ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಗಾರಿಕೆಯ ಕೊಲಾಜ್‌

ಕಿರಿಕ್ ಪಾರ್ಟಿ
Last Updated 30 ಡಿಸೆಂಬರ್ 2016, 10:36 IST
ಅಕ್ಷರ ಗಾತ್ರ

ಚಿತ್ರ: ಕಿರಿಕ್ ಪಾರ್ಟಿ
ನಿರ್ಮಾಣ: ಜಿ.ಎಸ್‌. ಗುಪ್ತ, ರಕ್ಷಿತ್ ಶೆಟ್ಟಿ
ನಿರ್ದೇಶನ: ರಿಷಭ್ ಶೆಟ್ಟಿ
ತಾರಾಗಣ: ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ, ಅರವಿಂದ್ ಅಯ್ಯರ್, ಅಚ್ಯುತ ಕುಮಾರ್

ಒಂಬತ್ತು ವರ್ಷಗಳ ಹಿಂದೆ ಶೇಖರ್ ಕಮ್ಮುಲ ತೆಲುಗಿನಲ್ಲಿ ‘ಹ್ಯಾಪಿ ಡೇಸ್’ ಸಿನಿಮಾ ಮಾಡಿದಾಗ ಯುವಜನತೆಯಿಂದ ‘ಶಹಬ್ಬಾಸ್’ ಉದ್ಗಾರ ಹೊರಟಿತ್ತು. ಎಂಜಿನಿಯರಿಂಗ್ ಕಾಲೇಜಿನ ಆಯ್ದ ತರುಣ–ತರುಣಿಯರ ಮನೋನಂದನವನ್ನು ನಿಯಂತ್ರಿತ ಧಾಟಿಯಲ್ಲಿ ಕಮ್ಮುಲ ತೋರಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಕಾಲೇಜು ವಾತಾವರಣದಲ್ಲೂ ಬೇರೆಯದೇ ಗಾಳಿ. ರಕ್ಷಿತ್ ಶೆಟ್ಟಿ ಆ ಗಾಳಿಯಲ್ಲಿ ತೇಲುವ ಪ್ರಯತ್ನವಾಗಿ ‘ಕಿರಿಕ್ ಪಾರ್ಟಿ’ ಮಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಇದು ಸ್ಟೈಲಿಷ್ ಚಿತ್ರ. ಅದನ್ನು ಹೊಸ ಶೈಲಿ ಎಂದು ತಂತ್ರದ ದೃಷ್ಟಿಯಿಂದ ಕರೆಯಲು ಕಾರಣಗಳನ್ನು ಸಹಜವಾಗಿಯೇ ಹುಡುಕಬೇಕಾಗುತ್ತದೆ. ಸ್ಟೈಲಿಷ್ ಎನ್ನುವುದನ್ನು ‘ಕೊಲಾಜ್’ ಎಂದು ಕರೆದರೂ ಅಡ್ಡಿಯಿಲ್ಲ; ಶಿಲ್ಪವಿಲ್ಲದ ಲಹರಿ ಎಂದರೂ ಹೊಂದೀತು.

ಕಾಲೇಜಿನ ತುಂಟತನಕ್ಕೆಲ್ಲಾ ರ್‍್ಯಾಗಿಂಗ್ ಅನ್ನು ಅನ್ವಯಿಸುವ ಚಾಳಿಯನ್ನು ಬಹಳ ಹಿಂದಿನಿಂದ ನೋಡುತ್ತಾ ಬಂದಿದ್ದೇವೆ. ಈ ಚಿತ್ರದಲ್ಲಿ ಅದನ್ನು ಪಿಡುಗು ಎನ್ನುವಂತೆ ರಿಷಭ್ ಶೆಟ್ಟಿ ತೋರದೆ, ‘ಕಾಮಿಕ್ ರಿಲೀಫ್’ ಆಗಿ ಪ್ರಕಟಪಡಿಸಿದ್ದಾರೆ. ಚಿತ್ರದ ಮೊದಲರ್ಧವೆಲ್ಲ ಆಗೀಗ ಕಚಗುಳಿ ಇಡುವ, ಉಡಾಫೆಯೇ ಮೈವೆತ್ತಿಕೊಂಡಂಥ ದೃಶ್ಯಗಳ ಹೆಣಿಗೆಯಾಗಿದೆ. ಒಬ್ಬ ನಾಯಕಿಯ ಹಠಾತ್ ಸಾವಿನೊಂದಿಗೆ ಭಾವುಕ ತಿರುವಿಗೆ ಚಿತ್ರ ಹೊರಳಿಕೊಳ್ಳುತ್ತದೆ. ಆ ಸಾವಿನ ನಿಗೂಢತೆಯನ್ನೇ ಮುಂದುಮಾಡಿ ಕಥೆಯನ್ನು ಬೆಳೆಸಿರಬಹುದೇ ಎಂಬ ನೋಡುಗನ ಲೆಕ್ಕಾಚಾರವನ್ನು ದ್ವಿತೀಯಾರ್ಧ ಸುಳ್ಳು ಮಾಡುತ್ತದೆ.

ತನ್ನದೇ ಇನ್ನೊಂದು ಮುಖದ ಹುಡುಕಾಟಕ್ಕೆ ನಾಯಕನನ್ನು ಪ್ರೇರೇಪಿಸುವ ನಾಯಕಿ ಭಾವಗೀತಾತ್ಮಕವಾಗಿ ಕಾಣುತ್ತಾಳೆ. ಅದು ಕಾಮಿಕ್ ಕಾರ್ಮೋಡದ ಸಣ್ಣ ಮಿಂಚಾಗಿಬಿಡುವುದು ನಿರ್ದೇಶಕರು ಬಗೆದು ನೋಡುವವರ ಪೈಕಿ ಅಲ್ಲ ಎನ್ನುವುದಕ್ಕೆ ಸಾಕ್ಷಿ.

ನಾಯಕ ತನ್ನ ಇನ್ನೊಂದು ಮುಖದ ಅನ್ವೇಷಣೆಗೆ ಇಳಿದಾಗ ಗಂಭೀರವಾಗುವ ಚಿತ್ರ, ಮತ್ತೆ ಅದರ ಹಂಗಿನಿಂದ ಕಳಚಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಂತೆ ಓಘ ಬದಲಿಸಿಕೊಳ್ಳುತ್ತದೆ. ‘ತೂಗುಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು’ ಎಂಬ ಎಚ್ಚೆಸ್ವಿ ಕವಿತೆ ಕೂಡ ಸುಮ್ಮನೆ ಒಂದು ‘ರಿಲೀಫ್’ಗೆ ಬಳಕೆಯಾಗಿದೆಯಲ್ಲ ಅನ್ನಿಸಲೂ ಈ ಧೋರಣೆಯೇ ಕಾರಣ.

ಚಿತ್ರಕಥೆಗೆ ಬಂಧ ದಕ್ಕಿಸಿಕೊಡಲು ರಕ್ಷಿತ್ ಹೆಚ್ಚೇ ತಲೆ ಉಪಯೋಗಿಸಿದ್ದಾರೆ. ಕಚಗುಳಿ, ಹೊಡೆದಾಟದ ರಂಜನೆ, ಗೀತೆಗಳ ಲಹರಿ ಎಲ್ಲವನ್ನು ಬೆಸೆದಿರುವ ಕ್ರಮದಲ್ಲೂ ಕಸರತ್ತಿದೆ. ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಅವರು ಒಂದೇ ದೃಶ್ಯವನ್ನು ಬೇರೆ ಬೇರೆ ಆಯಾಮಗಳಲ್ಲಿ ತೋರಿದ್ದು ನೆನಪಿರಬೇಕಲ್ಲ, ಇಲ್ಲೂ ಅಲ್ಲಲ್ಲಿ ಅಂಥ ಕೈಚಳಕವಿದೆ; ಒಂಥರ ‘ಅದಲಿ ಬದಲಿ ಕಂಚಿ ಕದಲಿ’ ಎಂಬ ನಾಣ್ನುಡಿ ನೆನಪಾಗುವಂತೆ.

ಅಭಿನಯದಲ್ಲಿ ರಕ್ಷಿತ್ ಶೆಟ್ಟಿ ತನ್ನತನ ಮುಂದುವರಿದಿದೆ. ರಶ್ಮಿಕಾ ಮಂದಣ್ಣ ಅವರ ಬುದ್ಧನಂತಹ ಕಣ್ಣುಗಳಲ್ಲಿ ಆಕರ್ಷಣೆ ಇದೆ. ಸಂಯುಕ್ತಾ ಹೆಗಡೆ ಉತ್ಸಾಹಕ್ಕೂ ಕಚಗುಳಿ ಇಡುವ ಗುಣವಿದೆ.

ಸಿನಿಮಾ ಒಂದು ತಂತ್ರಗಾರಿಕೆಯ ಮಾಧ್ಯಮವಾಗಿಯೇ ರಿಷಭ್ ಶೆಟ್ಟಿ ತರಹದ ನಿರ್ದೇಶಕರಿಗೆ ಕಾಣುತ್ತಿದೆ. ಭಾವಯಾನದ ರೂಪಕ ಆಗಿಸುವ ಸಾಧ್ಯತೆಗೆ ಅವರು ಬೆನ್ನುಮಾಡಿರುವುದಕ್ಕೆ ಈ ತಂತ್ರಮೋಹವನ್ನೇ ಹೊಣೆಯಾಗಿಸಬೇಕೇನೋ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕರಮ್ ಚಾವ್ಲಾ ಸಿನಿಮಾಟೊಗ್ರಫಿಗೆ ಆ ತಂತ್ರಗಾರಿಕೆಯ ಎಲ್ಲಾ ಪಟ್ಟುಗಳೂ ಅರ್ಥವಾಗಿರುವುದು ಕೂಡ ಬೆಚ್ಚಿಬೀಳಿಸುವ ಸಂಗತಿಯೇ. ‘ಕಿರಿಕ್ ಪಾರ್ಟಿ’ಯ ಕೊಲಾಜ್ ಹೀಗೆ ಮನೋನಂದನವನ್ನು ಕದಡಿ ಸುಮ್ಮನಾಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT