ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ಮತ್ತು ವಾಸ್ತವಿಕ ನೆಲೆಗಟ್ಟು

ಅಕ್ಷರ ಗಾತ್ರ

‘ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ನಿರ್ಧಾರವು ರಾಜಕೀಯ ಚದುರಂಗದಾಟದ ದಾಳವಾದ ಕಾರಣಕ್ಕೆ ದಿಢೀರನೆ ಅನೇಕ ತಿರುವುಗಳನ್ನು ಪಡೆದುಕೊಂಡಿದೆ’ ಎಂದು ಸಂದೀಪ್ ಶಾಸ್ತ್ರಿ ತಮ್ಮ ಅಂಕಣದಲ್ಲಿ ಹೇಳಿದ್ದಾರೆ (ಜನರಾಜಕಾರಣ, ಪ್ರ.ವಾ., ಡಿ. 17).

ಭ್ರಷ್ಟಾಚಾರದ ನಿರ್ಮೂಲನೆಯ ಜೊತೆ ಜೊತೆಗೇ, ಭಯೋತ್ಪಾದಕರು ಹಳೆ ನೋಟುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಭಾವನಾತ್ಮಕ ಅಂಶವನ್ನೂ ಪ್ರಧಾನಿ ತಮ್ಮ ಹೇಳಿಕೆಯಲ್ಲಿ ಸೇರಿಸಿದ್ದು ಕೂಡ ‘ರಾಜಕೀಯ’ ಚರ್ಚೆಗೆ ಆಸ್ಪದವಾಯಿತಲ್ಲವೆ? ಯಾವುದೇ ಆರ್ಥಿಕ ನಿರ್ಧಾರದ ಪರಿಣಾಮ ಕೋಟ್ಯಂತರ  ಜನರ ಬದುಕಿಗೆ ಮಾರಕವಾದಾಗ, ಅದು ರಾಜಕೀಯ- ಸಾಮಾಜಿಕ ವಿಷಯವಾಗದೇ ಇರಲು ಸಾಧ್ಯವಿಲ್ಲ.

‘ನೋಟು ರದ್ದತಿ ಬಗ್ಗೆ ಯಾರು ಏನನ್ನು ಹೇಳುತ್ತಾರೆ ಎನ್ನುವುದು ಅವರು ಯಾರ ಪರವಾಗಿದ್ದಾರೆ ಎನ್ನುವುದನ್ನು ಆಧರಿಸಿರುತ್ತದೆ’ ಎಂದು ಸಹ ಶಾಸ್ತ್ರಿ ಹೇಳಿದ್ದಾರೆ. ರಾಜಕೀಯ ಪಕ್ಷಗಳೊಡನೆ ಗುರುತಿಸಿಕೊಳ್ಳದಿರುವ   ದೇಶ ವಿದೇಶಗಳ ಬಹಳಷ್ಟು ಆರ್ಥಿಕ ತಜ್ಞರು, ಹೆಸರಾಂತ ಅಂಕಣಕಾರರು ನೋಟು ರದ್ದತಿಯಿಂದ ಜನರಿಗೆ ಉಂಟಾದ ಸಂಕಷ್ಟಗಳನ್ನು ವಿವರಿಸಿದ್ದಾರೆ.

ಯಾವುದೇ ರಾಜಕೀಯ ಸಿದ್ಧಾಂತದಿಂದ ಸಾಕಷ್ಟು ದೂರವಿರುವ ವಿಷಯ ಪರಿಣತರು, ಹಲವು ಹತ್ತು ಸಂಪಾದಕೀಯಗಳು ಸಹ, ಚರಿತ್ರೆಯಿಂದ ಪಾಠ ಕಲಿಯುವ ಸಾಧ್ಯತೆಯನ್ನು ಪರಿಗಣಿಸದೆ ದಿಢೀರ್‌ ನಿರ್ಧಾರಕ್ಕೆ ಮುಂದಾದ ಸರ್ಕಾರದ ಕ್ರಮದ ಬಗೆಗಷ್ಟೇ ಮಾತನಾಡಿವೆ. ಈವರೆಗೆ ಯಾವ ದೇಶಗಳು ಯಾವ್ಯಾವ ಕಾರಣಕ್ಕೆ ನೋಟು ರದ್ದತಿ ಮಾಡಿವೆ ಎನ್ನುವುದನ್ನು ವಿವರಿಸಿವೆ.

ಎರಡು ಮಹಾಯುದ್ಧಗಳ ನಡುವೆ 1923ರಲ್ಲಿ ಜರ್ಮನಿ; 19ನೇ ಶತಮಾನದಲ್ಲಿ ಅರ್ಜೆಂಟಿನಾದಲ್ಲಿ ಅತಿ ಹೆಚ್ಚಿನ ಹಣದುಬ್ಬರದ ದುಷ್ಪರಿಣಾಮವನ್ನು ಸೀಮಿತಗೊಳಿಸಲು ಮೂರು ಬಾರಿ; ತನ್ನ ಆರ್ಥಿಕ ವ್ಯವಸ್ಥೆ ಕುಸಿದು ಬೀಳುವ ಅಂಚಿನಲ್ಲಿದ್ದಾಗ 2015ರಲ್ಲಿ ಜಿಂಬಾಬ್ವೆ; ಅತ್ಯಂತ ಆತಂಕಕಾರಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದಾಗ ಘಾನಾ (2015); ನೈಜೀರಿಯ (1984) ಮ್ಯಾನ್ಮಾರ್‌ (1987); ಜೈರ್ (1993) ಹಾಗೂ ಅಂದಿನ ಸೋವಿಯತ್ ಒಕ್ಕೂಟ (1991) ಈ ಪ್ರಯೋಗ ಮಾಡಿವೆ. ಆದರೆ ಈ ನಿರ್ಧಾರದ ವೈಫಲ್ಯ ಹಾಗಿರಲಿ, ಹಣಕಾಸಿನ ದುರಂತವಾಗಿದ್ದನ್ನು ಪರಿಣತರು ಉಲ್ಲೇಖಿಸಿದ್ದಾರೆ.

ಹಾಗೇ, ನೋಟು ರದ್ದತಿಯಿಂದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ ಸಾವಿರಾರು ಸಣ್ಣ ಉತ್ಪಾದನಾ ಘಟಕಗಳು ಸಂಬಳ ಕೊಡಲಾಗದೆ, ಉತ್ಪಾದನೆಗೆ ಅವಶ್ಯಕವಾದ ಮೂಲಭೂತ ವಸ್ತುಗಳನ್ನು ಕೊಳ್ಳಲು ಹಾಗೂ ಅವನ್ನು ಸಾಗಿಸಲು ಸಾರಿಗೆ ಕಂಪೆನಿಗಳಿಗೆ ಹಣ ಪಾವತಿಸಲಾಗದೆ ಮುಚ್ಚಿಹೋಗಿವೆ. ದೇಶವ್ಯಾಪಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂತಿರುಗಿರುವುದು ಅಂಕಿ ಅಂಶಗಳ ಸಮೇತ ವರದಿಯಾಗಿದೆ.

ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲೇ ಸಣ್ಣ ಮತ್ತು ಅತಿ ಸಣ್ಣ ಘಟಕಗಳು ಹಣದ ವಹಿವಾಟು ಸಾಧ್ಯವಾಗದೇ ಮುಚ್ಚಿವೆ. ರಾಜ್ಯದಲ್ಲಿ ಈ ರೀತಿ 3 ಲಕ್ಷಕ್ಕೂ ಹೆಚ್ಚು ಕೈಗಾರಿಕಾ ಕೇಂದ್ರಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ರಾಜ್ಯದ ಸಣ್ಣ ಕೈಗಾರಿಕಾ ಮಂಡಳಿ ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.

ವಾಸ್ತವಿಕ ನೆಲೆಗಟ್ಟು ಹೀಗಿರುವಾಗ, ‘ಇಂತಹ ನಿರ್ಧಾರಕ್ಕೆ ಸೂಕ್ತ ಪೂರ್ವ ಸಿದ್ಧತೆ ಮತ್ತು ಸಂಭವನೀಯ ಪರಿಣಾಮಗಳ ಲೆಕ್ಕಾಚಾರ ಹಾಕದೇ ಮುಂದುವರಿದಿರಲಿಕ್ಕಿಲ್ಲ’ ಎನ್ನುವ ಶಾಸ್ತ್ರಿ ಅವರ ನಂಬಿಕೆಯಂತೂ ವಿಸ್ಮಯ ಮೂಡಿಸುವಂತಿದೆ. ಕೇವಲ 41 ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಸೇರಿ 60 ಅಧಿಸೂಚನೆಗಳನ್ನು ತಂದು, ಪೂರ್ವ ತಯಾರಿಯಿಲ್ಲದೆ ವಿಜೃಂಭಣೆಯಿಂದ ಘೋಷಿಸಿದ ಈ ಯೋಜನೆ ದಿನದಿನಕ್ಕೂ ಹಾಸ್ಯಾಸ್ಪದವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT