7

ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ಸಂವೇದಿ ಸೂಚ್ಯಂಕ 22ನೆ ಶುಕ್ರವಾರದ ವಾರಾಂತ್ಯದಲ್ಲಿ ಕಂಡಿದ್ದ 448 ಅಂಶಗಳ ಕುಸಿತಕ್ಕೆ ಉತ್ತರವಾಗಿ ಮಂಗಳವಾರ ಸೂಚ್ಯಂಕ 403 ಅಂಶ  ಏರಿಕೆ ಕಂಡಿತು. ಸೋಜಿಗವೆಂದರೆ  ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿಯಲ್ಲಿ ಸಾಗಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳ ಕೊಳ್ಳುವಿಕೆ  ಈ ಬೆಳವಣಿಗೆಗೆ ಕಾರಣವಾಗಿದೆ. 

ಈ ಏರಿಕೆಗೆ ಶೂನ್ಯ ಮಾರಾಟಗಾರರ ಕೊಳ್ಳುವಿಕೆಯೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದ್ದು, ಹೂಡಿಕೆದಾರರ ದೃಷ್ಟಿಯಲ್ಲಿ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ.

ಸೂಚ್ಯಂಕಗಳು ಮತ್ತೊಮ್ಮೆ ಕುಸಿಯಲಿವೆ ಎನ್ನುವ ವಿಶ್ಲೇಷಣೆಯಾಗಲಿ, ಏರಿಕೆ ಕಾಣುವುದೆಂಬ ಭವಿಷ್ಯವಾಗಲಿ ಪೇಟೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪೇಟೆ ತನ್ನ ದಾರಿಯನ್ನು ತಾನು ಕಂಡುಕೊಂಡು ಸಾಗುತ್ತಿರುತ್ತದೆ. ಅದನ್ನು ಹಿಂಬಾಲಿಸಿಕೊಂಡು ಸಾಗಿದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.

ಅಮೆರಿಕದ ಎಫ್‌ಡಿಎಯ ಕ್ರಮದಿಂದ ಸೋಮವಾರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದ ಫಾರ್ಮಾ ವಲಯದ ದಿವೀಸ್ ಲ್ಯಾಬೊರೇಟರೀಸ್ ಮಂಗಳವಾರ  ಮೌಲ್ಯಾಧಾರಿತ ಕೊಳ್ಳುವಿಕೆಯ ಕಾರಣ ₹796 ರವರೆಗೂ ಏರಿಕೆ  ಕಂಡಿತು.    ಭಾರತ್ ಫೋರ್ಜ್ ಕಂಪೆನಿ ಷೇರಿನ ಬೆಲೆಯೂ  ಮಂಗಳವಾರ ₹870ರವರೆಗೂ ಕುಸಿದು ಅಂದೇ ₹91.4 ರವರೆಗೂ ಏರಿಕೆ ಕಂಡಿತು. 

ಒಂದು ತಿಂಗಳಿನಿಂದಲೂ ಸತತ ಇಳಿಕೆ ದಾಖಲಿಸಿ ₹754 ರ ಸಮೀಪದಿಂದ  ಮಂಗಳವಾರ ದಿನದ ಮಧ್ಯಂತರದಲ್ಲಿ  ₹465ರವರೆಗೂ ಕುಸಿದ ಭಾರತ್ ಫೈನಾನ್ಶಿಯಲ್ ಇಂಕ್ಲುಸನ್ ಕಂಪೆನಿಯ ಷೇರಿನ ಬೆಲೆಯೂ ಸಹ ಮಧ್ಯಂತರದ ನಂತರ ಚೇತರಿಕೆ ಕಂಡು ₹524 ರವರೆಗೂ ಏರಿಕೆ ಕಂಡಿತು. ಒಂದೇ ದಿನ ಶೇ 10ಕ್ಕೂ ಹೆಚ್ಚಿನ ಏರಿಕೆ ಕಾಣುವುದು ಕೇವಲ ಬೆಲೆ ಕುಸಿತದ ಸಮಯದಲ್ಲಿ ಮಾತ್ರ. 

ಕ್ಯಾಸ್ಟ್ರಾಲ್ ಇಂಡಿಯಾ ಷೇರಿನ ಬೆಲೆಯೂ  ಕೇವಲ ಒಂದೇ ವಾರದಲ್ಲಿ ₹370ರ ಸಮೀಪದಿಂದ ₹354ರವರೆಗೂ ಕುಸಿದು ನಂತರ ₹378 ರ ಸಮೀಪಕ್ಕೆ ಜಿಗಿದಿರುವುದು ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮಾದರಿಯ ಚಟುವಟಿಕೆಗೆ ಪುಷ್ಟಿ ನೀಡುತ್ತದೆ.

ಗುರುವಾರದ ಚಟುವಟಿಕೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರುಗಳು ಹೆಚ್ಚಿನ ಸಂಖ್ಯಾಗಾತ್ರದಲ್ಲಿ ವಹಿವಾಟಾದರೂ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ತೋರಲಿಲ್ಲ. 

ಭಾರತ್ ಫೈನಾನ್ಶಿಯಲ್ಸ್  ಇಂಕ್ಲುಷನ್  ಕಂಪೆನಿಯ ಷೇರುಗಳು ಚಟುವಟಿಕೆಭರಿತವಾಗಿ ಉತ್ತಮ ಸಂಖ್ಯಾಗಾತ್ರದೊಂದಿಗೆ ₹612 ರವರೆಗೂ ಏರಿಕೆ ಕಂಡು ಕೇವಲ ಮೂರುದಿನಗಳ ಚಟುವಟಿಕೆಯಲ್ಲಿ ಷೇರಿನ ಬೆಲೆಯೂ ₹465ರಿಂದ ₹602 ಕ್ಕೆ ಚಿಮ್ಮಿದ್ದು ವಿಸ್ಮಯಕಾರಿ ಅಂಶ.

ಬೋನಸ್ ಷೇರು ವಿತರಣೆಯ ನಂತರದ ವಹಿವಾಟಿನ ಹಿಂದಿನ ದಿನದ ಚಟುವಟಿಕೆಯಲ್ಲಿ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ ಷೇರಿನ ಬೆಲೆಯೂ ₹343 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಫೆಬ್ರವರಿಯ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿರುವ ಅನೇಕ ಕಂಪೆನಿಗಳಿದ್ದರೂ,  ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್ ಕಾರ್ಪೊರೇಷನ್ ಷೇರು  ಆ ಸಂದರ್ಭದಲ್ಲಿ ಕನಿಷ್ಠ ₹140ರ  ಸಮೀಪವಿದ್ದು ಏಪ್ರಿಲ್ ಮೊದಲ ವಾರ  ವಾರ್ಷಿಕ ಗರಿಷ್ಠ ₹291ಕ್ಕೆ ತಲುಪಿ ನಂತರ  ನಿರಂತರ ಇಳಿದು ₹172ರ ಸಮೀಪವಿತ್ತು.  ಶುಕ್ರವಾರ ಈ  ಷೇರನ್ನು ಎಕ್ಸ್ ಸಿ ಗುಂಪಿನಿಂದ ‘ಬಿ’ ಗುಂಪಿಗೆ ವರ್ಗಾಯಿಸುವ ಕಾರಣ ಶೇ 20  ರಷ್ಟು ಅಂದರೆ ₹35 ರಷ್ಟು ಏರಿಕೆಯಿಂದ ಗರಿಷ್ಠ ಆವರಣ ಮಿತಿ ತಲುಪಿತು. 

ಕಂಪೆನಿಯ ಸಾಧನೆಗಿಂತ ಬಾಹ್ಯ ಕಾರಣಗಳಿಗೆ ಯಾವ ರೀತಿಯ ಸ್ಪಂದನವನ್ನು ಪೇಟೆ ನೀಡುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ  ಸಾಕ್ಷಿ.ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಕಂಪೆನಿ ಉತ್ತಮ ಗುಣಮಟ್ಟದ್ದಿರಬೇಕು.

ಶುಕ್ರವಾರ ಸಂವೇದಿ ಸೂಚ್ಯಂಕವು 260 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಮತ್ತು  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ ಏರಿಕೆ ಕಾಣುವಂತಾದರೂ ವಹಿವಾಟಿನ ಗಾತ್ರ ಮಾತ್ರ ಕೇವಲ ₹2.22 ಲಕ್ಷ ಕೋಟಿ ವ್ಯವಹಾರ ಮಾತ್ರವಾಗಿತ್ತು. ಹಿಂದಿನ ದಿನ 155 ಅಂಶಗಳ ಏರಿಕೆಯಲ್ಲಿ ₹6.74 ಲಕ್ಷ ಕೋಟಿ ಮೌಲ್ಯದ ವಹಿವಾಟು ದಾಖಲಾಗಿತ್ತು. ಒಟ್ಟಾರೆ ಹಿಂದಿನ ವಾರ ಸಂವೇದಿ ಸೂಚ್ಯಂಕವು ಒಟ್ಟು 585ಅಂಶಗಳ ಏರಿಕೆ ಕಂಡು,  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 249 ಅಂಶ ಏರಿಕೆ ಕಂಡಿತು.  ಪೇಟೆಯ ಬಂಡವಾಳೀಕರಣ ಮೌಲ್ಯವು ₹108.5 ಲಕ್ಷ ಕೋಟಿಯಿಂದ  ₹106.23 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು.

ಬೋನಸ್ ಷೇರು: ಎನ್ ಬಿ ಸಿ ಸಿ ಲಿಮಿಟೆಡ್ ಕಂಪೆನಿಯು 4 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಗಾಯತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ.

ಡಿಸೆಂಬರ್‌ 30ರಂದು ಅಂತ್ಯಗೊಂಡ ವಾರದಲ್ಲಿ   ಬರ್ಜರ್ ಪೇಂಟ್ಸ್, ದಿವೀಸ್ ಲ್ಯಾಬ್,  ಐಟಿಸಿ, ಭಾರತ್ ಫೈನಾನ್ಶಿಯಲ್ ಇಂಕ್ಲುಷನ್, ಎಚ್‌ಡಿಎಫ್‌ಸಿ, ಗಾಡ್ಫ್ರೆ ಫಿಲಿಪ್ಸ್, ಕ್ಯಾಡಿಲ್ಲ ಹೆಲ್ತ್ ಮುಂತಾದವು ತೋರಿದ ಅಲ್ಪಕಾಲೀನ ಅವಕಾಶಗಳತ್ತ ಹೂಡಿಕೆದಾರರು ಗಮನಹರಿಸಿ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ವಿಧದಲ್ಲಿ ವಹಿವಾಟು ನಡೆಸಿದರೆ ಒಳ್ಳೆಯದು.

ಮೊ: 9886313380 (ಸಂಜೆ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry