7
ನಳಪಾಕ

ಬಾಯಿ ಚಪಲಕ್ಕೆ ಆಲೂಗಡ್ಡೆ ತಿನಿಸು

Published:
Updated:
ಬಾಯಿ ಚಪಲಕ್ಕೆ ಆಲೂಗಡ್ಡೆ ತಿನಿಸು

ಆಲೂ ಫಿಂಗರ್ ಚಿಪ್

ಬೇಕಾಗುವ ಸಾಮಾಗ್ರಿಗಳು :
ಆಲೂಗಡ್ಡೆ 2, ರುಚಿಗೆ ಉಪ್ಪು, ಕಾಳುಮೆಣಸಿನ ಪುಡಿ, ಕರಿಯಲು ಎಣ್ಣೆ ಸಾಕಷ್ಟು.

ತಯಾರಿಸುವ ವಿಧಾನ : ಆಲೂಗಡ್ಡೆ ಯನ್ನು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೋಳುಗಳನ್ನು ಮಾಡಿ ನೀರಿನಲ್ಲಿ ಅರ್ಧ ಬೇಯಿಸಿ. ನಂತರ ಇಳಿಸಿ ನೀರನ್ನು ಬಸಿಯಿರಿ. ನಂತರ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ. ಇನ್ನೊಂದೆಡೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಬೆರೆಸಿಟ್ಟುಕೊಳ್ಳಿ. ನಂತರ ಕರಿದ ಹೋಳುಗಳು ಸ್ವಲ್ಪ ಬಿಸಿ ಇರುವಾಗ ಉಪ್ಪು, ಕಾಳು ಮೆಣಸಿನಪುಡಿ ಉದುರಿಸಿ. ಈಗ ಆಲೂ ಫಿಂಗರ್‌ ಚಿಪ್ಸ್ ಸವಿಯಲು ಸಿದ್ಧ.

*

ಆಲೂಗಡ್ಡೆ ಹಲ್ವ

ಬೇಕಾಗುವ ಸಾಮಗ್ರಿಗಳು :
ಆಲೂಗಡ್ಡೆ 2, ಸಕ್ಕರೆ 4 ಕಪ್, ಏಲಕ್ಕಿ ಪುಡಿ ಚಿಟಿಕೆ, ತುಪ್ಪ 1/2  ಚಮಚ, ಕರಿದ ಗೋಡಂಣಬಿ 4ರಿಂದ 5.

ತಯಾರಿಸುವ ವಿಧಾನ : ಆಲೂಗಡ್ಡೆಯನ್ನು ಬೇಯಿಸಿ ನುಣ್ಣಗೆ ಹಿಸುಕಿಕೊಳ್ಳಿ. ದಪ್ಪ ತಳದ ಬಾಣಲೆಗೆ ಸಕ್ಕರೆ ಹಾಕಿ ಸ್ವಲ್ಪ ನೀರನ್ನು ಬೆರೆಸಿ ಸಣ್ಣ ಉರಿಯಲ್ಲೆ ಕಾಯಿಸಿ. ಅಂಟು ಪಾಕ ಬಂದಾಗ ಹಿಚುಕಿದ ಆಲೂವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಆ ಮಿಶ್ರಣಕ್ಕೆ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಕ್ಸ್‌ ಮಾಡುತ್ತಿರಿ. ತುಪ್ಪ ಬಿಟ್ಟಾಗ ಇಳಿಸಿ ಗೋಡಂಬಿಯನ್ನು ಅಲಂಕರಿಸಿ.

*

ಆಲೂ ಪಲ್ಯ

ಬೇಕಾಗುವ ಸಾಮಾಗ್ರಿಗಳು :
ಸಿಪ್ಪೆ ಸಹಿತ ಹೆಚ್ಚಿದ ಹೋಳುಗಳು 1ಕಪ್, ಉದ್ದಿನ ಬೇಳೆ  ಚಮಚ, ಹುಣಸೆ ನೀರು 1/2ಚಮಚ, ಬೆಲ್ಲ 1ಚೂರು, ಕರೀಬೇವು ಸ್ವಲ್ಪ,  ಸಾಸಿವೆ 1/4 ಚಮಚ, ಎಣ್ಣೆ ಒಂದೂವರೆ ಚಮಚ, ಸಾರಿನ ಪುಡಿ1/2 ಚಮಚ, ಮೆಣಸಿನ ಪುಡಿ 1/2 ಚಮಚ, ಕೆಂಪು ಮೆಣಸಿನ ಚೂರು 4, ಕಾಯಿತುರಿ 1ರಿಂದ 2 ಚಮಚ ಹಾಗೂ ರುಚಿಗೆ ಉಪ್ಪು.

ತಯಾರಿಸುವ ವಿಧಾನ : ಆಲೂ ಹೋಳುಗಳನ್ನು ಆವಿ ಅಥವಾ ನೀರಿನಲ್ಲಿ ಬೇಯಿಸಿ. ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಉದ್ದಿನ ಬೇಳೆ, ಕರೀಬೇವು, ಕೆಂಪು ಮೆಣಸಿನ ಚೂರನ್ನು ಒಂದರ ನಂತರ ಒಂದನ್ನು ಹಾಕಿ ಹುರಿಯಿರಿ. ನಂತರ ಒಗ್ಗರಣೆಗೆ ಬೆಂದ ಆಲೂ ಹೋಳುಗಳನ್ನು ಸೇರಿಸಿ ಹುರಿಯಿರಿ. ಆ ಮಿಶ್ರಣಕ್ಕೆ ಹುಣಸೆ ನೀರು, ಬೆಲ್ಲ, ಉಪ್ಪು, ಮೆಣಸಿನ ಪುಡಿಯನ್ನು ಹಾಕಿ ಹುರಿದು, ಕೊನೆಗೆ ತೆಂಗಿನ ತುರಿಯನ್ನು ಸೇರಿಸಿ ಒಂದೆರಡು ಸಲ ಕೆದಕಿದರೆ ಪಲ್ಯ ರೆಡಿ.

*

ಆಲೂ ಬೊಂಡಾ

ಬೇಕಾಗುವ ಸಾಮಗ್ರಿಗಳು
: ಆಲೂ 2, ಕಡ್ಲೆಹಿಟ್ಟು, ಇಂಗು, ಮೆಣಸಿನ ಪುಡಿ, ಕೊತ್ತುಂಬರಿ ಸೊಪ್ಪು, ಅಕ್ಕಿಹಿಟ್ಟು, ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಕಡ್ಲೆಹಿಟ್ಟಿಗೆ, ಅಕ್ಕಿಹಿಟ್ಟು, ಉಪ್ಪು, ಇಂಗು ಮೆಣಸಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪಿನ ಚೂರನ್ನು ಬೆರೆಸಿ.  ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಕಾದ ಎಣ್ಣೆ 1 ಚಮಚವನ್ನು ಹಿಟ್ಟಿಗೆ ಹಾಕಿ ನೀರಿನಲ್ಲಿ ಸ್ವಲ್ಪ ತೆಳ್ಳಗೆ ಕಲಸಿ. ತಯಾರಾದ ಆಲೂ ಮಿಶ್ರಣವನ್ನು ಉಂಡೆ ಮಾಡಿ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಎರಡೂ ಬದಿ ಕಾಯಿಸಿ ತೆಗೆದರೆ ರುಚಿಯಾದ ಆಲೂ ಬೋಂಡ ಸವಿಯಲು ಸಿದ್ದ.

*

ಆಲೂ ಪುದೀನ

ಬೇಕಾಗುವ ಸಾಮಾಗ್ರಿಗಳು
: ಆಲೂಗಡ್ಡೆ ಬೇಯಿಸಿದ ಹೋಳುಗಳು 1ಕಪ್, ಪುದೀನ ಸೊಪ್ಪಿನ ಚೂರು 1/4 ಕಪ್, ಪುದೀನ ಸೊಪ್ಪಿನ ಚೂರು 1/4 ಕಪ್, ರುಚಿಗೆ ಉಪ್ಪು, ಕಾಳು ಮೆಣಸಿನ ಪುಡಿ 1/4 ಚಮಚ, ಕೆಂಪು ಮೆಣಸಿನ ಪುಡಿ 1/4 ಚಮಚ, ಎಣ್ಣೆ ಒಂದೂವರೆ ಚಮಚ, ಸಾಸಿವೆ 1/4 ಚಮಚ.

ತಯಾರಿಸುವ ವಿಧಾನ : ಎಣ್ಣೆ, ಸಾಸಿವೆ ಹೊರತು ಉಳಿದ ಸಾಮಾಗ್ರಿಗಳನ್ನು ಬೆಂದ ಆಲೂಗಡ್ಡೆಗೆ ಬೆರೆಸಿ. 1/2 ಗಂಟೆ ಹಾಗೇ ಇಡಿ. ನಂತರ ಎಣ್ಣೆ ಕಾಯಿಸಿ, ಸಾಸಿವೆ ಸಿಡಿಸಿ. ತಯಾರಿಸಿದ ಮಿಶ್ರಣವನ್ನು ಸೇರಿಸಿ ಸ್ವಲ್ಪ ಹೊತ್ತು ಕೆದಕಿದರೆ ರುಚಿಯಾದ ಆಲೂ ಪುದೀನ ಸವಿಯಲು ಸಿದ್ದ. ಇದು ಚಪಾತಿಗೆ ಹೊಂದುತ್ತದೆ.

*

ಆಲೂ ಮಸಾಲೆ

ಬೇಕಾಗುವ ಸಾಮಾಗ್ರಿಗಳು :
ಸಣ್ಣ ಆಲೂ 1/4 ಕೆ.ಜಿ, ಹಸಿರು ಮೆಣಸು 5ರಿಂದ 6, ಕೊತ್ತಂಬರಿ ಸೊಪ್ಪು ಕಟ್ಟು, ಎಣ್ಣೆ 4 ಚಮಚ, ಸಾಸಿವೆ 1/4 ಚಮಚ, ಕರೀಬೇವು ಸ್ವಲ್ಪ ಹಾಗೂ ನಿಂಬುಪ್ಪು ಸ್ವಲ್ಪ, ರುಚಿಗೆ ಉಪ್ಪು.

ತಯಾರಿಸುವ ವಿಧಾನ : ಆಲೂ ಗಡ್ಡೆಯನ್ನು ಬೇಯಿಸುವಾಗ ಸ್ವಲ್ಪ ಉಪ್ಪನ್ನು ಸೇರಿಸಬೇಕು. ಹಸಿರು ಮೆಣಸು, ಉಪ್ಪು ಮತ್ತು ಕೊತ್ತಂಬರಿಸೊಪ್ಪನ್ನು ನುಣ್ಣಗೆ ರುಬ್ಬಬೇಕು. ರುಬ್ಬುವಾಗ ಸ್ವಲ್ಪ ನೀರನ್ನು ಸೇರಿಸಬೇಕು. ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ ಕರೀಬೇವು ಸಿಡಿಸಿ. ನಂತರ ರುಬ್ಬಿರುವ ಮಿಶ್ರಣವನ್ನು ಸೇರಿಸಿ ಸ್ವಲ್ಪ ಕೆದಕಿ ನಿಂಬುಪ್ಪನ್ನು ಸೇರಿಸಿ ಸ್ವಲ್ಪ ಹೊತ್ತು ಕದಡಿದರೆ ಆಲೂ ಮಸಾಲೆ ರೆಡಿ. ಇದು ಚಪಾತಿಗೆ ಹೊಂದುತ್ತದೆ. ಬರಿದೇ ಸೇವಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry