ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದ ಹಿತ ಮತ್ತು ಸ್ಥಳೀಯರ ಅಗತ್ಯ

ಪರಿಸರದ ಹಿತ ಕಾಯುವುದೆಂದರೆ, ಅದು ಸ್ಥಳೀಯರ ಹಿತದ ಪ್ರಶ್ನೆಯೂ ಆಗಿರಬೇಕಲ್ಲವೇ?
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡ ಕಾರಣಕ್ಕೆ ಪರಿಸರ ಸಂರಕ್ಷಣೆಯ ಮಣಭಾರವನ್ನು ಅಲ್ಲಿನ ಜನರ ಮೇಲಷ್ಟೇ ಹೊರಿಸಿ ಉಳಿದವರು ನಿರುಮ್ಮಳವಾಗಿರಬಹುದೇ? ಸ್ಥಳೀಯರ ಮೂಲಭೂತ ಅಗತ್ಯಗಳಿಗೆ ಸ್ಪಂದಿಸದಷ್ಟು ನಿರ್ದಯವಾಗಿ ಅಭಿವ್ಯಕ್ತಗೊಳ್ಳುವ ಪರಿಸರವಾದ ಅಂತಿಮವಾಗಿ ಯಾರನ್ನು ಬಲಿಪಶು ಮಾಡುತ್ತದೆ ಮತ್ತು ಯಾರ ವಿರುದ್ಧ ಸೆಣಸಲಾಗದೆ ಸೋಲಪ್ಪಿಕೊಳ್ಳುತ್ತದೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜರೂರತ್ತು ಆಗಾಗ ಸೃಷ್ಟಿಯಾಗುತ್ತಲೇ ಇರುತ್ತದೆ. ಇದೀಗ ಭೈರಾಪುರ- ಶಿಶಿಲಾ ರಸ್ತೆ ನಿರ್ಮಾಣ ವಿವಾದದ ಹಿನ್ನೆಲೆಯಲ್ಲೂ ಈ ಪ್ರಶ್ನೆಗಳು ಮುಖಾಮುಖಿಯಾಗುತ್ತವೆ.

ರಸ್ತೆ ನಿರ್ಮಿಸುವುದರಿಂದ ಅಲ್ಲಿನ ಸೂಕ್ಷ್ಮ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಕಾಳಜಿ ವ್ಯಕ್ತಪಡಿಸುವ ಕೆಲ ಪರಿಸರವಾದಿಗಳ ವಾದಗಳಿಗಷ್ಟೇ ನಾವು ತೆರೆದುಕೊಂಡರೆ, ಯಾವುದೇ ಕಾರಣಕ್ಕೂ ಅಲ್ಲಿ ರಸ್ತೆ ನಿರ್ಮಿಸಬಾರದೆನ್ನುವ ನಿಲುವಿಗೆ ಅಂಟಿಕೊಂಡುಬಿಡಬಹುದು. ಅದೇ ಒಮ್ಮೆ ಇಡೀ ವಿವಾದದ ಕೇಂದ್ರ ಸ್ಥಳದ ಸುತ್ತಮುತ್ತಲೇ ಜೀವಿಸುತ್ತಿರುವ ಮನುಷ್ಯರೊಳಗೂ ಉಳಿದುಕೊಂಡಿರುವ ನೋವಿನ ಕಥೆಗಳಿಗೆ ಕಿವಿಯಾದರೆ, ಬಹುಶಃ ಪರಿಸರವಾದಕ್ಕಿಂತ ಆ ಮನುಷ್ಯರ ಪರವಾದ ವಾದಕ್ಕೆ ಮಾನವೀಯ ಆಯಾಮವಿದೆ ಅನಿಸಲೂಬಹುದು.

ಭೈರಾಪುರ- ಶಿಶಿಲಾ ನಡುವೆ ರಸ್ತೆ ನಿರ್ಮಾಣವಾಗಬೇಕೇ ಎಂಬ ಪ್ರಶ್ನೆಯನ್ನು ಇಲ್ಲಿನ ಸ್ಥಳೀಯರ ಮುಂದಿಟ್ಟರೆ, ‘ಹೌದು ಆಗ್ಲೇಬೇಕು. ಇದು ಇತ್ತೀಚಿನ ಬೇಡಿಕೆಯಲ್ಲ.  ಹತ್ತಾರು ವರ್ಷಗಳಿಂದ ನಾವು ಕೇಳ್ತಲೇ ಬಂದಿದ್ದೀವಿ. ಈಗ ಸರ್ಕಾರವೇನೊ ರಸ್ತೆ ಮಾಡೋಕೆ ಮನಸ್ಸು ಮಾಡಿದೆ. ಆದ್ರೆ ಸಿಟಿಯಲ್ಲಿ ಕುಳಿತಿರೋ ಪರಿಸರವಾದಿಗಳು ಈ ರಸ್ತೆ ಮಾಡೋದು ಬೇಡ ಅಂತ ಅಡ್ಡಗಾಲು ಹಾಕ್ತಿದ್ದಾರೆ.

ಇದು ಸರಿನಾ? ದಿನಾ ಕಾಡುಪ್ರಾಣಿಗಳ ಜೊತೆ ಏಗಾಡ್ಕೊಂಡು ಪ್ರಾಣ ಒತ್ತೆ ಇಟ್ಟು ಗದ್ದೆ ಕಾಯ್ಕೊಂಡು ಬೆಳೆ ಉಳಿಸಿಕೊಳ್ಳಲು ಪರದಾಡೋರು ನಾವು. ಇಲ್ಲಿ ಕಾಡುಪ್ರಾಣಿಗಳಿಗೆ ಸಿಕ್ಕಿ ಜನ ಸತ್ತರೆ ಯಾರೂ ನೋಡೋಕೆ ಬರೋದಿಲ್ಲ. ಪರಿಸರವಾದಿಗಳು, ಟಿ.ವಿ- ಪೇಪರ್‌ನವ್ರು ಕಣ್ಣೆತ್ತಿ ಸಹ ಇತ್ತ ಕಡೆ ನೋಡೋದಿಲ್ಲ. ಅದೇ ನಮ್ಗೆ ರಸ್ತೆ ಮಾಡ್ಕೊಡ್ತವ್ರೆ ಅಂತ ಗೊತ್ತಾದ ಕೂಡ್ಲೆ ಎಲ್ರೂ ಮಾಡ್ಬೇಡಿ ಅಂತ ಹೇಳೋಕೆ ಮಾತ್ರ ಮುಂದೆ ಬರ್ತಾರೆ’ ಎಂದು ಆಕ್ರೋಶ ಹೊರಹಾಕುತ್ತಾರೆ.

‘ರಸ್ತೆ ಮಾಡೋಕೆ ಸಾವಿರಾರು ಮರಗಳನ್ನ ಕಡಿಬೇಕಾಗುತ್ತೆ. ಇದ್ರಿಂದ ಇಲ್ಲಿನ ಕಾಡು ನಾಶ ಆಗಲ್ವಾ? ಕಾಡುಪ್ರಾಣಿಗಳ ಉಪಟಳ ಮತ್ತಷ್ಟು ಹೆಚ್ಚಾಗಲ್ವಾ?’ ಅಂತ ಕೇಳಿದ್ರೆ, ‘ಅಯ್ಯೋ ಇಲ್ಲಿ ರಸ್ತೆ ಮಾಡೋದಾದ್ರೂ ಮರ ಕಡಿತಾರೆ, ರಸ್ತೆ ಮಾಡ್ದೆ ಹೋದ್ರೂ ಮರ ಕಡಿತಾರೆ. ದಿನಾ ಕಾಡಲ್ಲಿ ಕದ್ದು ಮರ ಕಡಿಯೋದನ್ನ ಇವ್ರು ತಡ್ದಿದ್ದಾರ ಸ್ವಾಮಿ’ ಎಂಬ ಮರುಪ್ರಶ್ನೆ ಒಡ್ಡುತ್ತಾರೆ.

ಇವರ ಪ್ರಶ್ನೆಗಳು ಉತ್ತರ ಪಡೆಯಲು ಅರ್ಹವಲ್ಲವೇ? ಉತ್ತರಿಸಬೇಕಿರುವವರ ಸಾಲಲ್ಲಿ ಇದೀಗ ರಸ್ತೆ ನಿರ್ಮಾಣ ವಿರೋಧಿ ನಿಲುವು ತಳೆದಿರುವ ಬಹುತೇಕರು ನಿಲ್ಲುವುದಿಲ್ಲವೇ? ಆಯಾ ಪರಿಸರದ ಹಿತ ಕಾಯುವುದೆಂದರೆ, ಅದು ಅಲ್ಲಿನ ಜನರ ಹಿತದ ಪ್ರಶ್ನೆಯೂ ಆಗಿರಬೇಕಲ್ಲವೇ? ಯಾರದೋ ಹಿತಕ್ಕಾಗಿ ಜಾರಿಗೊಳ್ಳುವ ಬೃಹತ್ ಯೋಜನೆಗಳಿಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದರೆ, ಅದಕ್ಕೆ ಸ್ಥಳೀಯರ ಬೆಂಬಲವೂ ದಕ್ಕುತ್ತದೆ.

ಅದೇ ಸ್ಥಳೀಯರ ಅಗತ್ಯ ಪೂರೈಸಲು ಕಾರ್ಯಗತಗೊಳ್ಳುವ ರಸ್ತೆ ನಿರ್ಮಾಣದಂತಹ ಯೋಜನೆಗಳಿಗೂ ತಡೆಯೊಡ್ಡುವುದು ಸಮಂಜಸವೇ ಎಂದು ಕೇಳಿಕೊಳ್ಳುವ ಅಗತ್ಯ ಇದೆ. ಹೊರಗಿನವರ ಮಾತಿಗಿಂತ ಸ್ಥಳೀಯರು ತಳೆಯುವ ನಿಲುವಿಗೇ ಹೆಚ್ಚು ಆದ್ಯತೆ ನೀಡಬೇಕಿದೆ.

ಭೈರಾಪುರವನ್ನು ಕುಗ್ರಾಮವೆಂದು ಕರೆದ ಪರಿಸರವಾದಿಗಳ ಬಗ್ಗೆ ಅಸಮಾಧಾನ ಹೊಂದಿರುವ ಗ್ರಾಮದ ಹಿರಿಯರೊಬ್ಬರು ಆಡಿದ ಮಾತುಗಳು ಮನನೀಯ. ‘ಈ ಊರುನ್ನ ಕುಗ್ರಾಮ ಅಂತ ಈಗ ಯಾರ್‍ಯಾರೋ ಅಂತವ್ರೆ ಸ್ವಾಮಿ. ಇದುನ್ನ ಕುಗ್ರಾಮ ಅನ್ನೋಕೆ ಅವ್ರಿಗೇನು ಹಕ್ಕಿದೆ? ಈ ಕುಗ್ರಾಮದಲ್ಲೇ ಮೊದ್ಲು ಸರ್ಕಾರಿ ಶಾಲೆ ಇತ್ತು. ಆ ಶಾಲೆಯಲ್ಲಿ ಮೂವತ್ತು ಮಕ್ಳು ಓದ್ತಿದ್ರು. ನನ್ ಮಗನೂ ಇದೇ ಕನ್ನಡ ಶಾಲೆಯಲ್ಲಿ ಓದಿ ಈಗ ಎಂಬಿಬಿಎಸ್ ಮುಗಿಸಿ ಎಂ.ಡಿ ಮಾಡ್ತಾವ್ನೆ. ಇದುನ್ನ ಈಗ ಕುಗ್ರಾಮ ಅಂತಾರಲ್ಲ ನ್ಯಾಯ್ವಾ? ಈಗ ಊರಲ್ಲಿ ಮಕ್ಳು ಇಲ್ದೆ ಸ್ಕೂಲು ಮುಚ್ಚೋಗದೆ’ ಅಂತ ದೂರದಲ್ಲಿ ಕಾಣುತ್ತಿದ್ದ ಮುರುಕಲು ಕಟ್ಟಡದತ್ತ ಕೈ ತೋರಿಸಿದರು.

ಅವರ ಮಾತಿಗೆ ದನಿಗೂಡಿಸಿದ ಮತ್ತೊಬ್ಬರು, ‘ಈ ರಸ್ತೆ ಆದ್ರೆ ನಮ್ ಹೊಟ್ಟೆಪಾಡಿಗೂ ಒಂದು ದಾರಿ ಆಗುತ್ತೆ. ಸಿಟೀಲಿ ಕೂಲಿ ನಾಲಿ ಮಾಡ್ಕೊಂಡು ಬದುಕ್ತಿರೋ ನಮ್ ಮಕ್ಳು ಈ ಊರಲ್ಲೇ ಬದ್ಕೋಕೆ ಒಂದು ದಾರಿ ಕಂಡ್ಕೋಬಹ್ದು’ ಅಂತನ್ನುವ ಮೂಲಕ ತಾವೇಕೆ ರಸ್ತೆ ನಿರ್ಮಾಣದ ಪರ ಇದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ರಸ್ತೆ ನಿರ್ಮಾಣದ ಕುರಿತು ಸ್ಥಳೀಯರ ಅಭಿಪ್ರಾಯ ತಿಳಿದುಕೊಳ್ಳಲು ಮುಂದಾದ ಮಾಧ್ಯಮ ಮಿತ್ರರೊಬ್ಬರ ಜೊತೆ ಭೈರಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅದುವರೆಗೂ ನಮ್ಮ ಗಮನಕ್ಕೆ ಬಾರದಿದ್ದ ಕೆಲ ವಿಚಾರಗಳು ತೆರೆದುಕೊಳ್ಳುತ್ತಾ ಹೋದವು. ಹಿಂದಿನ ರಾತ್ರಿಯಷ್ಟೆ ತಮ್ಮ ಮನೆಯ ಆಸುಪಾಸು ಅಡ್ಡಾಡಿ ಹೋದ ಕಾಡಾನೆಗಳು ಮಾಡಿದ್ದ ಬೆಳೆ ಹಾನಿ, ಬೆಳೆ ಉಳಿಸಿಕೊಳ್ಳಲು ತಾವು ನಡೆಸಬೇಕಿರುವ ಹೋರಾಟದ ಚಿತ್ರಣವನ್ನೊಬ್ಬರು ಕಟ್ಟಿಕೊಟ್ಟರು. ಭೈರಾಪುರದ ಗ್ರಾಮಸ್ಥರೂ ಹೇಮಾವತಿ ಜಲಾಶಯ ಯೋಜನಾ ನಿರಾಶ್ರಿತರೇ ಹೆಚ್ಚಿರುವ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ನಮ್ಮ ಊರು ಮಾದಿಹಳ್ಳಿಯ ಜನ ಅನುಭವಿಸುತ್ತಿರುವ ಸಮಸ್ಯೆಗಳ ವರ್ತುಲದೊಳಗೇ ಸಿಲುಕಿಕೊಂಡಂತೆ ಭಾಸವಾಯಿತು.

ಗೊರೂರು ಬಳಿ ಹೇಮಾವತಿ ಜಲಾಶಯ ನಿರ್ಮಾಣವಾದ ಮೇಲೆ ತಮ್ಮ ಭೂಮಿ ಕಳೆದುಕೊಂಡು ಹೊಸ ನೆಲೆಗೆ ಸ್ಥಳಾಂತರವಾದವರು ಇದೀಗ ತಾವು ನೆಲೆ ಕಂಡುಕೊಂಡ ಪ್ರದೇಶದಲ್ಲಿ ಕಾಡಾನೆಗಳೊಂದಿಗೆ ನಿತ್ಯ ಸಂಘರ್ಷ ನಡೆಸಬೇಕಾದ ಸ್ಥಿತಿ ಇದೆ. ಜಲಾಶಯದಿಂದ ಕುಡಿಯಲು ಮತ್ತು ಕೃಷಿಗೆ ನೀರು ಪಡೆಯುತ್ತಿರುವ ಫಲಾನುಭವಿಗಳೇ ಬೇರೆ, ಜಲಾಶಯಕ್ಕಾಗಿ ಭೂಮಿ ನೀಡಿ ಇದೀಗ ಜಲಾಶಯ ನಿರ್ಮಾಣದಿಂದಾಗಿ ತಮ್ಮ ನೆಲೆ ಕಳೆದುಕೊಂಡು, ಸಮಾನದುಃಖಿಗಳಾಗಿರುವ ಕಾಡಾನೆಗಳೊಂದಿಗೆ ಸಂಘರ್ಷಮಯ ಬದುಕು ಕಟ್ಟಿಕೊಂಡಿರುವ ಸಂತ್ರಸ್ತರೇ ಬೇರೆ. ಈ ಸಂತ್ರಸ್ತರಿಗೆ ಫಲಾನುಭವಿಗಳು ಪರಿಸರ ಕಾಳಜಿಯ ಪಾಠ ಬೋಧಿಸುವುದು ಸಹ್ಯವೇ?

ಪರಿಸರ ನಾಶದ ದುಷ್ಪರಿಣಾಮ ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಅಭಿವೃದ್ಧಿ ಮಾದರಿ ಸುಸ್ಥಿರತೆಯ ತಳಪಾಯ ಹೊಂದಿರುವುದು ಅತ್ಯಗತ್ಯ. ಆದರೆ, ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿದವರೆಲ್ಲರೂ ಯಥೇಚ್ಛವಾಗಿ ಬಳಸಿಕೊಂಡು ಆರಾಮದಾಯಕ ಬದುಕು ಕಟ್ಟಿಕೊಳ್ಳುವಾಗ, ಕೆಲವರಷ್ಟೇ ತಾವು ಕಾಡಂಚಿನಲ್ಲಿ ಬದುಕುತ್ತಿರುವವರು ಎಂಬ ಒಂದೇ ಕಾರಣಕ್ಕೆ ರಸ್ತೆ, ವಿದ್ಯುತ್, ಸಾರಿಗೆ, ಆಸ್ಪತ್ರೆ, ಶಾಲೆಗಳಂತಹ ಮೂಲ ಸೌಲಭ್ಯಗಳಿಂದಲೂ ವಂಚಿತರಾಗಬೇಕೇ?

ಕೊಳವೆ ಮೂಲಕ ಅನಿಲ ಪೂರೈಸಲು, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವಿದ್ಯುತ್ ರವಾನಿಸಲು, ವಿದ್ಯುತ್ ಉತ್ಪಾದಿಸಲು, ಗಣಿಗಾರಿಕೆಗೆ ಅರಣ್ಯ ನಾಶ ಮಾಡುವ, ಅದರಿಂದಾದ ಅನುಕೂಲಗಳ ಫಲ ಉಣ್ಣುವವರು, ಮೊದಲೇ ಸಂಕಷ್ಟದಲ್ಲಿರುವ ಸ್ಥಳೀಯರ ಮನಸ್ಸಿಗೆ ಪರಿಸರ ಸಂರಕ್ಷಣೆಯೆಂಬ ಅರಿವಿನ ಪೋಷಾಕು ತೊಡಿಸಲು ಮುತುವರ್ಜಿ ತೋರುವುದು ಆತ್ಮವಂಚನೆ ಆಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT