7

ಆಡಳಿತದ ಆದರ್ಶಗಳು ಮತ್ತು ಕಠೋರ ವಾಸ್ತವಗಳು...

Published:
Updated:
ಆಡಳಿತದ ಆದರ್ಶಗಳು ಮತ್ತು ಕಠೋರ ವಾಸ್ತವಗಳು...

ನನ್ನ ಮೇಲ್‌ಗೆ ಒಂದು ಚಿತ್ರ ಬಂದು ಬಿದ್ದಿದೆ. ಅದರಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿಯವರು ಪೋಡಿಯಂ ಹಿಂದೆ ನಿಂತು ಭಾಷಣ ಮಾಡುತ್ತಿದ್ದಾರೆ. ಅವರು ಗಿಡ್ಡ ವ್ಯಕ್ತಿಯಾಗಿರುವುದರಿಂದ ಅವರ ಕಾಲ ಕೆಳಗೆ ಒಂದು ಚಿಕ್ಕ ಸ್ಟೂಲ್‌ ಇಡಲಾಗಿದೆ. ಸೂಟು ಬೂಟು ಹಾಕಿದ ಒಬ್ಬ ವ್ಯಕ್ತಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದಾರೆ. ಬಹುಶಃ, ಸಚಿವೆ ಬಿದ್ದು ಬಿಡಬಾರದು ಎಂದು ಇರಬಹುದು. ಆ ಚಿತ್ರಕ್ಕೆ ಒಂದು ಶೀರ್ಷಿಕೆ ಇದೆ: ನೀವು ನಿಮ್ಮ ಕೆಲಸ ಕೆಟ್ಟುದು ಎಂದು ತಿಳಿದುಕೊಂಡಿದ್ದರೆ ಈ ಐಎಎಸ್‌ ಅಧಿಕಾರಿಯನ್ನು ನೋಡಿ.ಈ ಚಿತ್ರ ಅನೇಕ ಸಂಗತಿಗಳನ್ನು ಹೇಳುತ್ತದೆ. ಒಂದು, ನಮ್ಮ ಅಧಿಕಾರ ಶಾಹಿ ಎಂಥ ಅವಮಾನಗಳನ್ನು ಅನುಭವಿಸುತ್ತಿದೆ ಎನ್ನುವುದು. ಇನ್ನೊಂದು ರಾಜಕಾರಣಿಗಳು ಹೇಗೆ ಅಧಿಕಾರಿಗಳನ್ನು ತೀವ್ರ ತಾತ್ಸಾರದಿಂದ ನಡೆಸಿಕೊಳ್ಳುತ್ತಾರೆ ಎನ್ನುವುದು. ಆದರೆ, ಆತ ಐಎಎಸ್‌ ಅಧಿಕಾರಿ ಆಗಿರಲಾರ. ಆತ ಸಚಿವೆಯ ಬೆಂಗಾವಲು ಸಿಬ್ಬಂದಿ; ಬಹುಶಃ ಪೊಲೀಸ್‌ ಇಲಾಖೆಯ ಅಧಿಕಾರಿ ಇರಬಹುದು. ಏನಿದ್ದರೂ ಒಂದು ಸಾರಿ ಸರ್ಕಾರಿ ಸೇವೆಗೆ ನೀವು ಬಂದರೆ ಏನೆಲ್ಲ ಮಾಡಲು ಸಿದ್ಧರಿರಬೇಕು ಎನ್ನುವುದನ್ನು ಈ ಚಿತ್ರ ಹೇಳುತ್ತದೆ.ಈ ಅಧಿಕಾರಿಯೇನೋ ಯಾರಿಗೂ ಕಾಣದ ಹಾಗೆ ಪೋಡಿಯಂ ಹಿಂಬದಿಯಲ್ಲಿ ಕುಳಿತಿದ್ದಾನೆ. ಬಹಿರಂಗವಾಗಿಯೇ ಸಚಿವರಿಗೆ ಚಪ್ಪಲಿ ಕೊಡುವ, ಷೂ ಲೇಸ್‌ ಕಟ್ಟುವ ಸಿಬ್ಬಂದಿಯ ಚಿತ್ರಗಳನ್ನು ನಾವು ಎಷ್ಟು ನೋಡಿಲ್ಲ? ವಿಶೇಷ ಏನು ಎಂದರೆ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿ ಎಲ್ಲ ಪಕ್ಷಗಳೂ ಒಂದೇ ರೀತಿಯಲ್ಲಿ ಇರುವುದು! ನೀವು ಸರ್ಕಾರಿ ಸೇವೆ ಸೇರಬೇಕು ಎಂದರೆ ನಿಮ್ಮ ಮಾನ ಮರ್ಯಾದೆ, ಪ್ರಾಮಾಣಿಕತೆ, ತತ್ವಾದರ್ಶಗಳನ್ನೆಲ್ಲ ಗಂಟುಮೂಟೆ ಕಟ್ಟಿಟ್ಟು ಬರಬೇಕು.ಅವನ್ನೆಲ್ಲ ನಿಮ್ಮ ಜೊತೆಗೇ ತರುತ್ತೇನೆ ಎಂದರೆ ಅಧಿಕಾರದಲ್ಲಿ ಇದ್ದವರು ಕೊಡುವ ಎಲ್ಲ ಶಿಕ್ಷೆಗಳಿಗೆ, ಕಿರುಕುಳಗಳಿಗೆ ನೀವು ಸಿದ್ಧರಿರಬೇಕು. ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಕೆಲಸವನ್ನು ನಿಯಮಗಳಿಗೆ ಅನುಸಾರವಾಗಿ ಮಾಡುತ್ತ ಇದ್ದರೆ ಅವರು ನಿಮಗೆ ಹೆಚ್ಚಿನ ಶಿಕ್ಷೆಯನ್ನೇನೂ ಕೊಡಲಾರರು. ಮತ್ತೆ ಮತ್ತೆ ನಿಮ್ಮನ್ನು ವರ್ಗ ಮಾಡುತ್ತ ಇರುತ್ತಾರೆ.ಅನೇಕ ಸಾರಿ ನಿಮಗೆ ಸಿಗಬೇಕಾದ ಬಡ್ತಿಯನ್ನು, ಮಾನ್ಯತೆಯನ್ನು ಸಕಾಲದಲ್ಲಿ ಕೊಡದೇ ಇರಬಹುದು; ಅಷ್ಟೇನೂ ಮುಖ್ಯವಲ್ಲದ ಹುದ್ದೆಗಳಿಗೆ ನಿಮ್ಮನ್ನು ಹಾಕುತ್ತ ಇರಬಹುದು. ಅದು ಒಂದು ರೀತಿ ನಿಮಗೆ ಅವಮಾನ ಅನಿಸಬಹುದು. ಆದರೆ, ಅದನ್ನು ನೀವು ಆಹ್ವಾನಿಸಿರುತ್ತೀರಿ ಮತ್ತು ಅದಕ್ಕೆ ಸಿದ್ಧರಿರುತ್ತೀರಿ ಎಂದು ನಿಮಗೆ ಗೊತ್ತಿದ್ದರೆ ಸಾಕು.ಐಎಎಸ್‌ ಅಧಿಕಾರಿ ಸುಬೋಧ್‌ ಯಾದವ್‌ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಹುದ್ದೆಯಿಂದ ಕೇವಲ ನಾಲ್ಕು ತಿಂಗಳಲ್ಲಿ ವರ್ಗ ಆಗಿದ್ದಾರೆ. ಅದಕ್ಕೂ ಮೊದಲು ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿದ್ದರು. ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಮತ್ತು ರಾಜಕಾಲುವೆಯ ಹೂಳು ಎತ್ತುವ ಕಾಮಗಾರಿಗಳು ಚಿನ್ನದ ಮೊಟ್ಟೆ ಇಡುವ ಕೆಲಸಗಳು. ಸುಬೋಧ್‌  ಯಾದವ್‌ ಅವರು ಪಾಲಿಕೆಯಲ್ಲಿ ಯಾವುದೋ ಹಿತಾಸಕ್ತಿಗೆ ಅಡ್ಡಿಯಾದರು.ಅದೇ ಕಾರಣಕ್ಕಾಗಿ ಅಲ್ಲಿಂದಲೂ ಕೇವಲ ಮೂರೂವರೆ ತಿಂಗಳಲ್ಲಿ ಅವರ ಎತ್ತಂಗಡಿಯಾಯಿತು. ಅಲ್ಲಿಂದ ಅವರನ್ನು ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಸರ್ಕಾರ ಒಬ್ಬ ಅಧಿಕಾರಿಯನ್ನು ಒಂದು ಹುದ್ದೆಗೆ ನೇಮಿಸುವುದಕ್ಕಿಂತ ಮುಂಚೆ ಯೋಚನೆ ಮಾಡುತ್ತದೆ ಎಂದು ನಾವೆಲ್ಲ ಅಂದುಕೊಂಡಿರುತ್ತೇವೆ. ಕೆಪಿಎಸ್‌ಸಿಯಲ್ಲಿ ಯಾದವ್‌ ಅವರಿಂದ ಏನೋ ಉತ್ತಮ ಕೆಲಸ ಆಗಬೇಕಿತ್ತು ಎಂದೇ ಅಲ್ಲಿಗೆ ಅವರನ್ನು ವರ್ಗ ಮಾಡಿದ್ದಿರಬಹುದು ಎಂದು ನಾವು ಅಂದುಕೊಂಡೆವು.ಮಾಡಬೇಕಾದ ಕೆಲಸ ಬೇಕಾದಷ್ಟು ಬೇರೆ  ಇತ್ತಲ್ಲ? ಅವರು ಆ ಕೆಲಸಕ್ಕೆ ಕೈ ಹಾಕುವ ವೇಳೆಗಾಗಲೇ ಅವರ ವರ್ಗ ಆಗುತ್ತದೆ ಎಂದು ಸುದ್ದಿ ಹಬ್ಬಿತು. ಆ ಸುದ್ದಿ ಸುಳ್ಳಾಗಲೇ ಇಲ್ಲ, ಅವರು ವರ್ಗ ಆಗಿಯೇ ಬಿಟ್ಟರು. ಅದು ಅವರ 15 ವರ್ಷಗಳ ಸೇವೆಯಲ್ಲಿ 17ನೇ ವರ್ಗ ಆಗಿತ್ತು. ಕನಿಷ್ಠ ಇನ್ನೂ 18 ವರ್ಷ ಅವರು ಸೇವೆಯಲ್ಲಿ ಇರಬಹುದು. ಇನ್ನೂ ಎಷ್ಟು ಸಾರಿ ವರ್ಗ ಆಗುತ್ತಾರೋ ಯಾರಿಗೆ ಗೊತ್ತು?ಯಾದವ್‌ ಅವರು ಕೆಪಿಎಸ್‌ಸಿಯಲ್ಲಿ ಯಾವ ಹಿತಾಸಕ್ತಿಗೆ ಅಡ್ಡಿಯಾಗಿದ್ದರು? ಸರ್ಕಾರವೂ ವಿಚಿತ್ರವಾಗಿ ನಡೆದುಕೊಳ್ಳುತ್ತದೆ! ಕೆಲವು ಸಾರಿ, ಅಷ್ಟೇನೂ ಒಳ್ಳೆಯ ಹೆಸರು ಇರದ ವ್ಯಕ್ತಿಗಳನ್ನು ಕೆಪಿಎಸ್‌ಸಿಗೆ ಸದಸ್ಯರನ್ನಾಗಿ, ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತದೆ. ಆಡಳಿತ ಯಂತ್ರ ಚೆನ್ನಾಗಿ ನಡೆಯಲು ಮತ್ತು ಸರ್ಕಾರ ರೂಪಿಸುವ ನೀತಿ ನಿರೂಪಣೆಗಳನ್ನು ಜಾರಿಗೆ ತರುವಂಥ ಸಮರ್ಥ ಅಧಿಕಾರಿಗಳನ್ನು ನೇಮಿಸುವ ಕೆಲಸ  ಕೆಪಿಎಸ್‌ಸಿಯದು. ಆದರೆ, ಇಂಥವರನ್ನು ನೇಮಿಸುವ ಅಧಿಕಾರ ಹೊಂದಿರುವ ವ್ಯಕ್ತಿಗಳ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗಿರುತ್ತದೆ.

ಈ ವಿಷವರ್ತುಲದ ಆರಂಭ ಎಲ್ಲಿಂದ ಆಗುತ್ತದೆ? ಇದು ಕೆಪಿಎಸ್‌ಸಿ ಸದಸ್ಯರ ನೇಮಕದಲ್ಲಿ ಇದೆಯೇ ಅಥವಾ ಅದರ ಆಚೆಯೂ ಇದೆಯೇ? ಯಾದವ್ ಅವರು ಎಲ್ಲಿಯೋ ಈ ವಿಷವರ್ತುಲ ‘ಸರಿಯಾಗಿ ತಿರುಗಲು’ ಬಿಡಲಿಲ್ಲ ಎಂದು ಕಾಣುತ್ತದೆ. ನ್ಯಾಯವಾಗಿ ನೋಡಿದರೆ ಅವರನ್ನು ಬೆಂಬಲಿಸಬೇಕಿದ್ದ  ಸರ್ಕಾರ ದಿಢೀರ್‌ ಎಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಈ ವರ್ಗಾವಣೆ ಒಂದು ಉದಾಹರಣೆ ಮಾತ್ರ.ಇಂಥ ವರ್ಗಾವಣೆಗಳ ಮೂಲಕ ಸರ್ಕಾರ ಆಡಳಿತಶಾಹಿಗೆ ಏನು ಸಂದೇಶ ಕೊಡುತ್ತದೆ ಎಂದರೆ, ಒಂದೋ ನಾನು ಹೇಳುವ ದಾರಿಯಲ್ಲಿ ನೀವು ನಡೆಯಬೇಕು ಇಲ್ಲವೇ ಅವಮಾನ ಎದುರಿಸಲು ಸಿದ್ಧರಾಗಿರಬೇಕು ಎಂದೇ ಅಲ್ಲವೇ. ಇಲ್ಲವಾದರೆ ಮತ್ತೆ ಏನೆಂದು ಅರ್ಥ ಮಾಡಿಕೊಳ್ಳುವುದು? ‘ಸುಬೋಧ್‌ ಯಾದವ್‌ ಒಳ್ಳೆಯ ಅಧಿಕಾರಿಯಲ್ಲ’ ಎನ್ನುವುದಾದರೆ ಅವರನ್ನು ಮೊದಲು ಅಲ್ಲಿಗೆ ನೇಮಕ ಮಾಡಿದ್ದು ಏಕೆ? ಅವರ ವಿರುದ್ಧ ಯಾವ ಆರೋಪಗಳು ಇದ್ದುವು? ಇದ್ದರೆ ಅವರಿಗೆ ಅದನ್ನೆಲ್ಲ ತಿಳಿಸಲಾಯಿತೇ? ಅವರು ಕೆಪಿಎಸ್‌ಸಿ ಜೊತೆಗೆ ಸಹಕರಿಸುತ್ತ ಇರಲಿಲ್ಲ ಎಂದರೆ ಯಾವ ರೀತಿ ಸಹಕರಿಸಬೇಕಿತ್ತು? ಅಭ್ಯರ್ಥಿಗಳ ಸಂದರ್ಶನ ಸಮಯದಲ್ಲಿ ಅವರು ಕೊಠಡಿ ಒಳಗೆ ಬರುತ್ತಿದ್ದಿದ್ದರೆ ಅದು ಅವರ ಅಧಿಕಾರ ಆಗಿರಲಿಲ್ಲವೇ? ಮತ್ತು ಸಂದರ್ಶನ ಕೊಠಡಿಯೊಳಗೆ ಅವರು ಬಂದು ಕುಳಿತುಕೊಳ್ಳುವುದು ಯಾರ ಹಿತಾಸಕ್ತಿಗೆ ಅಡ್ಡಿಯಾಗಿತ್ತು? ಇಂಥ ಪ್ರಶ್ನೆಗಳಿಗೆ ಈಗ ಯಾರೂ ಉತ್ತರ ಕೊಡುವ ಗೋಜಿಗೆ ಹೋಗುವುದಿಲ್ಲ. ಆದರೆ, ಇದರಿಂದ ಆಡಳಿತ ಮತ್ತು ಮುಖ್ಯವಾಗಿ ಜನರ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಅಂದಾಜು ಮಾಡುವುದು ಹೇಗೆ?ರಾಜ್ಯ ಸರ್ಕಾರದ ಇಬ್ಬರು ಅಧಿಕಾರಿಗಳ ಮೇಲೆ ಈಗ ಜಾರಿ ನಿರ್ದೇಶನಾಲಯ  (ಇ.ಡಿ), ಸಿಬಿಐ ಮತ್ತು ಎ.ಸಿ.ಬಿಗಳು ದಾಳಿ ಮಾಡಿ ತನಿಖೆ ನಡೆಸುತ್ತಿವೆ.  ಇದರಲ್ಲಿ ಒಬ್ಬ ಅಧಿಕಾರಿ ಅನಿವಾರ್ಯವಾದ ಬಂಧನವನ್ನು ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ. ಅವರು ಮಾಧ್ಯಮದ ಬಾಯಿಗೆ ಬೀಗವನ್ನೂ ಜಡಿದಿದ್ದಾರೆ. ಅವರು ಮುಖ್ಯಮಂತ್ರಿಗಳಿಗೆ ಆಪ್ತರು ಎಂಬ ಸುದ್ದಿ ಇದೆ.ಇನ್ನೊಬ್ಬರು ಬಂಧಿತರಾಗಿದ್ದಾರೆ ಮತ್ತು ಅವರು ಲೋಕೋಪಯೋಗಿ ಸಚಿವರಿಗೆ ಆಪ್ತರು ಎಂಬ ಗುಲ್ಲು ಇದೆ. ಎರಡನೇ ಅಧಿಕಾರಿ ವಿರುದ್ಧ ಮೊಕದ್ದಮೆ ಹೂಡಲು  ಲೋಕಾಯುಕ್ತದವರು ಮಾಡಿಕೊಂಡ  ಮನವಿಗೆ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಏಕಿರಬಹುದು? ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಯ ವಿರುದ್ಧ ಮೊಕದ್ದಮೆ ಹೂಡಲು ಸರ್ಕಾರ ಏಕೆ ಅನುಮತಿ ಕೊಡುವುದಿಲ್ಲ? ಒಂದೋ ಜಾತಿ ಅಡ್ಡ ಬರುತ್ತಿರಬಹುದು ಇಲ್ಲವೇ ಅನುಮತಿ ಕೊಡುವುದನ್ನು ತಡೆಹಿಡಿಯಬಲ್ಲಷ್ಟು ಅವರು ಪ್ರಭಾವಿ ಆಗಿರಬಹುದು.

ಇದು ವಿಚಿತ್ರವೇ ಅಥವಾ ಸಹಜವೇ? ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಇಲ್ಲದ ಶಕ್ತಿ ಮತ್ತು ಪ್ರಭಾವ ಭ್ರಷ್ಟ ಅಧಿಕಾರಿಗೆ ಇರುತ್ತದೆಯೇ? ಆ ಶಕ್ತಿ ಮತ್ತು ಪ್ರಭಾವವನ್ನು ಆತ ಅಕ್ರಮವಾಗಿ ಮತ್ತು ತನ್ನ ಆದಾಯಕ್ಕೆ ಹೊರತಾಗಿ ಗಳಿಸಿದ ಸಂಪತ್ತಿನಿಂದ ಪಡೆದಿರುತ್ತಾನೆಯೇ? ಮತ್ತು ಆ ಸಂಪತ್ತು ಆತನ ಹಾಗೂ ರಾಜಕಾರಣಿಯ ನಡುವಿನ ಸಂಪರ್ಕ ಸೇತು ಆಗಿರುತ್ತದೆಯೇ? ರಾಜಕಾರಣಿಗಳ ಕಪ್ಪು ಹಣವನ್ನು ಬಿಳುಪು ಮಾಡುವ ‘ಅಧಿಕಾರ’ವನ್ನು ನಮ್ಮ ಅಧಿಕಾರಿಗಳು ಯಾವಾಗ ಪಡೆದುಕೊಂಡರು?ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳಿಗೆ ಪ್ರಜಾಪ್ರಭುತ್ವದ ಮೂರು ಸ್ತಂಭಗಳ ಗೌರವವನ್ನು ಕೊಡಲಾಗಿದೆ. ಶಾಸಕಾಂಗ ಮುಖ್ಯವಾಗಿ ನೀತಿ ನಿರೂಪಣೆ ಮಾಡುತ್ತದೆ. ಜನರಿಗೆ ಒಳ್ಳೆಯದು ಮಾಡುವುದು ಹೇಗೆ ಮತ್ತು ಅದನ್ನು ಏಕೆ ಜಾರಿಗೆ ತರಬೇಕು ಎಂದು ಶಾಸಕಾಂಗ ತೀರ್ಮಾನಿಸುತ್ತದೆ. ನಮ್ಮದು ಕಲ್ಯಾಣ ರಾಷ್ಟ್ರ ಪರಿಕಲ್ಪನೆಯಾದುದರಿಂದ ಜನಕಲ್ಯಾಣವೇ ಸರ್ಕಾರದ ನೀತಿ ನಿರೂಪಣೆಗಳ ಮುಖ್ಯ ಆಶಯವೂ, ಧ್ಯೇಯವೂ ಆಗಿರುತ್ತದೆ. ಕಾರ್ಯಾಂಗವು ಈ ಆಶಯ ಮತ್ತು ಧ್ಯೇಯಕ್ಕೆ  ಅನುಸಾರವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ.

ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಾಗ ಎಲ್ಲಿಯಾದರೂ  ಕಾನೂನು ಮತ್ತು ನಿಯಮಗಳಿಗೆ  ವಿರುದ್ಧವಾಗಿ ಶಾಸಕಾಂಗ  ನಡೆದುಕೊಳ್ಳುತ್ತಿದ್ದರೆ ಆ ಕಡೆಗೆ ಅದರ ಗಮನ ಸೆಳೆಯುವುದು ಮತ್ತು ಅದನ್ನು ಸರಿಪಡಿಸುವುದು ಕೂಡ ಕಾರ್ಯಾಂಗದ ಕೆಲಸ. ಬಹುಶಃ ಇಲ್ಲಿಯೇ ಎರಡೂ ಅಂಗಗಳ ನಡುವೆ ಸಂಘರ್ಷ ಆರಂಭವಾಗುತ್ತದೆ. ತನಗೆ ಎದುರು ಹೇಳುವ ಯಾವ ಅಧಿಕಾರಿಯನ್ನೂ ಈಗ ಶಾಸಕಾಂಗ ಸಹಿಸುವುದಿಲ್ಲ.ವಿಧಾನಸೌಧ ದಿಂದ ತಹಶೀಲ್ದಾರ್‌ ಕಚೇರಿವರೆಗೆ ‘ಜೀ ಹುಜೂರ್‌’ ಎನ್ನುವ ಅಧಿಕಾರಿಗಳೇ ಬೇಕು ಎಂದು ಸಚಿವರು ಮತ್ತು ಶಾಸಕರು ಬಯಸುತ್ತಾರೆ. ಬರೀ ‘ಜೀ ಹುಜೂರ್‌’ ಎನ್ನುವವರು ಅಲ್ಲ, ತಮ್ಮ ಜಾತಿಯವರೇ ಆಗಿದ್ದರೆ ಇನ್ನೂ ಒಳ್ಳೆಯದು ಎಂದೂ ಅವರು ಬಯಸುತ್ತಾರೆ. ಅಕ್ರಮಗಳನ್ನು ಮುಚ್ಚಿ ಹಾಕಲು ಮತ್ತು ಮುಂದುವರಿಸಿಕೊಂಡು ಹೋಗಲು ಜಾತಿ ಎಂಬ ಒಂದು ಬಾಂಧವ್ಯ ಬಹಳ ಸಹಕಾರಿ ಎಂದು ನಮ್ಮ ರಾಜಕಾರಣಿಗಳು ಗಟ್ಟಿಯಾಗಿ ನಂಬಿಕೊಂಡಿದ್ದಾರೆ. ‘ಎಷ್ಟೇ ಆಗಲಿ ನಮ್ಮವರು’ ಎಂಬುದು ಎಂಥ ರಕ್ಷಣೆ ಅಲ್ಲವೇ? ಒಂದು ಸಾರಿ ರಾಜಕೀಯ ನಾಯಕರ ರಕ್ಷಣೆ ಪಡೆದ ನೌಕರಶಾಹಿ ವಿನಯವನ್ನು ಕಳೆದುಕೊಳ್ಳುತ್ತದೆ. ಅದು ಸಾಮಾನ್ಯ ಜನರನ್ನು ಅವಮಾನಿಸಲು ಮತ್ತು ಶೋಷಿಸಲು ತೊಡಗುತ್ತದೆ. ರಸ್ತೆ ನಿಯಮ ಉಲ್ಲಂಘಿಸಿದ ಸ್ಕೂಟರ್‌ ಚಾಲಕನಿಗೆ ದಂಡ ಹಾಕುವ ಅಧಿಕಾರ ಪೊಲೀಸರಿಗೆ ಇದೆ. ಆದರೆ, ಆತನ ವಾಹನದ ಚಾವಿಯನ್ನು ಕಿತ್ತುಕೊಳ್ಳುವ ಅಧಿಕಾರವನ್ನು ಪೊಲೀಸರು ಯಾವ ಕಾಯ್ದೆಯಡಿ ಪಡೆದರು? ಇದು ಜನರನ್ನು ಅವಮಾನಿಸುವ ಅಧಿಕಾರ!ಅಭಿವೃದ್ಧಿ ಕೆಲಸಗಳು ಏಕೆ ಸಕಾಲದಲ್ಲಿ ಮುಗಿಯುವುದಿಲ್ಲ ಮತ್ತು ಅವು ಬಹುಪಾಲು ಕಳಪೆ ಏಕೆ ಆಗಿರುತ್ತವೆ ಎಂಬುದಕ್ಕೆ ರಾಜಕಾರಣಿ ಮತ್ತು ನೌಕರಶಾಹಿ ನಡುವಿನ ಅಪವಿತ್ರ ಮೈತ್ರಿಯೇ ಕಾರಣವಾಗಿರುತ್ತದೆ. ದುರಂತ ಎಂದರೆ ಈ ಇಬ್ಬರೂ ಸಾರ್ವಜನಿಕರು ಕೊಟ್ಟ ತೆರಿಗೆ ಹಣದಲ್ಲಿಯೇ ಇದನ್ನೆಲ್ಲ ಮಾಡುತ್ತ ಇರುತ್ತಾರೆ! ಇದು ಜನರನ್ನು ಶೋಷಿಸುವ ಅಧಿಕಾರ! ಹಾಗಾದರೆ ಆಡಳಿತ ಎಂದರೆ  ಏನು? ತುಂಬ ಸರಳವಾಗಿ ಹೇಳುವುದಾದರೆ ಜನರಿಗೆ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಒಳ್ಳೆಯದು ಮಾಡುವುದು ಎಂದು ಅಲ್ಲವೇ?ನಮ್ಮ ಸಂವಿಧಾನದ ಆಶಯವೂ ಅದೇ ಆಗಿತ್ತು. ಅದಕ್ಕಾಗಿಯೇ ಅವರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗೆ ಪ್ರತ್ಯೇಕ ಮತ್ತು ಸ್ವತಂತ್ರ ಸ್ಥಾನಮಾನ ಹಾಗೂ ಅಧಿಕಾರ ನೀಡಿದರು. ಈಗ ಏನಾಗಿದೆ ಎಂದರೆ ಕಾರ್ಯಾಂಗವು ಶಾಸಕಾಂಗದ ಅಧೀನ ಎನ್ನುವಂತೆ ಆಗಿದೆ. ಶಾಸಕಾಂಗ ಮಾಡುವ ತಪ್ಪುಗಳಿಗೆ ‘ಇದು ತಪ್ಪು’ ಎಂದು ಹೇಳುವ, ಭಿನ್ನಾಭಿಪ್ರಾಯವನ್ನು ದಾಖಲಿಸುವ ಅಧಿಕಾರವನ್ನು ಕಾರ್ಯಾಂಗ ನಿಧಾನವಾಗಿ ಕಳೆದುಕೊಳ್ಳುವ ಮೂಲಕ ತಾನು ಸ್ವತಂತ್ರ ಎಂದು ಹೇಳುವ ಬದಲು ಅಧೀನ ಎಂದು ಮತ್ತೆ ಮತ್ತೆ ಹೇಳತೊಡಗಿದೆ. ಹಾಗೂ ಇದು ನಾಚಿಕೆಯ ಸಂಗತಿ ಎಂದು ಅದಕ್ಕೆ ಅನಿಸುತ್ತಿಲ್ಲ.ಯುಪಿಎ ಸರ್ಕಾರದಲ್ಲಿ ದೂರ ಸಂಪರ್ಕ ಸಚಿವರಾಗಿದ್ದ ಎ.ರಾಜಾ 2–ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಜೈಲಿಗೆ ಹೋದಾಗ ಅವರ ಜೊತೆಗೆ ದೂರಸಂಪರ್ಕ ಇಲಾಖೆಯ ಆಗಿನ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಿಯಾ ಅವರನ್ನೂ ಬಂಧಿಸಲಾಗಿತ್ತು. ಆಗ ಸಿಬಿಐನ ನಿವೃತ್ತ ನಿರ್ದೇಶಕ ಆರ್‌.ಕೆ.ರಾಘವನ್‌ ಒಂದು ಲೇಖನ ಬರೆದಿದ್ದರು.ಅದರಲ್ಲಿ ಅವರು: ‘ನಮ್ಮ ರಾಜಕಾರಣಿಗಳ ಕೈಯಲ್ಲಿ ಈಗ ಅಪಾರವಾದ ಅಧಿಕಾರ ಇದೆ. ಆದರೆ, ಅವರು ಯಾವುದಾದರೂ ಅಕ್ರಮ ಅಥವಾ ಕಾನೂನಿಗೆ ವಿರುದ್ಧವಾದ ಕೆಲಸ ಮಾಡಿದರೆ ಅಥವಾ ಅಂಥ ಒಂದು ಕಡತವನ್ನು ಸಿದ್ಧ ಮಾಡಿ ನಿಮಗೆ ಕಳಿಸಿದರೆ ನೀವು ಅದಕ್ಕೆ ಒಪ್ಪಿಗೆ ಕೊಡಬೇಡಿ. ಅದು ಏಕೆ ಮತ್ತು ಹೇಗೆ ತಪ್ಪು ಎಂದು ಕಡತದಲ್ಲಿ ನಮೂದಿಸಿರಿ. ಅದರಿಂದ ನಿಮಗೆ ಸಕಾಲದಲ್ಲಿ ಬಡ್ತಿ ಸಿಗದಿರಬಹುದು, ಅವಮಾನ ಆಗಬಹುದು, ಬೇಕಾಬಿಟ್ಟಿ ವರ್ಗಾವಣೆ ಆಗಬಹುದು. ಅಂಜಬೇಡಿ’ ಎಂದು ಅಧಿಕಾರಿಗಳಿಗೆ ಹಿತನುಡಿ ಹೇಳಿದ್ದರು.ಕಳೆದ ವರ್ಷ ಸುಪ್ರೀಂ ಕೋರ್ಟ್‌ ಕೂಡ, ‘ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗ ಮಾಡಬಾರದು’ ಎಂದು ಆದೇಶ ನೀಡಿತ್ತು. ‘ಕನಿಷ್ಠ ಎರಡು ವರ್ಷವಾದರೂ ಒಬ್ಬ ಉನ್ನತ ಅಧಿಕಾರಿ ಒಂದು ಹುದ್ದೆಯಲ್ಲಿ ಇರಬೇಕು. ಅಂದರೆ ಮಾತ್ರ ಆತ ಅಥವಾ ಆಕೆ ಅಲ್ಲಿ ಏನಾದರೂ ಮಾಡಲು ಸಾಧ್ಯ. ಹಾಗೂ ಅದು ಆಡಳಿತದಲ್ಲಿನ ನಿರಂತರತೆಗೆ ಸಹಾಯವಾಗುತ್ತದೆ’ ಎಂದು ಅದು ಅಭಿಪ್ರಾಯಪಟ್ಟಿತ್ತು.ಇವೆಲ್ಲ ಆದರ್ಶಗಳು. ಸಾಧಿಸಬೇಕಾದ ಗುರಿಗಳು. ಆದರೆ, ವಾಸ್ತವ ಬೇರೆಯೇ ಇರುತ್ತದೆ. ತೀರಾ ಈಚಿನ ಒಂದು ಉದಾಹರಣೆ ನೀಡಿ ಈ ಅಂಕಣ ಮುಗಿಸಬಹುದು: ಒಂದು ಜಿಲ್ಲಾ ಪಂಚಾಯ್ತಿಯಲ್ಲಿ ಎಲ್ಲ ಕಾನೂನು ಗಳನ್ನು ಬುಡಮೇಲು ಮಾಡುವ ಒಬ್ಬ  ಭ್ರಷ್ಟ ಅಧಿಕಾರಿ ಇದ್ದ. ಆತನ ವಿರುದ್ಧ ಅಲ್ಲಿನ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಶಿಸ್ತು ಕ್ರಮ ಜರುಗಿಸಲು ಮುಂದಾದರು. ಕೆಲವೇ ದಿನಗಳಲ್ಲಿ ಪರಿಣಾಮ ಏನಾಗಿರಬಹುದು? ಭ್ರಷ್ಟ ಅಧಿಕಾರಿ ಅಲ್ಲಿಯೇ ಉಳಿದ. ಆ ಸಿಇಒ ಬೇರೆ ಕಡೆ ವರ್ಗವಾದರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry