ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟೆಡ್‌’ ಆದ ನೋಟುಗಳಿಗೊಂದು ವಿದಾಯ...

Last Updated 8 ನವೆಂಬರ್ 2018, 10:12 IST
ಅಕ್ಷರ ಗಾತ್ರ

ಐನೂರು, ಸಾವಿರ ರೂಪಾಯಿ ನೋಟುಗಳಿಗೆ ವಿದಾಯ ಹೇಳುವುದರೊಂದಿಗೆ ಹಳೆಯ ವರುಷಕ್ಕೂ(2016) ಇತಿ ಹಾಡಿ, ಹೊಸ ವರ್ಷವನ್ನು(2017) ಹೊಸ ನೋಟುಗಳೊಂದಿಗೆ ಸ್ವಾಗತಿಸಿದ್ದಾಯಿತು. ಆದರೆ ವಿದಾಯ ಎನ್ನುವುದು ಸುಲಭವಲ್ಲ. ನೋಟುಗಳು ರದ್ದಾದ ದಿನದಿಂದ ಅವುಗಳಿಗೆಕೊನೆ ಹಾಡಲು ಪಟ್ಟ ಪಡಿಪಾಟಲುಗಳು ಹೊಸ ನೋಟುಗಳನ್ನು ಎಣಿಸುವಾಗಲೂ ಸುಳಿದು ಹೋಗದೇ ಇರದು. ಇದೇ ಎಳೆಯೊಂದಿಗೆ ‘ಕಾಮನಬಿಲ್ಲು’, ಹಳೆಯ ನೋಟುಗಳಿಗೆವಿದಾಯ ಹೇಳಿದ, ಆ ಪ್ರಕ್ರಿಯೆಯಲ್ಲಿ ಕಳೆದುಕೊಂಡ, ಪಡೆದುಕೊಂಡ ಅನುಭವಗಳನ್ನು ಹಂಚಿಕೊಳ್ಳಲು ಓದುಗರಿಂದ ಪತ್ರಗಳನ್ನು ಆಹ್ವಾನಿಸಿತ್ತು.ಐನೂರು, ಸಾವಿರ ನೋಟುಗಳೊಂದಿಗಿನ ನಂಟು, ಅದು ಬ್ಯಾನ್ ಆದಾಗ ಪರದಾಡಿದ ಸಂದರ್ಭ, ಹೊಸ ಗರಿ ಗರಿ ನೋಟು ಕೈಸೇರಿದ ಪ್ರಸಂಗಗಳನ್ನು ಹೊತ್ತ ಸಾಕಷ್ಟು ಪತ್ರಗಳು ಬಂದಿವೆ. ಅವುಗಳಲ್ಲಿ ಆಯ್ದ ಕೆಲವು ಪತ್ರಗಳು ಇಲ್ಲಿವೆ...

2017ರ ಜನವರಿಯಲ್ಲಿ ಪ್ರಕಟಿಸಿದ್ದ ಈ ವಿಭಿನ್ನ ಕಥನದಂತಿರುವಅನುಭವಗಳನ್ನು ನೋಟು ರದ್ದಾಗಿ ನ.8ಕ್ಕೆ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ‘ಪ್ರಜಾವಾಣಿ’ ಓದುಗರಿಗಾಗಿ ಮರು ಪ್ರಕಟಿಸುತ್ತಿದೆ.

ಅರಬೀ ಸಮುದ್ರ–ಗುಲಾಬಿ ನಾಲಿಗೆ!
ಮುಂಜಾನೆ ಎದ್ದ ಕೂಡಲೇ ಮನೆ ತುಂಬೆಲ್ಲಾ ಅರಬೀ ಸಮುದ್ರ! ಏನ್‌ಪಾ ಇವರು ಹಿಂಗ್‌ ಅಂತಾರಲ್ಲ ಅಂತ ಗಾಬರಿ ಆಗಬ್ಯಾಡ್ರೀ! ಇದೆಲ್ಲ ನೋಟು ಬ್ಯಾನ್ ಎಫೆಕ್ಟ್! ಆಡು ಭಾಷಾ ಒಳಗ ನಮ್ಮ ಕಡೆ ಅರಿವೆಗೆ (ವಸ್ತ್ರ) ಅರಬೀ ಅಂತೀವಿ. ಅವತ್ತ ಏನ್ ಆತಪಾ ಅಂದ್ರ ‘ಭಾಯಿಯೊ ಔರ್ ಬೆಹನೋ’ ಅಂತ ಎಲ್ಲೋ ಒಂದು ಕಡೆ ಸೌಂಡ್ ಕೇಳಸ್ತ, ನನ್ನ ಮಗ ಓದೋದ ಬಿಟ್ಟು ಟಿ.ವಿ. ಮುಂದ ಗಾಬರಿ ಆಗಿ ಕೂತಿದ್ದಾ! ‘ಅಪ್ಪಾ ನೋಡಿಲ್ಲೆ 500, 1000ರೂಪಾಯಿ ಬ್ಯಾನ್ ಆಗ್ಯಾವು’ ಅಂತ ಹ್ಯಾಪ್ ಮಾರಿ ಹಾಕ್ಕೊಂಡ ಹೇಳಿದಾ. ಚಾಲೂ ಆತು ನೋಡ್ರ, ನಮಗೂ ಒಳಗ ಪುಕು ಪುಕು!

ಸೇವಿಂಗ್ಸ್ ಮಾಡೋದ್ರಾಗ ನಂದು ಎತ್ತಿದ ಕೈ, ಬರೀ ಹತ್ತು ರೂಪಾಯಿ ಸಿಕ್ರ ಸಾಕು ನಾಲ್ಕು ಪಾರ್ಟ್‌ ಒಳಗ ಡಿವೈಡ್ ಮಾಡಿ ಎರಡೂವರೆ ರೂಪಾಯಿ ಹಂಗ ನಾಲ್ಕೂ ದಿಕ್ಕುಗಳಲ್ಲಿ ಮುಚ್ಚಿಡುವ ಸ್ವಭಾವ ಬ್ಯಾರೆ. ಈ ನೋಟು ಬ್ಯಾನ್ ಆಗಿದ್ದು ಗೊತ್ತಾದ ಕೂಡ್ಲೆ ಹುಚ್ಚ ನಾಯಿ ಹಂಗ ಸಿಕ್ಕ ಸಿಕ್ಕ ಅರಬೀ ಎಳದು ಕಿಸೆದಾಗ ಕೈ ಹಾಕ್ಲಿಕತ್ತೆ. ಎಲ್ಲರ ಐದು ನೂರು ನೋಟ ಸಿಗ್ತಾವೇನೋ ಅಂತ. ಅದಕ್ಕ... ಹೇಳಿದೆ ಈ ಮೊದಲ ಅರಬೀ ಸಮುದ್ರ ಅಂತ.

ಹಿಂದಿನಿಂದ ಇಕಿ ಬಂದ್ಲು, ‘ಏನ್ರೀ... ಮುಂಜಾನೆ ಎದ್ದ ಕೂಡಲೇ ಇದೇನ ಹೊಸಾ ಹುಚ್ಚು ಹಿಡದದ ನಿಮಗ?’ ಅಂತ ಗುರಾಯಿಸ್ಲಿಕ್ಕೆ ಚಾಲೂ ಮಾಡಿದ್ಲು. ಅಕಿಗೆ ಇನ್ನೂ ವಿಷಯ ಗೊತ್ತಿರಲಿಲ್ಲ. ‘ಸ್ವಲ್ಪ ಕೂಡಿಲ್ಲೆ ನಾ ನಿಂಗ ಒಂದ ವಿಷಯ ಹೇಳಬೇಕು’ ಅಂತ ರಾಗಾ ತಗದೆ. ಟಿ.ವಿ ಒಳಗ ನೋಡಿದ್ದನ್ನ ಸಾವಕಾಶವಾಗಿ ತಿಳಿ ಹೇಳಿದೆ. ಎಣ್ಯಾಗಿನ ಸಾಸಿವೆ ಸಿಡಿಯೋ ಹಂಗ ಥಟ್ ಅಂತ ಎದ್ದಾಕಿನ ಅಡಗಿ ಮನಿಗೆ ಹೋಗಿ ಎಲ್ಲಾ ಡಬ್ಬಿ ಕೆಳಗ ಇಳಸಿ ಚೆಕ್ ಮಾಡ್ಲಿಕ್ಕೆ ಶುರುಮಾಡಿದ್ಲು. ಅಕಿಗೂ ನನ್ನ ಹಂಗ ಕೂಡಿಡೋ ಚಟಾ.

ಸಾವಿರದ್ದು ಒಂದೆರಡು ಕಟ್ಟು ನನ್ನ ಮುಂದ ಹಿಡಿದು ‘ಪಿಂಕ್ ನೋಟ ತೊಗೊಂಡ ಬರ್ರಿ’ ಅಂತ ದುಂಬಾಲು ಬಿದ್ಲು. ಇಷ್ಟ ದಿನ ಮುಚ್ಚಿಟ್ಟ ಹಣ ನನ್ನ ಮುಂದ ಹೆಣಾ ಬಿದ್ದಂಗ ಬಿದ್ದಿದ್ವು. ಎಲ್ಲಾ ಹಳೆ ನೋಟುಗಳನ್ನು ಗೊಳೆ ಹಾಕಿ ಬ್ಯಾಂಕಿಗೆ ಹೋದೆ... ನಮಗಿಂತ ಮೊದಲ ಹನುಮಂತನ ಬಾಲದಂಗ ಕ್ಯೂ ಇತ್ತು. ನಾನೂ ಒಳಗ ಸೇರ್ಕೊಂಡೆ.

ನನ್ನ ಮುಂದ ನಿಂತಿದ್ದ ಒಬ್ಬಾವ ಹಸಿವಿ ತಾಳಲಾರದ, ‘ಹಲೋ ಪಿಜ್ಜಾ ಹಟ್! ಕುಡ್‌ಯೂ ಪ್ಲೀಸ್‌ ಸೆಂಡ್‌ ಮಿ ಎ ಪಿಜ್ಜಾ ವಿತ್ 200 ಎಂ.ಎಲ್ ಸೆವನ್ ಅಪ್’ ಅಂದ. ಅತ್ಲಾ ಕಡೆಯಿಂದ ‘ಬೈ ಆಲ್‌ ಮೀನ್ಸ್‌ ಸರ್, ಪ್ಲೀಸ್‌ ಟೆಲ್ ಯುವರ್ ಅಡ್ರೆಸ್’ ಅಂದಂಗ ಆತು. ಇವಾ ಸಡನ್ ಆಗಿ ‘ಕುಲಕರ್ಣಿ ಇನ್‌ಫ್ರಂಟ್ ಆಫ್ ಎಸ್‌ಬಿಐ ಬ್ಯಾಂಕ್, ನವನಗರ, ಸ್ಟ್ಯಾಂಡಿಂಗ್ ಇನ್‌ ಕ್ಯೂ, ವಿಯರಿಂಗ್ ಬ್ಲಾಕ್ ಪ್ಯಾಂಟ್ ಅಂಡ್ ರೆಡ್‌ ಶರ್ಟ್‌’ ಎಂದ.

ಅಬ್ಬ, ನನಗಂತೂ ತಲೀ ತಿರುಗಿ ಕಿವ್ಯಾಗ ಸೀಟಿ ಹೊಡದಂಗ ಆತು. ಎಂಥಿಂಥ ಜನ ಇದ್ದಾರ ಅಂತ, ಪಾಪ ಅವಾರ ಏನ್ ಮಾಡ್ಯಾನ್! ಎಲ್ಲಾ ಹಸಿವಿ ಮಾಡಸ್ತದ. ಹಂಗೋ ಹಿಂಗೋ ಹರಸಾಹಸ ಪಟ್ಟು, ಬೆವರಿನ ಕಮಟು ವಾಸನೀ ಕುಡುಕೋತ, ಇದ್ದ ಬದ್ದ ಹಣಾ ಬ್ಯಾಂಕಿಗೆ ಕಟ್ಟಿದೆ.

ಅದೇನೋ ಅಂತಾರಲ್ಲ, ದೇವರು ವರ ಕೊಟ್ರು ಪೂಜಾರಿ ವರ ಕೊಡೊಲ್ಲ ಅಂತ. ಹಂಗ ಸಾಕಷ್ಟು ದುಡ್ಡ ಇದ್ರೂ ಈ ಹಾಳಾದ ಎ.ಟಿ.ಎಂಗಳು ದಿನಕ್ಕ ಇಂತಿಷ್ಟಾ ಲಿಮಿಟೆಡ್ ಹಣ ಅಂತ ನಾ ಹೋದಾಗ ಒಮ್ಮೆ ಪಿಂಕ್ ನಾಲಿಗೆ ಹೊರಗ ಹಾಕ್ತಾವು. ಸಿಕ್ಕದ್ದ ಸಿವಾ ಉಕ್ಕಿದ್ದ ಕೆನೆ, ನೆಕ್ಕಿದ್ದ ಬೆಣ್ಣೆ ಅನ್ನೋ ಹಂಗ ಇದ್ದದ್ರಾಗ ತೃಪ್ತಿಕರ ಜೀವನಾ ನಡೆಸಿಕೊಂಡು ಹೊಂಟೇವಿ.
–ಶ್ರೀವಲ್ಲಭ.ರಾ.ಕುಲಕರ್ಣಿ ಹುಬ್ಬಳ್ಳಿ

*

ಮಗ ಬಾಯಿಬಿಟ್ಟ...
500 ಹಾಗು 1000 ರೂಪಾಯಿ ನೋಟುಗಳನ್ನು ನಿಷೇಧಿಸಿ ಮೂರ್ನಾಲ್ಕು ದಿನಗಳಾಗಿತ್ತು. ಎಲ್ಲಾ ಬ್ಯಾಂಕುಗಳಲ್ಲೂ ಸರದಿ ಸಾಲು ಬೆಳೆದಿತ್ತು. ನಿತ್ಯದ ಖರ್ಚಿಗೂ ಕಾಸಿರಲಿಲ್ಲ. ಯಾವುದೋ ಕಾರ್ಯ ನಿಮಿತ್ತ ಹಾಸನಕ್ಕೆ ಹೋಗಬೇಕಿತ್ತು. ಎಟಿಎಂ ಕಾರ್ಯ ನಿರ್ವಹಿಸುವುದಿಲ್ಲ, ಈ ಸಮಯ ಬಿಟ್ಟು ಬೇರೆ ದಿನಗಳಲ್ಲಿ ಹೋಗೋಣ ಎಂದು ಹೆಂಡತಿಗೆ ತಿಳಿಸಿದೆ. ಅದಕ್ಕಾಕೆ, ‘ದುಡ್ಡಿನ ಚಿಂತೆ ಬಿಡಿ. ನೀವೇನು ಬ್ಯಾಂಕಲ್ಲಿ ಸಾಲು ನಿಂತು ದುಡ್ಡು ತರುವುದು ಬೇಡ. ಉಳಿಕೆ ಹಣದಲ್ಲೇ ಹೋಗಿ ಬರೋಣ’ ಎಂದಳು.

ಸರಿ, ಮಕ್ಕಳ ಸಮೇತ ಕೂಡಿಟ್ಟ ನಾಣ್ಯದ ಹುಂಡಿ ತೆಗೆದು ಲೆಕ್ಕ ಹಾಕುತ್ತ ಕುಳಿತಾಗ, ನಾನು, ಓ ನಮ್ಮ ಮನೆಯ ಕಪ್ಪು ಹಣ ಈಚೆ ಬರುತ್ತಿದೆ ಎಂದು ಮನದಲ್ಲೇ ಹೇಳಿಕೊಂಡು ಸುಮ್ಮನೆ ಪತ್ರಿಕೆಯ ಪುಟ ತಿರುವುತ್ತಲಿದ್ದೆ. ಇರುವ ಚಿಲ್ಲರೆ ಕಾಸು ಸೇರಿಸಿ ಲೆಕ್ಕ ಹಾಕಿದಾಗ ಸುಮಾರು ಸಾವಿರ ರೂಪಾಯಿಯಷ್ಟು ಇತ್ತು. ಇಷ್ಟು ಹಣವಿದ್ದರೆ ಸಾಕು, ಊರು ತಲುಪಬಹುದೆಂದು ಅಂದಾಜಿಸಿ ಹೊರಟೆವು.

ಪ್ರತಿ ರೂಪಾಯಿಯನ್ನು ಎಚ್ಚರಿಕೆಯಿಂದ ವೆಚ್ಚ ಮಾಡುತ್ತಿದ್ದೆವು. ಮಕ್ಕಳು ಹಟ ಹಿಡಿದರೆ ‘ಇನ್ನೊಮ್ಮೆ ತೆಗೆದುಕೊಡುತ್ತೇನೆ. ಇಲ್ಲಿಯ ವಸ್ತುಗಳು ಸರಿ ಇರುವುದಿಲ್ಲ’ ಎಂದೆಲ್ಲ ಸಮಾಧಾನಪಡಿಸಿದೆವು. ಆ ಸಮಯದಲ್ಲಿ ನಮಗೆ ಪ್ರತೀ ಚಿಲ್ಲರೆ ಹಣನೂ ಬಹುಮುಖ್ಯವಾಗಿತ್ತು. ಹಾಸನದಿಂದ ಹೊರಡುವ ಪ್ಯಾಸೆಂಜರ್ ರೈಲು ಹಿಡಿದು ಮೈಸೂರಿನೆಡೆಗೆ ಹೊರಟೆವು. ಅಂತೂ ರೈಲು ರಾತ್ರಿ ಮೈಸೂರು ತಲುಪಿತು. ರೈಲಿನಿಂದಿಳಿದವರೇ, ಸಿಟಿ ಬಸ್‌ಗೆ ಕಾದು ನಿಂತೆವು.

ತಕ್ಷಣವೇ ನಗರ ಸಾರಿಗೆ ಬಸ್ ಬಂದಾಗ ಮಕ್ಕಳಿಬ್ಬರ ಜೊತೆ ಖಾಲಿಯಿದ್ದ ಹಿಂದುಗಡೆ ಸೀಟ್‌ನಲ್ಲಿ ಕುಳಿತೆವು. ಟಿಕೆಟ್ ಟಿಕೆಟ್ ಎಂದು ಕಂಡಕ್ಟರ್ ಬಳಿ ಬಂದಾಗ ಮುಂದೆ ಒಬ್ಬರು ಕುಳಿತಿದ್ದಾರೆ, ನನಗೆ ಮತ್ತು ದೊಡ್ಡ ಮಗನೆಡೆ ಕೈ ತೋರಿಸಿ ಒಟ್ಟು ಎರಡೂವರೆ ಟಿಕೆಟ್ ಕೊಡಿ ಎಂದೆ. ಟಿಕೆಟ್ ಕೊಟ್ಟ ನಂತರ ಕಂಡಕ್ಟರ್ ನನ್ನ ಹತ್ತಿರ ಕುಳಿತಿದ್ದ ಚಿಕ್ಕ ಮಗನೆಡೆ ಕೈ ತೋರಿಸಿ, ‘ಮಗು ಎಷ್ಟನೇ ತರಗತಿ’ ಎಂದಾಗ, ಯು.ಕೆ.ಜಿ. ಎಂದೆ. ತಕ್ಷಣವೇ ಇವನು, ‘ಪಪ್ಪಾ, ನಾನು ಒಂದನೇ ಕ್ಲಾಸ್ ಅಲ್ವ. ಯು.ಕೆ.ಜಿ ಯಂತೆ. ಯಾಕೆ ಸುಳ್ಳು ಹೇಳ್ತಿಯಲ್ಲ?’ ಎಂದು ಜೋರಾಗಿ ಹೇಳುವುದೇ?.

ಪುಟ್ಟನ ಮಾತು ಕೇಳಿ ಬಸ್ಸಿನಲ್ಲಿದ್ದವರು ನಗುವುದಕ್ಕೆ ಶುರುಮಾಡಿದರು. ಕಂಡಕ್ಟರ್‌ಗೂ ನಗು ತಡೆಯಲಾಗಲಿಲ್ಲ. ನನಗೋ ಏನು ಹೇಳಬೇಕೋ ತೋಚಲಿಲ್ಲ. ದುಡ್ಡಿಲ್ಲದೆ ಮೂರು ರೂಪಾಯಿ ಉಳಿಸಲು ಹೋಗಿ ಇಂಗು ತಿಂದ ಮಂಗನಂತಾದೆ. ನೋಟು ಬ್ಯಾನಿನ ಶಾಕು ಹೀಗೆಲ್ಲಾ ಮಾಡಿತ್ತು.
– ಸಿ. ನಿಂಗಪ್ಪ ಮೈಸೂರು

*ನೋಟು ಕೈಬಿಟ್ಟು ಹೋಯ್ತು
ನಾನಾಗ ದಾಂಡೇಲಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಬಡ್ತಿಗಾಗಿ ಪರೀಕ್ಷೆ ಮುಗಿಸಿದ್ದೆ. ಫಲಿತಾಂಶ ಇನ್ನೇನು ಪ್ರಕಟವಾಗಬೇಕಿತ್ತು. ಆ ದಿನ ಕ್ಯಾಷಿಯರ್ ರಜೆ ಮಾಡಿದ್ದರಿಂದ ನಾನು ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸಬೇಕಿತ್ತು. ಸಂಜೆ ನೋಟುಗಳನ್ನು ಎಣಿಸಿ ನೂರರ ಕಟ್ಟುಗಳನ್ನು ಮಾಡುವಾಗ ನೂರು ರೂಪಾಯಿ ಮುಖಬೆಲೆಯ ಅಪರೂಪದ ನಂಬರಿನ ನೋಟೊಂದು ಸಿಕ್ಕಿತ್ತು. ಆ ನೋಟನ್ನು ನನ್ನ ಸಹೋದ್ಯೋಗಿ ಸಲೀಮನಿಗೆ ಕೊಡಲು ಇಟ್ಟುಕೊಂಡಿದ್ದೆ. ಆದಿನ ಅವನು ರಜೆ ಮಾಡಿದ್ದರಿಂದ ಕೊಡಲು ಆಗಲಿಲ್ಲ. ಸುಮಾರು 6 ಗಂಟೆಗೆ ನನಗೆ ಫೋನ್ ಬಂತು.

ನಾನು ಎಕ್ಸಾಮ್‌ನಲ್ಲಿ ಪಾಸಾಗಿದ್ದ ಸುದ್ದಿ ಅದು. ಇದು ನನ್ನ ಅದೃಷ್ಟದ ಸಂಖ್ಯೆ ಎಂದು ಆ ನೋಟನ್ನು ನನ್ನ ಬಳಿಯೇ ಇಟ್ಟುಕೊಂಡೆ. ಅದು ನನಗೆ ಹವ್ಯಾಸವಾಗಿ, ಆ ರೀತಿಯ ನೋಟುಗಳನ್ನು ಶೇಖರಿಸಲು ಶುರು ಮಾಡಿದೆ. ಅದರೊಂದಿಗೆ 000001, 111111, 222222, 181818 ಈ ರೀತಿ ಕೆಲವು ನೋಟುಗಳಿದ್ದವು. ಇದರಲ್ಲಿ 100, 50, 20,10,5,2,1 ಒಟ್ಟು 5500 ರೂಪಾಯಿ ಹಾಗೂ 500 ಹಾಗೂ 1000 ರೂಪಾಯಿಯ 16 ನೋಟುಗಳಿದ್ದವು.

ಈ ನೋಟುಗಳನ್ನು ಬದಲಿಸಲು ಬ್ಯಾಂಕ್ ಎದುರಿಗೆ ಸರತಿಯಲ್ಲಿ ನಿಂತಾಗ ಏನೋ ಕಳೆದುಕೊಂಡ ಭಾವ. ನನ್ನ ಜೀವಮಾನದ ಅದೃಷ್ಟವೆಲ್ಲಾ ಬ್ಯಾಂಕಿಗೆ ವರ್ಗಾಯಿಸುತ್ತಿದ್ದೇನೆ ಎಂದೆನಿಸಿತ್ತು. ನನ್ನ ನಂಬರಿನ ಹವ್ಯಾಸ ಚೂರು ಚೂರಾಗಿ ಹೋಯಿತು. ಇದು ನೋಟಿಗೊಂದು ವಿದಾಯವಾಗಿರದೆ ಅದೃಷ್ಟಕ್ಕೊಂದು ವಿದಾಯ ಎಂಬಂತೆ ಇತ್ತು.
–ಸ್ವರೂಪ ಕುಮಾರ.ಡಿ.ನಾಯಕ ಕುಮಟಾ

*ಫ್ಯಾನ್ಸಿ ನೋಟು ಇಲ್ಲವಾಯ್ತು
ನನ್ನ ಬಳಿ ಫ್ಯಾನ್ಸಿ ನಂಬರ್‌ಗಳಿದ್ದ 500 ರೂಪಾಯಿಗಳ ಎರಡು ನೋಟಿದ್ದವು. ಅದನ್ನು ಬ್ಯಾಂಕಿಗೆ ಹಾಕಬೇಕಾದರೆ ತುಂಬಾ ಬೇಸರವಾಯಿತು. ಅದು 666666 ಹಾಗೂ 111111 ನಂಬರಿನ ನೋಟುಗಳು. ನನಗೇನೂ ಹಣಕ್ಕೆ ತೊಂದರೆಯಾಗಲಿಲ್ಲ. ಎಟಿಎಂಗೆ ಹೋಗಿ ನಿಲ್ಲಬೇಕಾಗಲಿಲ್ಲ. ಅಕೌಂಟ್‌ನಲ್ಲಿರುವ ಹಣವನ್ನು ಚೆಕ್ ಮೂಲಕ ತೆಗೆದುಕೊಂಡೆ. ಆದರೆ ಆ ನಂಬರ್‌ಗಳ ನೋಟು ಕಳೆದುಕೊಂಡಿದ್ದು ಮಾತ್ರ ಬಲು ಬೇಸರ ತಂದಿತ್ತು.

-ಎ.ಪಿ.ರಂಗನಾಥ ಮೈಸೂರು

*ಸೆಲ್ಫಿ ತೆಗೆದುಕೊಂಡರು
ಇನ್ಮುಂದೆ 500, 1000 ರೂಪಾಯಿಗಳ ನೋಟು ಬ್ಯಾನ್ ಅಂತ ಹೇಳಿ, ನಿಮ್ಮ ಹತ್ರ ಅಂತಹ ಎಷ್ಟು ಹಣವಿದೆಯೋ ಅದನ್ನು ನಾಳೆಯಿಂದ್ಲೇ ಬೇಗಬೇಗ ಹೋಗಿ ನಿಮ್ಮ ಬ್ಯಾಂಕಿಗೆ ಹಾಕಿ ಬಿಡಿ ಅಂದದ್ದೇ ತಡ. ಮರುದಿನ ನನ್ ಪಪ್ಪಾ, ಮಮ್ಮಿ ಮುಂಜಾನೆ ಓಡೇಳು ಅಂತ ನಮ್ಮನೆ ಹತ್ತಿರದ ಬ್ಯಾಂಕಿಗೆ ಓಡಿಸಿಬಿಟ್ಟರು. ನಾನು ಒಂದ್ಹತ್ತು ಸಾವಿರದಷ್ಟು ಹಣ ಕೈಯಲ್ಲಿ ಹಿಡಿದುಕೊಂಡು ಸರತಿಯಲ್ಲಿ ನಿಂತೆ.

ಹಾಗೆ ಸರತಿಯಲ್ಲಿ ನಿಂತ ಅರ್ಧ ಗಂಟೆಗೆ ಅಲ್ಲಿಗೆ ಬಂದ ಅಜ್ಜನೊಬ್ಬ ‘ನಾನು ಪಾಳಿಯಲ್ಲಿ ನಿಲ್ಲಬೇಕೇನ್ರಪ್ಪಾ’ ಅನ್ನುತ್ತಲೇ ಯಾರೂ ಉತ್ತರ ನೀಡದ್ದನ್ನು ತಿಳಿದುಕೊಂಡು ಅಲ್ಲೇ ಪಕ್ಕದಲ್ಲಿ ಕುಳಿತುಕೊಳ್ಳುತ್ತಲೇ, ಸಾಲಿನಲ್ಲಿ ಬರುತ್ತಿದ್ದದನ್ನು ಕಂಡು ಅಯ್ಯೋ ಅನಿಸಿತು. ಅದಾದ ಕೆಲವು ನಿಮಿಷಕ್ಕೆ ನಮ್ಮ ಹತ್ತಿರದ ವಾರ್ಡಿನ ಪಾಲಿಕೆ ಸದಸ್ಯರೊಬ್ಬರು ಬಂದು ಎಲ್ಲರಿಗೂ ನಮಸ್ಕರಿಸುತ್ತಾ, ಎಲ್ಲರೊಂದಿಗೆ ತಾವೂ ಸರತಿಯಲ್ಲಿ ಕೆಲವು ಕ್ಷಣ ನಿಂತಂತೆ ಮಾಡಿ ಆ ಕ್ಷಣದ ಒಂದು ಸೆಲ್ಫಿ ತೆಗೆದುಕೊಂಡಿದ್ದು, ಅದು ಅವರ ಅಂದಿನ ಫೇಸ್‌ಬುಕ್ಕಿನ ಪೋಸ್ಟ್ ಇರಬೇಕೆನಿಸಿ ನಗು ಬಂತು. ವಿದಾಯ ಅವರಿಗೆ ಹೀಗೂ ಉಂಟು ಅನ್ನಿಸಿತು.
-ಮಂಜುನಾಥ ಎಸ್. ಕಟ್ಟಿಮನಿ ವಿಜಯಪುರ

*
ಮೊದಲ ನೋಟು ನನ್ನದಾಗಿತ್ತು
ಹಿಂದಿನ ರಾತ್ರಿಯ ಸಮಾಚಾರ ನೋಡಿ, ನೋಟಿಗೊಂದು ವಿದಾಯ ಹೇಳಲು, ಬ್ಯಾಂಕಿಗೆ ಬೆಳಿಗ್ಗೆ 8.30ಕ್ಕೆ ಹಾಜರಾದೆ. ನನ್ನಲ್ಲಿ ಹನ್ನೆರಡು 500ರ ನೋಟುಗಳಿದ್ದವು. ತಮ್ಮನಿಗೆ ಕರೆ ಮಾಡಿ ಬ್ಯಾಂಕಿಗೆ ಬರಲು ಹೇಳಿದೆ. ಅವನು ತನ್ನ ಬಳಿಯಿದ್ದ ಆರು 500 ನೋಟುಗಳನ್ನು ತಂದನು. ಸಾಲಿನಲ್ಲಿ ನಾನೇ ಮೊದಲಿದ್ದೆ. ಇನ್ನೂ ಹೊಸ ನೋಟುಗಳು ಬಂದಿರಲಿಲ್ಲ. ಕಾಯಬೇಕಾಯಿತು. ಮೊದಲ ನಾಲ್ಕು 2000 ನೋಟುಗಳು ಕೈ ಸೇರಿದಾಗ ಕಾಲೇಜಿನ ದಿನಗಳಲ್ಲಿ ‘ಫಸ್ಟ್‌ ಡೇ ಫಸ್ಟ್‌ ಶೋ ಸಿನಿಮಾ’ ನೋಡಿದ ಅನುಭವ ನನ್ನದು. ಮೊದಲ ದಿನ ಮೊದಲಿಗನಾಗಿ ಶಾಖೆಯಿಂದ ಮೊದಲ 2000 ರೂಪಾಯಿ ನೋಟು ಪಡೆದೆ. ಆ ಮೊದಲ ನೋಟು ನನ್ನ ಕಲೆಕ್ಷನ್ ಫೋಲ್ಡರ್‌ನಲ್ಲಿ ಫ್ರೇಮ್ ಆಗಿದೆ.
–ರಂಗನಿಧಿ ವಿ.ಜೆ. ಬೆಂಗಳೂರು

* ಇದನ್ನೂ ಓದಿ:ನೋಟು ರದ್ದು ನಿರ್ಧಾರಕ್ಕೆ 2 ವರ್ಷ; ಸಾಮಾಜಿಕ ಮಾಧ್ಯಮಗಳಲ್ಲಿ ಅಳಿಯದ ನೆನಪು​
ಐದುನೂರು ರೂಪಾಯಿ ಅಂದ್ರೆ ಅಮ್ಮ ನೆನಪಾಗುತ್ತಾಳೆ!
ಐದು ವರ್ಷದ ಹಿಂದೆ ಕೆಲಸ ಸಿಗ್ತು ಅಂತ ಮನೆಬಿಟ್ಟು ಹೊರಡುವಾಗ, ಅಮ್ಮ ನನ್ನ ಮರೆಗೆ ಕರೆದು ತನ್ನ ಸೀರೆಯ ಸೆರಗಿನ ಅಂಚಿನಲ್ಲಿ ಎಂಟ್ಹತ್ತು ಮಡಿಕೆ ಮಾಡಿ ಕಟ್ಟಿಕೊಂಡಿದ್ದ ಐದು ನೂರರ ನೋಟನ್ನು ಎತ್ತಿಕೊಟ್ಟು ‘ತಗೋ ಮಗಾ, ಏನಾದರೂ ಅವಸರದ ಸಮಯಕ್ಕೆ ಆಸರಾದೀತು! ಏನಕ್ಕಾದರೂ ಬಂದೀತು ಇಟ್ಕೊ!’ ಅಂದಿದ್ಲು. ನನ್ನಪ್ಪ ಸಂಬಳ ಆಗೋತನಕ ಖರ್ಚಿಗೆ ಆಗುವಷ್ಟು ದುಡ್ಡುಕೊಟ್ಟಿದ್ದರೂ ತಾಯಿ ಕರುಳು ನನಗೆ ಕದ್ದು ಐನೂರು ರೂಪಾಯಿ ಕೊಡುವಂತೆ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಅದನ್ನು ನನ್ನ ಪರ್ಸ್‌ನಲ್ಲಿ ಜತನದಿಂದ ಕಾಪಾಡಿಕೊಂಡು ಬಂದಿದ್ದೆ.

ಎಂತಹ ಪರಿಸ್ಥಿತಿಯಲ್ಲೂ ಅದನ್ನು ಚಲಾಯಿಸಿರಲಿಲ್ಲ. ನಾನು ಅದರಲ್ಲಿ ಅಮ್ಮನನ್ನು ಕಾಣುತ್ತಿದ್ದೆ. ಆದರೆ ನೋಟ್‌ ಬ್ಯಾನ್‌ ಸುದ್ದಿ ನನ್ನ ಭಾವನೆಗೆ ಏಟುಕೊಟ್ಟಿತ್ತು. ಅಮ್ಮಕೊಟ್ಟ ಐದುನೂರು ನೋಟಿಗೆ ಬೆಲೆ ಇಲ್ಲದಂತೆ ಆಗುತ್ತದೆಯೇ ಅಂದುಕೊಂಡೆ! ಇಲ್ಲ, ಅದು ಬೆಲೆ ಕಳೆದುಕೊಳ್ಳಬಾರದು, ಬೆಲೆ ಕಳೆದುಕೊಂಡು ಮೂಲೆ ಸೇರಬಾರದೆಂದು ನಿರ್ಧರಿಸಿದೆ. ಮರುದಿನ ಬೆಳಗ್ಗೆ ಐದು ನೂರು ನೋಟು ಚಲಾವಣೆ ರದ್ದಾಗಿತ್ತು.

ಏನು ಮಾಡುವುದು? ಬಟ್ಟೆ ಅಂಗಡಿಯವನ ಹತ್ತಿರ ತುಂಬಾ ಕೇಳಿಕೊಂಡ ಮೇಲೆ ಆತ ಅದನ್ನು ಸ್ವೀಕರಿಸಲು ಒಪ್ಪಿಕೊಂಡ. ಐದು ನೂರು ರೂಪಾಯಿಗೆ ನಾಲ್ಕೈದು ವರ್ಷದ ಮಕ್ಕಳಿಗೆ ಆಗುವಂತಹ ಬಟ್ಟೆಗಳನ್ನು ತೆಗೆದುಕೊಂಡು, ಬೇಕರಿಯಲ್ಲಿ ಸಿಹಿಪೊಟ್ಟಣ ಖರೀದಿಸಿ ಅನಾಥಾಶ್ರಮಕ್ಕೆ ಹೋಗಿ ಅವರಿಗೆ ಬಟ್ಟೆ ನೀಡಿ, ಸಿಹಿ ಹಂಚಿದೆ. ಅಮ್ಮ ಇಲ್ಲದವರಿಗೆ ಅಮ್ಮನ ದುಡ್ಡು ಸೇರಬೇಕೆಂದು ನನ್ನಾಸೆಯಗಿತ್ತು.

ಐದು ನೂರರ ನೋಟನ್ನು ಖುಷಿಯಿಂದ ಕಳುಹಿಸಿಕೊಟ್ಟಂತೆ ಹೊಸ ನೋಟನ್ನು ಅರ್ಥವತ್ತಾಗಿ ಸ್ವಾಗತಿಸಬೇಕು ಅನ್ನುವ ಆಸೆ ಇತ್ತು. ಮೊದಲ ದಿನವೇ ಅದನ್ನು ಪಡೆಯಬೇಕೆಂದು ಶತಾಯಗತಾಯ ಪ್ರಯತ್ನಿಸಿ ಅನಾಮತ್ತು ಐದು ಗಂಟೆಗಳ ಸರತಿಸಾಲಿನಲ್ಲಿ ನಿಂತು ಗುಲಾಬಿ ಬಣ್ಣದ ಎರಡು ಸಾವಿರ ರೂಪಾಯಿಯ ಹೊಸ ನೋಟ್ ಪಡೆದು ಹತ್ತಾರು ಬಾರಿ ತಿರುವಿ ತಿರುವಿ ನೋಡಿ ಚಿಕ್ಕ ಮಗುವಿನಂತೆ ಖುಷಿಪಟ್ಟಿದ್ದೆ! ಕೈಗೆ ಬಂದ ಮರುದಿನವೇ ಬಸ್ ಹಿಡಿದು ಬೆಂಗಳೂರಿಗೆ ಹತ್ತಿಬಿಟ್ಟೆ! ನೇರವಾಗಿ ಅಂಗಡಿಗೆ ಹೋದವನೇ ಸುಮಾರು ಒಂದು ಸಾವಿರ ರೂಪಾಯಿಗಳ ಪುಸ್ತಕಗಳನ್ನು ಖರೀದಿಸಿದೆ.

ಇನ್ನು ಉಳಿದಿದ್ದು ಸಾವಿರ ರೂಪಾಯಿ! ನನ್ನ ಅಮ್ಮನಿಗೆ ಒಪ್ಪುವಂಥ ಒಂದು ಚಂದದ ಸೀರೆಯನ್ನು ತೆಗೆದುಕೊಂಡು ಬಂದೆ. ಅಂತೂ ಇಂತೂ ನೋಟನ್ನು ಕಳುಹಿಸಿಕೊಟ್ಟು, ನೋಟನ್ನು ಸ್ವಾಗತಿಸಿದ್ದೆ.
–ಸದಾಶಿವ್ ಸೊರಟೂರು ಚಿಂತಾಮಣಿ

*
ನೋಟು ರದ್ದಾದದ್ದೇ...
*ಇನ್ನೆಲ್ಲಿ ನೋಡಲು ಸಿಗುತ್ತದೆ 500,1000 ರೂಪಾಯಿ ನೋಟು ಅಂತ, ಇದ್ದುದನ್ನು ಬದಲಾಯಿಸಿಕೊಳ್ಳುವ ಮೊದಲು ಅವೆರಡರದ್ದೂ ಫೋಟೊ ಹೊಡೆದಿಟ್ಟುಕೊಂಡೆ.

*ದುಡ್ಡೇ ಇಲ್ಲದವರಿಗೆ 500,1000 ನೋಟು ರದ್ದಾದದ್ದು ಗಮನಕ್ಕೇ ಬಾರದ್ದು ಕಂಡೆ.

*ದುಡ್ಡೇ ಇಲ್ಲದ ನಿರ್ಗತಿಕರಂತೆ ನಟಿಸುವವರನ್ನು ಬ್ಯಾಂಕಿನೆದುರು 500,1000 ರೂಪಾಯಿ ನೋಟು ಬದಲಾಯಿಸಿಕೊಳ್ಳುವವರ ಸಾಲಿನಲ್ಲಿ ಕಂಡೆ.

*ಚುನಾವಣೆಗೆ ಸ್ಪರ್ಧಿಸಿದವರು ಮತಕ್ಕಾಗಿ ಮತದಾರರನ್ನು ಓಲೈಸಿದಂತೆ ತುಂಬಿ ತುಳುಕುವ ಹಣ ಉಳ್ಳವರು ತಮ್ಮ ಹಣ ಜಮಾ ಮಾಡಲು ಖಾತೆ ಉಳ್ಳವರನ್ನು ಓಲೈಸುವುದನ್ನು ಕಂಡೆ.

*ಹಣ ಮಿತಿಯಲ್ಲಿರುವವರು ಬ್ಯಾಂಕಿನೆದುರು ಸಾಲು ಹಿಡಿದುದನ್ನೂ ಅತಿಯಾಗಿರುವವರು ಕಳ್ಳದಾರಿ ಹಿಡಿದುದನ್ನೂ ಕಂಡೆ.

*ದುಡ್ಡಿಲ್ಲದವರು ಮೋದಿಯವರನ್ನು ನಾಯಕನಂತೆ ಗೌರವಿಸುವುದನ್ನೂ, ದುಡ್ಡಿದ್ದವರು ಮೋದಿಯವರನ್ನು ಖಳನಾಯಕನಂತೆ ದೂಷಿಸುವುದನ್ನೂ ಕಂಡೆ.
-ದೇವಿದಾಸ ಸುವರ್ಣ ಅಂಕೋಲಾ

*
ಎಷ್ಟಿದ್ರೂ ವೈಟ್ ಮಾಡ್ಕೊಡ್ತೀನಿ!
ದೊಡ್ಡ ನೋಟುಗಳನ್ನು ಅಮಾನ್ಯಗೊಳಿಸುವ ಆ ಸ್ಫೋಟಕ ಸುದ್ಧಿ ಹೊರಬಿದ್ದು ಮೂರು ದಿನ ಆಗಿತ್ತಷ್ಟೆ. ಒಬ್ಬ ತಲೆ ಕೆರೆಯುತ್ತಾ ನನ್ನ ಆಸ್ಪತ್ರೆಗೆ ಬಂದ. ಏನಾಗ್ಬೇಕಿತ್ತು ಅಂತ ಕೇಳುತ್ತಿದ್ದಂತೆ ತನ್ನ ಚೀಲದಿಂದ ಐನೂರರ ಕೆಲವು ನೋಟುಗಳನ್ನು ತೆಗೆದು ಟೇಬಲ್ ಮೇಲಿಟ್ಟ. ನಾ ಆಶ್ಚರ್ಯದಿಂದ ಹುಬ್ಬೇರಿಸುತ್ತಿದ್ದಂತೆ ‘ನೋಟು ಬದಲಾಯ್ಸಿ ಕೊಡಿ ಸ್ಸಾ’ ಎಂದ ತುಸು ಸಂಕೋಚದಿಂದ.

‘ಇದು ಜಾನುವಾರು ಆಸ್ಪತ್ರೆ ಮಾರಾಯ. ನೀನು ಬ್ಯಾಂಕೋ ಇಲ್ಲ ಪೋಸ್ಟ್ ಆಫೀಸಿಗೆ ಹೋಗಿ ಬದಲಾಯಿಸ್ಕೊ’ ಅಂದೆ. ‘ಅಲ್ಲೆಲ್ಲಾ ಉದ್ದುದ್ದ ಕ್ಯೂ ಇದೆ ಸ್ಸಾ. ಆಸ್ಪತ್ರೆಲೂ ಹಳೆ ನೋಟು ಕೊಡ್ಬಹ್ದು ಅಂತ ಟೀವಿಲಿ ನೋಡೇ ಇಲ್ಲಿಗೆ ಬಂದೆ’ ಎಂದ ತಣ್ಣಗೆ! ‘ಅಯ್ಯೋ, ಅದು ನರ್ಸಿಂಗ್ ಹೋಮಲ್ಲಿ ಟ್ರೀಟ್‌ಮೆಂಟು ತಗಂಡ್ರೆ ಬಿಲ್ಲು ಚುಕ್ತಾ ಮಾಡಕ್ಕೆ ಐನೂರು, ಸಾವಿರದ ನೋಟು ಕೊಡ್ಬಹ್ದು, ಇಲ್ಲಲ್ಲ’ ಅಂತ ನಾ ಖಡಕ್ಕಾಗಿ ಹೇಳಿದ್ಮೇಲೆ ಅಸಮಾಧಾನದಿಂದಲೆ ಹೊರನಡೆದ ಆ ಹಳ್ಳಿಗ! ಅವತ್ತು ಸಂಜೆ ಇನ್ನೊಂದು ಪ್ರಸಂಗ ನಡೀತು.

ನನ್ನ ಪರಿಚಯದ ಯುವಕನೊಬ್ಬ ಕರೆ ಮಾಡಿದ. ಆಗಾಗ್ಗೆ ಹಸು ಕರುಗಳ ಚಿಕಿತ್ಸೆಗೆ ಅವನ ಮನೆಗೆ ಹೋಗುತ್ತಿರುತ್ತೇನೆ. ‘ಸ್ಸಾರ್, ಮನೆಲಿದ್ದೀರಾ? ಹೊರಗಡೆನಾ? ಬ್ಯುಸಿ ಇದ್ರೆ ಮತ್ತೆ ಮಾಡ್ತೀನಿ’ ಎಂದು ಪೀಠಿಕೆ ಹಾಕಿದವನಿಗೆ ‘ಪರ್ವಾಗಿಲ್ಲ ಏನು ವಿಷ್ಯ? ಎಂದು ಕೇಳಿದೆ. ‘ಅದೇ ಸ್ಸಾರ್, ನೋಟು ಬ್ಯಾನಾದ ವಿಷ್ಯ. ಗೋಣಿ ಚೀಲದಲ್ಲಿ ಕೂಡಿಟ್ಟೋರು ದೊಡ್ಡ ಕಮೀಶನ್ ಕೊಟ್ಟು ಬದಲಾಯಿಸಿಕೊಳ್ತಿದ್ದಾರೆ.

ಕೆಲೋರು ನೋಟುಗಳನ್ನು ಸುಟ್ಟು ಹಾಕ್ತಿದ್ದಾರೆ. ಹೊಟ್ಟೆ ಉರಿಯುತ್ತೆ. ತಪ್ಪು ತಿಳೀಬೇಡಿ ಸ್ಸಾರ್. ನಿಮ್ಮತ್ರ ಬ್ಲಾಕ್ ಮನಿ ಇದ್ರೆ ನಾ ವೈಟ್ ಮಾಡ್ಕೋಡ್ತೀನಿ...’ ಅವನ ಮಾತು ಕೇಳುತ್ತಿದ್ದಂತೆ ನನಗೆ ಮೈ ಉರಿದು ಹೋಯ್ತು. ‘ನನ್ಹತ್ರ ಆ ಥರದ ದುಡ್ಡಿಲ್ಲ. ಸಂಬಳ ಬ್ಯಾಂಕ್ ಅಕೌಂಟಿಗೇ ಜಮಾ ಆಗೋದು. ಪ್ರತಿ ತಿಂಗಳು ಟ್ಯಾಕ್ಸ್ ಕಟ್ಟಾಗುತ್ತೆ’ ಎಂದೆ ಸ್ವಲ್ಪ ಜೋರಾಗಿ. ‘ಸ್ಸಾರ್, ನಿಮ್ದೂ ಅಂತಲ್ಲ ನಿಮ್ಗೆ ಗೊತ್ತಿರೋ ಯಾರದೇ ಆದ್ರೂ ತೊಂದ್ರೆ ಇಲ್ಲ. ಎಷ್ಟೇ ದುಡ್ಡಿದ್ರೂ ನನ್ನ ಅಕೌಂಟಿಗೆ ಹಾಕ್ಕಂಡು ಜನವರಿ ಕೊನೆಗೆ ಪೂರಾ ದುಡ್ಡು ವೈಟಾಗಿ ವಾಪಸ್ಸು ಕೊಡ್ತೀನಿ.

ಒಂದು ನಯಾಪೈಸಾ ಕಮಿಷನ್ನೂ ಬೇಡ. ಮನೆದು, ತೋಟದ್ದು ಅಂತ ಸಾಲದ ಕಂತು ಬಾಕಿ ಇವೆ. ಈಗ್ಲೇ ಕಟ್ದಿದ್ರೆ ಬಡ್ಡಿ ಸಮಾ ಬೀಳುತ್ತೆ. ಜನವರಿ ಹೊತ್ಗೆ ಅಡ್ಕೆ ದುಡ್ಡು ಬಂದಿರುತ್ತೆ. ಆಗ ಪೂರಾ ಲೆಕ್ಕ ಚುಕ್ತಾ ಮಾಡ್ತೀನಿ...’ ಬಡ ಬಡನೆ ಒದರುತ್ತಿದ್ದವನಿಗೆ ಬ್ರೇಕ್ ಹಾಕುತ್ತಾ ‘ನೋಡಣ ಯಾರಾದ್ರೂ ಇದ್ರೆ ನಿಮ್ ಅಡ್ರೆಸ್ ಕೊಡ್ತೀನಿ’ ಎನ್ನುತ್ತಾ ಮಾತು ಮುಗಿಸಿದೆ. ‘ನಂಗೂ ಹೆಲ್ಪ್ ಆಗುತ್ತೆ, ಜೊತೆಗೆ ಅವ್ರಿಗೂ ಲಾಭ. ಇದೊಂದು ಉಪ್ಕಾರ ಮಾಡಿ ಸ್ಸಾರ್’ ಎನ್ನುತ್ತಾ ಕೊನೆಗೂ ಫೋನು ಇಟ್ಟ ಅಸಾಮಿ. ಆಮೇಲೂ ಮೂರ್ನಾಲ್ಕು ದಿನ ಯಾರಾದ್ರೂ ಕಪ್ಪುಕುಳಗಳು ಸಿಕ್ಕಿದ್ರಾ ಅಂತ ಪ್ರತಿನಿತ್ಯ ಕರೆ ಮಾಡಿ ನನ್ನ ತಾಳ್ಮೆಯನ್ನು ಪರೀಕ್ಷಿಸಿದ!
-ಡಾ. ಮುರಳೀಧರ ಕಿರಣಕೆರೆ ಶಿವಮೊಗ್ಗ

*
‘ನೋಟೆಡ್‌’ ಆದ ನೋಟುಗಳು

ಅಪಮೌಲ್ಯವಾದ ನೋಟುಗಳನ್ನೆಲ್ಲ ಬ್ಯಾಂಕ್‌ಗೆ ಮೊದಲ ದಿನವೇ ಡೆಪಾಸಿಟ್ ಮಾಡಿ ಮೂರನೇ ದಿನವೇ ಡ್ರಾ ಮಾಡಿಯಾಗಿತ್ತು. ಇನ್ನು ಹಳೆ ನೋಟುಗಳ ಗೊಡವೆಯಿಲ್ಲ ಎಂದುಕೊಂಡು ನೆಮ್ಮದಿಯಿಂದಿದ್ದೆ. ಹೊಸ ವರ್ಷ ಬರ್ತಿದೆ ಬೇಡದ ಬಟ್ಟೆ ಬರೆ ತೆಗೆದಿಟ್ಟು ಹೊಸತಕ್ಕೆ ಜಾಗ ಮಾಡೋಣವೆಂದು ಬೀರು ತೆಗೆದು ಬೀಗವಿಲ್ಲದ ಲಾಕರ್‌ಗೆ ಕೈ ಹಾಕಿದರೆ, ಮಾಸಿದ ಲಕೋಟೆ ...ಅದರೊಳಗೆ 500ರ ಎರಡು ನೋಟುಗಳು ... ಅಮ್ಮಾ ಎಂದು ತೋರಿಸಿದೆ ? ಅಯ್ಯೋ ಇವತ್ತು ಡೇಟ್ ಏನೇ? ಡೆಪಾಸಿಟ್ ಮಾಡಬಹುದೇ ಎಂದು ಆತಂಕ ಪಟ್ಟಳು... ಇವತ್ತು 30 ಡಿಸೆಂಬರ್ .

ಕೊನೆಯ ದಿನ ಎಂದೆ. ಹಾಗಾದರೆ ಇನ್ನೊಂದಷ್ಟು ಸರಿಯಾಗಿ ಹುಡುಕು ಎಂದಳು ಅಮ್ಮ. ಮತ್ತಷ್ಟು ತಡಕಾಡಿದಾಗ ಮತ್ತೂ ಮೂರೂ ನೋಟುಗಳು... ಗಂಟೆ ಇನ್ನು ಹನ್ನೊಂದು.... ತಡಮಾಡದೇ ಕಾಲ್ನಡಿಗೆಯಲ್ಲಿ 15 ನಿಮಿಷ ನಡೆದು ಬ್ಯಾಂಕಿಗೆ ಹೋದೆ. ಅರ್ಧ ಗಂಟೆಯಲ್ಲಿ ಡೆಪಾಸಿಟ್ ಮುಗೀತು. ನೆಮ್ಮದಿಯ ನಿಟ್ಟುಸಿರು. 2500ರೂಪಾಯಿಯಲ್ಲಿ ಓಲಾದಲ್ಲಿ ಓಡಾಡಲಾದೀತು ಎಂಬ ಸಂತೋಷವು ಆಯ್ತು. ಬೀರುವನ್ನು ಮಧ್ಯಾಹ್ನದ ಮೇಲೆ ಗಮನಿಸಿದ್ದಿದ್ದರೆ ಅನ್ಯಾಯ 2500 ಲಾಸ್ ಆಗುತ್ತಿತ್ತು. ಸದ್ಯ ಹಾಗಾಗಲಿಲ್ಲ. ಪರೀಕ್ಷೆಯ ಕೊನೆಯ ನಿಮಿಷಗಳಲ್ಲಿ ಸರಿಯಾದ ಉತ್ತರ ಬರೆದಷ್ಟೇ ನಿಟ್ಟುಸಿರು. ಕೊನೇ ಗಳಿಗೆಯಲ್ಲಿ ‘ನೋಟೆಡ್‌’ ಆದ ನೋಟುಗಳ ವಿದಾಯ ಸಂತಸ ಕೊಟ್ಟಿದ್ದು ಹೀಗೆ.
–ಕಾವ್ಯ ಭಾರದ್ವಾಜ್ ಬೆಂಗಳೂರು

*
ಮೊದಲ ಪಿಂಕ್ ನೋಟಿನ ಹಿಂದೆ ಅಲೆದದ್ದು
ನೋಟು ರದ್ದಾದ ಆ ರಾತ್ರಿ ಊರಿನಿಂದ ಅಪ್ಪಾಜಿಯ ಫೋನು ಬಂದಿತ್ತು. ‘ನಳಿನಾ, ಟಿ.ವಿ.ಯೊಳಗೆ ಮೋದಿ ಭಾಷಣ ಬರುತ್ತಿದೆಯಮ್ಮಾ, ಇಂದಿನಿಂದ 500 ಹಾಗೂ ಸಾವಿರ ನೋಟುಗಳನ್ನು ರದ್ದು ಮಾಡುತ್ತಿದ್ದಾರಂತೆ, ಹಾಗಾಗಿ ನಾಳೆಯಿಂದ ಯಾರ ಹತ್ತಿರವೂ ಆ ನೋಟುಗಳನ್ನು ಇಸ್ಕೋಬೇಡ, 100ರ ಹಾಗೂ ಅದಕ್ಕಿಂತ ಕಡಿಮೆ ಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ.

ಹಾಗಾಗಿ ಅವುಗಳನ್ನು ಸರಿಯಾಗಿ ಇಟ್ಟುಕೋ, ಖರ್ಚು ಮಾಡಿಕೊಳ್ಳಬೇಡ, ನಿಮ್ಮಲ್ಲಿ 500 ಹಾಗೂ 1000 ರೂಪಾಯಿ ನೋಟುಗಳಿದ್ದರೆ ಅದನ್ನು ಬೇಗನೆ ಬ್ಯಾಂಕಿಗೆ ಕಟ್ಟಿಬಿಡು’ ಎಂದಾಗ ‘ಆಯ್ತು ಅಪ್ಪ’ ಎಂದು ಹೇಳಿ ಪೆಚ್ಚಾಗಿ ಕುಳಿತೆ. ಮಧ್ಯಾಹ್ನ ತಾನೇ ಕಿಟ್ಟಿ ಪಾರ್ಟಿಗೆ ದುಡ್ಡು ಕೊಡುವಾಗ 100 ರೂಪಾಯಿಗಳ ಚಿಲ್ಲರೆ ಬಹಳ ಇದೆ ಎಂದು ಎರಡು ಸಾವಿರ ರೂಪಾಯಿ ಕೊಡುವಾಗ ಬರೀ ನೂರರ ನೋಟುಗಳನ್ನೇ ಕೊಟ್ಟಿದ್ದು ಕುತ್ತಿಗೆಗೆ ಬಂದಿತ್ತು.

ಈಗ ಮನೆಯಲ್ಲಿ ಯಜಮಾನರಿಗೆ ಗೊತ್ತಿಲ್ಲದೆ ಬಂಗಾರದ ಬಳೆಗಳನ್ನು ಮಾಡಿಸಲು ಕೂಡಿಟ್ಟಿದ್ದ 80,000 ರೂಪಾಯಿ ಬರೀ ಐನೂರು ಹಾಗೂ ಸಾವಿರ ನೋಟುಗಳನ್ನು ಹೇಗೆ ಕರಗಿಸಬೇಕು ಎಂಬ ಚಿಂತೆಯಾಗಿತ್ತು. ಎರಡು ದಿನಗಳ ಹಿಂದೆ ಯಜಮಾನರು ‘ಒಂದಿಪ್ಪತ್ತೈದು ಸಾವಿರ ಇದ್ದರೆ ಕೊಡು, ಇನ್ಶೂರೆನ್ಸ್ ಕಟ್ಟಲು ಕಡಿಮೆ ಬಂದಿದೆ, ಮುಂದಿನ ತಿಂಗಳು ಕೊಡುತ್ತೇನೆ’ ಎಂದು ಗೋಗರೆದಿದ್ದರು.

ಜಪ್ಪಯ್ಯಾ ಎಂದರೂ ಕೊಟ್ಟಿರಲಿಲ್ಲ. ‘ನನ್ನ ಹತ್ತಿರ ಎಲ್ಲಿದೆ, ಅದಕ್ಕೆ ಖರ್ಚಾಯಿತು, ಇದಕ್ಕೆ ಖರ್ಚಾಯಿತು’ ಎಂದು ಏನೇನೋ ಲೆಕ್ಕ ಹೇಳಿ ಕನ್‌ಫ್ಯೂಸ್‌ ಮಾಡಿ ಮತ್ತೆ ಕೇಳದ ಹಾಗೆ ಬಾಯಿಮುಚ್ಚಿಸಿದ್ದೆ. ಈಗ ಏನು ಮಾಡುವುದೆಂದು ಗೊತ್ತಾಗದೆ ತಲೆಯಲ್ಲಿ ಹುಳ ಕೊರೆಯತೊಡಗಿತ್ತು. ಬ್ಯಾಂಕಿನಲ್ಲಿ ಅಕೌಂಟ್ ತೆರೆಯದೆ ಎಂಥ ತಪ್ಪು ಮಾಡಿದೆ ಎಂದು ಕಾಡತೊಡಗಿತ್ತು. ತಡಮಾಡದೆ ಅಂದೇ ತಮ್ಮನಿಗೆ ಫೋನು ಮಾಡಿ ಬರಹೇಳಿ ಯಜಮಾನರು ಆಫೀಸಿಗೆ ಹೋದ ತಕ್ಷಣ ಮೊದಲು ಬ್ಯಾಂಕಿಗೆ ಲಗ್ಗೆಇಟ್ಟು ಅಕೌಂಟ್ ಓಪೆನ್ ಮಾಡಿ ಜಮಾ ಮಾಡಿ ಬಂದಿದ್ದಾಯಿತು.

ಯಜಮಾನರಿಗೆ ಅನುಮಾನವೋ ಅನುಮಾನ. ನನ್ನ ತಮ್ಮ ಇದ್ದಕ್ಕಿದ್ದಂತೆ ಯಾಕೆ ಬಂದಿದ್ದು ಎಂಬುದು ಅವರಿಗೆ ಈಗಲೂ ಯಕ್ಷಪ್ರಶ್ನೆಯಾಗಿಯೇ ಕಾಡುತ್ತಿದೆ. ಮತ್ತೊಂದು ವಾರದಲ್ಲಿ ಊರಿಗೆ ಹೋದಾಗ ಅಪ್ಪಾಜಿ 2000 ರೂಪಾಯಿ ನೋಟು ಕೊಟ್ಟು ‘ಮಗಳಿಗೆ ಹುಟ್ಟುಹಬ್ಬಕ್ಕೆ ಡ್ರೆಸ್ ಕೊಡಿಸಿಕೊಂಡು ಬಾ’ ಎಂದು ಹೇಳಿದರು. ಅದೇ ಮೊದಲ ಬಾರಿ ನೋಡಿ ಆ ಪಿಂಕ್‌ ನೋಟುಗಳನ್ನು ನೋಡಿ ಎಲ್ಲರೂ ಪುಳಕಿತಗೊಂಡಿದ್ದೆವು.

ಮಕ್ಕಳು ‘ಇದೇನು ನಮ್ಮ ಬಿಸಿನೆಸ್ ಗೇಮ್ ನೋಟು ಇದ್ದಹಾಗಿವೆ’ ಎಂದು ತಿರುಗಾ ಮುರುಗಾ ನೋಡಿಯೇ ನೋಡಿದ್ದು. ಬಿಲ್ಲು ಮಾಡಿಸಲು ದುಡ್ಡು ಕೊಟ್ಟಾಗ ಕೌಂಟರ್‌ನವನು ಬಿಲ್ಲು ಕೂಡ ಮಾಡದೇ ಆಶ್ಚರ್ಯದಿಂದ, ಕುತೂಹಲದಿಂದ ಮಾಲೀಕನಿಗೆ ತೋರಿಸಿದರು. ನಂತರ ಅಲ್ಲಿರುವ ಕೆಲ ಗ್ರಾಹಕರೂ ನಾವು ಕೊಟ್ಟ ಎರಡು ಸಾವಿರ ರೂಪಾಯಿ ನೋಟನ್ನು ಒಬ್ಬೊಬ್ಬರೇ ತೆಗೆದುಕೊಂಡು ನೋಡಲು ಶುರುಮಾಡಿದರು. ಅದು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹಸ್ತಾಂತರವಾಗುತ್ತಿದ್ದರಿಂದ, ನಾವು ಆ ಎರಡು ಸಾವಿರ ನೋಟನ್ನು ನೋಡುತ್ತಿರುವವರ ಹಿಂದೆ ಅಲೆಯುವುದೇ ಆಯಿತು. ಅಂತೂ ಇಂತೂ ಕೊನೆಗೆ ಬಿಲ್ಲು ಮಾಡಿಸಿ ಉಸ್ಸಪ್ಪಾ ಅಂತಾ ನಿಟ್ಟುಸಿರು ಬಿಟ್ಟಿದ್ದಾಗಿತ್ತು.
–ನಳಿನಿ. ಟಿ. ಭೀಮಪ್ಪ ಧಾರವಾಡ

*
ಅಯ್ಯೋ ವಿಧಿಯೇ!
ನೋಟು ರದ್ದತಿಯಿಂದ ಅಷ್ಟಾಗಿ ನನಗೆ ತೊಂದರೆಯಾಗಿರಲಿಲ್ಲ. ನಾವು ಹೆಚ್ಚಿನ ಖರೀದಿಗೆ ಕಾರ್ಡನ್ನು ಉಜ್ಜಿಕೊಂಡೆವು. ಆದರೆ ಒಮ್ಮೆ ದಿಢೀರ್ ಮೂವತ್ತೈದು ಸಾವಿರ ಬೇಕಾಗಿತ್ತು. ಎಟಿಎಮ್‌ನಿಂದ ಬಾರಿಗೆ ಎರಡು ಸಾವಿರ ಮಾತ್ರ ತೆಗೆಯಬಹುದಾದ್ದರಿಂದ ಮೂರ್ನಾಲ್ಕು ದಿನಗಳಲ್ಲಿ ಅಷ್ಟು ಒಟ್ಟಾಗುವುದು ಸಾಧ್ಯವಿರಲಿಲ್ಲ. ಅದರ ಬದಲು ಬ್ಯಾಂಕ್ ತೆರೆಯುವ ಮುಂಚೆಯೇ ಅದರೆದುರು ಸಾಲುಗಟ್ಟಿದರೆ ಹೇಗೋ ಪಡೆಯಬಹುದು ಎಂದು ಎಣಿಸಿ ಅಕೌಂಟಿದ್ದ ಬ್ಯಾಂಕಿನೆದುರು ಬೆಳಿಗ್ಗೆಯೇ ಸರದಿಯಲ್ಲಿ ನಿಂತು ಶುಕ್ರವಾರ ಮತ್ತು ಶನಿವಾರ ಇಪ್ಪತ್ತು ಸಾವಿರ ತೆಗೆದದ್ದಾಯಿತು.

ಇನ್ನುಳಿದದ್ದನ್ನು ಸೋಮವಾರ ತೆಗೆದರಾಯಿತೆಂದು ಅಂದು ಒಂಬತ್ತೂ ಐವತ್ತಕ್ಕೇ ಪಾಳಿಯಲ್ಲಿ ಮೂರನೇಯವನಾಗಿ ನಿಂತದ್ದಾಯಿತು. ನನ್ನ ನಂತರ ಬಂದ ಒಬ್ಬಾತನಿಗೆ ಏನು ಅರ್ಜಂಟಿತ್ತೋ ಗೊತ್ತಿಲ್ಲ, ನನ್ನಿಂದಲೂ ಮುಂದೆಯೇ ಹೋಗಲು ಬಯಸಿದ್ದ. ಆತನನ್ನು ಗುರಾಯಿಸಿ ನೋಡಿ, ಕತ್ತಿ ಮಸೆದು ಅಂತೂ ನನ್ನ ಹಿಂದೆಯೇ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಿ ಬೀಗಿದೆ! ನನ್ನ ಮುಂದೆ ಇಬ್ಬರು ವಿದ್ಯಾರ್ಥಿಗಳು ಚಲನ್‌ಗಳನ್ನು ಹಿಡಿದುಕೊಂಡು ಬಂದಿದ್ದರು.

ಹಾಗಾಗಿ ಅಂದು ಬ್ಯಾಂಕಿನಿಂದ ದಕ್ಷಿಣೆ ಪಡೆಯುವ ಮೊದಲ ವ್ಯಕ್ತಿ ನಾನಾಗುತ್ತೇನೆಂಬ ಹೆಮ್ಮೆಯಿಂದ ಒಳಗೊಳಗೇ ಖುಷಿಗೊಂಡು ನನ್ನ ಹಿಂದೆ ಬೆಳೆಯುತ್ತಿದ್ದ ಸಾಲಿನತ್ತ ಕ್ಷುಲ್ಲಕ ನೋಟ ಬೀರುತ್ತಿದ್ದೆ. ಯಾವಾಗ ಕೌಂಟರ್ ಓಪನ್ನಾಯಿತೋ, ಐದೇ ನಿಮಿಷಕ್ಕೆ ಅದರೆದುರು ನಿಂತೆ. ನನ್ನಿಂದ ಭರ್ತಿ ಮಾಡಿದ ಹಣ ಹಿಂಪಡೆಯುವ ಅರ್ಜಿಯನ್ನು ಪಡೆದ ಯುವತಿಯು ಅಕೌಂಟ್ ನಂಬರ್ರು, ಫೋಟೊ, ಶರಾಗಳನ್ನು ಮತ್ತೆ ಮತ್ತೆ ನೋಡಿ, ತಣ್ಣಗೆ ಅಂದಳು ‘ಸಾರ್, ನೀವು ಈ ವಾರದಲ್ಲಿ ಗರಿಷ್ಠವಾದ ಇಪ್ಪತ್ನಾಲ್ಕು ಸಾವಿರವನ್ನು ಪಡೆದಿದ್ದೀರಾ. ಸಾರಿ, ನಾವು ದುಡ್ಡು ಕೊಡೋದಿಕ್ಕೆ ಬರೋದಿಲ್ಲ’.

ಬೆಚ್ಚಿಬಿದ್ದ ನಾನು ‘ಓಯ್, ಸರೀ ನೋಡ್ರೀ... ಇವತ್ತಿನ್ನೂ ಸೋಮವಾರ, ನಾನೆಲ್ಲಿ ದುಡ್ಡು ತೆಗ್ದಿದೀನಿ? ವಾರಾಂತೆ ವಾರಾ. ನಾನ್ ತೆಗ್ದಿದ್ದು ಮೊನ್ನೆ ಶುಕ್ರವಾರ ಮತ್ತೆ ಶನಿವಾರ’ ಎಂದು ಅವಳ ಮೇಲೆ ರೇಗಿದೆ. ಅವಳು ಅಷ್ಟೇ ತಣ್ಣಗೆ ‘ಸರ್, ಆರ್‌ಬಿಐ ಸೂಚನೆಯಂತೆ ಇಪ್ಪತ್ನಾಲ್ಕು ಸಾವಿರದ ಮಿತಿಯನ್ನು ಲೆಕ್ಕಹಾಕೋದು ಶುಕ್ರವಾರದಿಂದ ಶುಕ್ರವಾರಕ್ಕೆ. ಹಂಗಾಗಿ ನೀವು ಮುಂದಿನ ಶುಕ್ರವಾರಕ್ಕಿಂತ ಮುಂಚೆ ಒಂದು ರೂಪಾಯಿನೂ ತೆಗೆಯೋಕ್ಕಾಗೋದಿಲ್ಲ’ ಅಂತಂದ್ಲು.

ಗರ ಬಡಿದವನಂತಾದ ನನ್ನನ್ನು ಮಗ್ನೇ ಸರೀ ಆಯ್ತು ನಿಂಗೆ, ಇಷ್ಟು ಹೊತ್ತು ನಾನು ಮುಂದೆ, ನಾನು ಮುಂದೆ ಅಂತ ಹಾರಾಡ್ತಿದ್ದೆಯಲ್ಲಾ ಎಂದು ಖುಷಿಯಿಂದ ನಾನು ಹಿಂದೆ ತಳ್ಳಿದವ ಅಂದಂತೆ ಅವನ ಮುಖಭಾವದ ನೋಟ ಬಿಂಬಿಸುತ್ತಿತ್ತು. ಸ್ವರ್ಗದಿಂದ ಯಾರೋ ಎತ್ತಿ ಒಗೆದಂತಾಗಿ ಅಲ್ಲಿನ ಬೆಂಚಿನ ಮೇಲೆ ಕುಳಿತು ವಿಧಿಯನ್ನು ಹಳಿಯತೊಡಗಿದೆ.
–ಮನೋಜ ಗೋಡಬೋಲೆ ಉಜಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT