ಕಲ್ಲಿದ್ದಲು ಗಣಿಗಳಲ್ಲಿ ದುರಂತ...

7

ಕಲ್ಲಿದ್ದಲು ಗಣಿಗಳಲ್ಲಿ ದುರಂತ...

Published:
Updated:

ಡಿಸೆಂಬರ್ 29ರಂದು ಜಾರ್ಖಂಡ್ ರಾಜ್ಯದ ಗೊಡ್ಡಿ ಜಿಲ್ಲೆಯ ರಾಜಮಹಲ್ ಪ್ರದೇಶದ ತೆರೆದ ಕಲ್ಲಿದ್ದಲು ಗಣಿಗಳಲ್ಲಿ ಮಣ್ಣು ಕುಸಿದು 61 ಕಾರ್ಮಿಕರು ಅದರಡಿ ಸಿಲುಕಿಕೊಂಡರು. ಕಾರ್ಮಿಕರ ಜೊತೆಗೆ 26 ಟ್ರಕ್ಕುಗಳು, ಆರು ಬುಲ್ಡೊಜರುಗಳೂ ಮಣ್ಣಿನಡಿ ಸಿಲುಕಿವೆ. ಇದುವರೆಗೆ 11 ಕಾರ್ಮಿಕರ ಶವಗಳನ್ನು ತೆಗೆಯಲಾಗಿದ್ದು ಇನ್ನುಳಿದ 50 ಕಾರ್ಮಿಕರು 300 ಮೀಟರ್‌ ಆಳದಲ್ಲಿ ಕಲ್ಲಿದ್ದಲು ಪದರುಗಳ ಅಡಿ ಸಿಲುಕಿದ್ದಾರೆ.ಈ ಕಲ್ಲಿದ್ದಲನ್ನು ತೆಗೆಯಲು ಕೆಲವು ತಿಂಗಳೇ ಬೇಕು ಎನ್ನಲಾಗಿದೆ. ಸಿಕ್ಕಿಕೊಂಡಿರುವ ಕಾರ್ಮಿಕರು ಬದುಕಿರುವ ಸಂಭವ ಇಲ್ಲ. ಇಂದಿಗೆ 40 ವರ್ಷಗಳ ಹಿಂದೆ ಡಿಸೆಂಬರ್ 27ರಂದು ಧನ್‌ಬಾದ್ ಹತ್ತಿರದ ಛಾಸ್‌ನಾಲಾ ಕಲ್ಲಿದ್ದಲು ಗಣಿಗಳಿಗೆ ದಾಮೋದರ್ ನದಿಯ ನೀರು ನುಗ್ಗಿ 372 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.ಪ್ರಪಂಚದಲ್ಲಿ ಗಣಿಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ಕಲ್ಲಿದ್ದಲಿಗಾಗಿ. ಹೆಚ್ಚು ಜನ ಸಾಯುತ್ತಿರುವುದು ಕೂಡ ಇದೇ ಗಣಿಗಳಲ್ಲಿ. ಪ್ರಪಂಚದಾದ್ಯಂತ ಪ್ರತಿದಿನ ಕಲ್ಲಿದ್ದಲು ಗಣಿಗಳಲ್ಲಿ ಕಾರ್ಮಿಕರು ಸಾಯುತ್ತಿದ್ದಾರೆ. ವಿಶ್ವದಲ್ಲಿ ಲಕ್ಷಾಂತರ ಕಲ್ಲಿದ್ದಲು ಗಣಿಗಳಿದ್ದು, ವರ್ಷಕ್ಕೆ ಸರಾಸರಿ ಒಂದು ಸಾವಿರ ಕೋಟಿ ಟನ್ನುಗಳಷ್ಟು ಕಲ್ಲಿದ್ದಲನ್ನು ಭೂಮಿಯ ಒಡಲಿನಿಂದ ತೆಗೆಯಲಾಗುತ್ತದೆ. ಅಷ್ಟೇ ಪ್ರಮಾಣದ ಕಲ್ಲಿದ್ದಲನ್ನು ಉರಿಸಿ ಪರಿಸರ ಮಲಿನ ಮಾಡಲಾಗುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನ ಪಡೆದರೆ, ಅಮೆರಿಕ ಮತ್ತು ಭಾರತ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.1774ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜಾನ್ ಸಮ್ಮರ್ ಭಾರತದಲ್ಲಿ ದಾಮೋದರ್ ನದಿ ಕಣಿವೆಯ ರಾಣಿಗಂಜ್ ವಲಯದಲ್ಲಿ ಕಲ್ಲಿದ್ದಲನ್ನು ತೆಗೆಯಲು ಪ್ರಾರಂಭಿಸಿದರು. ಚೀನಾದಲ್ಲಿ ವರ್ಷಕ್ಕೆ ಮೂರು ಸಾವಿರ ಕಾರ್ಮಿಕರು ಪ್ರಾಣ ಕಳೆದುಕೊಂಡರೆ, ವಿಶ್ವದಾದ್ಯಂತ 20 ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡಿ, ಶ್ವಾಸಕೋಶದ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಗಿಂತ ಎಷ್ಟೋ ಹೆಚ್ಚು. ಕಲ್ಲಿದ್ದಲು ಗಣಿಗಾರಿಕೆ ಬಹಳ ಅಪಾಯದ ಕೆಲಸ. ಕಲ್ಲಿದ್ದಲು ಗಣಿ ದುರಂತಗಳ ಸುದೀರ್ಘ ಪಟ್ಟಿಯನ್ನು ಇತಿಹಾಸ ದಾಖಲಿಸಿದೆ.ಸುರಂಗಗಳಲ್ಲಿ ವಿಷಾನಿಲ ಸೇವನೆಯಿಂದ ಕಾರ್ಮಿಕರ ಪ್ರಾಣ ಹೋಗುವುದು, ಚಾವಣಿ ಮತ್ತು ಸುರಂಗ ಕುಸಿದು ಕಲ್ಲು–ಮಣ್ಣಿನ ಕೆಳಗೆ ಕಾರ್ಮಿಕರು ಸಿಲುಕುವುದು ಇತ್ಯಾದಿ ದುರ್ಘಟನೆಗಳು ಹಲವಾರಿವೆ. ಭಾರತದ ಪೂರ್ವ ಮತ್ತು ಮಧ್ಯರಾಜ್ಯಗಳ ತೆರೆದ ಗಣಿಗಳು ಮತ್ತು ಅದರ ಸುತ್ತಲಿನ ಪ್ರದೇಶಗಳು ವಿಷದ ಕುಂಡಗಳಂತೆ ತೋರುತ್ತವೆ.ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಮಧ್ಯಪ್ರದೇಶ ರಾಜ್ಯಗಳ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಟೆಕ್ಕೆದಾರರು ಅಥವಾ ಮಾಫಿಯಾಗಳ ಕೆಳಗೆ ತಾತ್ಕಾಲಿಕವಾಗಿ ಕೆಲಸ ಮಾಡುವಂತಹ ಕಾರ್ಮಿಕರು ತೀರಾ ಬಡ ವರ್ಗಕ್ಕೆ ಸೇರಿದವರಾಗಿದ್ದಾರೆ.ಮಾಫಿಯಾ ದೊರೆಗಳು ಕೊಟ್ಟ ಹಣವನ್ನು ಮಾತ್ರ ಈ ಬಡ ಜನ ತೆಗೆದುಕೊಳ್ಳಬೇಕಾಗುತ್ತದೆ. ಮಾಫಿಯಾ ಮತ್ತು ರಾಜಕಾರಣ ಒಂದರೊಳಗೊಂದು ಬೆರೆತುಹೋಗಿರುತ್ತದೆ. ಕಾರ್ಮಿಕ ಸಂಘಟನೆಗಳ ನಾಯಕರೇ ಮಾಫಿಯಾಗಳ ಮುಂದಾಳುಗಳು ಎನ್ನುವ ಆರೋಪಗಳೂ ಇವೆ. ಇವರೆಲ್ಲ ಮೇಲ್ಜಾತಿಗಳಿಗೆ ಸೇರಿದ ಜಮೀನ್ದಾರರೂ ಹೌದು. ಇವರು ಟೆಂಡರ್ ಪಡೆದು ಸರ್ಕಾರಕ್ಕೆ ಏನೋ ಒಂದು  ಲೆಕ್ಕ ತೋರಿಸುತ್ತಾರೆ.ಆದರೆ ಗಣಿಗಳಿಂದ ಅದಕ್ಕಿಂತ ಹೆಚ್ಚು ಕಲ್ಲಿದ್ದಲು ಬಗೆದಿರುತ್ತಾರೆ. ಒಟ್ಟಿನಲ್ಲಿ ಕಲ್ಲಿದ್ದಲು ಕದಿಯುವ ಮಾಫಿಯಾದ ಒಂದು ಸಮಾನಾಂತರ ಸರ್ಕಾರವೇ ಇಲ್ಲಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಕಲ್ಲಿದ್ದಲು ಮಾಫಿಯಾ ಕಥೆಗಳನ್ನು ಆಧರಿಸಿ ಹಿಂದಿ, ಇಂಗ್ಲಿಷ್ ಸಿನಿಮಾಗಳೂ ಬಂದುಹೋಗಿವೆ.ಕಲ್ಲಿದ್ದಲು ಗಣಿಗಳಿಂದ ಕೃಷಿ ಜಮೀನು ಹಾಳಾಗುತ್ತದೆ. ಗಣಿತ್ಯಾಜ್ಯ ಸುರಿಯುವುದರಿಂದ ನೆಲ, ನೀರು ಮತ್ತು ಗಾಳಿ ಮಲಿನವಾಗುತ್ತವೆ. ಗಣಿಗಳಲ್ಲಿ ಕೆಲಸ ಮಾಡದಿದ್ದರೂ ಆ ಪ್ರದೇಶದಲ್ಲಿರುವ ಜನರ ಆರೋಗ್ಯ ಕೆಡುತ್ತದೆ. ಯಾವುದೇ ಕಲ್ಲಿದ್ದಲು ಗಣಿ ಪ್ರದೇಶವನ್ನು ನೋಡಿದವರಿಗೆ ಇದು ಗೊತ್ತಾಗುತ್ತದೆ. ಕಲ್ಲಿದ್ದಲು ಉರಿಸುವುದರಿಂದ ಮತ್ತು ಗಣಿಗಳಿಂದ ಏಳುವ ಹೊಗೆ ಹತ್ತಾರು ಕಿ.ಮೀ.ಗಳವರೆಗೂ ವರ್ಷವಿಡೀ ಆವರಿಸಿಕೊಂಡಿರುತ್ತದೆ.ಸಾಲದೆಂಬಂತೆ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮಗೆ ಎಷ್ಟು ಬೇಕೊ ಅಷ್ಟು ಕಲ್ಲಿದ್ದಲನ್ನು ಸಂಜೆ ಮನೆಗಳಿಗೆ ತೆಗೆದುಕೊಂಡು ಬಂದು ಒಲೆ ಉರಿಸುತ್ತಾರೆ. ಈ ಹೊಗೆ ಕಾರ್ಮಿಕರ ಕಾಲೊನಿಗಳನ್ನು ಆವರಿಸುತ್ತದೆ. ಉರಿಯುವ ಕಲ್ಲಿದ್ದಲಿನಿಂದ ಪಾದರಸ, ಯುರೇನಿಯಂ, ಥೋರಿಯಂ, ಆರ್ಸೆನಿಕ್, ಗಂಧಕ ಮತ್ತಿತರ ಅಪಾಯಕಾರಿ ರಾಸಾಯನಿಕಗಳು ಮತ್ತು ಬೂದಿ ಪರಿಸರಕ್ಕೆ ಸೇರಿ ಜನರ ಬದುಕನ್ನು ಹಾಳು ಮಾಡುತ್ತವೆ. ಈ ರಾಸಾಯನಿಕಗಳೆಲ್ಲ ನೀರಿಗೆ ಸೇರಿ, ಆ ನೀರು ಕುಡಿಯಲು ಯೋಗ್ಯವಲ್ಲದ್ದಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಕಲ್ಲಿದ್ದಲು ಗಣಿಗಳ ಸುತ್ತ ಇರುವ 10 ಲಕ್ಷ ಜನರ ಆಯಸ್ಸು ಕಡಿಮೆಯಾಗುತ್ತಿದೆ.ಅಮೆರಿಕದ ಕಲ್ಲಿದ್ದಲು ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ 80 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ (ಇವರಲ್ಲಿ ಬಹುತೇಕರು ಕಪ್ಪು ವರ್ಣೀಯರು). ಚೀನಾದಲ್ಲಿ 50 ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಅಂಕಿ–ಅಂಶಗಳು ಇಂದಿಗೂ ಸರಿಯಾಗಿ ಸಿಗುವುದಿಲ್ಲ.2010ರಲ್ಲಿ ಚಿಲಿಯ ಚಿನ್ನದ ಗಣಿಯಲ್ಲಿ ಅಪಘಾತ ಸಂಭವಿಸಿ 33 ಕಾರ್ಮಿಕರು ಸಿಕ್ಕಿಕೊಂಡಿದ್ದರು. 2010ರ ಆಗಸ್ಟ್ 5ರಂದು ಸಿಲುಕಿಕೊಂಡ ಇವರನ್ನು 69 ದಿನಗಳ ನಂತರ ಹೊರಕ್ಕೆ ತರಲಾಯಿತು. ಇಷ್ಟು ದಿನಗಳ ಕಾಲ ಗಣಿಯ ಒಳಗೆ ಸಿಲುಕಿಯೂ ಬದುಕಿ ಬಂದವರು ಕೆಲವೇ ಕೆಲವು ಜನ. ಇವರಿಗೆ ನೀರು, ಗಾಳಿ ಆಹಾರವನ್ನು ಪೈಪ್‌ಗಳ ಮೂಲಕ ಸರಬರಾಜು ಮಾಡಲಾಯಿತು. ಅದು ಗಟ್ಟಿ ಶಿಲೆಗಳ ಗಣಿ.ಆದರೆ ಕಲ್ಲಿದ್ದಲು ಗಣಿಗಳಲ್ಲಿ ಸಿಲುಕಿಕೊಂಡರೆ ಒಂದೆರಡು ದಿನ ಬದುಕುವುದೂ ಕಷ್ಟ. ಏಕೆಂದರೆ ಕಲ್ಲಿದ್ದಲು ಗಣಿಗಳಲ್ಲಿ ಅಪಾಯಕಾರಿ ಅನಿಲಗಳ ಹೊರಸೂಸುವಿಕೆ ಹೆಚ್ಚು. ಬಿಸಿ ಅನಿಲ–ವಾಯು ಹೊರಹೋಗಲು ದಾರಿ ಇಲ್ಲದೆ ಶಿಲಾಸ್ಫೋಟ ಅಥವಾ ವಾಯುಸ್ಫೋಟ ಸಂಭವಿಸುವುದು ಎಲ್ಲಾ ಗಣಿಗಳಲ್ಲಿ ಸಾಮಾನ್ಯ.1982ರಲ್ಲಿ ನಾನು ಎಂ.ಎಸ್ಸಿ ಭೂವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಬಿಹಾರದ ಝರಿಯಾ ಕಲ್ಲಿದ್ದಲು ವಲಯ ನೋಡುವ ಅವಕಾಶ ದೊರಕಿತ್ತು. ಅಲ್ಲಿ ರಾತ್ರಿಯಿಡೀ ನಡುಗಿಸುವ ಚಳಿ, ಹಗಲೆಲ್ಲ ಉರಿ ಬಿಸಿಲು ಇರುತ್ತಿತ್ತು. ತೆರೆದ ವಿಶಾಲವಾದ ಕಲ್ಲಿದ್ದಲು ಗಣಿಗಳಲ್ಲಿ ನೂರಾರು ಟ್ರಕ್ಕುಗಳ ಜೊತೆಗೆ ಇರುವೆಗಳಂತೆ ಕೆಲಸ ಮಾಡುತ್ತಿದ್ದ ಜನರ ನಿಜವಾದ ಮೈಬಣ್ಣ ಕಾಣಿಸದೆ ಎಲ್ಲರ ದೇಹವೂ ಕರಿ ಇದ್ದಿಲಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ಸಣ್ಣಸಣ್ಣ ಗಿಡಗಳು ಮತ್ತು ಗಿಡಗಳಿಗೆ ಕಟ್ಟಿದ ಬಟ್ಟೆಗಳ ನೆರಳಿನಲ್ಲಿ ಕೆಲವು ಮಕ್ಕಳು ಬಿದ್ದಿದ್ದವು. ನನಗೆ ತುಸು ಆಶ್ಚರ್ಯವಾಗಿ ಅಲ್ಲಿನ ಕಾರ್ಮಿಕರ ಬಳಿ, ‘ಈ ಮಕ್ಕಳು ಹೀಗೇಕೆ ಬಿದ್ದಿವೆ’ ಎಂದು ಕೇಳಿದೆ. ಅವರ ಉತ್ತರ ಕೇಳಿ, ಇಂಥ ಪ್ರಶ್ನೆ ಕೇಳದೆ ಇದ್ದಿದ್ದರೆ ಚೆನ್ನಾಗಿತ್ತು ಅನಿಸಿತ್ತು.‘ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಕೆಲಸ ಮಾಡುವ ಸಮಯದಲ್ಲಿ ಮಕ್ಕಳು ತೊಂದರೆ ಮಾಡುತ್ತವೆ. ಹಾಗಾಗಿ ಅವುಗಳಿಗೆ ಸಾರಾಯಿ ಕುಡಿಸಿ ಮಲಗಿಸಲಾಗಿದೆ’ ಎಂದು ಕಾರ್ಮಿಕರು ಹೇಳಿದ್ದರು. ಬಡತನದ ಮುಖಗಳು ಹೇಗೆಲ್ಲ ಇರುತ್ತವೆ ನೋಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry