ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ತಳಿ ಗೋಟಿಗೆಡ್ಡೆ ರಾಗಿ

ಹೊಸ ಹೆಜ್ಜೆ
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ರಾಮನಗರ ತಾಲ್ಲೂಕಿನ ಬಿಡದಿಯಿಂದ ಮಂಚನಬೆಲೆ ಜಲಾಶಯಕ್ಕೆ ಹೋಗುವಾಗ ಬೋರೇನಹಳ್ಳಿಯ (ಬಾರಳ್ಳಿ) ಹೊಲಗಳಲ್ಲಿ ದುಂಡಗಿನ ರಾಗಿ ತೆನೆಗಳು ಗಮನ ಸೆಳೆದವು. ವಿಚಾರಿಸಿದಾಗ ಅದು ಬಿಡದಿ ಹೋಬಳಿಯ ರೈತರು ತಲೆತಲಾಂತರದಿಂದ ಉಳಿಸಿಕೊಂಡು ಬಂದಿರುವ ಅಪ್ಪಟ ದೇಸಿ ತಳಿ ಗೋಟಿಗೆಡ್ಡೆ ರಾಗಿ ಎಂದು ತಿಳಿಯಿತು.
ಇದು ಅತಿವೃಷ್ಡಿ, ಅನಾವೃಷ್ಟಿ ಎದುರಿಸಬಲ್ಲದು. ಹಾಗಾಗಿ ಇಂಡಾಫ್, ಎಂ.ಆರ್. ಮುಂತಾದ ತಳಿಗಳ ಪೈಪೋಟಿ ಎದುರಿಸಿ ನಿಂತಿದೆ. ಹೆಚ್ಚು ಜಮೀನಿರುವವರು ಎಂ.ಆರ್. ರತ್ನಗಿರಿ ಬೆಳೆದರೂ ಜೊತೆಗೆ ಗೋಟಿಗೆಡ್ಡ ರಾಗಿಯನ್ನೂ ಬೆಳೆದುಕೊಳ್ಳುವುದಿದೆ.
ಗೋಟಿಗೆಡ್ಡೆ ರಾಗಿ ಮರಳುಮಿಶ್ರಿತ ಕೆಂಪು ಬಣ್ಣದ ರಾಗಿ. ಮುಚ್ಚಿದ ಇಲುಕಿನ ತೆನೆಗಳಲ್ಲಿ ಸಣ್ಣ ರಾಗಿ ಕಾಳುಗಳಿರುತ್ತವೆ. ‘ತೆನೆ ಗೆಡ್ಡೆ ತರಾ ಕಾಣ್ತದೆ, ಅದಕ್ಕೆ ಗೋಟಿಗೆಡ್ಡೆ ರಾಗೀಂತ ಹೆಸರು ಬಂದಿರಾದು. ಈ ರಾಗೀನ ರಾಶಿ ಹಾಕಿದ್ರೆ ಮರಳನ್ನು ಗುಡ್ಡೆ ಹಾಕ್ದಂಗೆ ಕಾಣ್ತುದೆ. ನಮ್ ತಾತ, ಮುತ್ತಾತನ ಕಾಲದಿಂದಲೂ ಇದೇ ರಾಗೀನ ನೆಚ್ಚಿಕೊಂಡಿದೀವಿ’ ಎನ್ನುತ್ತಾರೆ 75 ವರ್ಷದ ಸಿದ್ದಬೋವಿಪಾಳ್ಯದ ರೈತ ಚೌಡಯ್ಯ.
ಬೀಜ ಬಿತ್ತಿದ ಮೂರೂವರೆ ತಿಂಗಳಿಗೆ ಕೊಯ್ಲಿಗೆ ಬರುವ ಮಳೆಯಾಶ್ರಿತ ತಳಿ. ಪೈರುಗಳು ನಾಲ್ಕೈದು ಅಡಿ ಎತ್ತರಕ್ಕೆ ಬೆಳೆಯುತ್ತವೆ. ಸಕಾಲದಲ್ಲಿ ಮಳೆಯಾದರೆ ಪೈರುಗಳಲ್ಲಿ ಹೆಚ್ಚು ತೆಂಡೆ ಒಡೆದು, ಅಧಿಕ ಫಸಲು ಸಿಗುತ್ತದೆ. ಹುಲ್ಲು ಕಡಿಮೆ, ರಾಗಿ ಹೆಚ್ಚು. ಮಳೆಯ ಕೊರತೆಯಾದಾಗ ಪೈರಿನ ಎತ್ತರ ಕಡಿಮೆ, ತೆಂಡೆಗಳೂ ಕಡಿಮೆ. ಆದರೂ ಒಂದಿಷ್ಟು ಇಳುವರಿಗಂತೂ ಮೋಸವಿಲ್ಲ. ಸದೃಢ ಪೈರುಗಳಿಗೆ ಮಳೆ, ಗಾಳಿ ತಡೆಯುವ ಶಕ್ತಿಯೂ ಇದೆ. ನೀರಿನ ಅನುಕೂಲ ಇರುವವರು ಬೇಸಿಗೆ ಬೆಳೆಯಾಗಿಯೂ ಬೆಳೆಯಬಹುದು.
ಈ ರಾಗಿಯನ್ನು ಬಿಡದಿಯ ಸುತ್ತಮುತ್ತ ಬನ್ನಿಕುಪ್ಪೆ, ಕಸವಿಪಾಳ್ಯ, ಗಾಣಕಲ್ಲು, ಹೆಜ್ಜಾಲ, ಬೋರೇನಹಳ್ಳಿ, ಕುರುಬೂರು ಕರೇನಹಳ್ಳಿ, ಜಡೇನಹಳ್ಳಿ, ತಿಮ್ಮಪ್ಪನಪಾಳ್ಯ, ಸಿದ್ದಬೋವಿಪಾಳ್ಯ, ಮರಳೇದೊಡ್ಡಿ, ಮುತ್ತುರಾಯನಪಾಳ್ಯ ಮುಂತಾದ ಹಳ್ಳಿಗಳಲ್ಲಿ ಬೆಳೆಯುತ್ತಾರೆ. ಬಿಡದಿ ಹೋಬಳಿಗೆ ಹೊಂದಿಕೊಂಡ ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿ ಸುತ್ತಮುತ್ತಲೂ ಸ್ವಲ್ಪ ಬೆಳೆ ಇದೆ. 500 ಎಕರೆಗೂ ಅಧಿಕ ಪ್ರದೇಶದಲ್ಲಿದೆ.
ಸಾವಯವಕ್ಕೆ ಹೆಚ್ಚು ಹೊಂದುವ ತಳಿ ಇದು. ಈ ರಾಗಿಯ ಜೊತೆ ಅಕ್ಕಡಿ ಸಾಲಿನಲ್ಲಿ ಕಾಳುಗಳು, ಹರಳು, ಸಾಸಿವೆ, ಜೋಳ, ಹುಚ್ಚೆಳ್ಳು ಬೆಳೆಯುತ್ತಾರೆ. ಕೆಲವರು ಜೋಳ ಮಾತ್ರ ಹಾಕುತ್ತಾರೆ. ಮನೆಬಳಕೆ ಮತ್ತು ವಾಣಿಜ್ಯ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ಹೆಚ್ಚಿನವರು ಅರ್ಧ, ಒಂದೆಕರೆಯಲ್ಲಿ ಬೆಳೆಯುವ ಪದ್ಧತಿಯಿದೆ.
ಚೌಡಯ್ಯ ಹಾಗೂ ಅವರ ಮಗ ವೆಂಕಟಪ್ಪ ಎರಡೂವರೆ ಎಕರೆಯಲ್ಲಿ ಇದನ್ನು ಬೆಳೆದಿದ್ದಾರೆ. ಬಿತ್ತನೆಗೆ ಮೊದಲು ಎಕರೆಗೆ ನಾಲ್ಕು ಟ್ರ್ಯಾಕ್ಟರ್ ನಾಟಿ (ಕೊಟ್ಟಿಗೆ) ಗೊಬ್ಬರ ಬೆರೆಸಿ ಭೂಮಿ ಹದ ಮಾಡಿಕೊಳ್ಳಬೇಕು. ಕೂರಿಗೆಯಲ್ಲಿ ಬಿತ್ತನೆ ಮಾಡಿದರೆ ಎಕರೆಗೆ ಆರೇಳು ಸೇರು ಬೀಜ ಬೇಕು. ‘ಆಷಾಡ ಕಳೆದ ಮ್ಯಾಕೆ ದೊಡ್ಡ ಹಸ್ಲು ಇಲ್ಲಾಂದ್ರೆ ಚಿಕ್ಕ ಹಸ್ಲು ಮಳೇಲಿ ಬಿತ್ತಿದ್ರೆ ನೂರು ದಿವಸ ಕಳೀತಿದ್ದಂಗೆ ಬೆಳೆ ಕೈಗೆ ಬತ್ತುದೆ’ ಎನ್ನುತ್ತಾರೆ ಚೌಡಯ್ಯ. ಅವರ ಅನುಭವದಲ್ಲಿ ಕಂಡುಕೊಂಡಂತೆ, ಕೊಯ್ಲು ಸ್ವಲ್ಪ ತಡವಾದರೂ ಕಾಳು ಉದುರುವುದಿಲ್ಲ.
ಬೋರೇನಹಳ್ಳಿಯ ನಂಜಮ್ಮ-ನರಸಿಂಹಯ್ಯ ದಂಪತಿ ಅರ್ಧ ಎಕರೆಯಲ್ಲಿ ಬೆಳೆದಿದ್ದರು. ಜುಲೈನಲ್ಲಿ ಬಿತ್ತಿದ ನಂತರ ಮಳೆಯ ಸುಳಿವೇ ಇಲ್ಲ. ಎರಡು ಸಲ ಮಾತ್ರ ನೀರು ಕೊಡಲು ಸಾಧ್ಯವಾಯಿತು. ‘ನಾಲ್ಕೈದು ಸರ್ತಿ ಒಂಚೂರು ನೀರು ಕೊಟ್ಟರೂ ಸಾಕು ಭೂಮಿ ತಣುವಾಯ್ತುದೆ. ಒಡೆ(ತೆನೆ) ಚೆನ್ನಾಗಿ ಬತ್ತುದೆ’ ಎನ್ನುವ ನರಸಿಂಹಯ್ಯ ಅವರಿಗೆ ಐದು ಚೀಲ ರಾಗಿ ಸಿಕ್ಕಿದೆ. ಅವರೇ ಬೆಳೆದಿರುವ ಎಂಆರ್ ರಾಗಿಯಲ್ಲಿ ಈವರೆಗೆ ತೆನೆಗಳೇ ಬಂದಿಲ್ಲ.
ಕಳೆದ ವರ್ಷ ಮಳೆ ಸಕಾಲಕ್ಕೆ ಬಂದಿದ್ದರಿಂದ ನರಸಿಂಹಯ್ಯ ಅವರಿಗೆ ಹತ್ತು ಕ್ವಿಂಟಲ್ ರಾಗಿ ಸಿಕ್ಕಿತ್ತು. ಆದರೆ ಕೊಯ್ಲು ಮಾಡಿದ ಪೈರು ಹೊಲದಿಂದ ತೆಗೆಯುವ ಮೊದಲೇ ಮಳೆಯ ಆರ್ಭಟ ಶುರುವಾಯಿತು. ‘ಒಂದ್ ತಿಂಗಳು ಪೂರ್ತಿ ಮದ್ರಾಸ್ ಮಳೆ ಹುಯ್ದುಹುಯ್ದು ರಾಗೀನೆ ಮೊಳಕೆ ಬಂದುಬಿಡ್ತು. ಈ ವರ್ಷ ಇಂಗೆ. ಒಟ್ನಾಗೆ ಮಳೆದೇವ್ರು ನಮ್ಮೇಲೆ ಮುನಿಸಿಕೊಂಡುಬಿಟ್ಟವ್ನೆ’ ಎಂದು ಮಳೆಯ ವೈಪರೀತ್ಯಗಳಿಂದ ಆಗುವ ಸಂಕಟಗಳನ್ನು ತೆರೆದಿಡುತ್ತಾರೆ ನಂಜಮ್ಮ.
ಕುರುಬೂರು ಕರೇನಹಳ್ಳಿಯ ಲಕ್ಷ್ಮಮ್ಮ ಅವರು 20 ವರ್ಷಗಳಿಂದ ಗೋಟಿಗೆಡ್ಡೆ ರಾಗಿ ಬೆಳೆಯುತ್ತಿದ್ದಾರೆ. ಮಧ್ಯೆ ಒಂದೆರಡು ವರ್ಷ ಎಂಆರ್ ರಾಗಿ ಬೆಳೆದಿದ್ದರು. ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಈ ರಾಗಿಯಲ್ಲಿ ಫಸಲೇ ಬರಲಿಲ್ಲ. ಹಾಗಾಗಿ ಮತ್ತೆ ಗೋಟಿಗೆಡ್ಡೆ ರಾಗಿಯನ್ನೇ ಹಾಕತೊಡಗಿದರು. ಅವರ ಪ್ರಕಾರ ಮಳೆ ಇಲ್ಲದಾಗ ಮೂರ್ನಾಲ್ಕು ಸಲವಾದರೂ ನೀರು ಹಾಯಿಸಲು ಸಾಧ್ಯವಾಗುವವರು ಮಾತ್ರ ಎಕರೆಗೆ ನಾಲ್ಕು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಕೊಡಬೇಕು. ಅವರು ಮೂರು ಟ್ರ್ಯಾಕ್ಟರ್ ಗೊಬ್ಬರವಷ್ಟೇ ಹಾಕುತ್ತಾರೆ. ನಂತರ ಮಳೆ ನೋಡಿಕೊಂಡು ಕೊಂಚ ಮೇಲುಗೊಬ್ಬರ ಕೊಡಬಹುದು. ಹೆಚ್ಚು ಕೊಟ್ಟಿಗೆ ಗೊಬ್ಬರ ನೀಡಿ ಮಳೆಯೇ ಬಾರದಿದ್ದರೆ ಪೈರು ನೆಲ ಕಚ್ಚುತ್ತದೆ. ‘ಒಡೆ ಬಂದುಬಿಟ್ಟು ಹಿಮ ಬಿತ್ತೂಂದ್ರೆ ಸಾಕು, ಸುಮಾರಾಗಿ ರಾಗಿ ಸಿಕ್ಕುತ್ತೆ’ ಎನ್ನುವ ಅವರಿಗೆ ಈ ಸಲ ಮೂರು ಚೀಲ ಸಿಕ್ಕಿದರೆ ಅದೇ ಹೆಚ್ಚು ಎನಿಸಿದೆ.
ಇದೇ ಗ್ರಾಮದ ರಾಜು ಅವರ ಪ್ರಕಾರ ಬೇರೆ ಎಂ.ಆರ್ ತಳಿಗೆ ಹೋಲಿಸಿದರೆ ಬರದಲ್ಲೂ ಸ್ವಲ್ಪ ಸಿಗುವ ಈ ರಾಗಿಯೇ ಉತ್ತಮ. ‘ಈ ರಾಗಿಗೆ ಹುಳಪಳ ಬರಲ್ಲ. ಮುದ್ದೆ ದಿಂಡಾಗಿರುತ್ತೆ. ಬೆಳಗ್ಗೆ ತಿಂದು ಮಧ್ಯಾಹ್ನದವರೆಗೆ ಶ್ರಮದ ಕೆಲಸ ಮಾಡಿದ್ರೂ ಹಸಿವಾಗೋದಿಲ’ ಎನ್ನುತ್ತಾರೆ. ಬಿತ್ತನೆ ಬೀಜವನ್ನು ಮೂರು ವರ್ಷಗಳವರೆಗೆ ಇಡಬಹುದು. ಆಹಾರಕ್ಕಾಗಿ ಇನ್ನೂ ಹೆಚ್ಚು ವರ್ಷ ಬಳಸಬಹುದು. ಗೋಟಿಗೆಡ್ಡೆ ರಾಗಿಯಿಂದ ತಯಾರಿಸಿದ ಆಹಾರ ರುಚಿಕರ. ‘ಎಲ್ಲಾ ಸಾಮಾನಿಗೂ ಆಯ್ತುದೆ. ಹಿಟ್ಟು (ಮುದ್ದೆ) ನೋಡೋಕೂ ಕೆಂಪ್ ಕೆಂಪಾಗ್ ಚೆನ್ನಾಗಿರುತ್ತೆ, ಬೇಗನೆ ಹಳಸಲ್ಲ’ಎಂಬ ಅಭಿಪ್ರಾಯ ಈ ಭಾಗದ ರೈತರದ್ದು. ಅಂಬಲಿ, ರೊಟ್ಟಿ, ದೋಸೆ, ಹುರಿಟ್ಟು, ಹುರಿದ ರಾಗಿಹಿಟ್ಟು, ಉಪ್ಪಿಟ್ಟು, ಹಪ್ಪಳ ಎಲ್ಲದಕ್ಕೂ ಸೂಕ್ತವಾದ ರಾಗಿ. ಈ ಎಲ್ಲ ಕಾರಣಗಳಿಂದಾಗಿ ಗೋಟಿಗೆಡ್ಡೆ ರಾಗಿ ಇಲ್ಲಿ ಉಳಿದಿದೆ. ಇಂತಹ ಶ್ರೇಷ್ಠ ತಳಿಯನ್ನು ಉಳಿಸಿಕೊಂಡು ಬಂದಿರುವ ರೈತರ ಕಾರ್ಯ ಮೆಚ್ಚುವಂತಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT