ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾಗುತ್ತಿರುವ ಕಾವೇರಿ: ಸರ್ಕಾರಕ್ಕೆ ಸಂಕಷ್ಟ

ಜಲಾಶಯಗಳಲ್ಲಿ ಬಳಕೆಗೆ ಲಭ್ಯವಿರುವ ನೀರು 15.58 ಟಿಎಂಸಿ ಅಡಿ-- – -ಬಿಸಿತುಪ್ಪವಾದ ಕೋರ್ಟ್ ಆದೇಶ
Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಕೊಳ್ಳದ ನಾಲ್ಕು (ಕೆಆರ್‌ಎಸ್‌, ಹಾರಂಗಿ, ಕಬಿನಿ, ಹೇಮಾವತಿ) ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ಮುಟ್ಟಿರುವುದರಿಂದ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯುಸೆಕ್ (0.17 ಟಿಎಂಸಿ ಅಡಿ) ನೀರು ಹರಿಸಲು ಸಾಧ್ಯವೇ ಇಲ್ಲದ ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ.

ತಮಿಳುನಾಡಿಗೆ ಪ್ರತಿನಿತ್ಯ ಎರಡು ಸಾವಿರ ಕ್ಯುಸೆಕ್‌ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮತ್ತೆ ನೀಡಿರುವ  ಆದೇಶ ಪಾಲಿಸುವುದು ಹೇಗೆ ಎಂಬ ಸಂದಿಗ್ಧಕ್ಕೆ ರಾಜ್ಯ ಸಿಕ್ಕಿಕೊಂಡಿದೆ.

ಜಲಾಶಯಗಳಲ್ಲಿ ಸದ್ಯ 25.60 ಟಿಎಂಸಿ ಅಡಿ ನೀರಿದೆ. ಆದರೆ, ಅದರಲ್ಲಿ ಬಳಸಲು ಯೋಗ್ಯವಾದ ನೀರಿನ ಪ್ರಮಾಣ 15.58 ಟಿಎಂಸಿ ಅಡಿ ಮಾತ್ರ. ಕಾವೇರಿ ಕಣಿವೆ ಪ್ರದೇಶದ ಜನರು 2017ರ ಮೇ ಅಂತ್ಯದವರೆಗೆ ಇದನ್ನೇ ನಂಬಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ಅ.7ರಿಂದ  ಪ್ರತಿನಿತ್ಯ 2 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ನೀಡಿದ ಆದೇಶದ ಬಳಿಕ  ಕೇವಲ 12 ದಿನ ಮಾತ್ರ ಎರಡು ಸಾವಿರ ಕ್ಯುಸೆಕ್‌ ನೀರು ಹರಿದುಹೋಗಿದೆ. ಕರ್ನಾಟಕ– ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಇದು ದಾಖಲಾಗಿದೆ.

ಅಕ್ಟೋಬರ್‌ 15ರ ಬಳಿಕ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ತಮಿಳುನಾಡಿಗೆ ಸ್ವಾಭಾವಿಕವಾಗಿ ಹರಿಯುವ ನೀರಿನ ಪ್ರಮಾಣ ಕೂಡಾ ಗಣನೀಯವಾಗಿ ಇಳಿದಿದೆ.

‘ನ್ಯಾಯಾಲಯದ ಆದೇಶದ ಪ್ರಕಾರ ಅಕ್ಟೋಬರ್‌ನಲ್ಲಿ 4.32 ಟಿಎಂಸಿ ಅಡಿ, ನವೆಂಬರ್‌ನಲ್ಲಿ 5.18 ಟಿಎಂಸಿ ಅಡಿ,  ಡಿಸೆಂಬರ್‌ನಲ್ಲಿ 5.35 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಬಿಡಬೇಕಾಗಿತ್ತು. ಆದರೆ, ಜಲಾಶಯಗಳಲ್ಲಿ ನೀರೇ ಇಲ್ಲ ಎಂದ ಮೇಲೆ ಎಲ್ಲಿಂದ ಬಿಡಲು ಸಾಧ್ಯ’ ಎಂದು ಕಾವೇರಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅ. 1ರಿಂದ ಡಿ. 8ರವರೆಗೆ ಕಾವೇರಿಯಿಂದ ತಮಿಳುನಾಡಿಗೆ ಹರಿದ ನೀರಿನ ಪ್ರಮಾಣ ಮತ್ತು ಜಲಾಶಯಗಳಲ್ಲಿರುವ ನೀರಿನ ಮಟ್ಟದ ವಸ್ತುಸ್ಥಿತಿ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನೀರು ಬಿಡಲು ಸಾಧ್ಯ ಇಲ್ಲ ಎಂದು ಹೇಳುವ ಬದಲು, ರಾಜ್ಯದ ಸಂಕಷ್ಟವನ್ನು ಮನವರಿಕೆ ಮಾಡಲಾಗಿದೆ. ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಅ.18ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಡಿ.15ರಂದು ನ್ಯಾ. ದೀಪಕ್ ಮಿಶ್ರಾ ನ್ಯಾಯಪೀಠ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕಿತ್ತು. ಆದರೆ, ಅಂದು ಪೀಠದ ತ್ರಿಸದಸ್ಯರ ಪೈಕಿ ಒಬ್ಬರು ಗೈರಾಗಿದ್ದರಿಂದ ವಿಚಾರಣೆ ನಡೆಯಲಿಲ್ಲ’ ಎಂದೂ ಅವರು ತಿಳಿಸಿದರು.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರು ಸುರಿಯಬೇಕಿತ್ತು. ಇದರಿಂದ ಕಾವೇರಿ ಅಚ್ಚುಕಟ್ಟು ಪ್ರದೇಶ ಮತ್ತು ತಮಿಳುನಾಡಿಗೆ ಅನುಕೂಲ ಆಗುತ್ತಿತ್ತು. ಆದರೆ ಮಳೆ ಆಗಿಲ್ಲ. ಹೀಗಾಗಿ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸ್ವಾಭಾವಿಕ ಹರಿವು ಕಡಿಮೆಯಾಗಿದೆ. ಈ ಕಾರಣಕ್ಕೆ ಈ ತಿಂಗಳುಗಳಲ್ಲಿ ತಮಿಳುನಾಡಿಗೆ ಸ್ವಾಭಾವಿಕವಾಗಿ ಹರಿಯಬೇಕಿದ್ದ ನೀರು ಕೂಡಾ ಹೋಗಿಲ್ಲ ಎಂದರು.

ತಮಿಳುನಾಡಿಗೆ ನೀರು ಬಿಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದ್ದರೂ ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲ. ಅಷ್ಟೇ ಅಲ್ಲ, ಕುಡಿಯುವ ಅಗತ್ಯಕ್ಕೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅ. 4ರಂದು ನಡೆದ ವಿಚಾರಣೆ ಬಳಿಕ ಅ. 7ರಿಂದ ಪ್ರತಿನಿತ್ಯ 2 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶ ನೀಡಲಾಗಿತ್ತು ಎಂದೂ ಅವರು ನೆನಪಿಸಿದರು.

‘ಸಾಮಾನ್ಯ ಮಳೆ ವರ್ಷ ಜೂನ್‌ನಿಂದ ಮೇ ವರೆಗೆ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬೇಕು. ಆದರೆ, ಈ ವರ್ಷ ಜೂನ್‌ನಿಂದ ಈವರೆಗೆ (ಜ. 4) ಕೇವಲ 66.67 ಟಿಎಂಸಿ ಅಡಿ ನೀರು ಮಾತ್ರ ಹರಿದುಹೋಗಿದೆ. ನ್ಯಾಯಮಂಡಳಿಯ ಐತೀರ್ಪು ಪ್ರಕಾರ ಜೂನ್‌ನಿಂದ ಈವರೆಗೆ (ಜ. 4) 179.39 ಟಿಎಂಸಿ ಅಡಿ ನೀರು ಹರಿದು ಹೋಗಬೇಕಿತ್ತು’ ಎಂದೂ ಅವರು ತಿಳಿಸಿದರು.

ಈ ವರ್ಷ ಈವರೆಗೆ ನಾಲ್ಕೂ ಜಲಾಶಯಗಳಿಗೆ ಹರಿದು ಬಂದ  ನೀರು 141.03 ಟಿಎಂಸಿ ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 210.87 ಟಿಎಂಸಿ ಅಡಿ ನೀರು ಹರಿದು ಬಂದಿತ್ತು. ಈ ವರ್ಷ ಕಾವೇರಿ ಜಲಾಶಯದಿಂದ 76.14 ಟಿಎಂಸಿ ಅಡಿ ನೀರು ಹೊರಬಿಡಲಾಗಿದೆ. ಅದರಲ್ಲಿ ತಮಿಳುನಾಡಿಗೆ 66.67 ಟಿಎಂಸಿ ಅಡಿ ನೀರು ಹರಿದು ಹೋಗಿರುವ ಮಾಹಿತಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗಿದೆ.

‘ಕಾವೇರಿ ಕಣಿವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಾಗಿ ನಾಲಾಗಳಿಗೆ 53.93 ಟಿಎಂಸಿ ಅಡಿ ನೀರು ಬಿಡಲಾಗಿದೆ. ನ್ಯಾಯಮಂಡಳಿಯ ಆದೇಶದ ಪ್ರಕಾರ ಈ ನಾಲೆಗಳಿಗೆ 109.14 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಮಳೆ ಕೊರತೆಯಿಂದಾಗಿ ಈ ಪ್ರದೇಶದಲ್ಲಿನ ಕೃಷಿ ಅಗತ್ಯಕ್ಕೆ  ನೀರು ಬಿಡಲು ಸಾಧ್ಯವಾಗಿಲ್ಲ. ಪ್ರತಿ ವರ್ಷ 5ರಿಂದ 6 ಟಿಎಂಸಿ ಅಡಿಯಷ್ಟು ನೀರು ಆವಿಯಾಗಿ ಹೋಗುತ್ತದೆ’ ಎಂದು ಅವರು ವಿವರಿಸಿದರು.

‘ಡಿಸೆಂಬರ್‌ ತಿಂಗಳಲ್ಲಿ ತಮಿಳುನಾಡಿಗೆ ಕೆಲವು ದಿನ ಮಾತ್ರ 1000– 1500 ಕ್ಯುಸೆಕ್‌ ಮಧ್ಯೆ ನೀರು ಹರಿದು ಹೋಗಿದೆ. ಸದ್ಯದ ಹರಿಯುವ ನೀರಿನ ಪ್ರಮಾಣ 500 ಕ್ಯುಸೆಕ್‌ಗಿಂತಲೂ ಕಡಿಮೆ. ಜ. 4ರಂದು ಕೇವಲ 338 ಕ್ಯುಸೆಕ್‌ ಹರಿದು ಹೋಗಿದೆ’ ಎಂದೂ ಅವರು ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT