ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ನೋಟಿಗೆ ದಂಡ

ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ
Last Updated 28 ಡಿಸೆಂಬರ್ 2016, 20:13 IST
ಅಕ್ಷರ ಗಾತ್ರ

ನವದೆಹಲಿ: ಮಾನ್ಯತೆ ಕಳೆದುಕೊಂಡಿರುವ ಹಳೆಯ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಇಟ್ಟುಕೊಳ್ಳುವವರಿಗೆ ದಂಡ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಹಳೆ ನೋಟು ಇಟ್ಟುಕೊಂಡವರಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದರಲ್ಲಿ ಇರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ. ಆದರೆ ಎಷ್ಟು ನೋಟುಗಳನ್ನು ಇಟ್ಟುಕೊಂಡರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ವಿವರ ಲಭ್ಯವಾಗಿಲ್ಲ. ಸುಗ್ರೀವಾಜ್ಞೆಗೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.

‘ನಿರ್ದಿಷ್ಟ ಬ್ಯಾಂಕ್‌ ನೋಟುಗಳ ಋಣಭಾರ ಅಂತ್ಯಗೊಳಿಸುವ ಸುಗ್ರೀವಾಜ್ಞೆ’ ಜಾರಿಗೆ ಬಂದ ನಂತರ ಹಳೆಯ ನೋಟುಗಳನ್ನು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟುಕೊಳ್ಳುವುದು ಕ್ರಿಮಿನಲ್ ಅಪರಾಧ ಆಗಲಿದೆ. ಆದರೆ, ನೋಟು ಇಟ್ಟುಕೊಳ್ಳುವುದು ಯಾವ ದಿನದ ನಂತರ  ಅಪರಾಧವಾಗಿ
ಪರಿಗಣಿತವಾಗಲಿದೆ ಎಂಬುದು ಖಚಿತವಾಗಿಲ್ಲ.

ಮಾನ್ಯತೆ ಕಳೆದುಕೊಂಡಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ ಖಾತೆಗಳಲ್ಲಿ ಜಮಾ ಮಾಡಲು ಶುಕ್ರವಾರದವರೆಗೆ (ಡಿಸೆಂಬರ್ 30) ಅವಕಾಶ ಇದೆ. ಹಳೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕಿನ  (ಆರ್‌ಬಿಐ) ಶಾಖೆಗಳಲ್ಲಿ ಜಮಾ ಮಾಡಲು ಮಾರ್ಚ್‌ 31ರವರೆಗೆ ಅವಕಾಶವಿದೆ.
ಹಳೆ ನೋಟುಗಳನ್ನು ಡಿಸೆಂಬರ್‌ 31ರಿಂದ ಇಟ್ಟುಕೊಳ್ಳುವಂತಿಲ್ಲವೋ ಅಥವಾ ಮಾರ್ಚ್‌ 31ರ ನಂತರ ಇಟ್ಟುಕೊಳ್ಳುವಂತಿಲ್ಲವೋ ಎಂಬ ಮಾಹಿತಿ ಲಭ್ಯವಾಗಿಲ್ಲ.

ತಿದ್ದುಪಡಿಗೆ ಒಪ್ಪಿಗೆ:ಮುಂದಿನ ದಿನಗಳಲ್ಲಿ ಕಾನೂನು ಸಮಸ್ಯೆಗಳು ಎದುರಾಗಬಾರದು ಎಂಬ ಉದ್ದೇಶದಿಂದ, ಮಾನ್ಯತೆ ಕಳೆದುಕೊಂಡ ನೋಟುಗಳ ಮೇಲೆ ಸರ್ಕಾರ ಹಾಗೂ ಆರ್‌ಬಿಐ ಹೊಂದಿರುವ ಬಾಧ್ಯತೆ ಇಲ್ಲವಾಗಿಸಲು ‘ಆರ್‌ಬಿಐ ಕಾಯ್ದೆ’ಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೂ ಕೇಂದ್ರ ಸಂಪುಟ ಅಸ್ತು ಎಂದಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಸರ್ಕಾರ ನವೆಂಬರ್ 8 ರಿಂದ ಅನ್ವಯವಾಗುವಂತೆ ರದ್ದು ಮಾಡಿದೆ.

ಜನವರಿ 1ರಿಂದ ಮಾರ್ಚ್‌ 31ರ ನಡುವಣ ಅವಧಿಯಲ್ಲಿ ಹಳೆ ನೋಟುಗಳನ್ನು ಜಮಾ ಮಾಡುವಾಗ ತಪ್ಪು ಮಾಹಿತಿ ಕೊಟ್ಟಿರುವುದು ಗೊತ್ತಾದರೆ,
₹ 5 ಸಾವಿರ ಅಥವಾ ಜಮಾ ಮಾಡಿದ ಮೊತ್ತದ ಐದು ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ಪಾಲ್ಗೊಂಡವರೊಬ್ಬರು ತಿಳಿಸಿದರು.

ಸುಗ್ರೀವಾಜ್ಞೆಗೆ ರಾಷ್ಟ್ರಪತಿಯವರ ಒಪ್ಪಿಗೆ ದೊರೆತ ನಂತರ, ಹಳೆಯ ನೋಟುಗಳನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಡಿಸೆಂಬರ್ 31ರ ನಂತರವೂ ಇಟ್ಟುಕೊಳ್ಳಲು ಸಾಧ್ಯವಾಗಬಹುದು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಸಂಸತ್ತಿನ ಬಜೆಟ್ ಅಧಿವೇಶನದವರೆಗೆ ಸುಗ್ರೀವಾಜ್ಞೆಯನ್ನು ಜಾರಿಯಲ್ಲಿ ಇರಿಸಿ, ನಂತರ ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಮಂಡಿಸುವ ಚಿಂತನೆ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಗೊತ್ತಾಗಿದೆ.
*
ಎಷ್ಟು ದಂಡ?
₹ 10 ಸಾವಿರ ಅಥವಾ ಪತ್ತೆಯಾದ ಹಳೆಯ ನೋಟುಗಳ ಮೌಲ್ಯದ ಐದು ಪಟ್ಟು (ಇವೆರಡರಲ್ಲಿ ಯಾವುದು ಹೆಚ್ಚೋ, ಅದು).
*
ಸಾಲ ಮರುಪಾವತಿ ಅವಧಿ ವಿಸ್ತರಣೆ
ಮುಂಬೈ (ಪಿಟಿಐ):
₹ 1 ಕೋಟಿವರೆಗಿನ ಕಾರು, ಗೃಹ, ಕೃಷಿ ಮತ್ತು ಇತರ ಸಾಲಗಳ ಮರುಪಾವತಿಗೆ ಆರ್‌ಬಿಐ ಮತ್ತೆ 30 ದಿನಗಳ ಕಾಲಾವಕಾಶ ನೀಡಿದೆ. ಈ ಸಾಲಗಳ ಮರುಪಾವತಿಗೆ ಆರ್‌ಬಿಐ ಈಗಾಗಲೇ 60 ದಿನಗಳ ಹೆಚ್ಚುವರಿ ಅವಧಿ ನೀಡಿತ್ತು.

ಹೀಗಾಗಿ, ತಮ್ಮ ಸಾಲವು ‘ವಸೂಲಾಗದ ಸಾಲ’ದ (ಎನ್‌ಪಿಎ) ಪಟ್ಟಿ ಸೇರದಂತೆ ನೋಡಿಕೊಳ್ಳಲು ಗ್ರಾಹಕರಿಗೆ ಒಟ್ಟು 90 ದಿನಗಳ ಕಾಲಾವಕಾಶ ಸಿಕ್ಕಂತೆ ಆಗಿದೆ. ಈ ಅವಕಾಶವು ನವೆಂಬರ್ 1ರಿಂದ ಡಿಸೆಂಬರ್ 31ರ ನಡುವೆ ಪಾವತಿಸಬೇಕಿರುವ ಮೊತ್ತಕ್ಕೆ ಮಾತ್ರ ಅನ್ವಯ ಆಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
*
ಹಿಂಬಾಗಿಲಿನಿಂದ ಕಾನೂನು: ಯೆಚೂರಿ
ದಂಡ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಯನ್ನು ವಿರೋಧಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಸಂಸತ್ತನ್ನು ಎದುರಿಸಲು ಹೆದರಿ, ಸರ್ಕಾರ ಹಿಂದಿನ ಬಾಗಿಲಿನಿಂದ ಕಾನೂನು ತರುತ್ತಿದೆ’ ಎಂದಿದ್ದಾರೆ.

‘ಸುಗ್ರೀವಾಜ್ಞೆಯ ಮೊರೆ ಹೋಗದಿದ್ದರೆ ನೋಟು ರದ್ದತಿಗೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಹಾಗಾಗಿ ಇದು ಸರ್ಕಾರಕ್ಕೆ ಅನಿವಾರ್ಯ ಆಗಿತ್ತು. ಆದರೆ, ಸಂಸತ್ತಿನ ಕಲಾಪ ನಡೆಯುತ್ತಿದ್ದಾಗ ಸರ್ಕಾರ ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತರಬೇಕಿತ್ತು’ ಎಂದರು.ಇಂಥದ್ದೊಂದು ಕಾನೂನನ್ನು ಸಂಸತ್ತಿನ ಮುಂದೆ ಇಡುವುದಕ್ಕೆ ಅಂಜಿ, ಸುಗ್ರೀವಾಜ್ಞೆಯ ಮಾರ್ಗ ಅನುಸರಿಸಲಾಗಿದೆ ಎಂದು ಅವರು ಲೇವಡಿ ಮಾಡಿದರು.
*
ಶ್ವೇತಪತ್ರಕ್ಕೆ ಆಗ್ರಹ
ನವದೆಹಲಿ:
ನೋಟು ರದ್ದು ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ನೋಟು ರದ್ದತಿ ಬಳಿಕ ಎಷ್ಟು ಕಪ್ಪುಹಣ ಪತ್ತೆಯಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ನಗದು ಪಡೆಯಲು ನಿಗದಿಪಡಿಸಿರುವ ಮಿತಿಯನ್ನು ರದ್ದುಪಡಿಸಬೇಕು. ಅಲ್ಲದೆ, ನೋಟು ರದ್ದಿನಿಂದ ತೊಂದರೆಗೊಳಗಾದ ಬಡವರಿಗೆ, ರೈತರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT