ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕೃಷಿಗೆ ನೀರೆರೆವ ಸಿದ್ಧ ತೋಟ

Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಗರದ ಎಷ್ಟೋ ಮಂದಿಗೆ ತಮ್ಮ ಮನೆಯಲ್ಲಿ ಪುಟ್ಟ ತೋಟ ಮಾಡಿಕೊಳ್ಳುವ  ಆಸೆಯಿರುತ್ತದೆ. ಆದರೆ ಯಾವ ಗಿಡ ಹಾಕಬೇಕು, ಎಷ್ಟು ಗಿಡ ನೆಡಬೇಕು, ಜಾಗ ಎಷ್ಟಿರಬೇಕು, ಅದರ ನಿರ್ವಹಣೆ ಹೇಗೆ? ಎಂಬ ಗೊಂದಲಗಳಿಂದ ಆ ಗೋಜೇ ಬೇಡ ಎಂದು ಸುಮ್ಮನಾಗಿಬಿಡುತ್ತಾರೆ. ಮತ್ತೂ ಕೆಲವರಿಗೆ ಕೆಲಸದ ನಡುವೆ ಗಿಡಗಳನ್ನು ಪೋಷಣೆ ಮಾಡುವುದಕ್ಕೆ ಸಮಯವೇ ಇರುವುದಿಲ್ಲ.

ಆದರೆ ಈ ಕಾರಣಗಳು ತೋಟ ಮಾಡುವ ಹಂಬಲಕ್ಕೆ ತೊಡಕಾಗಬಾರದು ಎಂಬ ಉದ್ದೇಶದೊಂದಿಗೆ ನಗರಿಗರ ತೋಟ ಮಾಡುವ ಕನಸಿಗೆ ನೀರೆರೆಯಲು ಆರಂಭಿಸಿದವರು ಅಶೋಕ್‌ ಕುಮಾರ್ ಕೆ.ಸಿ. ಮೂಲತಃ ಕೋಲಾರದವರಾದ ಅಶೋಕ್, ಕೃಷಿ ಕುಟುಂಬದವರು. ಚಿಕ್ಕವಯಸ್ಸಿನಿಂದಲೇ ಗಿಡ ಮರಗಳೊಂದಿಗೆ ಒಡನಾಡಿದವರು. ಹಲವು ಬೆಳೆಗಳಲ್ಲಿ ಕಸಿ ಪ್ರಯೋಗಗಳನ್ನೂ ಮಾಡಿದವರು. ಐದನೇ ತರಗತಿಯಲ್ಲಿದ್ದಾಗಲೇ ತಮ್ಮ ಹಳ್ಳಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ್ದ ಅವರಲ್ಲಿ ಪರಿಸರಪ್ರೇಮ ತುಂಬಿತ್ತು. ಹದಿನಾರು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ ಇವರು, ಮಿತಿ ಮೀರಿದ ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಪರಿಹಾರರೂಪವಾಗಿ ಮನೆಯಲ್ಲೇ ಗೊಬ್ಬರ ಮಾಡಿ, ಗಿಡಗಳನ್ನು ನೆಡಲು ಆರಂಭಿಸಿದರು. ಇದನ್ನೇ ಏಕೆ ದೊಡ್ಡಮಟ್ಟದಲ್ಲಿ ಮಾಡಬಾರದೆಂಬ ಆಲೋಚನೆಯೇ ಅವರನ್ನು ಇಲ್ಲಿಯವರೆಗೂ ಕರೆತಂದಿದ್ದು.
 
ಬಿಎಸ್ಸಿ ಮಾಡಿ ಎಂಬಿಎ ಪದವಿ ಪಡೆದು ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಅವರಿಗೆ, ಗಿಡಗಳೊಂದಿಗಿನ ಒಡನಾಟವೇ ಹಿತ ಎನ್ನಿಸಿತ್ತು. ಸಾವಯವ ಕೃಷಿ ಕುರಿತು ಮುಂಚಿನಿಂದಲೇ ಆಸಕ್ತಿ ಹೊಂದಿದ್ದ ಇವರು, ಇದೇ ದಾರಿಯಲ್ಲಿ ಸಾಗುವ ನಿರ್ಧಾರವನ್ನೂ ಗಟ್ಟಿ ಮಾಡಿಕೊಂಡರು. ತಮ್ಮ ಕೃಷಿ ಅನುಭವ ಒಟ್ಟುಗೂಡಿಸಿ ವಿಶ್ವವಿದ್ಯಾಲಯಗಳು, ಉಪನ್ಯಾಸಕರು, ತೋಟಗಾರಿಕೆ, ಕೃಷಿ ಇಲಾಖೆಗಳ ಬಳಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ‘ನಗರಕೃಷಿ’ಗೆ ಸಂಬಂಧಿಸಿದಂತೆ ಎರಡು ವರ್ಷಗಳ ನಿರಂತರ ಅಧ್ಯಯನವನ್ನೇ ನಡೆಸಿದರು.
 
ನಗರದ ಜನರಲ್ಲಿ ತೋಟ ಮಾಡುವ ಆಸೆಯೇನೋ ಇದೆ. ಆದರೆ ಹೇಗೆ ಮಾಡಬೇಕು ಎಂಬುದೇ ಜನರ ಮೊದಲ ಪ್ರಶ್ನೆಯಾಗಿರುತ್ತದೆ ಎಂಬುದನ್ನು ಸಮೀಕ್ಷೆಯಿಂದ ತಿಳಿದುಕೊಂಡ ಅಶೋಕ್ ಅವರು ಆ ಪ್ರಶ್ನೆಯೊಂದಿಗೇ ತಮ್ಮ ಕೆಲಸ ಆರಂಭಿಸಿದರು. ಅಂಥವರಿಗೆಂದೇ ಸಿದ್ಧತೋಟ ಮಾಡಿಕೊಡುವ, ಸಲಹೆ ನೀಡುವ, ಜತೆಗೆ ನಿರ್ವಹಣೆಯನ್ನೂ ನೀಡುವ ಪರಿಕಲ್ಪನೆಯನ್ನು 2013ರಲ್ಲಿ ‘ಮೈ ಡ್ರೀಮ್ ಗಾರ್ಡನ್‌’ನಿಂದ ಆರಂಭಿಸಿದರು.  
 
ಸಿದ್ಧ ತೋಟದ ಪರಿಕಲ್ಪನೆ
ಟೆರೇಸ್, ಅಂಗಳ, ಬಾಲ್ಕನಿಯ ಅಳತೆಗೆ ತಕ್ಕಂತೆ ತೋಟ ಮಾಡಿಕೊಳ್ಳಬಹುದು. ಜಾಗಕ್ಕೆ ತಕ್ಕಂತೆ ತೋಟದ ವಿನ್ಯಾಸ ಮಾಡಿಕೊಡಲಾಗುತ್ತದೆ. ಗಿಡ ನೆಡಲೆಂದೇ ವಿಶೇಷವಾಗಿ ಗ್ರೋ ಬ್ಯಾಗ್‌ಗಳನ್ನು ಉಪಯೋಗಿಸುತ್ತಾರೆ. ಇದರ ಬೆಲೆಯೂ ಕಡಿಮೆ. ಕನಿಷ್ಠ ನಾಲ್ಕರಿಂದ ಐದು ವರ್ಷ ಬಾಳಿಕೆ ಬರುತ್ತದೆ. ಬೆಂಗಳೂರಿನಲ್ಲಿ ಒಳ್ಳೆಯ ಮಣ್ಣಿನ ಲಭ್ಯತೆ ಸಮಸ್ಯೆ ಇರುವುದರಿಂದ ಅದನ್ನು ಸರಿದೂಗಿಸುವಂಥ ಪಾಟಿಂಗ್ ವ್ಯವಸ್ಥೆ ಮಾಡಿದ್ದು, ಅಲ್ಲೂ ತ್ಯಾಜ್ಯ ಸಮಸ್ಯೆ ಎದುರಾಗುವುದಿಲ್ಲ. 
 
ಮನೆಯಲ್ಲಿ ಎಷ್ಟು ಗಿಡಗಳನ್ನು ಇಡಬಹುದು, ಯಾವ ಗಿಡಗಳನ್ನು ಹಾಕಬೇಕು, ನಿಮಗೆ ಯಾವ ಗಿಡ ಬೆಳೆಸಲು ಇಷ್ಟವಿದೆ ಎಂಬುದನ್ನು ತಿಳಿಸಿ, ಅವುಗಳ ಬೀಜಗಳನ್ನು ನೆಡಿಸುತ್ತಾರೆ. ಸಿದ್ಧ ತೋಟ ಎಂದ ಮೇಲೆ ಬೀಜಗಳನ್ನು ನಾವೇಕೆ ನೆಡಬೇಕೆಂದು ಹಲವರು ಕೇಳಿದ್ದುಂಟು ಎಂದು, ಅದಕ್ಕೆ ಕಾರಣವನ್ನು ಅಶೋಕ್ ವಿವರಿಸುವುದು ಹೀಗೆ...
 
‘ಗಿಡ ಬೆಳೆಸುವುದು ಪ್ರಕೃತಿಯೊಂದಿಗೆ ಬೆರೆಯುವ ಒಂದು ಪುಟ್ಟ ಪ್ರಯತ್ನ. ಅದೊಂದು ಕುತೂಹಲಕರ ಸಂಗತಿ. ಬೀಜ ಮಣ್ಣಿನಲ್ಲಿ ಒಂದಾಗುವ, ಮೊಳೆಯುವ, ಎಲೆ ಬಿಡುವ, ಫಲ ನೀಡುವ ಒಂದೊಂದೇ ಸಂಗತಿಗಳೂ ಖುಷಿ ಕೊಡುತ್ತವೆ. ಈಗ ಅವುಗಳನ್ನು ಅನುಭವಿಸುವ ಕುತೂಹಲವೇ ನಮ್ಮಲ್ಲಿ ಉಳಿದಿಲ್ಲ. ಆ ಕುತೂಹಲವನ್ನು ಮತ್ತೆ ಹುಟ್ಟಿಸಿ, ಪ್ರಕೃತಿಯೊಂದಿಗೆ ಬಾಂಧವ್ಯ ರೂಪಿಸಬೇಕೆಂಬುದೇ ನಮ್ಮ ಉದ್ದೇಶ. ಆದ್ದರಿಂದ ಅವರ ಕೈಯಲ್ಲೇ ಬೀಜ ನೆಡಿಸುತ್ತೇವೆ. ಆಗ ಗಿಡಗಳೊಂದಿಗೆ ಸಹಜವಾಗೇ ಬಾಂಧವ್ಯ ಬೆಳೆಯುತ್ತದೆ’.
 
ಇವರ ಬಳಿ ಒಟ್ಟು 150 ರೀತಿಯ ಗಿಡಗಳಿದ್ದು, 32 ರೀತಿ ಗಿಡಗಳು ಮನೆಯಲ್ಲಿ ಸುಲಭವಾಗಿ ಬೆಳೆಯಬಲ್ಲಂಥವು. ತರಕಾರಿ, ಸೊಪ್ಪುಗಳನ್ನು  ಬೀಜದ ರೂಪದಲ್ಲಿ ನೀಡಿದರೆ, ಔಷಧಿ ಹಾಗೂ ಹಣ್ಣಿನ ಗಿಡಗಳನ್ನು ನೀಡಲಾಗುತ್ತದೆ.
 
ಉಚಿತ ನಿರ್ವಹಣೆ
ತೋಟ ಮಾಡಿಕೊಟ್ಟ ಮಾತ್ರಕ್ಕೆ ಎಲ್ಲಾ ಕೆಲಸ ಮುಗಿಯಿತೆಂದು ಕೈ ತೊಳೆದುಕೊಳ್ಳುವಂತಿಲ್ಲ. ಹಣಕ್ಕಿಂತ ಹೆಚ್ಚಾಗಿ ಗಿಡ ಬೆಳೆಸುವ ಹವ್ಯಾಸ ಹುಟ್ಟುಹಾಕುವುದೇ ನಮ್ಮ ಉದ್ದೇಶ ಎನ್ನುವ ಅಶೋಕ್, ಇಪ್ಪತ್ತು ದಿನಕ್ಕೊಮ್ಮೆ ನಿರ್ವಹಣೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. 
 
ಸದ್ಯಕ್ಕೆ ನಗರದ 850 ಮನೆಗಳ ಮಹಡಿ ಮೇಲೆ ತೋಟಗಳನ್ನು ಮಾಡಿಕೊಟ್ಟಿದ್ದಾರೆ. 25 ಮಂದಿ ಗಾರ್ಡನರ್‌ಗಳು ಇದ್ದು, ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಕೊಂಡಿರುವ, ಪರಿಸರಸ್ನೇಹಿ ಕೆಲಸದಲ್ಲಿ ಆಸಕ್ತಿ ಹೊಂದಿರುವ ಹತ್ತು ಮಂದಿ ಸ್ವಯಂ ಸೇವಕರು ಈ ಸಂಸ್ಥೆ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ.  
ತೋಟ ಮಾಡಿಕೊಡುವುದಷ್ಟೇ ಅಲ್ಲ, ಕೈ ತೋಟ ನಿರ್ವಹಣೆ, ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳುತ್ತದೆ ಈ ತಂಡ. ಇದುವರೆಗೂ 192 ಕಾರ್ಯಾಗಾರಗಳನ್ನು ನಡೆಸಲಾಗಿದ್ದು, ಇದರಿಂದ ಪ್ರೇರೇಪಿತಗೊಂಡು 5 ಸಾವಿರ ಮಂದಿ ಕೈ ತೋಟವನ್ನು ಆರಂಭಿಸಿದ್ದಾರೆ. 
 
ಮನೆಯ ಮೇಲೆ 150 ಚದರ ಅಡಿ ಜಾಗವಿದ್ದರೂ ಸಾಕು, ಹಲವು ತರಕಾರಿಗಳನ್ನು ಬೆಳೆಸಿ ವಾರದಲ್ಲಿ ಮೂರು ನಾಲ್ಕು ಬಾರಿ ಅವುಗಳನ್ನು ಕಿತ್ತಬಹುದು ಎಂದು ಮಾಹಿತಿ ನೀಡುತ್ತಾರೆ ಅವರು.
 
ಪ್ಯಾಕೇಜ್‌ ರೂಪದಲ್ಲೂ ತೋಟ ಮಾಡಿಕೊಡಲಾಗುತ್ತದೆ. ಪ್ಯಾಕೇಜ್‌ನಲ್ಲಿ ಗ್ರೋ ಬ್ಯಾಗ್, ಪಾಟಿಂಗ್ ಮೀಡಿಯಾ, ಬೀಜಗಳು, ಎಂಟರಿಂದ ಹತ್ತು ಬಗೆಯ ಬೀಜಗಳು, ಬೇವಿನ ಎಣ್ಣೆ, ಕೋಕೊ ಪಿಟ್‌, ಕೆಂಪು ಮಣ್ಣು, ಸಾವಯವ ಕ್ರಿಮಿನಾಶಕ, ಜೈವಿಕ ಗೊಬ್ಬರ, ಎರೆಹುಳ ಗೊಬ್ಬರ ಪಂಚಗವ್ಯ, ಸೀ–ವೀಡ್‌ ಇನ್ನಿತರ ಸಾಮಗ್ರಿಗಳನ್ನು ನೀಡಲಾಗುತ್ತದೆ. ಜಾಗ ನಿರ್ವಹಣೆಗೆ ಸ್ಟ್ಯಾಂಡ್‌ ಖರೀದಿಸಬಹುದು. ಒಟ್ಟಾರೆ ತೋಟದ ರಚನೆ ಮಾಡಿಕೊಡಲಾಗುತ್ತದೆ. ಟೆರೇಸ್ ಅನ್ನು ಗಿಡಗಳೊಂದಿಗೆ ಸುಂದರ, ಪಾರ್ಟಿ ಜಾಗವಾಗಿಯೂ ಪರಿವರ್ತಿಸಬಹುದು.
 
ಇನ್ನು ಫಾರ್ಮ್‌ ರೀತಿಯ ಅನುಭವ ಕೇಳುವವರಿಗೆಂದೇ ಹಸಿರು ಮನೆನಿರ್ಮಿಸಿಕೊಡುತ್ತಾರೆ. ಆದರೆ ಇದು  ಸ್ವಲ್ಪ ದುಬಾರಿ. ಉದ್ಯೋಗಕ್ಕೆ ಹೋಗುವ ಮಂದಿಗೆ ತೋಟದ ನಿರ್ವಹಣೆ ಕಷ್ಟವೇ. ಕೆಲಸದ ನಿಮಿತ್ತ ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿರುವವರಿಗೆ ತೋಟದೆಡೆಗೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಸ್ವಯಂಚಾಲಿತ ಹನಿ ನೀರಾವರಿ ಅಳವಡಿಸಿಕೊಡಲಾಗುತ್ತದೆ. ಗಿಡಕ್ಕೆ ತಂತಾನೇ ಆರೈಕೆ ದೊರೆಯುತ್ತದೆ.
 
‘ನಾವೇ ತರಕಾರಿ ಬೆಳೆದು ಸವಿಯುವುದರಲ್ಲಿ ಇರುವ ಖುಷಿಯೇ ಬೇರೆ. ಆರೋಗ್ಯದೊಂದಿಗೆ ವ್ಯಾಯಾಮವೂ ಸಿಗುತ್ತದೆ. ನಮ್ಮ ಗ್ರಾಹಕರು ತಮಗೆ ಬೇಕಾಗುವಷ್ಟು ತರಕಾರಿಗಳನ್ನು ಬೆಳೆದು ಆ ಖುಷಿಅನುಭವಿಸುತ್ತಿದ್ದಾರೆ. ಆ ಖುಷಿ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ’ ಎಂದು ಸಾರ್ಥಕತೆ ವ್ಯಕ್ತಪಡಿಸುತ್ತಾರೆ ಅವರು.
 
ಗಿಡ ನೆಟ್ಟರಷ್ಟೇ ಸಾಲದು, ಅದರೆಡೆಗೆ ನಿರಂತರ ಆಸಕ್ತಿ ಇರಬೇಕು. ತೋಟ ಮಾಡುವ, ಕಸದಿಂದ ಗೊಬ್ಬರ ತಯಾರಿಸುವ, ಒಟ್ಟಾರೆ ಪರಿಸರಪ್ರೇಮ ಜಾಗೃತಗೊಳ್ಳುವ ಮೂಲಕ ಮೊದಲಿನ ಬೆಂಗಳೂರಿನ ಹಸಿರಿನ ಚೆಲುವನ್ನು ಮತ್ತೆ ತರಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ.
ಸಂಪರ್ಕಕ್ಕೆ:7676021777, www.mydreamgarden.in v
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT