ಶುಕ್ರವಾರ, ಜುಲೈ 1, 2022
28 °C
ಏಷ್ಯಾ, ಯುರೋಪ್ ಖಂಡಗಳ ಎಲ್ಲ ಗುರಿ ತಲುಪುವ ಸಾಮರ್ಥ್ಯ

ಅಗ್ನಿ–5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಗ್ನಿ–5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್‌ (ಒಡಿಶಾ):  ಚೀನಾ ಸೇರಿದಂತೆ ಏಷ್ಯಾ ಖಂಡದಲ್ಲಿರುವ ಎಲ್ಲ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವಿರುವ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರ ಪರೀಕ್ಷೆ ಯಶಸ್ವಿಯಾಗಿದೆ.ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ, 5 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಪರೀಕ್ಷೆಯನ್ನು  ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಲಾಯಿತು.‘ಅಗ್ನಿ–5’ರ ಯಶಸ್ವಿ ಪರೀಕ್ಷೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ಬಂದಿದೆ. ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿರುವುದರಿಂದ ರಕ್ಷಣಾ ಪಡೆಗೆ ಅದನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಹಾದಿ ಸುಗಮವಾದಂತಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.ಮೂರು ಹಂತಗಳ ಎಂಜಿನ್‌ ಹೊಂದಿರುವ, ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯನ್ನು ಸೋಮವಾರ ಬೆಳಿಗ್ಗೆ 11.05ರ ಸುಮಾರಿಗೆ ಇಂಟಗ್ರೇಟೆಡ್ ಟೆಸ್ಟ್‌ ರೇಂಜ್‌ನಲ್ಲಿ (ಐಟಿಆರ್‌) ಸಂಚಾರಿ ಉಡಾವಣಾ ವಾಹನದಿಂದ (ಮೊಬೈಲ್‌ ಲಾಂಚರ್‌) ಉಡಾವಣೆ ಮಾಡಲಾಯಿತು ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ.ಉಡಾವಣಾ ವಾಹನದಲ್ಲಿ ಅಳವಡಿಸಲಾಗಿದ್ದ ಮುಚ್ಚಿದ ಕೊಳವೆಯ (ಕ್ಯಾನಿಸ್ಟರ್‌) ಮೂಲಕ ಕ್ಷಿಪಣಿಯನ್ನು ಉಡಾಯಿಸಲಾಯಿತು. ನಭಕ್ಕೆ ಚಿಮ್ಮಿದ ಕ್ಷಿಪಣಿಯು ನಿಗದಿ ಪಡಿಸಲಾಗಿದ್ದ ಎಲ್ಲ ಗುರಿಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ತಲುಪಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.‘ಅಗ್ನಿ–5’ರ ಅಭಿವೃದ್ಧಿ ಹಂತದಲ್ಲಿ ನಡೆಸಲಾದ ನಾಲ್ಕನೇ ಪರೀಕ್ಷೆ ಇದು. ಕೊಳವೆಯ  ಮೂಲಕ ನಡೆಸಿದ ಎರಡನೇ ಪರೀಕ್ಷೆ (ಉಡಾವಣಾ ವಾಹನದಲ್ಲಿ ಅಳವಡಿಸಲಾಗಿರುವ ಸಿಲಿಂಡರ್ ಆಕಾರದ ದೊಡ್ಡ ಕೊಳವೆಯಲ್ಲಿ ಕ್ಷಿಪಣಿ ಇಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪಣಿ ಉಡಾವಣೆಗೆ ಸಿದ್ಧತೆ ನಡೆಸಬಹುದು. ಕ್ಷಿಪಣಿ ಹೊತ್ತೊಯ್ಯುವ ವಾಹನ ಹೋಗುವ ಸ್ಥಳಗಳಿಂದಲೇ ಕ್ಷಿಪಣಿ ದಾಳಿ ನಡೆಸಬಹುದು).‘ಬೆಳಗಾವಿಯ ‘ಆಕ್ಚುಯೇಟರ್ 

ಬೆಳಗಾವಿ: ಸೋಮವಾರ ಪರೀಕ್ಷಾರ್ಥ ಉಡಾವಣೆಯಾದ  ಭಾರತದ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರಲ್ಲಿ ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಅಂಡ್‌ ಹೈಡ್ರಾಲಿಕ್ ಇಂಡಿಯಾ ಕಂಪೆನಿಯು ಸಿದ್ಧಪಡಿಸಿದ ಸಾಧನವಾದ ‘ಆಕ್ಚುಯೇಟರ್‌’ಗಳನ್ನು ಪೂರೈಸಲಾಗಿದೆ’ ಎಂದು ಕಂಪೆನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ ದಡೋತಿ ತಿಳಿಸಿದರು.‘ಕಂಪೆನಿಯು ಡಿಆರ್‌ಡಿಒ ಬೇಡಿಕೆಗೆ ಅನುಗುಣವಾಗಿ ಸಾಧನಗಳನ್ನು ಪೂರೈಸುತ್ತಿದೆ. ಮಂಗಳಯಾನಕ್ಕಾಗಿ ‘ಪೊಸಿಷನ್‌ ಸೆನ್ಸಾರ್‌’ಗಳನ್ನು ಕಂಪೆನಿ ಒದಗಿಸಲಾಗಿತ್ತು. ಈಗ ‘ಅಗ್ನಿ–5’ರಲ್ಲಿ ಬಳಸಲಾಗಿರುವ ‘ಆಕ್ಚುಯೇಟರ್‌’ಗಳು ಕ್ಷಿಪಣಿಯ ಫಿನ್‌ ಕಂಟ್ರೋಲ್‌ ಆಕ್ಚುಯೇಷನ್‌ ಕಾರ್ಯಕ್ಕೆ (ಮೇಲೇರುವುದಕ್ಕೆ) ಸಹಾಯ ಮಾಡುತ್ತವೆ’ ಎಂದು ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.ಅತ್ಯಾಧುನಿಕ ತಂತ್ರಜ್ಞಾನ

ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ‘ಅಗ್ನಿ–5’ ಅತ್ಯಂತ ಅತ್ಯಾಧುನಿಕವಾದುದು. ಪಥದರ್ಶಕ, ಪಥ ನಿರ್ದೇಶನ ವ್ಯವಸ್ಥೆ, ಸಿಡಿತಲೆ ಮತ್ತು ಎಂಜಿನ್‌ ಅಭಿವೃದ್ಧಿಯಲ್ಲಿ  ಹೊಸ ತಂತ್ರಜ್ಞಾನಗಳನ್ನು ಬಳಸಲಾಗಿದೆ ಎಂದು ಮೂಲಗಳು ಹೇಳಿವೆ. ಕ್ಷಿಪಣಿ ಪರೀಕ್ಷೆಯ ಸಂದರ್ಭದಲ್ಲಿ ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹಲವು ತಂತ್ರಜ್ಞಾನಗಳನ್ನೂ ಪರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಅತ್ಯಂತ ಹೆಚ್ಚು ನಿಖರವಾಗಿ ಗುರಿಯನ್ನು ತೋರಿಸುವ ರಿಂಗ್‌ ಲೇಸರ್‌ ಜೈರೊ ಬೇಸ್ಡ್‌ ಇನರ್ಷಿಯಲ್‌ ನೇವಿಗೇಷನ್‌ ಸಿಸ್ಟಮ್‌ (ಆರ್‌ಐಎನ್‌ಎಸ್) ಮತ್ತು ಅತ್ಯಾಧುನಿಕವಾದ ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು  (ಎಂಐಎಸ್‌ಎಸ್‌) ಕ್ಷಿಪಣಿಯಲ್ಲಿ ಅಳವಡಿಸಲಾಗಿದ್ದು,  ಕ್ಷಿಪಣಿಯು ನಿಖರವಾಗಿ ಗುರಿ ತಲುಪಿಸುಯಲ್ಲಿ ಇವು ನೆರವಾಗಿವೆ ಎಂದು ಮೂಲಗಳು ತಿಳಿಸಿವೆ.ಕ್ಷಿಪಣಿಯಲ್ಲಿದ್ದ ಅತಿ ವೇಗದ ಕಂಪ್ಯೂಟರ್‌ ಮತ್ತು ದೋಷಗಳನ್ನು ಸರಿಪಡಿಸಬಲ್ಲ ತಂತ್ರಾಶವು ಕ್ಷಿಪಣಿಯನ್ನು ನಿರ್ದಿಷ್ಟ ಗುರಿಯೆಡೆಗೆ ಸಾಗಿಸಿವೆ ಎಂದು ಮೂಲಗಳು ವಿವರಿಸಿವೆ.ತಯಾರಾಗುತ್ತಿದೆ ‘ಅಗ್ನಿ–6’

ಅಗ್ನಿ ಸರಣಿಯ ಆರನೇ ಕ್ಷಿಪಣಿಅಭಿವೃದ್ಧಿ ಪಡಿಸಲು ಡಿಆರ್‌ಡಿಒ ಮುಂದಡಿ ಇಟ್ಟಿದೆ ಎನ್ನಲಾಗಿದೆ. ಅತ್ಯಾಧುನಿಕವಾದ ಈ ಕ್ಷಿಪಣಿಯ ದಾಳಿ ವ್ಯಾಪ್ತಿ 8,000–10,000 ಕಿ.ಮೀ ಇರಲಿದೆ. ಜಲಾಂತ ರ್ಗಾಮಿ ನೌಕೆ ಮತ್ತು ಭೂಮಿಯಿಂದಲೂ ಇದನ್ನು ಉಡಾವಣೆ ಮಾಡಬಹುದಾಗಿದೆ  ಎಂದು ಹೇಳಲಾಗಿದೆ.ಅಗ್ನಿ ಕ್ಷಿಪಣಿಗಳ ದಾಳಿ ವ್ಯಾಪ್ತಿ

*  ಅಗ್ನಿ–1:   700 ಕಿ.ಮೀ

*  ಅಗ್ನಿ–2:  2,000 ಕಿ.ಮೀ* ಅಗ್ನಿ–3 : ಮತ್ತು ಅಗ್ನಿ–4– 2,500 ಕಿ.ಮೀ–3,500 ಕಿ.ಮೀ"*  ಅಗ್ನಿ–5: 5000ದಿಂದ 5,800 ಕಿ.ಮೀ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.