ನೀರಿನ ಹರಿವಿಗೆ ಅಡ್ಡಿ ಸಹಜ

7

ನೀರಿನ ಹರಿವಿಗೆ ಅಡ್ಡಿ ಸಹಜ

Published:
Updated:
ನೀರಿನ ಹರಿವಿಗೆ ಅಡ್ಡಿ ಸಹಜ

ಎತ್ತಿನಹೊಳೆ ಯೋಜನೆ ಆರಂಭದಿಂದಲೂ ಗೊಂದಲದ ಗೂಡಾಗಿಯೇ ಇದೆ. ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಯೋಜನೆ ಅನುಷ್ಠಾನವಾದರೆ ನೇತ್ರಾವತಿ ನದಿ ಮತ್ತು ಪಶ್ಚಿಮಘಟ್ಟಕ್ಕೆ ಆಗುವ ಧಕ್ಕೆ ತಪ್ಪಿದ್ದಲ್ಲ ಎಂಬುದು ಪರಿಸರವಾದಿಗಳ ವಾದ.  ಈ ಯೋಜನೆ ರೂಪಿಸಿರುವ ನೀರಾವರಿ ತಜ್ಞ ಪ್ರೊ. ರಾಮಪ್ರಸಾದ್ ಅವರು ಪರ–ವಿರೋಧದ ನೆಲೆಯಲ್ಲಿ ತಮ್ಮ ವಾದಗಳನ್ನು ಇಲ್ಲಿ ಸಮರ್ಥಿಸಿಕೊಂಡಿದ್ದಾರೆ.* ಅಂತರ್ಜಲದಲ್ಲಿ ಫ್ಲೋರೈಡ್‌ ಅಂಶ ಇರುವ ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎತ್ತಿನಹೊಳೆ ಯೋಜನೆಯೇ ಅಗತ್ಯವಾಗಿತ್ತೇ? ಬೇರೆ ಆಯ್ಕೆಗಳು ಇರಲಿಲ್ಲವೇ?

ಪೂರ್ವಕ್ಕೆ ಹರಿಯುವ ಕಾವೇರಿ, ಕೃಷ್ಣಾ, ಪಾಲಾರ್‌, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಮುಂತಾದ ನದಿಗಳಲ್ಲಿ ಹರಿಯುವ ನೀರೆಲ್ಲ ಬಳಕೆಯಾಗಿದೆ ಅಥವಾ ಎಲ್ಲೆಲ್ಲಿ ಬಳಕೆಯಾಗಬೇಕು ಎಂಬುದು ನಿಷ್ಕರ್ಷೆಯಾಗಿದೆ. ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಮೇಲ್ಮೈ ನೀರು ಮತ್ತು ಅಂತರ್ಜಲದ ತೀವ್ರ ಅಭಾವವಿದೆ. ಪಶ್ಚಿಮಕ್ಕೆ ಹರಿಯುವ ನದಿಗಳ ನೀರು ಅತಿ ಸ್ವಲ್ಪವಷ್ಟೇ ಬಳಕೆಯಾಗಿದೆ. ಭವಿಷ್ಯದಲ್ಲಿಯೂ ಸ್ವಲ್ಪ ಮಾತ್ರ ಬಳಕೆಯಾಗುವ ಸಂಭವವಿದೆ. ಹೀಗಾಗಿ ಅದನ್ನು ಪೂರ್ವಕ್ಕೆ ಹರಿಸುವ ಕಲ್ಪನೆ ಸಹಜವಾಗಿಯೇ ತಲೆದೋರುತ್ತದೆ.

* ಈ ಯೋಜನೆಯ ವೈಶಿಷ್ಟ್ಯವೇನು?

ಈ ಯೋಜನೆ ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿನೀರನ್ನು ಪೂರ್ವಕ್ಕೆ ತಿರುಗಿಸುವ ಮೊದಲ ಯೋಜನೆ ಎಂಬ ವೈಶಿಷ್ಟ್ಯವುಳ್ಳದ್ದು.* ಅಷ್ಟು ದೂರದಿಂದ ನೀರು ಹರಿಸಲು ಸಾಧ್ಯವೇ?

ದೂರದಿಂದ ನೀರು ತರುವ ತಂತ್ರಜ್ಞಾನ, ಅದಕ್ಕೆ ಬೇಕಾಗುವ ಉಪಕರಣಗಳನ್ನು ತಯಾರಿಸುವ ಕ್ಷಮತೆ, ಅದನ್ನು ಕಾರ್ಯಗತಗೊಳಿಸಬಲ್ಲ ಎಂಜಿನಿಯರ್‌ಗಳು, ತಗಲುವ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇವೆಲ್ಲವೂ ನಮ್ಮಲ್ಲಿ ಇವೆ. ಈ ಕಾರಣದಿಂದ ಯೋಜನೆಯ ಕಾರ್ಯಸಾಧ್ಯತೆಯಲ್ಲಿ ಸಂದೇಹವೇನೂ ಇಲ್ಲ.* ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವುದಿಲ್ಲ ಎಂದು ಪರಿಸರ ಹೋರಾಟಗಾರರು  ವಾದಿಸುತ್ತಿದ್ದಾರಲ್ಲ?

ಅದು ಆಧಾರವಿಲ್ಲದ ಮಾತು. ಹಾಗೆ ಹೇಳುವವರು ಯಾವ ಲೆಕ್ಕವನ್ನೂ ಮಾಡಿಲ್ಲ.* ಒಂದು ವೇಳೆ ಯೋಜನೆ ಪೂರ್ಣಗೊಂಡ ಬಳಿಕ ಅಗತ್ಯ ಪ್ರಮಾಣದಲ್ಲಿ ನೀರು ಸಿಗದಿದ್ದರೆ, ಎತ್ತಿನಹೊಳೆಯಲ್ಲಿ ಮತ್ತಷ್ಟು ಅಣೆಕಟ್ಟೆಗಳನ್ನು ಕಟ್ಟಬೇಕಾಗಿ ಬರಬಹುದೇ? 

ಇಲ್ಲಿ ಇಂತಹ ಸಂಶಯಗಳಿಗೆ ಅವಕಾಶವೇ ಇಲ್ಲ. ನಾವು ಅಂದಾಜಿಸಿದಷ್ಟು ನೀರು ಸಿಕ್ಕೇ ಸಿಗುತ್ತದೆ. ಇಂತಹ ಸಂದೇಹ ನಮ್ಮ ಯಾವ ಎಂಜಿನಿಯರ್‌ಗಳಿಗೂ ಇಲ್ಲ. ಮತ್ತಷ್ಟು ಅಣೆಕಟ್ಟೆಗಳನ್ನು ಕಟ್ಟುವ ಉದ್ದೇಶವೂ ಇಲ್ಲ.* ಈ ಯೋಜನೆಯಿಂದ ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಹಾನಿಯಾಗುತ್ತದೆ ಎಂಬ ವಾದ ಇದೆ. ಯೋಜನೆ ಶಿಫಾರಸು ಮಾಡುವಾಗ ಇಂಥ ಅಂಶಗಳನ್ನು ಪರಿಗಣಿಸಿದ್ದೀರಾ?

ಪರಿಸರ ಮತ್ತು ಅರಣ್ಯ ಇಲಾಖೆಯ ತಜ್ಞರು ಇದನ್ನು ಪರಿಶೀಲಿಸಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಅಣೆಕಟ್ಟೆಗಳ ಕೆಳಗೆ ಕನಿಷ್ಠ 15 ಕ್ಯೂಸೆಕ್‌ ನೀರು ಬಿಡಬೇಕೆಂದು ಆದೇಶಿಸಿದ್ದಾರೆ. ಯೋಜನಾ ವಿನ್ಯಾಸಗಳ ಪ್ರಕಾರ ಕಟ್ಟೆಗಳ ಕೆಳಗೆ 8 ಟಿಎಂಸಿ ಅಡಿ ನೀರು ಹರಿದು ಹೋಗುತ್ತದೆ. ಇದು 15 ಕ್ಯೂಸೆಕ್‌ಗಿಂತ ಹೆಚ್ಚೇ ಆಗುತ್ತದೆ.* ನೇತ್ರಾವತಿ ಹಾಗೂ ಉಪನದಿಗಳ ಸಹಜ ಹರಿವಿಗೆ ಈ ಯೋಜನೆಯಿಂದ ಅಡ್ಡಿ ಆಗುವುದಿಲ್ಲವೇ?

ನದಿ ನೀರನ್ನು ಉಪಯೋಗಿಸಿದರೆ ಅದರ ಸಹಜ ಹರಿವು ಕಡಿಮೆ ಆಗಿಯೇ ಆಗುತ್ತದೆ. ನೂರಾರು ವರ್ಷಗಳಿಂದ ಎಲ್ಲ ನದಿಗಳಲ್ಲೂ ಇದನ್ನು ಕಾಣುತ್ತಲೇ ಇದ್ದೇವೆ.* ಈ ಯೋಜನೆ ಅನುಷ್ಠಾನವು ಮೀನುಗಾರಿಕೆಗೆ ಮಾರಕ ಎಂಬುದು ಕರಾವಳಿ ಜಿಲ್ಲೆಗಳ ಮೀನುಗಾರರ ಆತಂಕ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಮೀನುಗಾರರಿಗೆ ಎಷ್ಟು ಟಿಎಂಸಿ ಅಡಿ ನೀರು ಬೇಕು ಎಂದು ಲೆಕ್ಕ ಹಾಕಿ ನಂತರ ಈ ಪ್ರಶ್ನೆ ಕೇಳಬಹುದು. ನೇತ್ರಾವತಿಯಲ್ಲಿ  ವಾರ್ಷಿಕ ಹರಿವು 400 ಟಿಎಂಸಿ ಅಡಿ ಇದೆ. ಮಳೆ ಕೊರತೆಯಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಕೇವಲ 260 ಟಿಎಂಸಿ ಅಡಿ ನೀರು ಹರಿದಿದೆ. ಅಂದರೆ 140 ಟಿಎಂಸಿ ಅಡಿ ಕಡಿಮೆಯಾಗಿದೆ. ಆದರೂ ಮೀನುಗಾರರಿಗೆ ತೊಂದರೆಯಾಗಿರುವುದು ಕಂಡುಬಂದಿಲ್ಲ.ಆದ್ದರಿಂದ 24 ಟಿಎಂಸಿ ಅಡಿ ಕಡಿಮೆಯಾದ ಮಾತ್ರಕ್ಕೆ ತೊಂದರೆಯಾಗಬಹುದು ಎಂಬ ಶಂಕೆಗೆ ಯಾವ ಆಧಾರವೂ ಇಲ್ಲ. ಅಲ್ಲದೆ ಪೂರ್ವಕ್ಕೆ ಹರಿಯುವ ಕಾವೇರಿ, ಕೃಷ್ಣಾ, ಗೋದಾವರಿ, ಪಶ್ಚಿಮಕ್ಕೆ ಹರಿಯುವ ನರ್ಮದಾ, ಸಿಂಧೂ ನದಿಗಳ ನೂರಾರು ಟಿಎಂಸಿ ಅಡಿ ನೀರನ್ನು ಬಳಸಿಕೊಂಡಿದ್ದರೂ ಮೀನುಗಾರರಿಗೆ ಯಾವ ತೊಂದರೆಯೂ ಆಗಿಲ್ಲ.* ನೇತ್ರಾವತಿ ನದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಹರಿಯುವ ನೀರನ್ನು ಪರಿಗಣಿಸಿ ಎತ್ತಿನಹೊಳೆ ಯೋಜನೆಗೆ 24 ಟಿಎಂಸಿ ಅಡಿ ನೀರು ಲಭ್ಯ ಇದೆ ಎಂದು ಅಂದಾಜಿಸಿರುವುದಾಗಿ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ನಿಜವೇ?

ಹೌದು. ಈ ವಿಧಾನ ಹೊಸದೇನೂ ಅಲ್ಲ, ಆಕ್ಷೇಪಣೀಯವೂ ಅಲ್ಲ. ಪ್ರಪಂಚದಾದ್ಯಂತ ಈ ವಿಧಾನವನ್ನೇ ಜಲವಿಜ್ಞಾನಿಗಳು ಬಳಸಿದ್ದಾರೆ.* ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಪೂರ್ವ ದಿಕ್ಕಿಗೆ ಪಂಪ್‌ ಮಾಡಲು ಬೇಕಾಗುವ ಭಾರೀ ಪ್ರಮಾಣದ ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆಯೇ?

ನಮ್ಮ ದೇಶದಲ್ಲಿ ವಿದ್ಯುತ್‌ ಕೊರತೆ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚುವರಿ ವಿದ್ಯುತ್‌ ಶೀಘ್ರದಲ್ಲಿಯೇ ಲಭ್ಯವಾಗುವ ನಿರೀಕ್ಷೆ ಇದೆ. ನೀರನ್ನು ಪಂಪ್‌ ಮಾಡುವುದಕ್ಕೆ ಅಗತ್ಯವಿರುವಷ್ಟು ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲು ಯೋಜನಾ ವರದಿಯಲ್ಲೇ ಅವಕಾಶ ಮಾಡಿಕೊಡಲಾಗಿದೆ.* ಎತ್ತಿನಹೊಳೆ ಯೋಜನೆಗೆ  ಹಾಕಿರುವ ಪೈಪ್‌ನಲ್ಲಿ ಕೋಲಾರದ ಜನರಿಗೆ ಪಶ್ಚಿಮಘಟ್ಟದ ಆಮ್ಲಜನಕ ಸಿಗಬಹುದೇ ಹೊರತು ಅದರಲ್ಲಿ ನೀರು ಹರಿಯಲು ಸಾಧ್ಯವಿಲ್ಲ ಎನ್ನುವ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿ ಟಿ.ವಿ.ರಾಮಚಂದ್ರ ಈ ಯೋಜನೆಯನ್ನು ವಿರೋಧಿಸಿದ್ದಾರಲ್ಲ. ಇದಕ್ಕೇನು ಹೇಳುತ್ತೀರಿ?

ರಾಮಚಂದ್ರ ಅವರು ಜಲವಿಜ್ಞಾನಿ ಅಲ್ಲ. ಆದ್ದರಿಂದ ಅವರ ಗಣಿತದಲ್ಲಿ ಗಂಭೀರವಾದ ತಪ್ಪುಗಳು ನುಸುಳಿವೆ. ಉದಾಹರಣೆಗೆ ಅವರ ವರದಿ ಪ್ರಕಾರ, ಸಂಭಾವ್ಯ ಗರಿಷ್ಠ ಭಾಷ್ಪೀಭವನ 1,400 ಮಿಲಿಮೀಟರ್‌ ಎಂದಿದೆ. ಅವರ ಅಂಕಿ ಅಂಶಗಳ ಪ್ರಕಾರ ಬರುವ ಭಾಷ್ಪೀಭವನ 3 ಸಾವಿರ ಮಿಲಿಮೀಟರ್‌ಗೂ ಜಾಸ್ತಿ ಇದೆ. ಸರಿಯಾಗಿ ಲೆಕ್ಕ ಹಾಕಿದರೆ ಈ ರೀತಿ ವ್ಯತ್ಯಾಸ ಉಂಟಾಗಲು ಸಾಧ್ಯವೇ ಇಲ್ಲ. ಇವುಗಳನ್ನು ಕರ್ನಾಟಕ ನೀರಾವರಿ ನಿಗಮವು ಐಐಎಸ್‌ಸಿ ನಿರ್ದೇಶಕರ ಗಮನಕ್ಕೂ ತಂದಿತ್ತು.ಐಐಎಸ್‌ಸಿಯಲ್ಲಿ ರಾಮಚಂದ್ರ ಅವರು ಕಾರ್ಯನಿರ್ವಹಿಸುವ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಜಲವಿಜ್ಞಾನದ ಐವರು ಪ್ರಾಧ್ಯಾಪಕರು ಇದ್ದಾರೆ. ರಾಮಚಂದ್ರ ಅವರು ವರದಿ ಪ್ರಕಟಣೆಗೆ ಮುನ್ನ ಅವರಲ್ಲಿ ಯಾರಿಗಾದರೂ ತೋರಿಸಿದ್ದರೆ ತಪ್ಪನ್ನು ಸರಿಪಡಿಸಬಹುದಿತ್ತು.* ಎತ್ತಿನಹೊಳೆಯಿಂದ ಬಯಲುಸೀಮೆಗೆ ನೀರು ಹರಿಸುವಾಗ ಎಷ್ಟು ಪ್ರಮಾಣದಲ್ಲಿ ನೀರು ಆವಿಯಾಗಿ ಹೋಗುತ್ತದೆ?

ಸುಮಾರು 0.05 ಟಿಎಂಸಿ ಅಡಿಯಷ್ಟು ನೀರು ಆವಿಯಾಗಿ ಹೋಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry