ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೂಡಿಕೆಗೆ ಭಾರತದಷ್ಟು ಪ್ರಶಸ್ತ ದೇಶ ಬೇರೊಂದಿಲ್ಲ’

ಅನಿವಾಸಿ ಭಾರತೀಯರಿಗೆ ಐಐಎಂಬಿ ಪ್ರಾಧ್ಯಾಪಕ ಪ್ರೊ.ವೈದ್ಯನಾಥನ್‌ ಸಲಹೆ
Last Updated 6 ಜನವರಿ 2017, 19:52 IST
ಅಕ್ಷರ ಗಾತ್ರ
ಬೆಂಗಳೂರು: ‘ಬಂಡವಾಳ ಹೂಡಿಕೆಗೆ ಭಾರತದಷ್ಟು ಪ್ರಶಸ್ತ ರಾಷ್ಟ್ರ ಬೇರೋದಿಲ್ಲ. ಹೂಡಿಕೆ ಮಾಡಲು ಬಯಸುವವರು ನಮ್ಮ ದೇಶವನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು  ಐಐಎಂಬಿ ಪ್ರಾಧ್ಯಾಪಕ ಪ್ರೊ.ವೈದ್ಯನಾಥನ್‌ ಅಭಿಪ್ರಾಯಪಟ್ಟರು.
 
ಭಾರತೀಯ ಮೂಲದ ಜನರ  ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಪಿಐಒಸಿಸಿಐ)  ಪ್ರವಾಸಿ ದಿವಸ್‌ ಅಂಗವಾಗಿ ಶುಕ್ರವಾರ  ಆಯೋಜಿಸಿದ್ದ ‘ಬೆಳೆಯುತ್ತಿರುವ ಭಾರತದ ಆರ್ಥಿಕತೆ– ಅನಿವಾಸಿ ಭಾರತೀಯರಿಗಿರುವ  ಅವಕಾಶಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
 
‘ಜಾಗತಿಕ ಅರ್ಥವ್ಯವಸ್ಥೆ ನಿರಾಶಾದಾಯಕವಾಗಿರುವುದು ಭಾರತದ ಪಾಲಿಗೆ ಹೊಸ ಅವಕಾಶವನ್ನು ತೆರೆದಿಟ್ಟಿದೆ. ಹೂಡಿಕೆಗೆ ನಮ್ಮಲ್ಲಿರುವಷ್ಟು  ಉತ್ತಮ ಹಾಗೂ ಸುರಕ್ಷಿತ ವಾತಾವರಣ ಇನ್ಯಾವುದೇ ದೇಶದಲ್ಲಿ ಇಲ್ಲ. ಅನಿವಾಸಿ ಭಾರತೀಯರು ಹಾಗೂ ಭಾರತೀಯ ಮೂಲದ ಉದ್ಯಮಿಗಳು ಪಾಶ್ಚಾತ್ಯ ಹಾಗೂ ಇತರ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಳ್ಳುವ ಬದಲು,  ಭಾರತದಲ್ಲೇ ಹೂಡಿಕೆ ಮಾಡುವುದು ಬುದ್ಧಿವಂತಿಕೆ’ ಎಂದು ವಿಶ್ಲೇಷಿಸಿದರು.  
 
‘ಯೂರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಜಾಗತಿಕ ಬಿಕ್ಕಟ್ಟು ಎಂಬಂತೆ ಬಿಂಬಿಸುವುದು ಸರಿಯಲ್ಲ. ಇದು ಐರೋಪ್ಯ ರಾಷ್ಟ್ರಗಳು ಎದುರಿಸುತ್ತಿರುವ ಮುಗ್ಗಟ್ಟು ಅಷ್ಟೇ. ಸಾಲದ ಸುಳಿಯಲ್ಲಿ ಸಿಲುಕಿರುವ ಅಲ್ಲಿನ ದೇಶಗಳು ಈ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ’ ಎಂದು ಅವರು ವಿಶ್ಲೇಷಿಸಿದರು.  
 
‘ಪಾಶ್ಚಾತ್ಯರಲ್ಲಿ ಉಳಿತಾಯ ಮನೋಭಾವ ಇಲ್ಲದಿರುವುದೇ ಅಲ್ಲಿನ  ಆರ್ಥಿಕ ಅಧಃಪತನಕ್ಕೆ ಪ್ರಮುಖ ಕಾರಣ,   ಬ್ರಿಟನ್‌ ಆರ್ಥಿಕ ಸಾಮರ್ಥ್ಯಕ್ಕಿಂತ ಶೇ 494ರಷ್ಟು ಹೆಚ್ಚು ಸಾಲದ ಹೊರೆ ಹೊಂದಿದೆ. ನಮ್ಮನ್ನು ಶತಮಾನಗಳ ಕಾಲ ಆಳಿದ್ದ  ಈ ದೇಶಕ್ಕೆ  ಭಾರತವೇ ನೆರವು ನೀಡಬೇಕಾದ ದಿನ ಬಂದರೂ ಬರಬಹುದು’ ಎಂದರು.
 
‘ನಮ್ಮ ದೇಶದ ಶೇ 15ರಷ್ಟು ಮಂದಿ    ಮಾತ್ರ ಸರ್ಕಾರಿ ಉದ್ಯೋಗವನ್ನು ನೆಚ್ಚಿಕೊಂಡಿದ್ದಾರೆ.  ಉಳಿದ ಶೇ 85ರಷ್ಟು  ಮಂದಿ ಸ್ವಂತ ದುಡಿಮೆ  ಮೂಲಕವೇ ಜೀವನೋಪಾಯ ಕಂಡುಕೊಂಡಿದ್ದಾರೆ. ಇಲ್ಲಿನವರು ವೃದ್ಧಾಪ್ಯದ ಜೀವನಕ್ಕೆ, ಶಿಕ್ಷಣಕ್ಕೆ, ವೈದ್ಯಕೀಯ ವೆಚ್ಚಕ್ಕೆ ಸರ್ಕಾರದ ನೆರವನ್ನು ನೆಚ್ಚಿಕೊಂಡಿಲ್ಲ. ಮಹಿಳೆಯರಲ್ಲಿರುವ ಉಳಿತಾಯ ಮನೋಭಾವ ಈ ದೇಶವನ್ನು ಕಾಪಾಡಿದೆ. ನಮ್ಮಲ್ಲಿ ಆಂತರಿಕ ಹೂಡಿಕೆಯ ಶೇ 92ರಷ್ಟು ಬಂಡವಾಳ ಸೃಷ್ಟಿಯಾಗಿರುವುದು ಉಳಿತಾಯದ ಮೂಲಕ’ ಎಂದರು. 
 
‘ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕುಟುಂಬ ವ್ಯವಸ್ಥೆ ರಾಷ್ಟ್ರೀಕರಣವಾಗಿದೆ. ವ್ಯಾಪಾರ  ಖಾಸಗೀಕರಣವಾಗಿದೆ. ವಿವಾಹೇತರ ಸಂಬಂಧಗಳಿಂದ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಒಂಟಿ ತಾಯಂದಿರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ  ಈ ಬಿಕ್ಕಟ್ಟಿನ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ದೇಶದಲ್ಲಿರುವ ಸದೃಢ ಕುಟುಂಬ ವ್ಯವಸ್ಥೆ  ಆರ್ಥಿಕತೆಯ ಸಮತೋಲನ ಕಾಪಾಡಲು ನೆರವಾಗುತ್ತಿದೆ’ ಎಂದು ವಿಶ್ಲೇಷಿಸಿದರು.
 
ಚೀನಾ ನಂಬರ್‌1: ‘ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಈಗ ಅಮೆರಿಕ ಮೊದಲ ಸ್ಥಾನದಲ್ಲಿಲ್ಲ.  ಅದನ್ನು ಚೀನಾ ಆಕ್ರಮಿಸಿದೆ. ಅಮೆರಿಕ ಎರಡನೇ, ಭಾರತ ಮೂರನೇ ಹಾಗೂ ಜಪಾನ್‌ ನಾಲ್ಕನೇ ಸ್ಥಾನದಲ್ಲಿವೆ’ ಎಂದರು. 
 
 
***
200 ವರ್ಷಗಳ ಬಳಿಕ ತಿರುವು– ಮುರುವು  
‘ಭಾರತ ಮತ್ತು ಚೀನಾ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದಲ್ಲ, ಈ ದೇಶಗಳು 200 ವರ್ಷಗಳ ಹಿಂದಿನ ವೈಭವವನ್ನು ಮರಳಿ ಪಡೆಯುತ್ತಿವೆ ಅಷ್ಟೇ. ವಸಾಹತುಕರಣದಿಂದಾಗಿ, 1820ರ ಹೊತ್ತಿಗೆ ವಿಶ್ವದ ಆರ್ಥಿಕತೆಯ ದಿಕ್ಕು ಬದಲಾಗಿತ್ತು. 2020ರ ವೇಳೆಗೆ ಈ ವರ್ತುಲ ಪೂರ್ಣಗೊಳ್ಳಲಿದೆ’ ಎಂದು ಪ್ರೊ.ವೈದ್ಯನಾಥನ್‌ ಹೇಳಿದರು. 
 
***
‘ಮುಂಚೂಣಿಯಲ್ಲಿ ಕರ್ನಾಟಕ’ 
‘ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ ಚಟುವಟಿಕೆ ಹಮ್ಮಿಕೊಳ್ಳುವಲ್ಲಿ ಕರ್ನಾಟಕ ಯಾವತ್ತೂ ಮುಂಚೂಣಿಯಲ್ಲಿದೆ. ಈ  ಕಾರಣದಿಂದಾಗಿಯ  500ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ನಮ್ಮ ರಾಜ್ಯದಲ್ಲಿವೆ’ ಎಂದು ಭಾರಿ ಮತ್ತು ಸಣ್ಣ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.
 
ವಿಚಾರಸಂಕಿರಣವನ್ನು ಉದ್ಘಾಟಿಸಿದ  ಅವರು ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವರಿಸಿದರು. 
 
‘ವಿಶ್ವದ ವಿವಿಧೆಡೆ ಚದುರಿ ಹೋಗಿರುವ ಭಾರತೀಯರು ಕೇವಲ ವ್ಯಾಪಾರದ ಬಗ್ಗೆ ಚಿಂತಿಸಿದರೆ ಸಾಲದು. ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು’ ಎಂದರು.
 
 
***
ನಾವು ಬೇರೆ ದೇಶದಲ್ಲಿ ನೆಲೆಸಿದ್ದರೂ, ಭಾರತದ ಮೇಲಿನ ಗೌರವ ಕಡಿಮೆಯಾಗಿಲ್ಲ. ಇಲ್ಲಿನ   ಅಭಿವೃದ್ಧಿಗೆ ಕೊಡುಗೆ ನೀಡಲು ಸದಾ ಉತ್ಸುಕರಾಗಿದ್ದೇವೆ
-ವೀರೇಂದ್ರ ಕುಮಾರ್ ಶರ್ಮ,
ಇಂಗ್ಲೆಂಡ್‌ ಸಂಸದ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT