ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಟನ್‌ ಬೇಸಿಗೆ ಭತ್ತ ಖೋತಾ!

ಬೀಳು ಬಿದ್ದ ಭದ್ರಾ, ತುಂಗಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶ
Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ಶಿವಮೊಗ್ಗ: ಭದ್ರಾ ಹಾಗೂ ತುಂಗಾ ಜಲಾಶಯಗಳ ವ್ಯಾಪ್ತಿಯಲ್ಲಿ ಈ ಬಾರಿ ಭತ್ತದ ಬೆಳೆಗೆ ನೀರು ಹರಿಸದಿರಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿರುವ ಕಾರಣ ಬೇಸಿಗೆ ಹಂಗಾಮಿನ 5 ಲಕ್ಷ ಟನ್‌ ಇಳುವರಿ ಖೋತಾ ಆಗಲಿದೆ.
 
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಶಿವಮೊಗ್ಗ 10 ಸಾವಿರ, ದಾವಣಗೆರೆ 60 ಸಾವಿರ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ. ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ  ಜಿಲ್ಲೆಗಳ 60,800 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಬರುತ್ತದೆ. ಆದರೆ, ಬೇಸಿಗೆ ನೀರು ದೊರೆಯುವುದು ಕೇವಲ 4 ಸಾವಿರ ಹೆಕ್ಟೇರ್‌ಗೆ ಮಾತ್ರ. ಅದೂ ಈ ವರ್ಷ ಸ್ಥಗಿತವಾಗಿದೆ.
 
ಎಲ್ಲ ಜಿಲ್ಲೆಗಳ ಅಚ್ಚುಕಟ್ಟು ವ್ಯಾಪ್ತಿ ಸೇರಿ ಬೇಸಿಗೆಯಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷ ಟನ್‌ ಭತ್ತ ಬೆಳೆಯ ಲಾಗುತ್ತಿತ್ತು. ಭದ್ರಾ ಜಲಾಶಯದಲ್ಲಿ ಪ್ರಸ್ತುತ 29.912 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 13.832 ಟಿಎಂಸಿ ನೀರು ಬಳಕೆ ಮಾಡಲು ಸಾಧ್ಯವಿಲ್ಲ. ಉಳಿದ 16.08 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಿದೆ. 116 ಅಡಿಯವರೆಗೆ ಮಾತ್ರ ಕಾಲುವೆ ಹಾಗೂ ನದಿಗೆ ನೀರು ಹರಿಸಬಹುದು. ಅದರಲ್ಲಿ 6.845 ಟಿಎಂಸಿ ನೀರು ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಕ್ಕೆ ಮೀಸಲಿಡಲಾಗಿದೆ. ನೀರಾವರಿ ಉದ್ದೇಶಕ್ಕೆ 9.235 ಟಿಎಂಸಿ ಲಭ್ಯವಿದೆ.
 
ತುಂಗಾ ಜಲಾಶಯದಲ್ಲಿ ಪ್ರಸ್ತುತ 2.41 ಟಿಎಂಸಿ ನೀರಿದೆ. ಬಳಕೆ ಮಾಡಲು ಸಾಧ್ಯವಿಲ್ಲದ ಸಂಗ್ರಹ 0.89 ಟಿಎಂಸಿ, ಶಿವಮೊಗ್ಗ ನಗರಕ್ಕೆ ಕುಡಿಯಲು ಮೀಸಲಿಡುವ ನೀರು 0.69 ಟಿಎಂಸಿ. ಉಳಿದ 1.165 ಟಿಎಂಸಿ ನೀರು ಬೆಳೆಗಳಿಗೆ ಲಭ್ಯವಿದೆ. 
 
‘ಎರಡೂ ಜಲಾಶಯದಲ್ಲಿ ಇರುವ ನೀರು ಭತ್ತದ ಬೆಳೆಗೆ ಸಾಕಾಗುವುದಿಲ್ಲ. ಲಭ್ಯ ಇರುವ ನೀರು ಬಳಸಿಕೊಂಡು ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಇರುವ ಅಡಿಕೆ, ಬಾಳೆ ಮತ್ತಿತರ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಬೇಕಿದೆ. ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ಭತ್ತದ ಬೆಳೆ ಬೆಳೆಯದಂತೆ ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ’ ಎನ್ನುತ್ತಾರೆ ಭದ್ರಾ ‘ಕಾಡಾ’ ಅಧ್ಯಕ್ಷ ಎಚ್‌.ಎಸ್.ಸುಂದರೇಶ್.
 
ಅಚ್ಚುಕಟ್ಟು ವ್ಯಾಪ್ತಿಯ ಅತಿದೊಡ್ಡ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆ ಕಟ್ಟೆಗಳು, ಪಿಕ್‌ಅಪ್‌ಗಳು ಜಲಾಶಯದ ನಾಲೆಯ ನೀರನ್ನೇ ಅವಲಂಬಿಸಿವೆ. ಸೂಳೆಕೆರೆ ನೀರು ಬಳಸಿಕೊಂಡು ಪ್ರತಿ ವರ್ಷ 2,800 ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಯಾವ ಭಾಗದಲ್ಲೂ ಭತ್ತ ಬೆಳೆಯಲು ಅಗತ್ಯ ಇರುವಷ್ಟು ನೀರಿಲ್ಲ. ಈಗ ಇರುವ ನೀರು ಕುಡಿಯುವ ನೀರಿನ ಯೋಜನೆಗಳಿಗೆ ಮೀಸಲಿಡಲಾಗಿದೆ.
 
‘ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೆಲವರು ಕೊಳವೆಬಾವಿ ನೀರು ನಂಬಿಕೊಂಡು ಭತ್ತ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ, ಬೇಸಿಗೆಯಲ್ಲಿ ತೀವ್ರ ವಿದ್ಯುತ್‌ ಕೊರತೆ ಎದುರಾಗುವ ಸಂಭವ ಇರುವ ಕಾರಣ ಇಂತಹ ಸಾಹಸಕ್ಕೆ ರೈತರು ಕೈ ಹಾಕಬಾರದು. ಹಾಗೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್‌.
 
***
ಜನಪ್ರಿಯ ಸಣ್ಣ ಭತ್ತಕ್ಕೂ ಕುತ್ತು
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ ಭಾಗದಲ್ಲಿ ಬೆಳೆಯುವ ಸಣ್ಣ ಭತ್ತಕ್ಕೆ (ಐಆರ್‌–64, ಎಂಪಿಯು–1001 ತಳಿ) ಸಾಕಷ್ಟು ಬೇಡಿಕೆ ಇದೆ. ಮಲೆ ನಾಡಿನ ಬಹುತೇಕ ಜನರು ಊಟಕ್ಕೆ ಇದೇ ಭತ್ತ ಬಳಸುತ್ತಾರೆ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಬೆಳೆ ಯುವ ಜ್ಯೋತಿ ತಳಿಯ ಕೆಂಪು ಭತ್ತ ಕೇರಳಕ್ಕೆ ರವಾನೆಯಾ ಗುತ್ತಿತ್ತು. ಆದರೆ, ಇದೇ ಮೊದಲ ಬಾರಿ ಜಿಲ್ಲೆಯ ರೈತರೇ ಹೊರಗಿನಿಂದ ಭತ್ತ ಖರೀದಿಸುವ ಅನಿವಾರ್ಯತೆ ಎದುರಾಗಿದೆ. 
 
***
ರಾಜ್ಯದಲ್ಲಿ ಬರದ ಕಾರಣ ಭತ್ತದ ಉತ್ಪಾದನೆ ಕುಂಠಿತವಾದರೂ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಾಕಷ್ಟು ಇಳುವರಿ ಬಂದಿದೆ. ಹಾಗಾಗಿ, ಈ ಬಾರಿ ಅಕ್ಕಿಗೆ ಕೊರತೆ ಆಗುವುದಿಲ್ಲ.
ಮಧುಸೂದನ್, ಜಂಟಿ ಕೃಷಿ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT