ ಅವರೂ ಇದೇ ಬಗೆಯಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದರು. ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್‌ ಯಾವತ್ತೂ ವಿಫಲವಾಗುವುದಿಲ್ಲ ಎನ್ನುವುದನ್ನು ಅವರು ಸಾಧ್ಯ ಮಾಡಿ ತೋರಿಸಿದ್ದರು.ಇದೇ ಬಗೆಯ ಆದರ್ಶ ವ್ಯಕ್ತಿತ್ವ ಹೊಂದಿದ್ದ ಇತರರ ಹೆಸರನ್ನೂ ಇಲ್ಲಿ ಉಲ್ಲೇಖಿಸಬೇಕು. ಅಂತಹ ವಿಶಿಷ್ಟ ವ್ಯಕ್ತಿಗಳಲ್ಲಿ ಟಿ.ಎನ್‌.ಶೇಷನ್‌ ಅವರೂ ಒಬ್ಬರು.  ಚುನಾವಣಾ ಆಯೋಗವನ್ನು ‘ಕಾಗದದ ಹುಲಿ’ಯಿಂದ ‘ನಿಜವಾದ ಹುಲಿ’ ಎಂದು ಸಾಧ್ಯ ಮಾಡಿ ತೋರಿಸಿದ ಅಪರೂಪದ ವ್ಯಕ್ತಿ. ಚುನಾವಣಾ ಆಯೋಗದ ಕೆಲಸದಲ್ಲಿ ನಡೆಯುತ್ತಿದ್ದ ರಾಜಕೀಯ ಹಸ್ತಕ್ಷೇಪಕ್ಕೆ ಮಂಗಳ ಹಾಡಿ, ಮೂವರು ಸದಸ್ಯರ ಆಯೋಗದ ರಚನೆಗೂ ಕಾರಣರಾಗಿದ್ದರು. ಶೇಷನ್‌ ಉತ್ತರಾಧಿಕಾರಿಯಾಗಿದ್ದ ಜೆ.ಎಂ.ಲಿಂಗ್ಡೊ ಅವರೂ ಚುನಾವಣಾ ಆಯೋಗಕ್ಕೆ ಹೊಸ ಸ್ವರೂಪ ನೀಡಲು ದೃಢ ಸಂಕಲ್ಪದಿಂದ ಶ್ರಮಿಸಿದ್ದರು. ಕೇಂದ್ರೀಯ ತನಿಖಾ ಪಡೆ (ಸಿಬಿಐ), ಕೇಂದ್ರೀಯ ವಿಚಕ್ಷಣಾ ಆಯೋಗದಲ್ಲಿಯೂ (ಸಿವಿಸಿ) ಇದೇ ಬಗೆಯ ದಿಟ್ಟ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದರೆ ಈ ಎರಡೂ ಸಂಸ್ಥೆಗಳ ಕಾರ್ಯವೈಖರಿಯೂ ಗಮನಾರ್ಹವಾಗಿ ಬದಲಾಗಬಹುದಿತ್ತು. 2010ರ ಮಧ್ಯಭಾಗದಲ್ಲಿ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ತೀವ್ರಗೊಂಡಿತ್ತು. ಕೋಟ್ಯಂತರ ರೂಪಾಯಿ ಹಗರಣಗಳು ಬೆಳಕಿಗೆ ಬಂದು ಜನರನ್ನು ಕ್ರೊಧಾವಿಷ್ಟರನ್ನಾಗಿ ಮಾಡಿದ್ದವು. ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಜನರು ಬೀದಿಗೆ ಇಳಿದಿದ್ದರು.

ಜನ ಲೋಕಪಾಲ್‌ ಮಸೂದೆಯನ್ನು ಮುಂಚೂಣಿಗೆ ತರಲೂ ಕೆಲವರು ಮುಂದಾಗಿದ್ದರು. ಆ ವೇಳೆ ಕಳಂಕಿತ ಹಿನ್ನೆಲೆ ಇಲ್ಲದ, ತನ್ನ ಭವಿಷ್ಯದ ಬಗ್ಗೆ ಕಿಂಚಿತ್ತೂ ದುರಾಸೆ ಭಾವನೆ ಹೊಂದಿಲ್ಲದ ಆದರ್ಶ ಪೊಲೀಸ್‌ ಅಧಿಕಾರಿ ಅಥವಾ ಮುಖ್ಯ ವಿಚಕ್ಷಣಾ ಆಯುಕ್ತರು ಅಧಿಕಾರದಲ್ಲಿ ಇದ್ದಿದ್ದರೆ ಸಿಬಿಐ, ಸಿವಿಸಿಗಳ ನಿಜವಾದ ಕಾರ್ಯಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳ ಸ್ವರೂಪವನ್ನು ಸಮರ್ಥವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದರು. ಅಂಥ ಕನಸೊಂದು ನನಸಾಗಿದ್ದರೆ, ನೆರೆಹೊರೆಯವರ ಮೇಲೆ ಬೇಹುಗಾರಿಕೆ ನಡೆಸುವ, ಭ್ರಷ್ಟರಿಗಾಗಿ ಹೊಸ ಜೈಲು ನಿರ್ಮಾಣ ಮಾಡುವ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ಕಾನೂನು ಮಾಡುವ ಅಗತ್ಯವೇ ಉದ್ಭವಿಸುತ್ತಿರಲಿಲ್ಲ. ಆದರೆ, ಇದಾವುದೂ ನಿಜವಾಗಲಿಲ್ಲ. ಪ್ರತಿ ಬಾರಿ ಹೊಸ ನಿರ್ದೇಶಕ ಅಧಿಕಾರ ವಹಿಸಿಕೊಂಡಾಗಲೆಲ್ಲ, ಸಿಬಿಐ ವೃತ್ತಿಪರವಾಗಿ ಮತ್ತು ನೈತಿಕವಾಗಿ ಹಿಮ್ಮುಖವಾಗಿ ಚಲಿಸಿತ್ತು. ಬರೀ ಭಯಪಡಿಸುವ ವರ್ಚಸ್ಸಿನಿಂದ ಸಿಬಿಐ ಇದುವರೆಗೂ ಹೊರಗೇ ಬಂದಿಲ್ಲ. ಸಿವಿಸಿ ವಿಷಯದಲ್ಲಿಯೂ ಇದೇ ಮಾತನ್ನು ಹೇಳಬಹುದು. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಗರಿಷ್ಠ ಅಧಿಕಾರ ಹೊಂದಿರುವ ಸಿವಿಸಿಯ ಸಮರ್ಥ ಮುಖ್ಯಸ್ಥರ ಹೆಸರುಗಳು ಬೆರಳೆಣಿಕೆಯಷ್ಟೂ ಇರಲಾರದು.

ಸಿವಿಸಿಯ ಹಾಲಿ ಮುಖ್ಯಸ್ಥರ ಹೆಸರನ್ನೂ ಯಾರೊಬ್ಬರೂ ಉಲ್ಲೇಖಿಸಲಾರರು. ಪ್ರಧಾನಿಗೆ ಹಣ ಸಂದಾಯ ಮಾಡಿರುವ ವಿವಾದಾತ್ಮಕ ವಿವರಗಳನ್ನು ಒಳಗೊಂಡಿರುವ ಸಹಾರಾ ಮತ್ತು ಬಿರ್ಲಾ ಡೈರಿಗಳಲ್ಲಿ ಇರುವ ಮಾಹಿತಿ ಬಗ್ಗೆ ಆದಾಯ ತೆರಿಗೆ ವಿಚಾರಣೆ ನಡೆಸಿದ ಅಧಿಕಾರಿಯ ಹೆಸರನ್ನಷ್ಟೇ ಕಾಂಗ್ರೆಸ್‌ ಮತ್ತು ಎಎಪಿ ಟೀಕಾಕಾರರು ಉಲ್ಲೇಖಿಸಿದ್ದಾರಷ್ಟೆ.ಇವೆಲ್ಲವನ್ನೂ ನೋಡಿದಾಗ, ನಮ್ಮೆಲ್ಲ ಉನ್ನತ ಸಂಸ್ಥೆಗಳ ಹಣೆಬರಹ ಒಂದೇ ಬಗೆಯಲ್ಲಿ ಇರುವುದು ಸ್ಪಷ್ಟಗೊಳ್ಳುತ್ತದೆ. ವರ್ಮಾ ಅವರ ನಂತರ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಅವರ ಹೆಸರು ನಮಗೆ ಹೆಚ್ಚು ಚಿರಪರಿಚಿತವಾಗಿದೆ. ನಿವೃತ್ತಿ ನಂತರ ಲೋಧಾ ಅವರು ಭಾರತೀಯ ಕ್ರಿಕೆಟ್‌ ಮಂಡಳಿಯಲ್ಲಿ (ಬಿಸಿಸಿಐ) ಸುಧಾರಣೆ ತರುವ ಸಮಿತಿಯ ಮುಖ್ಯಸ್ಥರಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ.ದೇಶದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬಂದು 25 ವರ್ಷಗಳು ಕಳೆದಿದ್ದರೂ, ಈಗಲೂ ದೂರಸಂಪರ್ಕ, ವಿಮೆ, ಪೆಟ್ರೋಲಿಯಂ ಮತ್ತು ಪರಿಸರ ವಿಷಯಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಸಂಸ್ಥೆಗಳು ಅಸ್ತಿತ್ವಕ್ಕೆ ಬರುತ್ತಲೇ ಇವೆ.  ಇವೆಲ್ಲವು ಇನ್ನೂ ಹೊಸದಾಗಿವೆ, ಅವುಗಳ ಕೆಲಸ ಇನ್ನೂ ಪ್ರಗತಿಯಲ್ಲಿ ಇದೆ ಎಂದು ಕೆಲವರು ಹೇಳಬಹುದು. ನ್ಯಾಯಮೂರ್ತಿ ವರ್ಮಾ ಅವರು ವ್ಯಾಖ್ಯಾನಿಸಿರುವಂತೆ, ಈ ಎಲ್ಲ ನಿಯಂತ್ರಣ ಸಂಸ್ಥೆಗಳು ‘ಪ್ರಭಾವಿ ವ್ಯಕ್ತಿಯ’ ಸ್ಪರ್ಶಕ್ಕಾಗಿ ಎದುರು ನೋಡುತ್ತಿವೆ.ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ನಿಯಂತ್ರಣ ಸಂಸ್ಥೆಗಳ ಪೈಕಿ, ಯು.ಕೆ.ಸಿನ್ಹಾ ಅವರು ಮುಖ್ಯಸ್ಥರಾಗಿರುವ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಗಮನ ಸೆಳೆಯುತ್ತಿದೆ. ಇವರ ಅಧಿಕಾರಾವಧಿಯೂ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ.  ಸಹಾರಾ ಸಂಸ್ಥೆಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆಯಲು ಸಿನ್ಹಾ ಅವರು ತೋರಿದ ದಿಟ್ಟತನದಿಂದಾಗಿ ಸಹಾರಾ ಮುಖ್ಯಸ್ಥ ಸುಬ್ರತ ರಾಯ್‌ ಜೈಲು ಮುಖ ಕಾಣಬೇಕಾಯಿತು.

ಸಹಾರಾ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರ್ತಿಸಲು ಸಿನ್ಹಾ ಪ್ರದರ್ಶಿಸಿದ ಧೈರ್ಯವನ್ನು ಅವಗಣನೆ ಮಾಡುವುದು ಸರಿಯಲ್ಲ. ಸಹಾರಾ ಸಂಸ್ಥೆ ಅದೆಷ್ಟರ ಮಟ್ಟಿಗೆ ಪ್ರಭಾವಶಾಲಿ ಎನ್ನುವುದಕ್ಕೆ ರಾಯ್‌ ಅವರು ಜೈಲಿನಲ್ಲಿದ್ದುಕೊಂಡು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡರ (ಗುಲಾಂ ನಬಿ ಆಜಾದ್‌) ಉಪಸ್ಥಿತಿಯೇ ಸಾಕ್ಷಿ. 

ಆದಾಯ ತೆರಿಗೆ ದಾಳಿಯಲ್ಲಿ ವಶಪಡಿಸಿಕೊಂಡಿರುವ ಡೈರಿಯಲ್ಲಿದ್ದ ಮಾಹಿತಿ ಆಧರಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಸಹಾರಾ ಸಂಸ್ಥೆಯಿಂದ ಲಂಚ ಪಡೆದಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುರುತರ ಆರೋಪ ಮಾಡಿದ ದಿನವೇ ಈ ಪುಸ್ತಕ ಬಿಡುಗಡೆ ಸಮಾರಂಭ ನಡೆದಿತ್ತು.ನಮ್ಮೆಲ್ಲ ಉನ್ನತ ಹಣಕಾಸು ಸಂಸ್ಥೆಗಳ ಪೈಕಿ ಭಾರತೀಯ ರಿಸರ್ವ್ ಬ್ಯಾಂಕ್‌ ಅತ್ಯಂತ ಹಳೆಯ ಸಂಸ್ಥೆಯಾಗಿದೆ. ದಶಕಗಳ ಕಾಲ ಜನಮನ್ನಣೆಗೆ ಪಾತ್ರವಾಗಿರುವ ವರ್ಚಸ್ಸು  ಇದರದ್ದು. ಮುಂಬೈನಲ್ಲಿ ಇರುವ ಆರ್‌ಬಿಐ ಮುಖ್ಯ ಕಚೇರಿಯಲ್ಲಿನ ಗವರ್ನರ್ ಅವರ ಭೇಟಿಗೆ ಕಾಯುವ ಕೋಣೆಯ ಗೋಡೆಯ ಮೇಲೆ ಇರುವ ಮಾಜಿ ಗವರ್ನರ್‌ಗಳ ಭಾವಚಿತ್ರಗಳು ಪ್ರತಿಯೊಬ್ಬರ ಗಮನ ಸೆಳೆಯುತ್ತವೆ. ಅವುಗಳನ್ನು ನೋಡುತ್ತಿದ್ದರೆ, ದೇಶದ ಆರ್ಥಿಕ ಇತಿಹಾಸವು ಕ್ಷಣಮಾತ್ರದಲ್ಲಿ ಕಣ್ಮುಂದೆ ಬಂದು ಹೋಗುತ್ತದೆ.

ನ್ಯಾಯಾಂಗ, ಚುನಾವಣಾ ಆಯೋಗ, ಮಹಾಲೇಖಪಾಲ (ಸಿಎಜಿ), ಕೇಂದ್ರೀಯ ವಿಚಕ್ಷಣಾ ಆಯೋಗದಂತೆ (ಸಿವಿಸಿ) ಭಾರತೀಯ ರಿಸರ್ವ್‌ ಬ್ಯಾಂಕ್‌  ಕಾನೂನುಬದ್ಧ ಸ್ವಾಯತ್ತ ಸಂಸ್ಥೆ ಏನಲ್ಲ. ಆರ್‌ಬಿಐ, ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಮೂಲಕ ಸಂಸತ್ತಿಗೆ ಉತ್ತರ ನೀಡುವ ಪ್ರಮುಖ ಹೊಣೆಗಾರಿಕೆ ಹೊಂದಿದೆ.ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರತಿ ಸರ್ಕಾರವು, ಆರ್‌ಬಿಐನ ಘನತೆಗೆ ಕುಂದು ತರಲು, ಅದರ ಸ್ವಾಯತ್ತತೆಗೆ ಧಕ್ಕೆ ತರಲು ಯಾವೊತ್ತೂ ಪ್ರಯತ್ನಿಸಿಲ್ಲ. ಗವರ್ನರ್‌ ಮತ್ತು ಕೇಂದ್ರ ಹಣಕಾಸು ಸಚಿವರ ಮಧ್ಯೆ ಕೆಲವು ಬಾರಿ ಬಿಗುವಿನ ಪರಿಸ್ಥಿತಿ ಉದ್ಭವಿಸಿದ ನಿದರ್ಶನಗಳೂ ಇವೆ. ವೈ.ವಿ.ರೆಡ್ಡಿ ಮತ್ತು ಅವರ ಉತ್ತರಾಧಿಕಾರಿಯಾಗಿ ಬಂದ ಡಿ.ವಿ.ಸುಬ್ಬರಾವ್‌ ಹಾಗೂ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಮತ್ತು ಪ್ರಣವ್‌ ಮುಖರ್ಜಿ ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಕಂಡು ಬಂದಿದ್ದವು. ರಘುರಾಂ ರಾಜನ್‌ ಅವರ ಜತೆಗೂ ಉದ್ಭವಿಸಬಹುದಾಗಿದ್ದ  ಇಂತಹದ್ದೇ ಬಿಕ್ಕಟ್ಟಿನ ಸಂದರ್ಭವನ್ನು, ಅವರ ಸೇವಾವಧಿಯನ್ನು ಎರಡನೇ ಬಾರಿಗೆ ವಿಸ್ತರಿಸದ ಮೂಲಕ ಕೇಂದ್ರ ಸರ್ಕಾರವು ದೂರ ಮಾಡಿತ್ತು.

ಹಾಲಿ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳುಗಳಾಗಿವೆ. ಈ ಅಲ್ಪಾವಧಿಯಲ್ಲಿಯೇ ಆರ್‌ಬಿಐ, ನೋಟು ರದ್ದತಿಯಂತಹ ದೂರಗಾಮಿ ಪರಿಣಾಮ ಬೀರುವ ಮಹತ್ವದ ನಿರ್ಧಾರ ತೆಗೆದುಕೊಂಡಿತು.ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರದಲ್ಲಿ ಕೇಂದ್ರೀಯ ಬ್ಯಾಂಕ್‌ ವಾಸ್ತವದಲ್ಲಿ ಯಾವ ಪಾತ್ರ ನಿರ್ವಹಿಸಿದೆ ಎನ್ನುವುದು ಚರ್ಚಾಸ್ಪದ ವಿಷಯವಾಗಿದೆ.  ದೆಹಲಿಯ ನಾರ್ತ್‌ ಬ್ಲಾಕ್‌ ಅಥವಾ ಮುಂಬೈನ ಮಿಂಟ್‌ ಸ್ಟ್ರೀಟ್‌ನಲ್ಲಿ ಕೇಳಿ ಬರುವ ಪಿಸು ಮಾತುಗಳಿಗೆ ಭಿನ್ನವಾದ ಹೇಳಿಕೆ, ಕಥೆಗಳೂ ಕಿವಿಗೆ ಬೀಳುತ್ತಿವೆ. ಆರ್‌ಬಿಐನ ನಿರ್ದೇಶಕ ಮಂಡಳಿಯ ಶಿಫಾರಸು ಆಧರಿಸಿಯೇ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರಕ್ಕೆ ಬರಲಾಗಿದೆ ಎನ್ನುವುದು ವಾಸ್ತವ ಸಂಗತಿಯಾಗಿದೆ.

ಕಪ್ಪುಹಣದ ಕುಳಗಳ ವಿರುದ್ಧದ ನಿರ್ಣಾಯಕ ಕಾರ್ಯಾಚರಣೆ ಇದಾಗಿದ್ದರಿಂದ ಈ ನಿರ್ಧಾರದ ಬಗ್ಗೆ ಅತ್ಯಂತ ಗೋಪ್ಯತೆ ಕಾಯ್ದುಕೊಳ್ಳಲಾಗಿತ್ತು. ಗೋಪ್ಯತೆ ಬಯಲಾದ ಆರು ವಾರಗಳ ನಂತರವೂ ಆರ್‌ಬಿಐ, ತನ್ನ ನಿರ್ದೇಶಕ ಮಂಡಳಿ ಸಭೆಯ ಕಾರ್ಯಸೂಚಿ ಮತ್ತು ಸಭಾ ನಡಾವಳಿಯನ್ನು ಬಹಿರಂಗಪಡಿಸದಿರಲು ಕಾರಣಗಳೇನು? ಸಭೆಯ ಕಲಾಪವು ರಹಸ್ಯವೇನಲ್ಲ. ಆರ್‌ಟಿಐ ಕಾಯ್ದೆಯಡಿ ಯಾರಾದರೂ ಈ ಮಾಹಿತಿ ಪಡೆಯಬಹುದು. ಆರ್‌ಬಿಐ, ಈ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳದಿರುವುದಕ್ಕೆ ಏನು ಕಾರಣ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿಲ್ಲ.ಆರ್‌ಬಿಐನ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದರೆ, ಅಲ್ಲಿನ ಸಂಕ್ಷಿಪ್ತ ಹೇಳಿಕೆಯೊಂದು ಗಮನ ಸೆಳೆಯುತ್ತದೆ. ‘ಬ್ಯಾಂಕ್‌ ನೋಟುಗಳ ಚಲಾವಣೆ ನಿಯಂತ್ರಿಸಲು ಮತ್ತು ದೇಶದಲ್ಲಿ ಹಣಕಾಸು ಸ್ಥಿರತೆ ಕಾಪಾಡಿಕೊಳ್ಳುವ ಉದ್ದೇಶಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಉಲ್ಲೇಖಿಸಲಾಗಿದೆ. ಕರೆನ್ಸಿಗಳ ಚಲಾವಣೆ ಆರ್‌ಬಿಐನ ಮುಖ್ಯ ಹೊಣೆಗಾರಿಕೆಯಾಗಿರುವಾಗ, ನೋಟು ರದ್ದತಿ ನಿರ್ಧಾರ ಜಾರಿಯು ಅವ್ಯವಸ್ಥೆಯ ಗೂಡು ಆಗಿರುವುದಕ್ಕೂ ಆರ್‌ಬಿಐ ತನ್ನ ಪಾಲಿನ ಗುರುತರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ.ನೋಟು ರದ್ದತಿ ನಿರ್ಧಾರ ಹೊರಬಿದ್ದ ನಂತರದ ದಿನಗಳಲ್ಲಿ ಮೌನಕ್ಕೆ ಶರಣಾಗಿರುವ ಮತ್ತು ಗೋಪ್ಯತೆ ಕಾಯ್ದುಕೊಂಡಿರುವ, ಬ್ಯಾಂಕ್‌ಗಳಲ್ಲಿ ಹಳೆ ನೋಟು ಜಮೆ ಮಾಡುವುದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆ, ಪ್ರತಿ ಹೇಳಿಕೆ ನೀಡುತ್ತಿರುವುದು ಆರ್‌ಬಿಐನ ವರ್ಚಸ್ಸನ್ನಾಗಲಿ ಮತ್ತು ಗವರ್ನರ್‌ ಉರ್ಜಿತ್ ಪಟೇಲ್‌ ಅವರ ಘನತೆಯನ್ನಾಗಲಿ ಕಿಂಚಿತ್ತೂ ಹೆಚ್ಚಿಸಲಾರದು.ಬ್ಯಾಂಕ್‌ ಠೇವಣಿಗಳ ಬಗ್ಗೆ ತನ್ನ ಅಂತರ್ಜಾಲ ತಾಣದಲ್ಲಿ ವಾರಕ್ಕೊಮ್ಮೆ ಪ್ರಕಟಿಸುತ್ತಿದ್ದುದನ್ನು ಕಾರಣ ಇಲ್ಲದೆ ನಿಲ್ಲಿಸಿರುವುದು, ಡಿಸೆಂಬರ್‌ 10ರವರೆಗಿನ ಒಟ್ಟು ಠೇವಣಿಗಳ ಬಗೆಗಿನ ಮಾಹಿತಿಯನ್ನು ಯಾವುದೇ ವಿವರಣೆ ನೀಡದೆ ಕೈಬಿಟ್ಟಿರುವುದು, ಜಾಗತಿಕವಾಗಿ ಗೌರವಕ್ಕೆ ಪಾತ್ರವಾಗಿರುವ ಆರ್‌ಬಿಐನಂಥ ಸಂಸ್ಥೆಗೆ ಶೋಭೆ ತರಲಾರದು.ಉರ್ಜಿತ್ ಪಟೇಲ್‌ ಅವರು ಅಂತರ ರಾಷ್ಟ್ರೀಯವಾಗಿ ಮನ್ನಣೆಗೆ ಪಾತ್ರವಾಗಿರುವ ಆರ್ಥಿಕ ತಜ್ಞರಾಗಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಅವರ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ಹೊಂದಿವೆ. ಕೀನ್ಯಾದಲ್ಲಿ ಜನಿಸಿದ್ದರೂ, ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್ ಅವರ ವೈಯಕ್ತಿಕ ಶಿಫಾರಸಿನ ಮೇರೆಗೆ ಅವರಿಗೆ ಭಾರತದ ಪೌರತ್ವ ನೀಡಲಾಗಿತ್ತು. 2013ರಲ್ಲಿ ಪಟೇಲ್‌ ಅವರು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡ ದಿನವೇ ಭಾರತದ ಪೌರತ್ವ ದೊರೆತಿತ್ತು.ಉರ್ಜಿತ್‌ ಪಟೇಲ್, ಸರ್ಕಾರದ ಜತೆ ಕದನಕ್ಕೆ ಇಳಿಯಬೇಕಾದ ಅಥವಾ ಅದರ ಆಶಯಗಳನ್ನು ಉಲ್ಲಂಘಿಸಬೇಕಾದ ಅಗತ್ಯವೇನೂ ಇಲ್ಲ. ಆದರೆ ಆರ್‌ಬಿಐ ಗೌರವಾನ್ವಿತ, ಪಾರದರ್ಶಕ ಹಣಕಾಸು ಸಂಸ್ಥೆಯಾಗಿದ್ದು, ಅಂಕಿ ಅಂಶಗಳನ್ನು ಆಧರಿಸಿದ ಅದರ ಕಾರ್ಯಚಟುವಟಿಕೆಗಳು ಬಹಿರಂಗ ಪರಾಮರ್ಶೆಗೆ, ಚರ್ಚೆಗೆ ಮುಕ್ತವಾಗಿವೆ ಎನ್ನುವುದನ್ನಷ್ಟೇ ಅವರು ಸ್ಪಷ್ಟವಾಗಿ ಹೇಳಬೇಕಾಗಿತ್ತು. ಅದೊಂದು ರಹಸ್ಯ ಸಂಸ್ಥೆ ಏನಲ್ಲ ಅಥವಾ ಬೇಹುಗಾರಿಕೆ ಸಂಘಟನೆಯೂ ಅಲ್ಲ.

ಪಟೇಲ್‌ ಅವರು ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡದೆ ಯಾವುದಾದರೂ ಒಂದು ಬದಿಯಲ್ಲಿ ನಿಂತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೇ ಅವರ ಅಭಿಮಾನಿಗಳು ಅವರಿಂದ ಬಯಸುತ್ತಿದ್ದಾರೆ. ಕಳಂಕಿತ ಹಿನ್ನೆಲೆ ಇರದ ಮತ್ತು ಭವಿಷ್ಯದ ಬಗ್ಗೆ ದುರಾಸೆಯ ಧೋರಣೆ ಹೊಂದಿರದ ವಿಶಿಷ್ಟ ಆದರ್ಶ ವ್ಯಕ್ತಿಯಾಗಲು ಪಟೇಲ್‌ ಅವರಿಗೆ ಅವಕಾಶ ಇದೆ. ಅಂತಹ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳುವ ಆಶಯ ಪಟೇಲ್‌ ಅವರಿಗೆ ಇರದಿದ್ದರೂ, ಕನಿಷ್ಠ ಗೌರವಾನ್ವಿತ ಸಂಸ್ಥೆಯ ಘನತೆಯನ್ನಾದರೂ ರಕ್ಷಿಸಲಿ ಎನ್ನುವುದಷ್ಟೇ ಅವರ ಅಭಿಮಾನಿಗಳ ಆಶಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry